ತಂದೆಯ ನಂತರ ಆ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿ ಅಂದ್ರೆ ಅದು ಆತ ಮಾತ್ರ. ಮತ್ಯಾರು ಆ ಜಾಗವನ್ನು ತುಂಬಲು ಸಾಧ್ಯವಿಲ್ಲ. ಮನಸಿನಲ್ಲಿ ಎಷ್ಟೇ ಪ್ರೀತಿ ಇದ್ದರು ಅದನ್ನು ನನ್ನ ಮುಂದೆ ತೋರಿಸಿಕೊಳ್ಳಲು ಅವನಿಗೇಕೋ ಸಂಕೋಚ. ಆದರೂ ಆ ಸಂಕೋಚವೇ ನನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ.
ಆತನಿಗೆ ನನ್ನ ಮೇಲೆ ಅದೆಷ್ಟು ಪ್ರೀತಿ ಅಲ್ಲವೇ? ಎಂದು ಆತನಲ್ಲಿ ಕೇಳಲು ಹೋದರೆ ಮುಖದಲ್ಲಿ ನಗುವನ್ನು ಬೀರಿ ಅದೆಲ್ಲೊ ಹೊರಗೆ ಹೋಗಿ ಮನಸ್ಸು ಬಿಚ್ಚಿ ನಗುತ್ತಾನೆ. ಅದರೆ ಆ ನಗು ಕಾಳಜಿಯೋ ಅಥವಾ ಕೋಪವೋ ಎಂದು ಆತನಿಗೆ ಮಾತ್ರ ಗೊತ್ತು. ಆದರೂ ನನ್ನ ಮನ ಒಪ್ಪುವುದು ಮಾತ್ರ ಅದು ಕಾಳಜಿಗಂತ. "ಸೋದರನಂತೆ ನೀ ಇರಲು ಬದುಕಲ್ಲಿ ನನಗೇಕೆ ಭಯ ಅಣ್ಣ ನೀನೇ ಹೇಳು. ಪ್ರೀತಿಯಿಂದಲೇ ಬುದ್ದಿಯನ್ನು ಹೇಳುವ ನೀನು, ಹೊರಗಿನಿಂದ ವ್ಯಾಘ್ರ ನಂತೆ ನನಗೆ ಕಂಡರೂ ಮನಸಿನಿಂದ ನನ್ನ ಅಣ್ಣ ತುಂಬಾ ಒಳ್ಳೆಯನು ಅದು ನನಗೆ ಮಾತ್ರ ತುಂಬಾ ಚೆನ್ನಾಗಿ ಗೊತ್ತು."
ಬಾಲ್ಯದಲ್ಲಿ ಅಣ್ಣನೊಂದಿಗೆ ಆಟವಾಡಿದ ಕ್ಷಣಗಳು, ಓದಿನಲ್ಲಿ ಸಹಾಯ ಮಾಡಿದ ಸಂದರ್ಭಗಳು ಮತ್ತು ತಪ್ಪುಗಳನ್ನು ತಿದ್ದಿ ಸರಿದಾರಿಗೆ ತಂದ ನೆನಪುಗಳು ಜೀವನಪೂರ್ತಿ ಜೊತೆಯಾಗಿ ಕಂಗೊಳಿಸುತ್ತಿರುತ್ತದೆ. ಕೆಲವೊಮ್ಮೆ ಅಣ್ಣನ ಮಾತು ಕಹಿ ಎನಿಸಿದರು ಅದರ ಹಿಂದೆ ನಮ್ಮ ಒಳಿತಿನ ಸಿಹಿಯಾದ ಅಕ್ಕರೆ ಇರುತ್ತದೆ.
ಅಣ್ಣನಂತಹ ಸಂಬಂಧ ಜೀವನದ ಅಮೂಲ್ಯವಾದ ವರ. ಅಷ್ಟೇ ಅಲ್ಲದೆ, ಅವನ ಪ್ರೀತಿ, ಮಾರ್ಗದರ್ಶನ ಮತ್ತು ಬೆಂಬಲ ನಮ್ಮ ಜೀವನವನ್ನು ಉತ್ತಮ ದಾರಿಯಲ್ಲಿ ಮುನ್ನಡೆಸುತ್ತದೆ. ಆದ್ದರಿಂದ ನಾವು ಅಣ್ಣನನ್ನು ಗೌರವಿಸಿ, ಪ್ರೀತಿಯಿಂದ ನಡೆದುಕೊಂಡು, ಅವನ ತ್ಯಾಗವನ್ನು ಸದಾ ಸ್ಮರಿಸಬೇಕು.
ನನ್ನ ಬದುಕಲ್ಲಿ ಬಂಗಾರದಂತೆ ಬೆಳಗಿದ ನಿನಗೆ ಅದೆಷ್ಟೋ ಧನ್ಯವಾದಗಳನ್ನು ಹೇಳಲು ಇನ್ನು ಬಾಕಿ ಉಳಿದಿದೆ. ನನ್ನ ಜೊತೆಯಾಗಿ ಜನಿಸದಿದ್ದರೂ, ಬಾಳ ಪಯಣದಲ್ಲಿ ಜೊತೆಯಾದೆ. ಅಕ್ಕರೆಯ ಮಾತುಗಳನ್ನು ಆಡಿ, ಸಕ್ಕರೆಗಿಂತಲೂ ಸಿಹಿಯಾದ ಪ್ರೀತಿಯನ್ನು ನೀಡಿದೆ. ಪ್ರತೀ ಕ್ಷಣ ನಿನ್ನನ್ನೇ ಹುಡುಕುವ ಈ ಮನಕ್ಕೆ ಏನೆಂದು ಉತ್ತರ ಕೊಡಲಿ ನೀನೇ ಹೇಳು. ಆತ ನನ್ನ ಸ್ವಂತ ರಕ್ತಸಂಬಂಧದ ಅಣ್ಣ ಅಲ್ಲಾ ಎನ್ನಲಾ? ಅಥವಾ ಅದಕ್ಕಿಂತ ಮಿಗಿಲಾದ ಸಂಬಂಧ ಎನ್ನಲಾ. ಇದೇಕೋ ಎರಡರ ನಡುವೆ ಸಿಲುಕಿಹೋದ ಈ ಮನಕ್ಕೆ, ನಿನ್ನ ಪ್ರೀತಿಯೇ ಆಸರೆ, ಅಧಾರ ಎಲ್ಲವೂ ಈಗ. ಜೀವನಪೂರ್ತಿ ನಿನ್ನ ಜೊತೆಯಾಗಿ ಇರಬೇಕು ಎನ್ನುವ ನನ್ನಾಸೆ ಒಂದನ್ನು ಪರಿಪೂರ್ಣ ಮಾಡುವೆಯ? ನಿನ್ನ ಆ ಮನದಲ್ಲಿ ಸ್ವಲ್ಪ ನನಗಾಗಿ ಜಾಗ ಕೊಟ್ಟರೆ ಸಾಕು. ಅದುವೇ ನನಗೆ ದೊಡ್ಡ ವರದಾನ. "ಅಣ್ಣ.. ನೀ ನನ್ನ ಬದುಕಾದೆ, ನಾ ನಿನ್ನ ಜೊತೆಯಾದೆ. ನಿನ್ನಂತೆ ಯಾರು ಇಲ್ಲಾ. ಯಾರು ಇರಕೂಡದು."

.jpg)
