ಓದುಗರು ಎಲ್ಲಿದ್ದಾರೆ?

Upayuktha
0

 


ದಿದ ಪುಟಗಳು ಇಂದು ನೆನಪಿನ ನೆರಳಾಗಿವೆ,
ಪುಸ್ತಕದ ಸುವಾಸನೆ ಮೊಬೈಲ್ ಪರದೆಯಲಿ ಕಣ್ಮರೆಯಾಗಿದೆ.
ಓದುಗನ ಹೃದಯದಲ್ಲಿ ಮತ್ತೆ ಪದಗಳ ದೀಪ ಬೆಳಗಲಿ,
ಪ್ರತಿ ಬರಹವೂ ಹೊಸ ಚಿಂತನೆಯ ಬೆಳಕಾಗಲಿ.

"ಓದುವುದು ಜ್ಞಾನವನ್ನು ಸಂಪಾದಿಸುವ ಮಾರ್ಗವಾದರೆ, ಬರೆಯುವುದು ಆ ಜ್ಞಾನವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಸಾಧನ." ಈ ಮಾತು ಇಂದಿನ ಕಾಲಕ್ಕೆ ಬಹಳ ಅರ್ಥಪೂರ್ಣವಾಗಿದೆ. ಒಂದು ಕಾಲದಲ್ಲಿ ಪುಸ್ತಕಗಳ ಸುವಾಸನೆ, ಗ್ರಂಥಾಲಯಗಳ ನಿಶ್ಯಬ್ದ, ವಾರಪತ್ರಿಕೆಗಳ ನಿರೀಕ್ಷೆ ಮತ್ತು ದಿನಪತ್ರಿಕೆ ಓದುವ ಅಭ್ಯಾಸ ಜನರ ಜೀವನದ ಭಾಗವಾಗಿತ್ತು. ಆದರೆ ಇಂದು ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳು ಮತ್ತು ಕ್ಷಣಾರ್ಧದಲ್ಲಿ ಸಿಗುವ ಮನರಂಜನೆಯ ನಡುವೆ ಓದುವ ಅಭ್ಯಾಸ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ನಾನು ಚಿಕ್ಕವನಿದ್ದಾಗ "ತುಂತುರು", "ಬಾಲಮಂಗಳ" ಮುಂತಾದ ಮಕ್ಕಳ ಪುಸ್ತಕಗಳು ಸುಲಭವಾಗಿ ಸಿಗುತ್ತಿದ್ದವು. ಅವುಗಳಲ್ಲಿ ಹಾಸ್ಯ ಕಥೆಗಳು, ಸಾಹಸ ಕಥೆಗಳು, ಚಿತ್ರಗಳಿಗೆ ಬಣ್ಣ ಹಚ್ಚುವ ಪುಟಗಳು, ಪದಬಂಧಗಳು, ಒಗಟುಗಳು ಹಾಗೂ ಮಕ್ಕಳ ಕಲ್ಪನಾ ಶಕ್ತಿಯನ್ನು ಬೆಳೆಸುವ ಅನೇಕ ಚಟುವಟಿಕೆಗಳಿದ್ದವು. ಆ ಪುಸ್ತಕಗಳನ್ನು ಓದುತ್ತಾ ಸಮಯ ಕಳೆಯುವುದು ಕೇವಲ ಮನರಂಜನೆಯಾಗಿರಲಿಲ್ಲ; ಅದು ನಮ್ಮ ಭಾಷೆ, ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಸುಂದರ ಅಭ್ಯಾಸವಾಗಿತ್ತು. ಇಂದಿಗೂ ಆ ದಿನಗಳ ನೆನಪು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಈಗ ನನಗೆ 20 ವರ್ಷ. ಈ ಅಲ್ಪ ಸಮಯದಲ್ಲೇ ಇಂತಹ ಮಕ್ಕಳ ಪುಸ್ತಕಗಳು ಹಿಂದಿನಷ್ಟು ಕಾಣಿಸಿಕೊಳ್ಳುತ್ತಿಲ್ಲ ಎಂಬ ಭಾವನೆ ಮೂಡುತ್ತದೆ. ಮಕ್ಕಳು ಪುಸ್ತಕಗಳ ಜೊತೆ ಸಮಯ ಕಳೆಯುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಪರದೆಗಳ ಜೊತೆ ಬೆರೆಯುತ್ತಿದ್ದಾರೆ. ಹಿಂದೆ ಮಕ್ಕಳಿಗೆ ಊಟ ಮಾಡಿಸುವಾಗ ಆಕಾಶದಲ್ಲಿರುವ ಚಂದ್ರನನ್ನು ತೋರಿಸಿ ಕಥೆಗಳನ್ನು ಹೇಳುತ್ತಿದ್ದರು. ಇಂದು ಅನೇಕ ಮನೆಗಳಲ್ಲಿ ಅದರ ಬದಲಿಗೆ ಮೊಬೈಲ್‌ನಲ್ಲಿ ಕಾರ್ಟೂನ್ ಹಾಕಿ ಮಕ್ಕಳನ್ನು ಊಟ ಮಾಡಿಸುವ ದೃಶ್ಯ ಸಾಮಾನ್ಯವಾಗಿದೆ. ತಂತ್ರಜ್ಞಾನವನ್ನು ವಿರೋಧಿಸುವ ಉದ್ದೇಶ ಇಲ್ಲ. ಆದರೆ ಬಾಲ್ಯವು ಕೇವಲ ಪರದೆಯೊಳಗೆ ಸೀಮಿತವಾಗಬಾರದು. ಕಥೆಗಳು, ಪುಸ್ತಕಗಳು ಮತ್ತು ಕಲ್ಪನೆಯ ಲೋಕವೇ ಬಾಲ್ಯದ ನಿಜವಾದ ಸಂಪತ್ತು. ಇಂದಿನ ದಿನಗಳಲ್ಲಿ ಕೆಲವು ಚಿಕ್ಕ ಮಕ್ಕಳು ಸಹ ತಮ್ಮ ವಯಸ್ಸಿಗೆ ಸೂಕ್ತವಲ್ಲದ ಹಿಂಸಾತ್ಮಕ ಅಥವಾ ಶೂಟಿಂಗ್ ಆಟಗಳನ್ನು ಆಡುವುದು ಕಂಡುಬರುತ್ತದೆ. ಇದು ಬಾಲ್ಯದ ಸ್ವರೂಪವೇ ನಿಧಾನವಾಗಿ ಬದಲಾಗುತ್ತಿರುವಂತೆ ಅನಿಸುತ್ತದೆ.

ಒಬ್ಬ ಉತ್ತಮ ಬರಹಗಾರ ಮೊದಲು ಒಬ್ಬ ಉತ್ತಮ ಓದುಗನಾಗಿರುತ್ತಾನೆ. ಏಕೆಂದರೆ ಓದುವಿಕೆಯೇ ಬರವಣಿಗೆಯ ಮೊದಲ ಪಾಠ. ಎಷ್ಟು ಹೆಚ್ಚು ಪುಸ್ತಕಗಳು, ಲೇಖನಗಳು, ಕವಿತೆಗಳು ಮತ್ತು ಜೀವನಾನುಭವಗಳನ್ನು ಓದುತ್ತಾನೋ ಅಷ್ಟು ಅವನ ಶಬ್ದಭಂಡಾರ ವಿಸ್ತಾರವಾಗುತ್ತದೆ. ಭಾಷೆಯ ಸೊಗಸು, ಪದಗಳ ಬಳಕೆ, ಆಲೋಚನೆಯ ಆಳ ಮತ್ತು ಅಭಿವ್ಯಕ್ತಿಯ ಶೈಲಿ ಓದಿನಿಂದಲೇ ಬೆಳೆಯುತ್ತದೆ. ನಂತರ ತನ್ನ ಅನುಭವಗಳು, ಸಮಾಜದಲ್ಲಿ ಕಂಡ ಸಮಸ್ಯೆಗಳು, ಜೀವನದ ಪಾಠಗಳು ಮತ್ತು ಮನಸ್ಸಿನ ಆಲೋಚನೆಗಳನ್ನು ಪದಗಳ ರೂಪದಲ್ಲಿ ಸಮಾಜದ ಮುಂದೆ ಇಡುತ್ತಾನೆ. ಆದ್ದರಿಂದ ಇಂದು ನೀವು ಒಬ್ಬ ಉತ್ತಮ ಓದುಗರಾಗಿದ್ದರೆ, ನಾಳೆ ಒಬ್ಬ ಉತ್ತಮ ಬರಹಗಾರರಾಗುವ ಸಾಧ್ಯತೆ ಖಂಡಿತ ಇದೆ.

ಒಬ್ಬ ಬರಹಗಾರನಿಗೆ ತನ್ನ ಬರಹವನ್ನು ಸಾವಿರಾರು ಜನರು ಓದಬೇಕು ಎಂಬ ಆಸೆ ಸಹಜ. ಏಕೆಂದರೆ ಪ್ರತಿಯೊಂದು ಲೇಖನ, ಕವಿತೆ ಅಥವಾ ಕಥೆಯ ಹಿಂದೆ ಅನೇಕ ಗಂಟೆಗಳ ಚಿಂತನೆ, ಅಧ್ಯಯನ ಮತ್ತು ಪರಿಶ್ರಮ ಅಡಗಿರುತ್ತದೆ. ಇಂದಿನ ಕಾಲದಲ್ಲಿ ಕೈಯಿಂದ ಬರೆಯುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಲಾಗುತ್ತದೆ. ಸಾಧನಗಳು ಬದಲಾಗಿರಬಹುದು, ಆದರೆ ಬರಹಗಾರನ ಪರಿಶ್ರಮ, ಸಮಯ ಮತ್ತು ಭಾವನೆಗಳು ಬದಲಾಗಿಲ್ಲ.

ದುರದೃಷ್ಟವಶಾತ್ ಇಂದಿನ ದಿನಗಳಲ್ಲಿ ಅನೇಕರು ಲೇಖನಗಳನ್ನು ಕೇವಲ ದೂರದರ್ಶನದ ಮುಖ್ಯಾಂಶಗಳನ್ನು ಓದಿದಂತೆ ಅಥವಾ ಮೊಬೈಲ್‌ನಲ್ಲಿ ಮೇಲ್ನೋಟಕ್ಕೆ ಕಣ್ಣಾಡಿಸಿ ಮುಂದಕ್ಕೆ ಹೋಗುತ್ತಾರೆ. ಆದರೆ ಒಂದು ಲೇಖನದ ಪ್ರತಿಯೊಂದು ಸಾಲಿನ ಹಿಂದೆ ಲೇಖಕನ ಚಿಂತನೆ, ಅನುಭವ ಮತ್ತು ಉದ್ದೇಶ ಅಡಗಿರುತ್ತದೆ. ಒಂದು ಲೇಖನವನ್ನು ಸಂಪೂರ್ಣವಾಗಿ ಓದಲು ಕೆಲವೇ ನಿಮಿಷಗಳು ಸಾಕು. ಲೇಖಕ ತನ್ನ ಹಲವು ಗಂಟೆಗಳ ಸಮಯವನ್ನು ಕೊಟ್ಟಿದ್ದರೆ, ಓದುಗರಾಗಿ ನಾವು ಕೆಲವು ನಿಮಿಷಗಳನ್ನು ಕೊಟ್ಟು ಆ ಬರಹವನ್ನು ಸಂಪೂರ್ಣವಾಗಿ ಓದುವುದು ಅವನ ಪರಿಶ್ರಮಕ್ಕೆ ಸಲ್ಲಿಸುವ ನಿಜವಾದ ಗೌರವ.

ಇನ್ನೊಂದು ವಿಷಾದದ ಸಂಗತಿಯೆಂದರೆ, ಕೆಲವರು ಲೇಖನವನ್ನು ಸಂಪೂರ್ಣವಾಗಿ ಓದದೆ, ಕೇವಲ ಒಂದು ಅಥವಾ ಎರಡು ಸಾಲುಗಳನ್ನು ಮಾತ್ರ ಓದುತ್ತಾರೆ. ನಂತರ ಬರಹಗಾರನಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ "ತುಂಬಾ ಚೆನ್ನಾಗಿದೆ", "ಅದ್ಭುತ ಬರಹ" ಎಂದು ಮೆಚ್ಚುಗೆಯ ಮಾತುಗಳನ್ನು ಹೇಳಿಬಿಡುತ್ತಾರೆ. ಮೆಚ್ಚುಗೆಯ ಮಾತುಗಳು ಪ್ರತಿಯೊಬ್ಬ ಬರಹಗಾರನಿಗೂ ಸಂತೋಷವನ್ನು ನೀಡುತ್ತವೆ. ಆದರೆ ಅದಕ್ಕಿಂತ ಹೆಚ್ಚಿನ ಸಂತೋಷವು ತನ್ನ ಬರಹವನ್ನು ಯಾರಾದರೂ ಸಂಪೂರ್ಣವಾಗಿ ಓದಿ, ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಾಗ ಸಿಗುತ್ತದೆ.

ಬರಹಗಾರನಿಗೆ ಕೇವಲ ಹೊಗಳಿಕೆಗಿಂತ ನಿಜವಾದ ಓದುಗ ಮುಖ್ಯ. ತನ್ನ ಬರಹದಲ್ಲಿ ಯಾವುದು ಇಷ್ಟವಾಯಿತು, ಯಾವುದು ಇನ್ನಷ್ಟು ಉತ್ತಮವಾಗಬಹುದಿತ್ತು ಎಂಬ ಪ್ರಾಮಾಣಿಕ ಅಭಿಪ್ರಾಯವೇ ಅವನ ಮುಂದಿನ ಬರವಣಿಗೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಆದ್ದರಿಂದ ಲೇಖನವನ್ನು ಓದದೆ ಹೊಗಳುವುದಕ್ಕಿಂತ, ಕೆಲವು ನಿಮಿಷಗಳನ್ನು ಮೀಸಲಿಟ್ಟು ಸಂಪೂರ್ಣವಾಗಿ ಓದಿ, ಮನಸ್ಸಿನಾಳದಿಂದ ನಿಮ್ಮ ಅಭಿಪ್ರಾಯವನ್ನು ತಿಳಿಸುವುದು ಬರಹಗಾರನಿಗೆ ನೀಡುವ ಅತ್ಯುತ್ತಮ ಗೌರವ.

ಒಂದು ಲೇಖನವನ್ನು ಸಂಪೂರ್ಣವಾಗಿ ಓದುವುದರಿಂದ ಕೇವಲ ಅದರ ವಿಷಯವಷ್ಟೇ ಅರ್ಥವಾಗುವುದಿಲ್ಲ. ಲೇಖಕನ ಮನಸ್ಥಿತಿ, ಸಮಾಜವನ್ನು ನೋಡುವ ದೃಷ್ಟಿಕೋನ, ಅವನ ಜೀವನಶೈಲಿ, ಅನುಭವಗಳು ಮತ್ತು ಮೌಲ್ಯಗಳ ಪರಿಚಯವೂ ನಮಗೆ ಸಿಗುತ್ತದೆ. ಪ್ರತಿಯೊಂದು ಬರಹವೂ ಲೇಖಕನ ಮನಸ್ಸಿನ ಪ್ರತಿಬಿಂಬವಾಗಿರುತ್ತದೆ. ಓದುವ ಅಭ್ಯಾಸವು ನಮ್ಮ ಭಾಷಾ ಜ್ಞಾನವನ್ನು ಹೆಚ್ಚಿಸುತ್ತದೆ, ಶಬ್ದಭಂಡಾರವನ್ನು ವೃದ್ಧಿಸುತ್ತದೆ, ಚಿಂತನಶಕ್ತಿಯನ್ನು ಆಳಗೊಳಿಸುತ್ತದೆ ಮತ್ತು ವಿಷಯಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ನೋಡುವ ಸಾಮರ್ಥ್ಯವನ್ನು ಬೆಳೆಸುತ್ತದೆ.

ಇಷ್ಟೆಲ್ಲಾ ಓದುವ ಮಹತ್ವದ ಬಗ್ಗೆ ಮಾತನಾಡುತ್ತಿರುವ ನಾನು ಕೂಡ ಈ ಬದಲಾವಣೆಯಿಂದ ಸಂಪೂರ್ಣ ಹೊರತಾಗಿಲ್ಲ. ಹಿಂದೆ ಪುಸ್ತಕಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದ ನಾನು, ಈಗ ಮೊಬೈಲ್‌ನೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುವುದು ಸತ್ಯ. ವಿಶೇಷವಾಗಿ Instagram ಎಂಬ ವೇದಿಕೆ ಒಂದು ರೀತಿಯ ಚಟವಾಗಿ ಹೋಗಿದೆ. ದಿನದಲ್ಲಿ ಹತ್ತು-ಹದಿನೈದು ರೀಲ್ಸ್ ನೋಡದಿದ್ದರೆ ದಿನವೇ ಏನೋ ಅಪೂರ್ಣವಾಗಿದೆ ಎಂಬ ಭಾವನೆ ಕೆಲವೊಮ್ಮೆ ಮೂಡುತ್ತದೆ.

ಆದರೆ ಇತ್ತೀಚೆಗೆ ನಾನು ಎರಡು-ಮೂರು ಕಥೆಗಳು ಮತ್ತು ಕೆಲವು ಲೇಖನಗಳನ್ನು ಬರೆದಾಗ ಒಂದು ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿತು. "ಎಲ್ಲರೂ ಮೊಬೈಲ್‌ನಲ್ಲೇ ಸಮಯ ಕಳೆಯುತ್ತಿದ್ದರೆ, ನಾನು ಬರೆದಿರುವ ಬರಹಗಳನ್ನು ಓದುವವರು ಯಾರು?" ಎಂಬ ಪ್ರಶ್ನೆ ನನ್ನನ್ನೇ ಯೋಚಿಸುವಂತೆ ಮಾಡಿತು. ಆಗ ನನಗೆ ಅರಿವಾಯಿತು—ಮೊಬೈಲ್ ನಮ್ಮ ಜೀವನದ ಒಂದು ಭಾಗವಾಗಿರಬಹುದು, ಆದರೆ ಅದು ನಮ್ಮ ಇಡೀ ಜೀವನವಾಗಬಾರದು.

ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ಬಿಡುವುದು ಇಂದಿನ ಕಾಲದಲ್ಲಿ ಸಾಧ್ಯವಿಲ್ಲ. ಆದರೆ ಅದೇ ಮೊಬೈಲ್‌ನಲ್ಲಿ ಸ್ವಲ್ಪ ಸಮಯವನ್ನು ಉತ್ತಮ ಲೇಖನಗಳನ್ನು ಓದಲು, ಪುಸ್ತಕಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಹೊಸ ವಿಚಾರಗಳನ್ನು ಕಲಿಯಲು ಮೀಸಲಿಡಬಹುದು. ಅದೇ ರೀತಿ ನಾನು ಕೂಡ ನನ್ನ ಸಮಯದ ಒಂದು ಭಾಗವನ್ನು ಉತ್ತಮ ಲೇಖನಗಳನ್ನು ಓದಲು ಹಾಗೂ ನಿಮ್ಮಂತಹ ಓದುಗರಿಗೆ ಇಷ್ಟವಾಗುವ, ಯೋಚನೆಗೆ ಹಚ್ಚುವ ಮತ್ತು ಸಮಾಜಕ್ಕೆ ಉಪಯೋಗವಾಗುವ ಬರಹಗಳನ್ನು ಬರೆಯಲು ಮೀಸಲಿಡಲು ನಿರ್ಧರಿಸಿದ್ದೇನೆ.

ಓದುಗರು ಕಡಿಮೆಯಾಗುತ್ತಿದ್ದಾರೆ ಎಂದು ಬರಹಗಾರ ತನ್ನ ಬರವಣಿಗೆಯನ್ನು ಎಂದಿಗೂ ನಿಲ್ಲಿಸಬಾರದು. ಏಕೆಂದರೆ ಒಂದು ಉತ್ತಮ ಬರಹ ಇಂದಲ್ಲದಿದ್ದರೂ ನಾಳೆ ಯಾರಾದರೂ ಒಬ್ಬರ ಬದುಕನ್ನು ಬದಲಾಯಿಸಬಹುದು. ಸಮಾಜವನ್ನು ಬದಲಾಯಿಸುವ ಶಕ್ತಿ ಕತ್ತಿಗಿಂತ ಬರವಣಿಗೆಗೇ ಹೆಚ್ಚು ಎಂಬುದನ್ನು ಇತಿಹಾಸವೇ ಸಾಬೀತುಪಡಿಸಿದೆ.

ಕೊನೆಯ ಮಾತು:-

"ಒಬ್ಬ ಉತ್ತಮ ಬರಹಗಾರ ಮೊದಲು ಒಬ್ಬ ಉತ್ತಮ ಓದುಗ. ಒಂದು ಪುಸ್ತಕ ಓದಿದಾಗ ನಾವು ಕೇವಲ ಪದಗಳನ್ನು ಓದುತ್ತಿಲ್ಲ; ಒಬ್ಬ ವ್ಯಕ್ತಿಯ ಅನುಭವ, ಆಲೋಚನೆ ಮತ್ತು ಬದುಕಿನ ಪಯಣವನ್ನು ಅರಿಯುತ್ತೇವೆ. ಆದ್ದರಿಂದ ಪ್ರತಿದಿನ ಕೆಲವೇ ನಿಮಿಷಗಳಾದರೂ ಓದೋಣ. ಏಕೆಂದರೆ ಇಂದು ನೀವು ಒಬ್ಬ ಓದುಗರಾಗಿದ್ದರೆ, ನಾಳೆ ಯಾರದೋ ಮನಸ್ಸನ್ನು ಬದಲಾಯಿಸುವ ಬರಹಗಾರರಾಗಬಹುದು."


- ಈಶಕೃಷ್ಣ
ಡೇಟಾ ಸೈನ್ಸ್ ವಿಭಾಗ 
ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top