ಪ್ರತಿಯೊಬ್ಬರ ಜೀವನದಲ್ಲೂ ಸುಖ-ದುಃಖಗಳು ಸರ್ವೇಸಾಮಾನ್ಯ. ಆದರೆ ಅವುಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದೇ ಮುಖ್ಯ. ಯಾರಿಗೂ ಬಾರದ ಸಮಸ್ಯೆಗಳು ನಮಗೇ ಬಂದಿವೆ ಎಂದುಕೊಳ್ಳಬಾರದು. ಇವತ್ತು ಬಂದ ಕಷ್ಟ ನಾಳೆ ಹೋಗಬಹುದು. ಆದ್ದರಿಂದ ನನ್ನ ಬದುಕಿನಲ್ಲಿ ಹೀಗೇಕೆ ನಡೆಯುತ್ತಿದೆ? ಎಂದು ಅತಿಯಾಗಿ ಯೋಚಿಸಿ ಮನಸ್ಸನ್ನು ಹಾಳು ಮಾಡಿಕೊಳ್ಳಬಾರದು. ಚಿಂತೆ ಎನ್ನುವುದು ಮನುಷ್ಯನ ಅಂತರಂಗವನ್ನು ನಿಧಾನವಾಗಿ ಕುಗ್ಗಿಸುತ್ತದೆ. ಮತ್ತೊಬ್ಬರ ಬಗ್ಗೆ ಅತಿಯಾದ ಚಿಂತೆಯಲ್ಲಿ ಬದುಕುವುದಕ್ಕಿಂತ, ನಿಶ್ಚಿಂತೆಯಿಂದ ಬದುಕುವುದನ್ನು ಕಲಿಯಬೇಕು.
ಮುಸ್ಸಂಜೆ ಮಾತು ಚಿತ್ರದ "ಏನಾಗಲಿ ಮುಂದೆ ಸಾಗು ನೀ, ಬಯಸಿದ್ದೆಲ್ಲ ಸಿಗದು ಬಾಳಲಿ" ಎಂಬ ಹಾಡು ಜೀವನದ ನಿಜವಾದ ಅರ್ಥವನ್ನು ತಿಳಿಸುತ್ತದೆ. ಒಬ್ಬರೇ ಇದ್ದಾಗ ಈ ಹಾಡನ್ನು ಆಲಿಸಿದರೆ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ. ಮನುಷ್ಯ ಅಂದುಕೊಂಡಿದ್ದೆಲ್ಲ ಸಿಗುವಂತಿದ್ದರೆ, ಈ ಜಗತ್ತಿನಲ್ಲಿ ಮಾನವೀಯತೆ, ತಾಳ್ಮೆ ಮತ್ತು ಹೋರಾಟದ ಮೌಲ್ಯವೇ ಉಳಿಯುತ್ತಿರಲಿಲ್ಲ. ನಮಗೆ ಬೇಕಾದುದನ್ನು ಪಡೆಯಲು ಪ್ರಯತ್ನಿಸಬೇಕು, ಸಿಗುವವರೆಗೂ ತಾಳ್ಮೆಯಿಂದ ಕಾಯಬೇಕು.
ನಮ್ಮ ದಾರಿ ಸರಿಯಾಗಿದ್ದರೆ, ಕಾಲವೇ ನಮಗೆ ಅರಿವಿಲ್ಲದೆ ಸರಿಯಾದ ಗಮ್ಯದತ್ತ ಕರೆದೊಯ್ಯುತ್ತದೆ. ಆ ಪಯಣದಲ್ಲಿ ಎದುರಾಗುವ ಅನುಭವಗಳೇ ನಮ್ಮ ಗೆಲುವಿನ ದಾರಿಯ ಮುನ್ನುಡಿಯಾಗುತ್ತವೆ. ಪೊಲೀಸ್ ಆಗಬೇಕು, ಸೈನಿಕ ಆಗಬೇಕು ಅಥವಾ ಯಾವುದೇ ಕನಸನ್ನು ನನಸಾಗಿಸಬೇಕು ಎಂದರೆ ಮೂಢನಂಬಿಕೆಗಳಿಗೆ ತಲೆಬಾಗದೆ ನಿರಂತರ ಪ್ರಯತ್ನ ಮಾಡಬೇಕು. ನಾವು ಪಡುವ ಪ್ರಾಮಾಣಿಕ ಶ್ರಮವೇ ನಮ್ಮ ಯಶಸ್ಸಿಗೆ ಕಾರಣವಾಗಬೇಕು. ಜೀವನದಲ್ಲಿ ಏನೇ ಆದರೂ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ನಕಾರಾತ್ಮಕವಾಗಿ ಯೋಚಿಸಿ ಕೊರಗುವುದರಿಂದ ಏನೂ ಬದಲಾಗುವುದಿಲ್ಲ. ಇಂದು ಅಲ್ಲ, ನಾಳೆ ಎಲ್ಲರೂ ಈ ಲೋಕವನ್ನು ಬಿಟ್ಟು ಹೋಗಲೇಬೇಕು. ಹಾಗಿರುವಾಗ ಸಿಗದಿರುವುದರ ಬಗ್ಗೆ ಚಿಂತಿಸುತ್ತಾ ಬದುಕನ್ನು ವ್ಯರ್ಥ ಮಾಡಿಕೊಳ್ಳುವುದೇಕೆ? ಇರುವ ಅರ್ಧ ಆಯುಷ್ಯವನ್ನು ಗೊಣಗುವುದರಲ್ಲಿ ಕಳೆಯುವುದಕ್ಕಿಂತ, ಸಂತೋಷವಾಗಿ ಬದುಕುವುದನ್ನು ಕಲಿಯಬೇಕು.
ಒಂದು ಮಾತಿದೆ – "ಬಾರದು ಬಪ್ಪದು, ಬಪ್ಪದು ತಪ್ಪದು." ನಿಮಗೆ ದಕ್ಕಬೇಕಾದದ್ದು ಯಾವ ಪರಿಸ್ಥಿತಿಯಲ್ಲಾದರೂ ನಿಮ್ಮನ್ನು ಹುಡುಕಿಕೊಂಡೇ ಬರುತ್ತದೆ. ಸುನಾಮಿ, ಸುಂಟರಗಾಳಿ ಎದುರಾದರೂ ಅದು ನಿಮ್ಮನ್ನು ತಲುಪುತ್ತದೆ. ಆದ್ದರಿಂದ ಸಿಗದಿರುವುದರ ಬಗ್ಗೆ ಚಿಂತಿಸದೆ, ಸಿಗುವುದನ್ನು ಕೃತಜ್ಞತೆಯಿಂದ ಸ್ವೀಕರಿಸಿ. ಇರುವುದನ್ನು ಬಿಟ್ಟು ಇಲ್ಲದುದಕ್ಕಾಗಿ ಚಿಂತಿಸುವುದು ಜಾಣತನವಲ್ಲ. ಇರುವ ಒಂದೇ ಜೀವನವನ್ನು ಅರ್ಥಪೂರ್ಣವಾಗಿ ಬದುಕಿ. ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನು ಮಾಡಿ. ಮತ್ತೊಬ್ಬರ ಜೀವನದ ಬಗ್ಗೆ ಯೋಚಿಸುವುದಕ್ಕಿಂತ ಮೊದಲು ನಿಮ್ಮ ಜೀವನವನ್ನು ಉತ್ತಮಗೊಳಿಸಿ.
ಜನರು ಏನೇ ಮಾಡಿದರೂ ಮಾತನಾಡುತ್ತಾರೆ. ನೀವು ಚೆನ್ನಾಗಿದ್ದರೂ ಮಾತನಾಡುತ್ತಾರೆ, ಕಷ್ಟದಲ್ಲಿದ್ದರೂ ಮಾತನಾಡುತ್ತಾರೆ, ಸಾಧನೆ ಮಾಡಿದರೂ ಮಾತನಾಡುತ್ತಾರೆ, ಮಾಡದಿದ್ದರೂ ಮಾತನಾಡುತ್ತಾರೆ. ಆದ್ದರಿಂದ ಜನರ ಮಾತಿಗಿಂತ ನಿಮ್ಮ ಮನಸ್ಸಿನ ನೆಮ್ಮದಿ ಮುಖ್ಯ. ನಾವು ಈ ಲೋಕಕ್ಕೆ ಒಬ್ಬರೇ ಬರುತ್ತೇವೆ, ಹೌದು. ಹೋಗುವಾಗಲೂ ಒಬ್ಬರೇ ಹೋಗುತ್ತೇವೆ. "ಜೀವಕ್ಕೆ ಜೀವ ಕೊಡುತ್ತೇನೆ" ಎನ್ನುವವರೂ ಕೊನೆಗೆ ಸ್ಮಶಾನದವರೆಗೆ ಮಾತ್ರ ಜೊತೆಯಾಗುತ್ತಾರೆ. ಆದ್ದರಿಂದ ಎಲ್ಲರನ್ನೂ ಪ್ರೀತಿಸಿ, ಗೌರವಿಸಿ. ಆದರೆ ನಿಮ್ಮ ಸಂತೋಷವನ್ನು ಮತ್ತೊಬ್ಬರ ಅಭಿಪ್ರಾಯಕ್ಕೆ ಒಪ್ಪಿಸಬೇಡಿ. ನಿಮ್ಮಿಷ್ಟದಂತೆ ಬದುಕಿ. ನಿಮ್ಮ ಕನಸುಗಳಿಗಾಗಿ ಹೋರಾಡಿ. ನಿಮ್ಮ ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ. ಏಕೆಂದರೆ ಜೀವನವೆಂದರೆ ನಿಂತು ಚಿಂತಿಸುವುದಲ್ಲ, ಮುಂದೆ ಸಾಗುತ್ತಾ ಬದುಕುವುದೇ.
-ಗಂಗಾ ನೀಲಪ್ಪ ಅಮಾತೆಪ್ಪನವರ
ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



