ಮಂಗಳೂರು: ಜಲವು ಕೇವಲ ಪ್ರಕೃತಿಯ ಸಂಪನ್ಮೂಲವಲ್ಲ, ಅದು ಮಾನವ ಜೀವನ, ಕೃಷಿ, ಪರಿಸರ ಹಾಗೂ ದೇಶದ ಸುಸ್ಥಿರ ಅಭಿವೃದ್ಧಿಗೆ ಆಧಾರವಾಗಿದೆ. ನೀರಿನ ಕೊರತೆ ದಿನದಿಂದ ದಿನಕ್ಕೆ ಗಂಭೀರ ಸಮಸ್ಯೆಯಾಗಿ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ಜಲ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ಇಲ್ಲಿನ ಜಂಟಿ ನಿರ್ದೇಶಕಿ ಪ್ರೊ ಕವಿತಾ ಕೆ ಆರ್ ತಿಳಿಸಿದರು.
ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ (ರಿ.) ಮಂಗಳೂರು ವಿಭಾಗ, ಮಂಗಳೂರು ರನ್ನರ್ಸ್ ಕ್ಲಬ್ ಸಹಯೋಗದೊಂದಿಗೆ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ "ಜಲ ಸಂರಕ್ಷಣಾ ಜಾಗೃತಿ ಅಭಿಯಾನ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯ, ಅರಣ್ಯ ನಾಶ, ಮಳೆ ಪ್ರಮಾಣದಲ್ಲಿನ ಏರಿಳಿತ, ಅಂತರ್ಜಲ ಮಟ್ಟದ ಕುಸಿತ ಹಾಗೂ ನೀರಿನ ದುರ್ಬಳಕೆಯಿಂದಾಗಿ ದೇಶದ ಅನೇಕ ಭಾಗಗಳು ತೀವ್ರ ಜಲ ಸಂಕಷ್ಟವನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ನೀರಿನ ಮಹತ್ವವನ್ನು ಅರಿತು, ಮಳೆನೀರು ಕೊಯ್ಲು, ಜಲಮೂಲಗಳ ಸಂರಕ್ಷಣೆ, ನೀರಿನ ಮಿತ ಬಳಕೆ ಮತ್ತು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಮಂಗಳೂರು ರನ್ನರ್ಸ್ ಕ್ಲಬ್ ನ ಅಧ್ಯಕ್ಷ ಹಾಗೂ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯ ರೇಡಿಯೋಲಜಿ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ರೈ ಮಾತನಾಡಿ, ಜಲ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಶಿಕ್ಷಣ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಪರಿಸರ ಕಾಳಜಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಜಲ ಸಂರಕ್ಷಣೆಯ ರಾಯಭಾರಿಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಇಲ್ಲಿನ ನಿವೃತ್ತ ಪ್ರಾಂಶುಪಾಲ ಪ್ರೊ. ಜಗದೀಶ್ ಬಾಳ ಮಾತನಾಡಿ, ಜಲದ ಮೌಲ್ಯವನ್ನು ಅರಿಯದೆ ಅದರ ದುರ್ಬಳಕೆ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಕೃತಿಯೊಂದಿಗೆ ಸಮನ್ವಯ ಸಾಧಿಸುವ ಮೂಲಕವೇ ಮುಂದಿನ ಪೀಳಿಗೆಗೆ ಸುರಕ್ಷಿತ ಪರಿಸರವನ್ನು ನಿರ್ಮಿಸಬಹುದಾಗಿದೆ. ವಿದ್ಯಾರ್ಥಿಗಳು ಇದರ ಬಗ್ಗೆ ಕಾಳಜಿಯನ್ನು ತೋರಿಸುವುದು ಅತ್ಯಂತ ಅವಶ್ಯಕ. ಜಲ ಸಂಪನ್ಮೂಲಗಳ ಸಂರಕ್ಷಣೆ ಕುರಿತ ಅರಿವು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ ಪ್ರತಿದಿನದ ಅಭ್ಯಾಸವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ಆಲ್ವಿನ್ ಸೆರಾವೊ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆ.ಆರ್.ಎಂ.ಎಸ್.ಎಸ್. ಮಂಗಳೂರು ವಿಭಾಗದ ಮಹಿಳಾ ಪ್ರಮುಖ್ ಪ್ರೊ. ಸುಭಾಷಿಣಿ ಶ್ರೀವತ್ಸ, ಎಂ ಆರ್ ಸಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಕೆ ಆರ್ ಎಂ ಎಸ್ ಎಸ್ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಸಂಯೋಜನಾಧಿಕಾರಿ ಜಾಯೆಲ್ ಮಸ್ಕರೇನಸ್ ಸ್ವಾಗತಿಸಿ, ಉಪನ್ಯಾಸಕಿ ಮಮತಾ ಶೆಟ್ಟಿ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ವನ್ಯ ವಂದಿಸಿ, ಕೃತಿ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


