"ಶಿಕ್ಷಣ ಫಲಿತಾಂಶಕ್ಕೆ ಸೀಮಿತವಾಗದೆ ಬದುಕಿನ ಚಿಂತನೆಗೆ ಎಡೆಮಾಡಿಕೊಡಬೇಕು- ಎ ಸತ್ಯನಾರಾಯಣ ಪ್ರಸಾದ್
ಪುತ್ತೂರು : ಗ್ರಾಮಾಂತರ ಭಾಗದಲ್ಲಿ ತಲೆ ಎತ್ತಿ ನಿಂತಿರುವ ವಿವೇಕಾನಂದ ಸಂಸ್ಥೆ ಈ ಬಾರಿಯೂ ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದು, ಈ ಸಾಧನೆ ಇನ್ನಷ್ಡು ಉತ್ತುಂಗಕ್ಕೇರಲಿ. ಶೈಕ್ಷಣಿಕ ಸಾಧನೆಯ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಶಿಕ್ಷಕ-ರಕ್ಷಕ ಸಂಘದ ಗಮನಕ್ಕೆ ತನ್ನಿ. ಆ ಮುಖೇನ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಎ.ಸತ್ಯನಾರಾಯಣ ಪ್ರಸಾದ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಪುತ್ತೂರು ಇಲ್ಲಿನ ಶಿಕ್ಷಕ-ರಕ್ಷಕ ಸಂಘ ಹಾಗೂ ಐಕ್ಯೂಎಸಿ ಇದರ ಜಂಟಿ ಆಶ್ರಯದಲ್ಲಿ ನಡೆದ ಸಂಕಲ್ಪ- ಉನ್ನತ ಶಿಕ್ಷಣದ ಕಡೆಗೆ ಪಯಣ- ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ ಸಮಾಜದ ಸರ್ವರನ್ನು ಸೇರಿಸಿಕೊಂಡು ಸ್ಥಾಪನೆಯಾದ ಸಂಸ್ಥೆ ಇದಾಗಿದ್ದು, ಭಾರತೀಯತೆಯನ್ನು ಮೈಗೂಡಿಸುವ ಶಿಕ್ಷಣವನ್ನು ಹೊಂದಿರುವುದರ ಜೊತೆಗೆ ಗ್ರಾಮಾಂತರ ಭಾಗದಲ್ಲಿ ಹೆಚ್ಚು ಅಭಿಮಾನವನ್ನು ಹೊಂದಿರುವ ಸಂಸ್ಥೆಯಾಗಿದೆ. ಒಳ್ಳೆಯ ಸಂಸ್ಕಾರದೊಂದಿಗೆ ಬದುಕನ್ನು ರೂಪಿಸಿಕೊಳ್ಳಲು ಈ ಸಂಸ್ಥೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಈ ಕಾಲೇಜಿಗೆ ತನ್ನದೇ ಆದ ಇತಿಹಾಸ, ಪರಂಪರೆ ಹಾಗೂ ತತ್ವಗಳು ಇದ್ದು, ಇಲ್ಲಿ ಶಿಕ್ಷಣ ಎನ್ನುವುದು ಕೇವಲ ಅಂಕಗಳನ್ನು ಗಳಿಸಲು ಮಾತ್ರವಲ್ಲದೆ ಸಂಸ್ಕಾರವನ್ನೂ ಬೆಳೆಸಿಕೊಳ್ಳಲು ಸಹಕಾರಿಯಾಗುವ ಒಂದು ಅದ್ಭುತ ಸಂಸ್ಥೆಯಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಪಾಶ್ಚಾತ್ಯ ಬದುಕಿಗೆ ಮಾರುಹೋಗದೆ, ಸನಾತನ ಧರ್ಮವನ್ನು ಪಾಲಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಸಲುವಾಗಿ ಶುರುವಾದ ಈ ಕಾಲೇಜು ವಿದ್ಯಾರ್ಥಿಗಳ ಬದುಕಿಗೆ ಇಂದು ಭದ್ರ ಬುನಾದಿಯನ್ನು ನೀಡಿದೆ. ಬದಲಾದ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಪದವಿಯನ್ನು ಆಯ್ಕೆ ಮಾಡಿಕೊಂಡಿರುವುದು ಒಳ್ಳೆಯ ಅಂಶವಾಗಿದ್ದು, ಮುಂದೆ ಸಮಾಜಕ್ಕೆ ಸ್ವಯಂ ಸೇವಕರಾಗಿ ಸಂಕಲ್ಪ ಮಾಡುವುದರೊಂದಿಗೆ ಧನಾತ್ಮಕವಾಗಿ ತಮ್ಮ ಯೋಜನೆಯನ್ನು ರೂಪಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ವಿಶೇಷ ಅಧಿಕಾರಿ, ಆಡಳಿತ ವಿಭಾಗ ಡಾ.ಮನಮೋಹನ ಎಂ ವಿದ್ಯಾರ್ಥಿಗಳಿಗೆ ಶುಭ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ವರ್ಷದ ಪದವಿಪೂರ್ವ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಅರುಣ್ ಪ್ರಕಾಶ್ ಸ್ವಾಗತಿಸಿ, ಗಣಕ ಶಾಸ್ತ್ರ ವಿಭಾಗದ ಉಪನ್ಯಾಸಕ ಸೂರ್ಯನಾರಾಯಣ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ವಿಶೇಷ ಅಧಿಕಾರಿ, ಶಿಕ್ಷಕರ ಅಭಿವೃದ್ಧಿ ಡಾ. ವಿದ್ಯಾ ಎಸ್ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


