ಅವಳೊಳಗಿನ ಅಳಲು

Upayuktha
0

 
     AI ಚಿತ್ರ

ಹೆಣ್ಣು ಒಂದು ವಿಶಿಷ್ಟ ಶಕ್ತಿ. ಸಮಾಜದಲ್ಲಿ ಈಕೆ ಮಗಳು, ಸಹೋದರಿ, ಸ್ನೇಹಿತೆ, ಸಂಗಾತಿ, ಮಡದಿ ಎಂಬ ಹಲವು ಹೆಸರುಗಳಿಂದ ಗುರುತಿಸಲ್ಪಟ್ಟಿದ್ದಾಳೆ. ತನ್ನ ಬದುಕಿನಲ್ಲಿ ಇವಳು ನಾನಾ ರೀತಿಯ ಪಾತ್ರಗಳನ್ನು ವಹಿಸುತ್ತಾಳೆ. ಈಕೆಗೆ ಎಲ್ಲರೂ ಬೇಕು, ಆದರೆ ಯಾರಿಗೂ ಇವಳು ಬೇಕಾಗುವುದಿಲ್ಲ ಎಂಬ ಭಾವನೆ ಅನೇಕ ಸಂದರ್ಭಗಳಲ್ಲಿ ಮೂಡುತ್ತದೆ.


ಜೀವನದ ಪಯಣ ಸುಗಮವಾಗಿ ಸಾಗುತ್ತಿದ್ದ ಆಕೆಯ ಬದುಕಿನಲ್ಲಿ ಒಂದು ದಿನ ಹೊಸ ವ್ಯಕ್ತಿಯ ಪ್ರವೇಶವಾಯಿತು. ಆತ ಅಪರಿಚಿತನಲ್ಲ, ತನ್ನದೇ ಸಂಬಂಧಿಕರಲ್ಲಿ ಒಬ್ಬ. ಯಾರೋ ಅನಾಮಿಕ ವ್ಯಕ್ತಿಯಿಂದ ಆತನನ್ನು ಪಾರು ಮಾಡಲು ಹೋಗಿ, ಕೊನೆಗೆ ಅದು ಅವರಿಬ್ಬರ ನಡುವೆ ಸ್ನೇಹ ಸಂಬಂಧ ಬೆಳೆಸಿತು. ಅನಾಮಿಕ ವ್ಯಕ್ತಿಯ ಕುರಿತು ಮಾಹಿತಿ ಸಂಗ್ರಹಿಸಲು ಆತ ಆ ಹುಡುಗಿಗೆ ಕರೆ ಮಾಡಿದ. ಅಲ್ಲಿಯವರೆಗೂ ಹೆಚ್ಚು ಮಾತನಾಡದಿದ್ದ ಅವಳಿಗೆ ಹೀಗೆ ಅನಿರೀಕ್ಷಿತವಾಗಿ ಕರೆ ಬಂದಾಗ ಏನು ಮಾತನಾಡಬೇಕು ಎಂಬುದು ತೋಚಲಿಲ್ಲ. ಆದರೆ ಆ ಒಂದು ಕರೆ ಅವರಿಬ್ಬರ ಮನದಲ್ಲಿ ನಿತ್ಯವೂ ಮಾತನಾಡಬೇಕೆಂಬ ಆಸೆಯನ್ನು ಹುಟ್ಟಿಸಿತು.


ಹೀಗೆ ದಿನಗಳು ಉರುಳಿದಂತೆ ಅವರಿಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಯಿತು. ಜೊತೆಗೆ ಸಲುಗೆ ಕೂಡ ಹೆಚ್ಚಾಯಿತು. ಯಾರಿಗೂ ತಿಳಿಯದಂತೆ ಆ ಸ್ನೇಹ ಪ್ರೀತಿಯಾಗಿ ಪರಿವರ್ತನೆಗೊಂಡಿತು. ಮೊದಲು ಆತನನ್ನು ಕಂಡರೆ ರೊಚ್ಚಿಗೆದ್ದಿದ್ದ ಅವಳು, ಈಗ ಅವನೊಂದಿಗೆ ಒಂದು ದಿನವೂ ಮಾತಾಡದೆ ಇರಲಾಗದಷ್ಟು ಬದಲಾಗಿದ್ದಳು. ಅವಳ ಆ ಬದಲಾವಣೆಗೆ ಅವನೇ ಕಾರಣ.


ಒಂದು ದಿನ ಅವನು ತನ್ನ ಮನದ ಭಾವನೆಗಳನ್ನು ಅವಳೊಂದಿಗೆ ಹಂಚಿಕೊಂಡ. ಅವಳೂ ಅದಕ್ಕೆ ಸಮ್ಮತಿಸಿದಳು. ಆಕೆ ಆತನನ್ನು ಹುಚ್ಚಿಯಂತೆ ನಂಬಿದ್ದಳು. ಆದರೆ ಅವನು ಅವಳ ದೇಹವನ್ನೇ ಹೆಚ್ಚಾಗಿ ಬಯಸಿದ. ಇದು ಅವಳಿಗೆ ಅವನ ಮೇಲಿನ ವಿಶ್ವಾಸ ಕಡಿಮೆಯಾಗುವಂತೆ ಮಾಡಿತು. ಆದರೂ ಆತ ಅವಳನ್ನು ಪ್ರೀತಿಯ ಮಾತುಗಳಿಂದ ರಮಿಸಿ, ತನ್ನ ಇಚ್ಛೆಯನ್ನು ಸಾಧಿಸಿಕೊಂಡ.


ಸಮಯ ಕಳೆದಂತೆ ಆತನ ವರ್ತನೆ ಬದಲಾಗತೊಡಗಿತು. ಮೊದಲಿದ್ದ ಪ್ರೀತಿ, ಕಾಳಜಿ ನಿಧಾನವಾಗಿ ಕಡಿಮೆಯಾಗತೊಡಗಿದವು. ಅವಳಿಗೆ ಮೊದಲಿನಂತೆ ಸಮಯ ನೀಡುವುದನ್ನೂ ನಿಲ್ಲಿಸಿದ. “ನೀನು ಇಷ್ಟು ಬದಲಾಗಿರುವುದೇಕೆ?” ಎಂದು ಅವಳು ಪ್ರಶ್ನಿಸಿದಾಗ, “ನಾನು ಬೇರೆ ಹುಡುಗಿಯನ್ನು ಮದುವೆಯಾಗಲು ಇಷ್ಟಪಡುತ್ತಿದ್ದೇನೆ” ಎಂದು ಹೇಳುತ್ತಾನೆ.


“ಹಾಗಾದರೆ ನಾನು?” ಎಂದು ಆಕೆ ಮರುಪ್ರಶ್ನಿಸಿದಾಗ, “ನಿನಗೆ ಮೊದಲೇ ಹೇಳಿರಲಿಲ್ಲವೇ?” ಎಂದು ಗದರಿಸುತ್ತಾನೆ. “ಹಾಗಾದರೆ ನನ್ನೊಂದಿಗೆ ಆ ರೀತಿಯಲ್ಲಿ ಏಕೆ ವರ್ತಿಸಿದೆ?” ಎಂದು ಕೇಳಿದಾಗ, “ಅದೆಲ್ಲ ಜಗದ ನಿಯಮ” ಎಂದು ಹೇಳಿ ಮೌನವಾಗುತ್ತಾನೆ.


ಅವನು ಹೇಳಿದಂತೆಯೇ ನಡೆದುಕೊಂಡ. ಕೊನೆಗೆ ಇನ್ನೊಬ್ಬಳನ್ನು ಮದುವೆಯಾದ. ಆ ಹೆಣ್ಣು ಹೊರಗಿನಿಂದ ನೋಡುಗರ ಮುಂದೆ ನಗುತ್ತಾ, ಎಲ್ಲರನ್ನೂ ನಗಿಸುತ್ತಾ ಇರುತ್ತಾಳೆ. ಆದರೆ ತನ್ನ ಮನದ ನೋವನ್ನು ಯಾರೊಂದಿಗೂ ಹಂಚಿಕೊಳ್ಳಲಾಗದೆ ಒಳಗೊಳಗೇ ನರಳುತ್ತಾಳೆ. ಏನೂ ಅರಿಯದ ಪುಟ್ಟ ಮಗುವಿನಂತೆ ಒಬ್ಬಳೇ ಕೂತು ಅಳುತ್ತಾಳೆ. ಅತಿಯಾದ ಪ್ರೀತಿ, ನಂಬಿಕೆ ಮತ್ತು ವಿಶ್ವಾಸವೇ ಕೊನೆಗೆ ಅವಳ ಹೃದಯಕ್ಕೆ ಮುಳ್ಳಾಗಿ ಚುಚ್ಚತೊಡಗಿವೆ.


ಆದರೂ ಅವಳು ಬದುಕಿದ್ದಾಳೆ… ಎಲ್ಲಾ ನೋವುಗಳನ್ನು ಮನದೊಳಗೆ ಹೊತ್ತುಕೊಂಡೇ.


- ಕೃತಿಕಾ. ಕಣಿಯಾರು

   ಪತ್ರಿಕೋದ್ಯಮ ವಿಭಾಗ

   ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು




ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top