ಚೀನಾದಲ್ಲಿ ನಡೆಯಲಿರುವ 19ನೇ ಏಷ್ಯನ್ ಕಿರಿಯ ಪುರುಷರ ಹ್ಯಾಂಡ್‌ಬಾಲ್ ಪಂದ್ಯಟ: ಭಾರತವನ್ನು ಪ್ರತಿನಿಧಿಸಲಿರುವ ಎಸ್.ಡಿ.ಎಂ ವಿದ್ಯಾರ್ಥಿ
ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಸ್ವಾಯತ್ತ ಕಾಲೇಜಿನ ತೃತೀಯ ಬಿ.ಬಿ.ಎ. ವಿದ್ಯಾರ್ಥಿ ಹಾಗು ಎಸ್.ಡಿ.ಎಂ ಕ್ರೀಡಾ ಸಂಘದ ಹ್ಯಾಂಡ್‌ಬಾಲ್ ಆಟಗಾರ ಅಭಿಷೇಕ್ ಎಚ್. 2026 ರ ಜುಲೈ 15ರಿಂದ 26ರವರೆಗೆ ಚೀನಾದ ಚುಝೌ (Chuzhou) ನಗರದಲ್ಲಿ ನಡೆಯಲಿರುವ 19ನೇ ಏಷ್ಯನ್ ಕಿರಿಯ ಪುರುಷರ ಹ್ಯಾಂಡ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಹಾಸನ ಮೂಲದ ಚನ್ನರಾಯಪಟ್ಟಣ ತಾಲೂಕಿನ ಹನುಮಂತ ಮತ್ತು ಲಕ್ಷ್ಮೀ ಬಿಜಿ ದಂಪತಿಗಳ ಮಗನಾದ ಅಭಿಷೇಕ್, ಕಳೆದ ಏಪ್ರಿಲ್ 12 ಮತ್ತು 13 ರಂದು ಜಾರ್ಖಂಡ್ ನಲ್ಲಿ ನಡೆದ ಭಾರತೀಯ ಕಿರಿಯ ಪುರುಷರ ಹ್ಯಾಂಡ್‌ಬಾಲ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಉಜಿರೆಯ ಎಸ್.ಡಿ.ಎಂ ಕಾಲೇಜಿನ ತೃತೀಯ ವರ್ಷದ ಬಿಬಿಎ ವಿದ್ಯಾಭ್ಯಾಸ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶದ ಕಿರಿಯ ಪುರುಷರ ಹ್ಯಾಂಡ್‌ಬಾಲ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಇವರ ಈ ಸಾಧನೆಗೆ ಭಾರತೀಯ ಹ್ಯಾಂಡ್‌ಬಾಲ್ ಸಂಸ್ಥೆ, ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ಸಂಸ್ಥೆ ಹಾಗೂ ಎಸ್.ಡಿ.ಎಂ ಕ್ರೀಡಾ ಸಂಘ ವಿಶೇಷ ಸಹಕಾರ ಮತ್ತು ಪ್ರೊತ್ಸಾಹ ನೀಡಿದ್ದು, ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಸುದೀನ ಪೂಜಾರಿ ನಿರಂತರ ತರಬೇತಿ ಹಾಗು ಮಾರ್ಗದರ್ಶನ ನೀಡಿದ್ದಾರೆ. ಅಭಿಷೇಕ್ ಅವರ ಈ ಸಾಧನೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಾಧನೆಗೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ., ಎಸ್‌ಡಿಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್., ಉಪನ್ಯಾಸಕರು, ಪೋಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಎಲ್ಲರೂ ಶುಭ ಹಾರೈಸಿದ್ದಾರೆ.
ಹ್ಯಾಂಡ್‌ಬಾಲ್ ನಲ್ಲಿ ಅಭಿಷೇಕ್ ಸಾಧನೆ:
19ನೇ ಏಷ್ಯನ್ ಕಿರಿಯ ಪುರುಷರ ಹ್ಯಾಂಡ್‌ಬಾಲ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ 54ನೇ ಹಿರಿಯರ ರಾಷ್ಟ್ರೀಯ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸಿದ್ದಾರೆ. ಈ ಹಿಂದೆ 2025–26ನೇ ಸಾಲಿನಲ್ಲಿ ತಮಿಳುನಾಡಿನ ವೆಲ್ಲೂರಿನ VIT ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ. 2024–25ನೇ ಸಾಲಿನಲ್ಲಿ ತಮಿಳುನಾಡಿನ ಸೇಲಂನ ಪೆರಿಯಾರ್ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ.
"ಬಾಲ್ಯದಿಂದಲೇ ಹ್ಯಾಂಡ್‌ಬಾಲ್ ಕ್ರೀಡೆಯಲ್ಲಿ ಅಭಿಷೇಕ್ ಅಪಾರ ಆಸಕ್ತಿ ಹೊಂದಿದ್ದ. ಆತನ ಪ್ರತಿಭೆ ಮತ್ತು ಪರಿಶ್ರಮಕ್ಕೆ ಹಲವು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದು, ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ. ಇಲ್ಲಿ ಪಡೆದ ಉತ್ತಮ ತರಬೇತಿ, ಕ್ರೀಡಾ ಸೌಲಭ್ಯ ಹಾಗೂ ಸಂಸ್ಥೆಯಿಂದ ದೊರೆತ ನಿರಂತರ ಮಾರ್ಗದರ್ಶನದಿಂದ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾನೆ. ಆತನಿಗೆ ಶುಭಾಶಯಗಳನ್ನು ಕೋರುತ್ತಾ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಸೇರಿದಂತೆ ಪ್ರೊತ್ಸಾಹಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ."
- ಲಕ್ಷ್ಮಿ (ಅಭಿಷೇಕ್ ಎಚ್. ರವರ ತಾಯಿ)
"ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಹಾಗು ಎಸ್.ಡಿ.ಎಂ ಕ್ರೀಡಾ ಸಂಘದ ವಿದ್ಯಾರ್ಥಿ ಅಭಿಷೇಕ್ ಎಚ್.ಚೀನಾದ ಚುಝೌ (Chuzhou) ನಗರದಲ್ಲಿ ನಡೆಯಲಿರುವ 19ನೇ ಏಷ್ಯನ್ ಕಿರಿಯ ಪುರುಷರ ಹ್ಯಾಂಡ್‌ಬಾಲ್ ಪಂದ್ಯದಟಕ್ಕೆ ಭಾರತ ತಂಡದ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಎಸ್.ಡಿ.ಎಂ ಸಂಸ್ಥೆಯ ಸಾಧನೆಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ಕ್ರೀಡಾ ಬದುಕು ಯಶಸ್ವಿಯಾಗಲಿ ಎಂದು ಎಸ್.ಡಿ.ಎಂ ಸಂಸ್ಥೆಯ ಸಿಬ್ಬಂದಿಗಳು ಶುಭ ಹಾರೈಸುತ್ತೇವೆ."
- ಡಾ. ಸತೀಶ್ಚಂದ್ರ ಎಸ್
ಕಾರ್ಯದರ್ಶಿಗಳು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


