ಪುಟಾಣಿ ಸುಮಾ ತನ್ನ ಅಜ್ಜಿಯ ಹತ್ತಿರ ಓಡಿ ಬಂದು, ಅಜ್ಜಿ ಯಾವುದಾದರು ಒಂದು ಕಥೆ ಹೇಳು ಎಂದಾಗ, ಅಜ್ಜಿ ಕೂಡ ನಿನಗೆ ನಿನ್ನಂತಹ ಜಾಣೆಯಾಗಿರುವ ಪುಟಾಣಿ ಶಾರದೆಯ ಕಥೆ ಹೇಳುತ್ತೇನೆ ಎಂದರು.
ಅಜ್ಜಿಯ ಕಥೆಯು "ಒಂದಾನೊಂದು" ಎಂದು ಮೊದಲಿಗೆ ಶುರುವಾಗಿತ್ತು. ಒಂದಾನೊಂದು ಪುಟ್ಟ ಗ್ರಾಮದಲ್ಲಿ ಶಾರದೆ ಎಂಬ ಮುದ್ದಾದ ಹುಡುಗಿ ತನ್ನ ತಂದೆಯ ಜೊತೆ ವಾಸಿಸುತ್ತ ಇರುತ್ತಾಳೆ. ಕಥೆಯ ಮಧ್ಯದಲ್ಲಿ ಬಾಯಿ ತೆರೆದ ಸುಮಾ, ನನ್ನಂತೆ ಅಲ್ವಾ ಅಜ್ಜಿ ಎಂದಾಗ ಹೌದಮ್ಮ ನಿನ್ನಂತೆ ಎಂದು ಹೇಳಿ ಕತ್ತೆಯನ್ನು ಮುಂದುವರಿಸಲು ಶುರು ಮಾಡುತ್ತಾಳೆ. ಶಾರದೆ ತುಂಬಾ ಜಾಣೆ. ಎಲ್ಲಾ ವಿಷಯದಲ್ಲೂ ಆಕೆಯೇ ಮುಂದು. ಪ್ರತಿಯೊಬ್ಬ ಗುರುಗಳ ಅಚ್ಚು ಮೆಚ್ಚಿನ ವಿದ್ಯಾರ್ಥಿ ಅವಳು. ಅದರೆ ಆಕೆಗೆ ಇರುವ ಒಂದೇ ಒಂದು ವೀಕ್ನೆಸ್ಸ್ ಎಂದರೆ ಅದು ವೇದಿಕೆಯ ಮೇಲೆ ನಿಂತುಕೊಳ್ಳಲು ತುಂಬಾನೇ ಹೆದರುತ್ತಿದ್ದಳು. ಯಾರಾದರೂ ಬಂದು ವೇದಿಕೆಯ ಮೇಲೆ ನಿಮ್ಮ ಅನುಭವಗಳನ್ನು ವ್ಯಕ್ತಪಡಿಸಿ ಎಂದು ಗುರುಗಳು ಹೇಳಿದಾಗ ಆಕೆಯ ಕೈಕಾಲೇ ನಡುಗುತ್ತಿತ್ತು. ಅದು ಅವಳ ಮನಸಿಗೆ ತುಂಬಾನೇ ನೋವನ್ನು ಕೊಡುತಿತ್ತು. ಪ್ರತೀ ರಾತ್ರಿ ಮಲಗುವ ಮುನ್ನ ತನ್ನನ್ನೇ ತಾನು ಕೇಳಿಕೊಳ್ಳುತ್ತಿದ್ದಳು, ಯಾಕೆ ನನಗೆ ಇಷ್ಟು ಭಯ, ಎಲ್ಲಾ ವಿಷಯ ಗೊತ್ತಿದ್ದರೂ ವೇದಿಕೆಯ ಮೇಲೆ ಹತ್ತಲು ಯಾಕೆ ಧೈರ್ಯ ಸಾಲುತ್ತಿಲ್ಲ, ಎಂದಾಗ ಆಕೆ ತನ್ನ ಮೇಲೆಯೇ ಮುಜುಗರ ಪಡುತಿದ್ದಳು. ತನ್ನ ತಂದೆ ಎಷ್ಟೇ ಸಮಾಧಾನ ಪಡಿಸಿದರು ಆಕೆಗೆ ಅದು ಸಮಾಧಾನ ವಾಗುತ್ತಿರಲಿಲ್ಲ. ಅದಲ್ಲದೇ ದಿನಕ್ಕೆ ನೂರುಬಾರಿ "ನನಗೆ ವೇದಿಕೆ ಅಂದ್ರೇ ಭಯವಿಲ್ಲ" ಎಂದು ಹಳೆಯ ಪುಸ್ತಕ ಒಂದರಲ್ಲಿ ಗೀಚುತ್ತಿದ್ದಳು ಈ ಮುಗ್ದ ಮನಸಿನ ಪುಟ್ಟ ಬಾಲಕಿ. ಇದನೆಲ್ಲ ಗಮನಿಸಿದ ಆಕೆಯ ತಂದೆ, ನೀನು ಕನ್ನಡಿಯ ಮುಂದೆ ನಿಂತು ದಿನವಿಡೀ ಮಾತಾಡುವ ಕಲೆಯ ಬಗ್ಗೆ ಅಭ್ಯಾಸ ಮಾಡು. ಯಾರಿಗೊತ್ತು ನಿನ್ನ ಭಯ ಹೊರಟು ಹೋಗಬಹುದಲ್ವಾ ಎಂದು ಹೇಳಿದ ನಂತರ, ಕನ್ನಡಿಯೇ ಈಕೆಗೆ ಹೊಸ ಗೆಳತಿಯಾಯಿತು.
ಅದೊಂದು ದಿನ ಶಾಲೆಯಲ್ಲಿ ಕನ್ನಡ ಗುರುಗಳು ಬಂದು ಮಕ್ಕಳೇ "ನಿಮ್ಮ ನಿಮ್ಮ ಗೆಳತಿಯ ಬಗ್ಗೆ ಒಂದು ಪ್ರಬಂಧ ಬರೆಯಿರಿ ಮತ್ತು ಅ ಪ್ರಬಂಧವನ್ನು ಇಲ್ಲಿ ವೇದಿಕೆಯ ಮೇಲೆ ಹೇಳಿ" ಎಂದಾಗ, ಈಕೆಗೆ ಪ್ರಬಂಧ ಏನೋ ಬರೀಬಹುದು ಅದರೆ ವೇದಿಕೆಯ ಮೇಲೆ ನಾನು ಹೇಳಲು ಸಾಧ್ಯವೇ ಎಂದಾಗ ಮನಸಿನಲ್ಲಿ ಮತ್ತೇ ಬೇಸರ ಪಡುತ್ತಾಳೆ. ನಂತರ ಎಲ್ಲರ ಸರದಿಯಾದ ಕಾರಣ ಈಕೆ ವೇದಿಕೆಯ ಮೇಲೆ ನಿಂತು ತನ್ನ ತಂದೆಯ ಜೊತೆ ಇತರ ದೇವರನ್ನು ನೆನೆದು ತಾನು ಬರೆದ ತನ್ನ ಕನ್ನಡಿ ಎಂಬ ಗೆಳತಿಯ ಕುರಿತಾದ ಪ್ರಬಂಧವನ್ನು ಓದಲು ಶುರುಮಾಡುತ್ತಾಳೆ. ಅದರೆ ಇಲ್ಲಿ ಎಲ್ಲರಿಗೂ ಆಶ್ಚರ್ಯ ಕಾದಿತ್ತು ಏಕೆಂದರೆ ಆಕೆ ಯಾವುದೇ ಭಯ ಪಡದೆ ಎಲ್ಲವನ್ನು ಓದಿ ಮುಗಿಸಿದ್ದಳು. ಅದು ಆಕೆಗೆ ತುಂಬಾನೇ ಸಂತೋಷ ನೀಡಿತ್ತು.
ಅಂದಿನಿಂದ ಯಾವುದೇ ರೀತಿ ಭಯ ಪಡದೆ ಎಲ್ಲಾ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ನಿರೂಪಣೆಯನ್ನು ಈಕೆಯೇ ತನ್ನ ಕೈಯಾರೆ ಮುಗಿಸಿ ಕೊಡುತ್ತಿದ್ದಳು. ಅದರೆ ಎಲ್ಲಿಯ ಕೂಡ ತನ್ನ ಭಯಕ್ಕೆ ಧೈರ್ಯವನ್ನು ನೀಡಿದ ಕನ್ನಡಿಯನ್ನು ಯಾವತ್ತು ಮರೆಯಲಿಲ್ಲ.
ಹೇಗಿತ್ತು ಕಥೆ ಸುಮಾ ಎಂದಾಗ ಅಜ್ಜಿ ಇದು ಯಾಕೋ ನನ್ನ ಕಥೆಯೇ ಹಾಗೆ ಇದೆಯಲ್ಲಾ ಎಂದಾಗ, ನೀನು ಯಾವತ್ತೂ ಹೇಳುತ್ತಾ ಇರುತ್ತೀಯ ಅಲ್ವಾ, ಅಜ್ಜಿ ನನಗೆ ವೇದಿಕೆ ಕಂಡ್ರೆ ಭಯ ಅಂತ, ಅದಕ್ಕೆ ನಿನಗೆ ಶಾರದೆಯ ಕಥೆ ಹೇಳಿದ್ದು, ನೀನು ಕೂಡ ಇನ್ನು ಭಯ ಪಡುದಿಲ್ಲ ಅಲ್ವಾ ಅಂದಾಗ, ಇಲ್ಲಾ ಅಜ್ಜಿ ಇನ್ನು ಮುಂದೆ ನಾನೇ ಮುಂದೆ ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ನನ್ನ ಕೈಯಾರೆ ಮಾಡುವೆ ಅದೇ ಶಾರದಾಳ ರೀತಿ ಎಂದಳು.
- ಶಿಲ್ಪಾ, ದಿಡುಪೆ.