ನಮ್ಮ ಬದುಕು ನಿಸರ್ಗದ ಆಸರೆ ಇಲ್ಲದೇ ಸಾಗದು. ನಿಸರ್ಗವನ್ನು ಉಳಿಸಬೇಕು, ಬೆಳೆಸಬೇಕು ಎಂಬ ವಿಚಾರ ನಮ್ಮ ಹಿರಿಯರು ಅರಿತಿದ್ದರು. ನಾವು ಉತ್ತಲು ಬಿತ್ತಲು ಎತ್ತುಗಳು ಬೇಕೇ ಬೇಕು. ಹಿಂದಿನ ಕಾಲದಲ್ಲಿ, ಮತ್ತು ಈಗಲೂ ಅವುಗಳ ಸಹಾಯ ಇಲ್ಲದೇ ಬೆಳೆ ಬೆಳೆಯಲಾಗದು. ನಮ್ಮ ಹೊಟ್ಟೆಗೆ ಅನ್ನ ಬೇಕಾದರೆ, ಫಸಲು ಬರಬೇಕಾದ್ರೆ, ಎತ್ತುಗಳ ನೆರವು ಬೇಕೇ ಬೇಕು.
ಬೆಳೆ ಬೆಳೆಯುವದು ಎಲ್ಲಿ? ಹೊಲದಲ್ಲಿ, ಮಣ್ಣಿನಲ್ಲಿ, ಮಣ್ಣು ಕೂಡ ಅಷ್ಟೇ ಮಹತ್ವದ ಪಾತ್ರ ವಹಿಸುತ್ತದೆ. ಆ ಮಣ್ಣು, ಗಿಡ, ಮರ, ಪ್ರಾಣಿಗಳು ಎಲ್ಲವೂ ದೇವರ ಸಮಾನ ಎಂಬ ಮನೋಭಾವನೆ ನಮ್ಮ ಹಿರಿಯರದ್ದು.
ಅದಕ್ಕಾಗಿಯೇ, ಕಾರಹುಣ್ಣಿಮೆಯಂದು ಎತ್ತುಗಳಿಗೆ ವಿಶೇಷ ಆಹಾರ, ಅಲಂಕಾರ ಮಾಡಿ ಗೌರವ ಕೊಟ್ಟು ಆನಂದ ಪಡುತ್ತಿದ್ದರು. ಈಗ ಉತ್ತಿ ಬಿತ್ತುವ ಸಮಯ ಅದಕ್ಕಾಗಿಯೇ 5 ಬಾರಿ ಮಣ್ಣಿನಲ್ಲಿ ಮಾಡಿದ ಮಣ್ಣೆತ್ತಿನ ಪೂಜೆ, ನಾಗರಪೂಜೆ, ಮತ್ತೆ ಮಾಸ ಗೌರಿಯನ್ನು ಮಣ್ಣಿನ ಕಲಶ ಮಾಡಿ ಅದರಲ್ಲಿ ಅರಿಶಿನ ಕುಂಕುಮ, ಅಕ್ಕಿ, ಇನ್ನಿತರ ಸಾಮಾನುಗಳು ಹಾಕಿ ಚಟ್ಟಿಗೆ ಗೌರಿ ಕೂಡಿಸುತ್ತಿದ್ದರು. ಇನ್ನೆರಡು ಬಾರಿ ಮಣ್ಣಿನ ಪೂಜೆ ಮಾಡೋ ಹಬ್ಬಗಳು ಬರುತ್ತೆ.
ಹೀಗೇ ನಮ್ಮ ಸಂಸ್ಕೃತಿ, ಇತರ ದೇಶದ ಜನರಿಗೆ ಮೊದಲು ವಿಚಿತ್ರವಾಗಿ ಕಾಣುತ್ತಿತ್ತು, ಈಗ ಅದರ ಮಹತ್ವ, ಹಿನ್ನೆಲೆ ತಿಳಿದು ಅವರೂ ಕೂಡ ನಮ್ಮ ದೇಶದ ಸಂಪ್ರದಾಯಗಳನ್ನು ಮೆಚ್ಚುವಂತಾಗಿದೆ.
ಇನ್ನೊಂದು ವಿಷಾದದ ವಿಚಾರ ಅಂದ್ರೆ, ಇಷ್ಟೊಂದು ಮಹತ್ವದ ಕೆಲಸ ಮಾಡುವ ಎತ್ತುಗಳಿಗೆ ಈಗ ಎಲ್ಲಿಯೂ ಸ್ಥಾನ ಇಲ್ಲದಂತಾಗಿದೆ. ಬಹಳ ಕಡೆ ನೋಡ್ತೇವೆ ನಾವು, ಈಗೀಗ ನಾಯಿಗಳಿಗೆ ವಿಪರೀತ ಮಹತ್ವ ಕೊಟ್ಟು ಪಶುಗಳನ್ನು ಕಡೆಗಣಿಸಲಾಗುತ್ತಿದೆ.
ನಾವು ಸ್ಕೂಲ್ ದಿನಗಳಲ್ಲಿ ನೋಡ್ತಾ ಇದ್ವಿ, ಎತ್ತುಗಳಿಂದ ನೇಗಿಲು ಹೊಡೆಯೋದು, ಗಳೇ ಹೊಡೆಯೋದು, ಉತ್ತೋದು, ಬಿತ್ತೋದು, ರಾಶಿ ಮಾಡೋದು, ಎಲ್ಲ ಕಡೆಗಳಲ್ಲೂ ಎತ್ತಿಗೆ ಅಗ್ರಸ್ಥಾನ ಇತ್ತು. ಅವುಗಳನ್ನು ಬಳಸಿ ಹೊಲದಲ್ಲಿ ಕೆಲಸ ಮಾಡಿದಾಗ ಅಲ್ಪ ಸ್ವಲ್ಪ ಸಾವಯವ ಗೊಬ್ಬರ ಭೂಮಿಗೆ ಸಿಗುತ್ತಿತ್ತು. ಅದೆಲ್ಲ ಮರೆಯಾಗಿದೆ. ಅವುಗಳ ಸ್ಥಾನ ಮಷಿನ್‌ಗಳು ಕಿತ್ತುಕೊಂಡಿವೆ. ಮಷಿನ್ ನಿಂದ ಕೆಲಸ ಬೇಗ ಆಗುತ್ತೆ ಆದರೂ ಪರಿಸರ ಚೆನ್ನಾಗಿರಬೇಕು ಅಂದ್ರೆ ಎಲ್ಲ ಜೀವಿಗಳಿಗೂ ಮಹತ್ವ ಕೊಡಲೇಬೇಕು, ಅಂದಾಗಲೇ ಎಲ್ಲೆಲ್ಲೂ ಸುಖ ಸಮೃದ್ಧಿ ಉಂಟಾಗೋದು. ಆಕಳುಗಳ ಸಂಖ್ಯೆ ಕ್ಷೀಣಿಸಿ ಎಂಥದ್ದೋ ಹಾಲು ಕುಡಿಯೋ ಪರಿಸ್ಥಿತಿ ಬಂದಿದೆ.
ಮೊದಲಿನ ಹಾಗೇ ಎಲ್ಲವೂ ಆಗಲಿಕ್ಕೆ ಸಾಧ್ಯವಿಲ್ಲವಾದರೂ ಇದ್ದಷ್ಟನ್ನೇ ಉಳಿಸಿ ಬೆಳೆಸೋದು ಎಲ್ಲರ ಕರ್ತವ್ಯ ಅಲ್ಲವೇ?
-ರೇಖಾ ಮುತಾಲಿಕ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


