ಸಾರ್ಥಕ ಬದುಕಿನ ಸಾರಥಿ -ಜಂಬಗಿ ರಾಧೇಶ್

Upayuktha
0

 


ಜ್ಜನರ ಮಹತ್ವ, ಬದುಕಿನ ಮೌಲ್ಯ ಮತ್ತು ಸಮಾಜದ ಮೇಲಿನ ಪ್ರಭಾವ ಅವರು ಅಗಲಿದ ನಂತರವೇ ಜನರ ಮಾತುಗಳಲ್ಲಿ  ಪ್ರತಿಧ್ವನಿಸುತ್ತದೆ. ವ್ಯಕ್ತಿ ಸಾಯಬಹುದು ಆದರೆ ವ್ಯಕ್ತಿತ್ವಕ್ಕೆ ಸಾವಿಲ್ಲ  ಎಂಬ ಮಾತಿಗೆ ಜೀವಂತ ಉದಾಹರಣೆಯಾಗಿದ್ದಾರೆ ದಾವಣಗೆರೆಯ ಜನಾನುರಾಗಿ, ಹಿರಿಯ ತೆರಿಗೆ ಸಲಹೆಗಾರ ಹಾಗೂ ಸಮಾಜಸೇವಕ ಜಂಬಿಗಿ ರಾಧೇಶ್ ರವರು.


ಮನುಷ್ಯ ಎಷ್ಟು ದಿನ ಬದುಕಿದನು ಎಂಬುದಕ್ಕಿಂತ, ಹೇಗೆ ಬದುಕಿದನು ಎಂಬುದು ಮುಖ್ಯ ಎಂಬುದನ್ನು ತಮ್ಮ ಬದುಕಿನ ಮೂಲಕವೇ ಸಾಬೀತುಪಡಿಸಿದ ರಾಧೇಶ್ ಅವರ ಅಂತಿಮ ದರ್ಶನಕ್ಕೆ ಮತ್ತು ಅಂತ್ಯಕ್ರಿಯೆಗೆ ಸೇರಿದ್ದ ಅಪಾರ ಜನಸ್ತೋಮವೇ ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. 


ಅನೇಕ ಸಂಸ್ಥೆಗಳಲ್ಲಿ ಅವರ ಜೊತೆ ಕೆಲಸ ಮಾಡುತ್ತಿದ್ದು ಬೆಳಗ್ಗೆ ಕಾಫಿ ಕಟ್ಟೆಯಲ್ಲಿ ಹರಟೆ ಹೊಡೆಯುತ್ತಿದ್ದ ಆತ್ಮೀಯ ಮಿತ್ರ ಜಂಗಿ ರಾಧೇಶ್ ಬಗ್ಗೆ ಎಲ್ಲಾ ಸ್ನೇಹಿತರ ಪರವಾಗಿ ಕೆಲವು ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ.

          

ದಾವಣಗೆರೆ ನಗರದ ಪ್ರಾಮಾಣಿಕ ಸೇವಾ ಮನೋಭಾವದ ವ್ಯಕ್ತಿತ್ವ, ಹಿರಿಯ ತೆರಿಗೆ ಸಲಹೆಗಾರ, ಸಮಾಜಸೇವಕರು ಹಾಗೂ ಮಾಜಿ ನಗರಸಭೆ ಅಧ್ಯಕ್ಷರಾದ ದಿವಂಗತ ಜಂಬಿಗಿ ಶರಣಪ್ಪ ನವರ ಹಿರಿಯ ಪುತ್ರರಾದ ಜಂಬಿಗಿ ರಾಧೇಶ್ ಅವರ ಅಕಾಲಿಕ ನಿಧನದ ಸುದ್ದಿ ದಾವಣಗೆರೆ ನಗರಕ್ಕೆ ಬರಸಿಡಿಲು ಬಡಿದಂತಾಗಿದೆ. ಸದಾ ಹಸನ್ಮುಖಿ, ಸ್ನೇಹಜೀವಿ ಹಾಗೂ ಸಮಾಜಮುಖಿ ಚಿಂತನೆಯ ವ್ಯಕ್ತಿಯಾಗಿದ್ದ ಅವರ ಅಗಲಿಕೆ ದಾವಣಗೆರೆ ಜಿಲ್ಲೆಯ ಸಾಮಾಜಿಕ, ವಾಣಿಜ್ಯ ಹಾಗೂ ಸೇವಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.


ಸಾಮಾಜಿಕ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ರಾಧೇಶ್ ಅವರು ವೃತ್ತಿಯಲ್ಲಿ ಪ್ರಾಮಾಣಿಕತೆ, ಸಮಾಜದಲ್ಲಿ ಸೇವಾ ಮನೋಭಾವ ಮತ್ತು ವೈಯಕ್ತಿಕ ಬದುಕಿನಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡ ಅಪರೂಪದ ವ್ಯಕ್ತಿಯಾಗಿದ್ದರು.


ಅವರು ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾಗಿ ಮೂರು ಬಾರಿ ಸೇವೆ ಸಲ್ಲಿಸಿ ವೃತ್ತಿ ಕ್ಷೇತ್ರದಲ್ಲಿ ಅಪಾರ ಗೌರವ ಗಳಿಸಿದ್ದರು. ಶ್ರೀಜಗದ್ಗುರು ಜಯದೇವ ಮುರುಘರಾಜೇಂದ್ರ ವಿದ್ಯಾರ್ಥಿ ನಿಲಯದ ನಿರ್ದೇಶಕರಾಗಿ, ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹ ಮಹಾಸಂಸ್ಥೆಯ ನಿರ್ದೇಶಕರಾಗಿ, ದಾವಣಗೆರೆ ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯ ಹಾಗೂ ಉಪಾಧ್ಯಕ್ಷರಾಗಿ, ವೀರಶೈವ-ಲಿಂಗಾಯತ ಸಮಾಜದ ಹಿರಿಯ ಮುಖಂಡರಾಗಿ ಅನೇಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.


ಪ್ರಚಾರದ ಬೆಳಕಿನಿಂದ ಸದಾ ದೂರವಿದ್ದು, ಎಲೆಮರೆ ಕಾಯಿಯಂತೆ ಅನೇಕ ಸಂಘ-ಸಂಸ್ಥೆಗಳಿಗೆ ಸೇವೆ ಸಲ್ಲಿಸುತ್ತಾ, ಮಾರ್ಗದರ್ಶನ ನೀಡುತ್ತಾ, ನಿಸ್ವಾರ್ಥವಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದರು. ಸಮಾಜದ ಒಳಿತಿಗಾಗಿ ಸದಾ ಮುಂಚೂಣಿಯಲ್ಲಿ ನಿಂತು ಎಲ್ಲ ವರ್ಗದ ಜನರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿ ಗುರುತಿಸಿಕೊಂಡಿದ್ದರು.


ಪ್ರತಿದಿನ ಬೆಳಿಗ್ಗೆ ಸ್ನೇಹಿತರೊಂದಿಗೆ ಕಾಫಿ ಕಟ್ಟೆಯಲ್ಲಿ ಸೇರಿ ಸಮಾಜದ ಆಗುಹೋಗುಗಳ ಕುರಿತು ಚಿಂತನ-ಮಂಥನ ನಡೆಸುತ್ತಾ, ಹಾಸ್ಯ-ವಿನೋದಗಳ ಮೂಲಕ ಎಲ್ಲರನ್ನು ನಕ್ಕು ನಗಿಸುತ್ತಾ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. ಅವರ ಅಗಲಿಕೆಯನ್ನು ಇಂದಿಗೂ ಸ್ನೇಹಿತರು, ಹಿತೈಷಿಗಳು ಹಾಗೂ ಸಹೋದ್ಯೋಗಿಗಳು ನಂಬಲಾರದೆ, ಅರಗಿಸಿಕೊಳ್ಳಲಾಗಿದೆ.

      

ವೃತ್ತಿಯನ್ನು ಕೇವಲ ಜೀವನೋಪಾಯವಾಗಿ ನೋಡದೆ, ಸಮಾಜಸೇವೆಯ ಸಾಧನವಾಗಿಯೇ ಕಂಡಿದ್ದ ಅವರು ಲೆಕ್ಕಪತ್ರ, ಆಡಿಟಿಂಗ್, ಜಿಎಸ್‌ಟಿ ಹಾಗೂ ತೆರಿಗೆ ಸಂಬಂಧಿತ ವಿಷಯಗಳಲ್ಲಿ ಅಪಾರ ಪರಿಣತಿಯನ್ನು ಹೊಂದಿದ್ದರು. ಯಾವುದೇ ಸಮಸ್ಯೆಯೊಂದಿಗೆ ಬಂದವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಸಮರ್ಪಕ ಸಲಹೆ, ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬಿ ಪರಿಹಾರದ ದಾರಿಯನ್ನು ತೋರಿಸುತ್ತಿದ್ದರು. ಅವರ ವೃತ್ತಿಪರ ಪ್ರಾಮಾಣಿಕತೆ, ಮಾರ್ಗದರ್ಶನ ಮತ್ತು ಮಾನವೀಯತೆ ಸಾವಿರಾರು ಜನರ ವಿಶ್ವಾಸವನ್ನು ಗಳಿಸಿತ್ತು.


ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಬೇಕು, ಜನರಲ್ಲಿ ಜಾಗೃತಿ ಮೂಡಬೇಕು ಹಾಗೂ ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂಬ ತುಡಿತವನ್ನು ಸದಾ ಹೊಂದಿದ್ದ ಅವರು, ನೇರ, ನಿಷ್ಠುರ ಹಾಗೂ ಸ್ಪಷ್ಟ ಮಾತಿನ ಮೂಲಕ ಸಮಾಜಕ್ಕೆ ಸರಿಯಾದ ಸಂದೇಶ ನೀಡುತ್ತಿದ್ದರು. ಅವರ ಮಾತು ಕೆಲವೊಮ್ಮೆ ಕಠಿಣವೆನಿಸಿದರೂ ಅದರ ಹಿಂದಿನ ಉದ್ದೇಶ ಸಮಾಜದ ಹಿತವೇ ಆಗಿತ್ತು.


ಸರಳತೆ, ಸಜ್ಜನಿಕೆ, ಸೌಮ್ಯತೆ, ಸ್ನೇಹಪರತೆ, ಪ್ರಾಮಾಣಿಕತೆ, ಮಾನವೀಯತೆ ಹಾಗೂ ಸೇವಾ ಮನೋಭಾವದಿಂದ ಎಲ್ಲರ ಪ್ರೀತಿ, ವಿಶ್ವಾಸ ಮತ್ತು ಗೌರವವನ್ನು ಗಳಿಸಿದ್ದ ಜಂಬಿಗಿ ರಾಧೇಶ್ ಅವರ ಅಗಲಿಕೆ ಕುಟುಂಬದವರ ಕುಟುಂಬದವರಿಗೆ ಮಾತ್ರವಲ್ಲ, ಸ್ನೇಹಿತರಿಗೆ, ವೃತ್ತಿಬಾಂಧವರಿಗೆ, ವಿವಿಧ ಸಂಘ-ಸಂಸ್ಥೆಗಳಿಗೆ ಹಾಗೂ ಅವರನ್ನು ಆತ್ಮೀಯವಾಗಿ ಅರಿತ ಪ್ರತಿಯೊಬ್ಬರಿಗೂ ತುಂಬಲಾರದ ನಷ್ಟವಾಗಿದೆ.


ಅವರ ಅಮೂಲ್ಯ ನೆನಪುಗಳು ನಿಷ್ಕಲ್ಮಶ ಪ್ರೀತಿ, ನಿಸ್ವಾರ್ಥ ಸೇವೆ ಹಾಗೂ ಮಾನವೀಯತೆಯ ಪ್ರತಿಬಿಂಬವಾಗಿ ಸದಾ ಎಲ್ಲರ ಹೃದಯಗಳಲ್ಲಿ ಉಳಿದಿವೆ.


- ಹೆಚ್.ವಿ. ಮಂಜುನಾಥ ಸ್ವಾಮಿ

9844882366


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top