ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ತರಬೇತಿ ಮತ್ತು ಉದ್ಯೋಗ ನಿಯೋಜನಾ ಘಟಕ ಹಾಗೂ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ, ನಾಸ್ಕಾಂ ಫೌಂಡೇಶನ್ ಮತ್ತು ಐಬಿಎಂ ಸ್ಕಿಲ್‌ಬಿಲ್ಡ್ ಸಹಯೋಗದಲ್ಲಿ “ಗೆಟಿಂಗ್ ಸ್ಟಾರ್ಟೆಡ್ ವಿತ್ ಎಐ” ವಿಷಯದ ಪ್ರಮಾಣಪತ್ರ ಬೂಟ್ಕ್ಯಾಂಪ್ಗೆ ಮಂಗಳವಾರ ಚಾಲನೆ ನೀಡಲಾಯಿತು.
ನಾಸ್ಕಾಂ ಫೌಂಡೇಶನ್‌ನ ಕೋರ್ಸ್ ಕನ್ಸಲ್ಟೆಂಟ್ ಪುನೀತ್ ಎಸ್. ಮಾತನಾಡಿ ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿಯೇ ಎಐ ಕುರಿತು ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯು ಜಗತ್ತಿನಲ್ಲಿ ಮಹತ್ತರ ಪರಿವರ್ತನೆಗಳನ್ನು ಉಂಟುಮಾಡುತ್ತಿರುವ ಪ್ರಾಮಾಣಿಕತೆ, ಸಹಾನುಭೂತಿ, ಪರಸ್ಪರ ಗೌರವ, ಜವಾಬ್ದಾರಿತನ ಮತ್ತು ನೈತಿಕ ನಿರ್ಧಾರ ಸಾಮರ್ಥ್ಯದಂತಹ ಮಾನವೀಯ ಮೌಲ್ಯಗಳು ಹಾಗೂ ಸದ್ಗುಣಗಳು ಎಂದಿಗೂ ತಮ್ಮ ಮಹತ್ವವನ್ನು ಕಳೆದುಕೊಳ್ಳುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲೂ ವೃತ್ತಿಜೀವನದಲ್ಲೂ ಈ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಹಾಗೂ ಜವಾಬ್ದಾರಿಯುತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಎಂದು ಹೇಳಿದರು.
ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ ವಿದ್ಯಾರ್ಥಿಗಳಿಗೆ ಅವರ ಪದವಿಯ ಪಠ್ಯ ವಿಷಯಗಳ ಜೊತೆಗೆ ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗೆ ಹೊಂದಿಕೊಳ್ಳುವ ಜ್ಞಾನ, ಕೌಶಲ್ಯ ಮತ್ತು ಚಿಂತನಶಕ್ತಿಯನ್ನು ನೀಡಲಾಗುತ್ತಿದೆ. ಈ ರೀತಿಯ ಉದ್ಯಮ–ಶೈಕ್ಷಣಿಕ ಸಹಭಾಗಿತ್ವಗಳು ವಾಸ್ತವಿಕ ಕಲಿಕಾ
ಅನುಭವಗಳನ್ನು ಒದಗಿಸಿ, ಅವರ ವೃತ್ತಿಪರ ಸಾಮರ್ಥ್ಯವನ್ನು
ವೃದ್ಧಿಸುತ್ತವೆ. ಎಲ್ಲಾ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ
ಪ್ರೋತ್ಸಾಹ ನೀಡುವುದೇ ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದು ಹೇಳಿದರು.
ಉಪಪ್ರಾಂಶುಪಾಲ ಡಾ| ವಿಜಯಕುಮಾರ್ ಎಂ, ಐಕ್ಯೂಎಸಿ ಸಂಯೋಜಕ ಡಾ| ಎಡ್ವಿನ್ ಎಸ್. ಡಿಸೋಜಾ, ಹಾಗೂ ಟ್ರೈನಿಂಗ್ ಆ್ಯಂಡ್ ಪ್ಲೇಸ್‌ಮೆಂಟ್ ಅಧಿಕಾರಿ ಅಭಿಷೇಕ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಾಸ್ಕಾಂ ಫೌಂಡೇಶನ್‌ನ ಕೋರ್ಸ್ ಕನ್ಸಲ್ಟೆಂಟ್ ಕಿಶೋರ್ ಕೆ. ಎಸ್. ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿಯನ್ನು ನಡೆಸಿಕೊಟ್ಟರು. ಕಾಲೇಜಿನ ಸುಮಾರು 450 ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಿದ್ದು ಕೃತಕ ಬುದ್ಧಿಮತ್ತೆಯ ಮೂಲಭೂತ ಪರಿಕಲ್ಪನೆಗಳು, ಅದರ ಜವಾಬ್ದಾರಿಯುತ ಬಳಕೆ, ಡಿಜಿಟಲ್ ಕೌಶಲ್ಯಗಳು ಹಾಗೂ ಉದ್ಯಮ ವಲಯದಲ್ಲಿ ಅಗತ್ಯವಾಗಿರುವ ಭವಿಷ್ಯಮುಖಿ ಸಾಮರ್ಥ್ಯಗಳ ಕುರಿತು ತಜ್ಞರಿಂದ ತರಬೇತಿ ಪಡೆದರು.
ನ್ಯಾಸ್‌ಕಾಂ ಫೌಂಡೇಶನ್‌ನ ಸಾಮಾಜಿಕ ನಾವೀನ್ಯತೆ ಮತ್ತು ಸಿಎಸ್‌ಆರ್ ಕಾರ್ಯಕ್ರಮಗಳ ಹಿರಿಯ ವ್ಯವಸ್ಥಾಪಕರಾದ ಅಜಯ್ ಶಂಕರ್ ಹಾಗೂ ನ್ಯಾಸ್‌ಕಾಂ ಫೌಂಡೇಶನ್‌ನ ಸಿಎಸ್‌ಆರ್ ವೃತ್ತಿಪರರಾದ ರಶ್ಮಿ ಲೋಹಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಥಮ ಬಿಸಿಎ ಪದವಿ ವಿದ್ಯಾರ್ಥಿನಿ ಕಾವೇರಮ್ಮ ಮತ್ತು ಬಳಗ ಪ್ರಾರ್ಥಿಸಿ, ಕಂಪ್ಯೂಟರ್ ಸಯನ್ಸ್ ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗಗಳ ಡೀನ್ ಡಾ| ವಿನಯಚಂದ್ರ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಟ್ರೈನಿಂಗ್ ಆ್ಯಂಡ್ ಪ್ಲೇಸ್‌ಮೆಂಟ್ ಅಧಿಕಾರಿ ಡಾ| ಗೀತಾ ಪೂರ್ಣಿಮಾ ಕೆ ವಂದಿಸಿ, ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.
"ಒಂದು ಶಿಕ್ಷಣ ಸಂಸ್ಥೆಯು ತನ್ನೆಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಖಾತರಿಪಡಿಸಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಉದ್ಯೋಗಕ್ಕೆ ಅಗತ್ಯವಾದ ಜ್ಞಾನ, ಕೌಶಲ್ಯ, ಆತ್ಮವಿಶ್ವಾಸ ಮತ್ತು ವೃತ್ತಿಪರ ಮನೋಭಾವವನ್ನು ಬೆಳೆಸಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ಖಚಿತವಾಗಿ ಒದಗಿಸಬಹುದು. ಕಾಲೇಜಿನಲ್ಲಿ ಉದ್ಯಮ ಸಹಯೋಗಗಳು, ಜಾಗತಿಕ ಪ್ರಮಾಣಪತ್ರ ಕಾರ್ಯಕ್ರಮಗಳು, ನಾವೀನ್ಯತಾ ಚಟುವಟಿಕೆಗಳು, ಕೌಶಲ್ಯಾಭಿವೃದ್ಧಿ ತರಬೇತಿಗಳು ಹಾಗೂ ವಿವಿಧ ಕಾರ್ಯಗಾರಗಳ ಮೂಲಕ ವಿದ್ಯಾರ್ಥಿಗಳನ್ನು ಔದ್ಯೋಗಿಕ ಕ್ಷೇತ್ರದ ಬೇಡಿಕೆಗಳಿಗನುಗುಣವಾಗಿ ಸಜ್ಜುಗೊಳಿಸುವ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ."
-ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ
ಪ್ರಾಂಶುಪಾಲರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
.


