ಪುತ್ತೂರು: ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಉನ್ನತ ಶಿಕ್ಷಣ, ವೃತ್ತಿ ಮಾರ್ಗದರ್ಶನ ಹಾಗೂ ಅಂತರರಾಷ್ಟ್ರೀಯ ಅವಕಾಶಗಳಿಗೆ ಹೆಚ್ಚಿನ ಪ್ರವೇಶ ಕಲ್ಪಿಸುವ ಉದ್ದೇಶದಿಂದ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಹಾಗೂ ವಿದೇಶಿ ಶಿಕ್ಷಣ ಸಲಹಾ ಸಂಸ್ಥೆ ಗ್ಲೋಬಲ್ ರೀಚ್ ನಡುವೆ ಮಹತ್ವದ ಒಡಂಬಡಿಕೆಗೆ (MoU) ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ಸಹಿ ಹಾಕಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಲೋಬಲ್ ರೀಚ್‌ನ ಮಂಗಳೂರು ಘಟಕದ ಶಾನ್ ಪೀಟರ್ ಜೋಸೆಫ್ ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಲಹೆಗಾರರಾದ ಪೂರ್ಣಿಮಾ ಎಂ. ಗ್ಲೋಬಲ್ ರೀಚ್ ಪರವಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಜಾಗತಿಕ ಅವಕಾಶಗಳು ಮತ್ತು ಅನುಭವಗಳಿಗೆ ಅವರನ್ನು ಸಜ್ಜುಗೊಳಿಸುವುದು ಕಾಲೇಜಿನ ಪ್ರಮುಖ ಧ್ಯೇಯವಾಗಿದೆ. ಗ್ಲೋಬಲ್ ರೀಚ್‌ನೊಂದಿಗಿನ ಈ ಸಹಭಾಗಿತ್ವವು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಹೊಸ ಆಯಾಮ ನೀಡಲಿದೆ ಎಂದು ಹೇಳಿದರು. ಒಡಂಬಡಿಕೆಯಡಿ ಆಯೋಜಿಸಲಾಗುವ ಕಾರ್ಯಾಗಾರಗಳು, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳು ಹಾಗೂ ಅಂತರರಾಷ್ಟ್ರೀಯ ಶಿಕ್ಷಣ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾಲೇಜಿನ ಟ್ರೈನಿಂಗ್ ಹಾಗೂ ಪ್ಲೇಸ್‌ಮೆಂಟ್ ಅಧಿಕಾರಿ ಡಾ. ಗೀತಾ ಪೂರ್ಣಿಮಾ ಕೆ. ಸ್ವಾಗತಿಸಿದರು. ರೀಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಘಟಕದ ನಿರ್ದೇಶಕರಾದ ಡಾ. ವಿನಯಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯುಎಸಿ ಸಂಯೋಜಕರಾದ ಡಾ.ಎಡ್ವಿನ್ ಎಸ್. ಡಿಸೋಜ ವಂದಿಸಿದರು. ಟ್ರೈನಿಂಗ್ ಹಾಗೂ ಪ್ಲೇಸ್‌ಮೆಂಟ್ ಅಧಿಕಾರಿ ಅಭಿಷೇಕ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಜಾಗತಿಕ ಶಿಕ್ಷಣಾವಕಾಶಗಳ ಮಾಹಿತಿ ಒಡಂಬಡಿಕೆಗೆ ಸಹಿ ಹಾಕಿದ ಬಳಿಕ ಗ್ಲೋಬಲ್ ರೀಚ್ ಪ್ರತಿನಿಧಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಲಭ್ಯವಿರುವ ವಿವಿಧ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.
ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ವಿಧಾನ, ವಿವಿಧ ವಿದ್ಯಾರ್ಥಿವೇತನಗಳು, ಪ್ರವೇಶ ಮತ್ತು ವೀಸಾ ಪ್ರಕ್ರಿಯೆ, ವೃತ್ತಿ ಮಾರ್ಗದರ್ಶನ, ಉಚಿತ TOEFL ಹಾಗೂ PTE ತರಬೇತಿ, ಸೈಕೋಮೆಟ್ರಿಕ್ ವೃತ್ತಿ ಮೌಲ್ಯಮಾಪನ, ಭಾರತ ಮತ್ತು ವಿದೇಶಗಳಲ್ಲಿನ ಇಂಟರ್ನ್‌ಶಿಪ್ ಅವಕಾಶಗಳು, ಅಂತರರಾಷ್ಟ್ರೀಯ ಶಿಕ್ಷಣ ಮೇಳಗಳು ಹಾಗೂ ಜಾಗತಿಕ ವಿಶ್ವವಿದ್ಯಾಲಯಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳ ಕುರಿತು ವಿವರಿಸಿದರು.
ಬದಲಾಗುತ್ತಿರುವ ಜಾಗತಿಕ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಕೌಶಲ್ಯ, ಅರಿವು ಹಾಗೂ ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ವೃತ್ತಿಪರ ಭವಿಷ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪಿಸಿಕೊಳ್ಳುವಂತೆ ಪ್ರತಿನಿಧಿಗಳು ಸಲಹೆ ನೀಡಿದರು.
ನಮ್ಮ ಬದ್ಧತೆ: ಶಿಕ್ಷಣದ ಮೂಲಕ ಸಮಾಜದ ಸಬಲೀಕರಣ
“ಸಂತ ಫಿಲೋಮಿನಾ ಕಾಲೇಜಿನ ಶಿಕ್ಷಣದ ದೃಷ್ಟಿಕೋನವು ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗಿಲ್ಲ. ಜ್ಞಾನ, ಮೌಲ್ಯಗಳು, ಕೌಶಲ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿರುವ ಸಮರ್ಥ ಯುವಜನತೆಯನ್ನು ರೂಪಿಸುವುದು ನಮ್ಮ ಬದ್ಧತೆ. ಸಮಾಜದ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಅವಕಾಶಗಳು ದೊರೆಯಬೇಕು ಎಂಬ ಆಶಯದೊಂದಿಗೆ ಕಾಲೇಜು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
ಸ್ಥಳೀಯ ನೆಲೆಯಲ್ಲಿ ಬೆಳೆದ ನಮ್ಮ ವಿದ್ಯಾರ್ಥಿಗಳು ಜಾಗತಿಕ ಅವಕಾಶಗಳನ್ನು ಆತ್ಮವಿಶ್ವಾಸದಿಂದ ಬಳಸಿಕೊಳ್ಳುವಂತಾಗಬೇಕು. ಅದೇ ವೇಳೆ ಅವರು ಪಡೆದ ಜ್ಞಾನ ಮತ್ತು ಅನುಭವ ಸಮಾಜದ ಒಳಿತಿಗೆ ಕೊಡುಗೆ ನೀಡಬೇಕು. ಗ್ಲೋಬಲ್ ರೀಚ್‌ನೊಂದಿಗಿನ ಈ ಒಡಂಬಡಿಕೆ ನಮ್ಮ ವಿದ್ಯಾರ್ಥಿಗಳನ್ನು ಜಾಗತಿಕ ಶಿಕ್ಷಣ ಮತ್ತು ವೃತ್ತಿ ಅವಕಾಶಗಳಿಗೆ ಸಂಪರ್ಕಿಸುವುದರ ಜೊತೆಗೆ, ಜವಾಬ್ದಾರಿಯುತ ಜಾಗತಿಕ ನಾಗರಿಕರನ್ನಾಗಿ ರೂಪಿಸುವ ನಮ್ಮ ಪ್ರಯತ್ನದ ಮತ್ತೊಂದು ಹೆಜ್ಜೆಯಾಗಿದೆ.”
— ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ
ಪ್ರಾಂಶುಪಾಲರು
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


