ಶಿವ ಚಿಹ್ನೆ, ಭಸ್ಮಧಾರಣೆ: ವಿಶೇಷತೆ, ಮಹತ್ವ

Upayuktha
0



ವಿಭೂತಿ ಎಂದರೆ ಪವಿತ್ರ ಭಸ್ಮ. ಭಸ್ಮವು ಒಂದು ಸತ್ಯವನ್ನು ಹೇಳುತ್ತದೆ ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದು ದಿನ ಭಸ್ಮವಾಗಲೇಬೇಕು. ಈ ಸತ್ಯವನ್ನು ನೆನಪಿಸಿಕೊಂಡಾಗ ಅಹಂಕಾರ ಕರಗುತ್ತದೆ. ಮನುಷ್ಯತ್ವ ಮತ್ತು ಜೀವನದ ನಿಜವಾದ ಅರ್ಥ ತಿಳಿಯುತ್ತೇವೆ.ಹಣೆಯ ಮೇಲಿನ ಮೂರು ಬೊಟ್ಟಿನ ವಿಭೂತಿ ಕೇವಲ ಭಸ್ಮವಲ್ಲ, ಅದು ಜೀವನದ ಸತ್ಯವನ್ನು ನೆನಪಿಸುವ ಶಿವನ ಮೌನ ಸಂದೇಶ.


ಈ ಭಸ್ಮಧಾರಣೆಯ ಕುರಿತು ಒಂದು ಪುರಾಣ ಕಥೆಯಿದೆ. ಒಮ್ಮೆ ಋಷಿಗಳು ಶಿವನನ್ನು ಕೇಳಿದರು, "ಓ ಮಹಾದೇವಾ! ಮನುಷ್ಯನು ಅಹಂಕಾರ, ಅಜ್ಞಾನ ಮತ್ತು ಪಾಪಗಳಿಂದ ಹೇಗೆ ಮುಕ್ತನಾಗಬಹುದು?" ಆಗ ಶಿವನು ಮಂದಹಾಸ ಬೀರಿದನು. ಯಜ್ಞಕುಂಡದಲ್ಲಿದ್ದ ಪವಿತ್ರ ಭಸ್ಮವನ್ನು ತನ್ನ ಕರದಲ್ಲಿ ತೆಗೆದುಕೊಂಡು ಹಣೆಯ ಮೇಲೆ ಮೂರು ಅಡ್ಡ ರೇಖೆಗಳನ್ನು ಎಳೆದನು. ನಂತರ ಹೇಳಿದನು "ಈ ಭಸ್ಮವು ದೇಹದ ಅನಿತ್ಯತೆಯನ್ನು ನೆನಪಿಸುತ್ತದೆ. ಈ ಮೂರು ರೇಖೆಗಳು ಅಹಂಕಾರ, ಅಜ್ಞಾನ ಮತ್ತು ದುಷ್ಟಕರ್ಮಗಳನ್ನು ತ್ಯಜಿಸುವ ಸಂಕೇತ. ಇವುಗಳನ್ನು ಧರಿಸುವವರು ಕೇವಲ ಭಸ್ಮವನ್ನಲ್ಲ, ಜೀವನದ ಸತ್ಯವನ್ನೇ ಧರಿಸುತ್ತಾರೆ." ಆ ದಿನದಿಂದ ಶಿವಭಕ್ತರು ಈ ಮೂರು ರೇಖೆಗಳನ್ನು ತ್ರಿಪುಂಡ್ರ ಅಥವಾ ಶಿವಚಿಹ್ನೆ ಎಂದು ಧರಿಸಲು ಆರಂಭಿಸಿದರು.


ಮತ್ತೊಂದು ಪುರಾಣದ ಕಥೆಯ ಪ್ರಕಾರ, ಕಾಮದೇವನು ಶಿವನ ತಪಸ್ಸನ್ನು ಭಂಗಗೊಳಿಸಲು ಬಂದಾಗ, ಶಿವನು ತನ್ನ ಮೂರನೇ ಕಣ್ಣನ್ನು ತೆರೆದನು. ಅದರ ಅಗ್ನಿಯಲ್ಲಿ ಕಾಮದೇವನು ಭಸ್ಮವಾದನು. ಆ ಪವಿತ್ರ ಭಸ್ಮವನ್ನು ಶಿವನು ತನ್ನ ದೇಹಕ್ಕೆ ಲೇಪಿಸಿಕೊಂಡನು. ಅದು ಇಚ್ಛೆಗಳ ಮೇಲೆ ಜಯ ಮತ್ತು ವೈರಾಗ್ಯದ ಸಂಕೇತವಾಯಿತು. ಬಳಿಕ ಶಿವಭಕ್ತರೂ ವಿಭೂತಿಯನ್ನು ಧರಿಸುವ ಸಂಪ್ರದಾಯವನ್ನು ಅನುಸರಿಸಿದರು. ಆದ್ದರಿಂದ ಮೂರು ಬೊಟ್ಟಿನ ವಿಭೂತಿ ಕೇವಲ ಒಂದು ಧಾರ್ಮಿಕ ಗುರುತಲ್ಲ; ಅದು ಜೀವನ ಅನಿತ್ಯ, ಆತ್ಮ ಶಾಶ್ವತ ಮತ್ತು ಸತ್ಕರ್ಮವೇ ನಿಜವಾದ ಅಲಂಕಾರ ಎಂಬ ಸಂದೇಶವನ್ನು ಸಾರುವ ಶಿವನ ಪವಿತ್ರ ಚಿಹ್ನೆಯಾಗಿದೆ.


ನಮ್ಮ ಹಿರಿಯರು ವಿಭೂತಿ ಹಚ್ಚುವ ಪದ್ಧತಿಯನ್ನು ಕೇವಲ ಧಾರ್ಮಿಕ ಕಾರಣಕ್ಕಾಗಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಅನುಸರಿಸುತ್ತಿದ್ದರು. ಹಣೆಯ ಮೇಲೆ ವಿಭೂತಿ ಹಚ್ಚಿದರೆ ತಂಪಾದ ಅನುಭವವಾಗುತ್ತದೆ. ಬೆವರು ಕಡಿಮೆಯಾಗಲು ಸಹಾಯವಾಗಬಹುದು. ಪೂಜೆ ಅಥವಾ ಧ್ಯಾನದ ಸಮಯದಲ್ಲಿ ಮನಸ್ಸು ಶಾಂತವಾಗಿರಲು ಸಹಕಾರಿಯಾಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ಅನೇಕರು ಹೇಳುತ್ತಾರೆ.


ಲಿಂಗಾಯತ ಧರ್ಮದಲ್ಲಿ ವಿಭೂತಿ ಅತ್ಯಂತ ಪವಿತ್ರವಾದ ಶಿವಪ್ರಸಾದವೆಂದು ಪರಿಗಣಿಸಲಾಗುತ್ತದೆ. ಇಷ್ಟಲಿಂಗ ಪೂಜೆಯ ನಂತರ ಭಕ್ತರು ಹಣೆಯ ಮೇಲೆ ಮೂರು ಅಡ್ಡ ರೇಖೆಗಳಾಗಿ (ತ್ರಿಪುಂಡ್ರ) ವಿಭೂತಿಯನ್ನು ಧರಿಸುತ್ತಾರೆ.


ನನ್ನ ಜೀವನದಲ್ಲಿ ಮೊದಲ ಬಾರಿಗೆ ಹಣೆಯ ಮೇಲೆ ವಿಭೂತಿ ಹಚ್ಚಿಕೊಂಡ ದಿನ ಇನ್ನೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ದೇವಸ್ಥಾನದಲ್ಲಿ ವಿಭೂತಿ ಹಚ್ಚಿಕೊಳ್ಳುವುದು ಒಂದು ಪದ್ದತಿ. ನನಗೆ ವಿಭೂತಿಯ ಚಿಕ್ಕ ಚಿಟಿಕೆಯನ್ನು ಕೈಗೆ ಕೊಟ್ಟಾಗ ಅದು ಕೇವಲ ಬೂದಿಯಂತೆ ಕಾಣಿಸಿತು. ಆದರೆ ಅದನ್ನು ಹಣೆಯ ಮೇಲೆ ಹಚ್ಚಿದ ಕ್ಷಣದಲ್ಲೇ ಅದು ಭಕ್ತಿಯ ಗುರುತಾಗಿ ಬದಲಾಯಿತು. ಆ ದಿನ ದೇವಾಲಯಕ್ಕೆ ಹೋದಾಗ ಎಲ್ಲರೂ ಹಣೆಯ ಮೇಲಿನ ವಿಭೂತಿಯನ್ನು ನೋಡಿ ಮಂದಹಾಸ ಬೀರಿದರು. ಆಗ ನನಗೆ ವಿಭೂತಿ ಕೇವಲ ಹಣೆಯ ಮೇಲಿನ ಮೂರು ಗೆರೆಗಳಲ್ಲ, ಅದು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಶಿವನ ಮೇಲಿನ ಭಕ್ತಿಯ ಸಂಕೇತ ಎಂಬುದು ಅರ್ಥವಾಯಿತು. ಹಣೆಯ ಮೇಲಿನ ವಿಭೂತಿ ಮಾಸಬಹುದು; ಹೃದಯದಲ್ಲಿನ ಶಿವತತ್ವ ಎಂದಿಗೂ ಮಾಸದು.


ಪ್ರಣೀತ,
ಪತ್ರಿಕೋದ್ಯಮ ವಿದ್ಯಾರ್ಥಿನಿ
ಶ್ರೀ. ಧ. ಮ. ಡಿಗ್ರಿ ಕಾಲೇಜು



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top