ನಮ್ಮ ದೇಶದಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ನೂರಕ್ಕೆ ನೂರು ಒಮ್ಮತವಿದೆ ಎಂದರೆ, ಅದು "ಅಭಿವೃದ್ಧಿ" ಎಂಬ ಜಾದೂ ಪದದ ಮೇಲಿರುವ ಭಕ್ತಿ. ಆದರೆ, ಈ ಭಕ್ತಿಯ ಹಿಂದೆ ಇರುವ ವಿಜ್ಞಾನ, ಗಣಿತ ಮತ್ತು ಕೌಟುಂಬಿಕ ವ್ಯವಹಾರವನ್ನು ನಾವು ಸಾಮಾನ್ಯ ಮುಗ್ಧ ನಾಗರಿಕರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಅನಿಸುತ್ತದೆ.
ಇತ್ತೀಚೆಗೆ ನನ್ನ ತಲೆಯಲ್ಲಿ ಒಂದು ಸಣ್ಣ ಜ್ಞಾನೋದಯವಾಯಿತು: ನಮ್ಮ ಪ್ರೀತಿಯ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳು ಎಂದಿಗೂ ಸುಧಾರಣೆಯಾಗಬಾರದು! ಕೇವಲ ಹೆದ್ದಾರಿಗಳು, ಫ್ಲೈಓವರ್‌ಗಳು ಮತ್ತು ಬೃಹತ್ ಸೌಧಗಳು ಮಾತ್ರ ದಿನಬೆಳಗಾಗುವುದರೊಳಗೆ ತಲೆಯೆತ್ತಬೇಕು. ಈ ಸಿದ್ಧಾಂತದ ಹಿಂದೆ ಇರುವ ಆರ್ಥಿಕ 'ರಹಸ್ಯ'ಗಳನ್ನು ಹಾಗೂ ನಮ್ಮ ಜನಪ್ರತಿನಿಧಿಗಳ "ಕೌಟುಂಬಿಕ ತ್ಯಾಗ"ವನ್ನು ಒಮ್ಮೆ ಅವಲೋಕಿಸಿದರೆ, ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮೇಲಿರುವ ಗೌರವ ದುಪ್ಪಟ್ಟಾಗುತ್ತದೆ.
ಯೋಚಿಸಿ ನೋಡಿ, ಸರ್ಕಾರಿ ಶಾಲೆಯೊಂದಕ್ಕೆ ಸುಣ್ಣ-ಬಣ್ಣ ಬಳಿದು, ಅಲ್ಲಿಗೆ ಉತ್ತಮ ಶಿಕ್ಷಕರನ್ನು ನೇಮಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟುಬಿಟ್ಟರೆ ಅದರಿಂದ ದೇಶಕ್ಕೆ ಅಥವಾ ನಾಯಕರಿಗೆ ಸಿಗುವ ಲಾಭವೇನು? ಅಲ್ಲಿ ಗಂಟೆಗಟ್ಟಲೆ ನಿಂತು ಭಾಷಣ ಬಿಗಿಯಲು ಸಾಧ್ಯವೇ? ಅಥವಾ ಶಾಲೆಗೆ ಸೇರಿದ ಒಂದು ಜೊತೆ ಪುಸ್ತಕ, ಎರಡು ಪೆನ್ಸಿಲ್ ಕೊಳ್ಳುವಾಗ ಕೋಟ್ಯಂತರ ರೂಪಾಯಿಗಳ "ಕಮಿಷನ್" ವ್ಯವಹಾರ ಕುದುರಿಸಲು ಸಾಧ್ಯವೇ? ಇಲ್ಲವೇ ಇಲ್ಲ! ಅದೇ ಒಂದು ಹತ್ತು ಕಿಲೋಮೀಟರ್ ಡಾಂಬರು ರಸ್ತೆ ಅಥವಾ ಕಾಂಕ್ರೀಟ್ ಬಿಲ್ಡಿಂಗ್ ನಿರ್ಮಿಸಿದರೆ ಸಿಗುವ ಕಿಕ್ ಬೇರೆಯೇ ಇರುತ್ತದೆ. ರಸ್ತೆಗೆ ಬಳಸುವ ಕಲ್ಲು, ಮಣ್ಣು, ಜಲ್ಲಿ, ತಾರು ಎಲ್ಲದರಲ್ಲೂ ನಯ ಪೈಸೆ ಬಿಡದೆ ಲೆಕ್ಕ ಹಾಕಿ ಜೇಬಿಗೆ ಇಳಿಸಿಕೊಳ್ಳುವ ಸುಲಭ ಕಲೆ ನಮ್ಮ ಇಲಾಖೆ ಅಧಿಕಾರಿಗಳಿಗೂ ಮತ್ತು ಅವರ ಪರಮಪೂಜ್ಯ ರಾಜಕಾರಣಿ ಯಜಮಾನರಿಗೂ ಕರಗತವಾಗಿದೆ.
ಇನ್ನು ಅತ್ಯಂತ ಪ್ರಮುಖವಾದ ವಿಷಯವೆಂದರೆ, ನಮ್ಮ ರಾಜಕಾರಣಿಗಳಿಗೆ ಸಮಾಜ ಸೇವೆಯೆಂದರೆ ಪಂಚಪ್ರಾಣ. ತಮಗಿರುವ ಸಮಾಜ ಸೇವೆಯ ಹಪಾಹಪಿಯಿಂದಾಗಿ ಅವರೇ ಸ್ವತಃ ನೂರಾರು ಎಕರೆ ಜಮೀನು ಖರೀದಿಸಿ, ಅಲ್ಲಿ ಬೃಹತ್ ಖಾಸಗಿ ಶಾಲೆ, ಕಾಲೇಜು ಮತ್ತು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಿರುತ್ತಾರೆ. ಆದರೆ ಪಾಪ, ಆಸ್ತಿ ಹಸ್ತಾಂತರದ ಕಾನೂನುಗಳ ಕಾರಣಕ್ಕೋ ಏನೋ, ಆ ಸಂಸ್ಥೆಗಳೆಲ್ಲವೂ ಅವರ ಧರ್ಮಪತ್ನಿ, ಸುಪುತ್ರ, ಸುಪುತ್ರಿ ಅಥವಾ ಅಳಿಯಂದಿರ ಹೆಸರಿನ "ಲಾಭರಹಿತ ಧರ್ಮದರ್ಶಿ ಟ್ರಸ್ಟ್" ಅಡಿಯಲ್ಲಿ ನಡೆಯುತ್ತಿರುತ್ತವೆ! ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳು ಏನಾದರೂ ಅತ್ಯುತ್ತಮ ದರ್ಜೆಗೆ ಏರಿಬಿಟ್ಟರೆ, ಬಡವರೆಲ್ಲರೂ ಉಚಿತವಾಗಿ ಅಲ್ಲಿಗೇ ಹೋಗಲು ಶುರುಮಾಡುತ್ತಾರೆ.
ಆಗ ನಮ್ಮ ನಾಯಕರ ಕಷ್ಟಪಟ್ಟು ಕಟ್ಟಿದ ಖಾಸಗಿ ಶಿಕ್ಷಣ ಮತ್ತು ಆರೋಗ್ಯ ಸಾಮ್ರಾಜ್ಯಗಳು ನಷ್ಟ ಅನುಭವಿಸಬೇಕಾಗುತ್ತದೆ. ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಭವಿಷ್ಯ ಬೀದಿಗೆ ಬಂದರೆ ಅದಕ್ಕೆ ಯಾರು ಹೊಣೆ? ಬಡವರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಸಿಗಬೇಕು ಎನ್ನುವ ಹಠಕ್ಕೆ ಬಿದ್ದು, ನಮ್ಮ ನಾಯಕರ ಸ್ವಂತ ಮಕ್ಕಳ ಹಿತಾಸಕ್ತಿಯನ್ನು ಬಲಿಗೊಡುವುದು ಯಾವ ನ್ಯಾಯ?
ಹೀಗಾಗಿಯೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಕ್ಸ್ರೇ ಮಷಿನ್ ಕೆಟ್ಟುಹೋದರೆ ಅದನ್ನು ರಿಪೇರಿ ಮಾಡಿಸಲು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳಲಾಗುತ್ತದೆ. ಏಕೆಂದರೆ, ಆಸ್ಪತ್ರೆಯ ಪಕ್ಕದಲ್ಲೇ ನಮ್ಮ ನಾಯಕರ ಬಾವ ಅಥವಾ ಮೈದುನನಿಗೆ ಸೇರಿದ ಡಯಾಗ್ನೋಸ್ಟಿಕ್ ಸೆಂಟರ್ ಇರುತ್ತದೆ. ಅಲ್ಲಿಗೆ ರೋಗಿಗಳು ಹೋಗಿ ಜೇಬು ಖಾಲಿ ಮಾಡಿಕೊಂಡರೆ ಮಾತ್ರ ದೇಶದ ಜಿಡಿಪಿ ಬೆಳೆಯಲು ಸಾಧ್ಯ! ಸರ್ಕಾರಿ ಶಾಲೆಗಳು ಬಿದ್ದುಹೋಗುವ ಸ್ಥಿತಿಯಲ್ಲಿದ್ದರೆ ಮಾತ್ರ ಪಕ್ಕದಲ್ಲೇ ಇರುವ ನಾಯಕರ ಇಂಟರ್ನ್ಯಾಷನಲ್ ಶಾಲೆಗೆ ಪೋಷಕರು ಸಾಲ ಮಾಡಿಯಾದರೂ ಡೊನೇಷನ್ ತಂದು ಸುರಿಯುತ್ತಾರೆ.
ರಸ್ತೆ ಮತ್ತು ಬೃಹತ್ ಕಟ್ಟಡಗಳ ಮಹಾತ್ಮೆ ಎಂತಹದ್ದೆಂದರೆ, ಅವುಗಳನ್ನು ಎಷ್ಟು ಬಾರಿ ಬೇಕಾದರೂ "ಅಭಿವೃದ್ಧಿ" ಮಾಡಬಹುದು. ಈ ವರ್ಷ ಹಾಕಿದ ರಸ್ತೆ ಮುಂದಿನ ಮಳೆಗಾಲಕ್ಕೆ ಸರಿಯಾಗಿ ಕೊಚ್ಚಿ ಹೋಗುತ್ತದೆ. ಇದು ಪ್ರಕೃತಿಯ ತಪ್ಪು ಎಂದುಕೊಂಡರೆ ನಮ್ಮ ಮೂರ್ಖತನವಾದೀತು; ಇದು ನಿಜಕ್ಕೂ ಮುಂದಾಲೋಚನೆಯುಳ್ಳ ಆರ್ಥಿಕ ತಂತ್ರಗಾರಿಕೆ! ರಸ್ತೆ ಹಾಳಾದರೆ ತಾನೇ ಮುಂದಿನ ವರ್ಷ ಮತ್ತೆ ಟೆಂಡರ್ ಕರೆಯಲು ಸಾಧ್ಯ? ಮತ್ತೆ ಪರ್ಸೆಂಟೇಜ್ ಜೇಬಿಗೆ ಇಳಿಯಲು ಸಾಧ್ಯ? ಅದೇ ಸರ್ಕಾರಿ ಆಸ್ಪತ್ರೆಯ ಯಂತ್ರಗಳನ್ನೋ ಅಥವಾ ಶಾಲೆಯ ಕೊಠಡಿಗಳನ್ನೋ ವರ್ಷವರ್ಷವೂ ಒಡೆದು ಕಟ್ಟುವುದು ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ನಮ್ಮ ಬುದ್ಧಿವಂತರು ಕಣ್ಣಿಗೆ ಕಾಣುವ, ಬೇಗನೆ ಹಾಳಾಗುವ ಕಾಂಕ್ರೀಟ್ ಕಾಮಗಾರಿಗಳನ್ನೇ ನೆಚ್ಚಿಕೊಂಡಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯದಂತಹ ಕಣ್ಣಿಗೆ ಕಾಣದ ಸೇವೆಗಳ ಮೇಲೆ ಹೂಡಿಕೆ ಮಾಡುವುದಕ್ಕಿಂತ, ಕಣ್ಣಿಗೆ ರಾಚುವ ಸಿಮೆಂಟ್ ಕಾಮಗಾರಿಗಳ ಮೇಲೆ ಬಂಡವಾಳ ಹೂಡುವುದು ನಮ್ಮ ಪ್ರಜಾಪ್ರಭುತ್ವದ ಅಲಿಖಿತ ನಿಯಮವಾಗಿಬಿಟ್ಟಿದೆ. ಶಾಲೆಗೆ ಬರುವ ಬಡ ಮಗುವಿನ ಬುದ್ಧಿಶಕ್ತಿ ಬೆಳೆದರೆ ಮುಂದೊಂದು ದಿನ ಅವನೇ ನಮ್ಮನ್ನು ಪ್ರಶ್ನಿಸಲು ಶುರುಮಾಡಬಹುದು ಎಂಬ ಮುನ್ನೆಚ್ಚರಿಕೆಯೂ ಇರಬಹುದು. ಅದಕ್ಕೆ ಬದಲಾಗಿ, ಮಗು ಶಾಲೆಗೆ ಹೋಗುವ ದಾರಿಯಲ್ಲಿ ಒಂದು ನೂರು ರಸ್ತೆ ಗುಂಡಿಗಳನ್ನು ನಿರ್ಮಿಸಿದರೆ, ಮಗುವು ದಾರಿ ಹುಡುಕುವುದರಲ್ಲೇ ಬ್ಯುಸಿಯಾಗಿರುತ್ತದೆ!
ಹೀಗಾಗಿ, ಪ್ರೀತಿಯ ನಾಗರಿಕರೇ, ಸರ್ಕಾರಿ ಶಾಲೆಗಳು ಬಿದ್ದುಹೋಗುತ್ತಿದ್ದರೆ ಚಿಂತಿಸಬೇಡಿ, ಆಸ್ಪತ್ರೆಗಳಲ್ಲಿ ಸ್ಟ್ರೆಚರ್ ಇಲ್ಲದಿದ್ದರೆ ಬೇಸರಪಟ್ಟುಕೊಳ್ಳಬೇಡಿ. ಬದಲಿಗೆ, ನಮ್ಮ ಊರಿನ ರಸ್ತೆಗಳು ವರ್ಷಕ್ಕೆ ಮೂರು ಬಾರಿ ಕರಗಿ ಹೊಸ ರೂಪ ಪಡೆಯುತ್ತಿವೆಯಲ್ಲ, ನಮ್ಮ ಪ್ರೀತಿಯ ಅಧಿಕಾರಿಗಳು ಮತ್ತು ನಾಯಕರ ಕುಟುಂಬದ ಉದ್ಯಮಗಳು ದಿನದಿಂದ ದಿನಕ್ಕೆ ಯಶಸ್ವಿಯಾಗಿ 'ಅಭಿವೃದ್ಧಿ' ಹೊಂದುತ್ತಿವೆಯಲ್ಲ ಎಂದು ಹೆಮ್ಮೆ ಪಡೋಣ. ಈ ಕಾಂಕ್ರೀಟ್ ಕಾಡಿನ ಅಭಿವೃದ್ಧಿ ಹೀಗೆಯೇ ಸಾಗಲಿ, ನಮ್ಮವರ ಜೇಬುಗಳು ಮತ್ತು ನಾಯಕರ ಕೌಟುಂಬಿಕ ಟ್ರಸ್ಟ್‌ಗಳು ಸದಾ ತುಂಬಿರಲಿ!
- ಪ್ರಸನ್ನ ಹೊಳ್ಳ ತೀರ್ಥಹಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

