ಎಲ್ಲ ಹೇಳಿಯಾದ ಮೇಲೆ, ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಹೇಳಿದ್ದು :
ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ।
ವಿಮೃಶ್ಯೈತದಶೇಷೇಣ
ಯಥೇಚ್ಛಸಿ ತಥಾ ಕುರು॥
ಅರ್ಥ:
"ಎಲೈ ಅರ್ಜುನನೇ, ಹೀಗೆ ರಹಸ್ಯಗಳಿಗಿಂತಲೂ ಅತ್ಯಂತ ರಹಸ್ಯವಾದ ಜ್ಞಾನವನ್ನು ನಾನು ನಿನಗೆ ತಿಳಿಸಿದ್ದೇನೆ. ಇದನ್ನು ಸಂಪೂರ್ಣವಾಗಿ ಆಳವಾಗಿ ಆಲೋಚನೆ ಮಾಡಿ, ವಿಮರ್ಶೆ ಮಾಡಿ ಆಮೇಲೆ ನಿನಗೆ ಹೇಗೆ ಇಷ್ಟವೋ ಹಾಗೆ ಮಾಡು"
ಪ್ರಕೃತಿಯ ರಹಸ್ಯವನ್ನು ಸಂಪೂರ್ಣವಾಗಿ ತಿಳಿದ ಮೇಲೆ ಮನುಷ್ಯ ಆಲೋಚನೆ ಮಾಡಿ, ವಿಮರ್ಶೆ ಮಾಡಿ ಆಮೇಲೆ ಹೇಗೆ ಇಷ್ಟವೋ, ಹೇಗೆ ಸುಖವೋ, ಹೇಗೆ ಅಗತ್ಯವೋ ಹಾಗೆ ಮಾಡಬೇಕು"
ಶಂಕರಾಚಾರ್ಯರು ತಮ್ಮ ದಿವ್ಯ ಜ್ಞಾನದಿಂದ, ವಿಜ್ಞಾನದಿಂದ ಶೃಂಗೇರಿಯಲ್ಲಿನ ಪ್ರಕೃತಿಯ ರಹಸ್ಯವನ್ನು ಸಂಪೂರ್ಣವಾಗಿ ತಿಳಿದ ಮೇಲೆ ಮಠ ಸ್ಥಾಪನೆ ಮಾಡಿದರು. ಶತಶತಮಾನಗಳು ಕಳೆದರೂ ಭದ್ರವಾಗಿ, ಶಕ್ತಿ ಕೇಂದ್ರವಾಗಿ ಮಠ ನಮ್ಮಲ್ಲಿದೆ.
ಇಂದಿನ ಮನುಷ್ಯನ ವಿಜ್ಞಾನವೂ, ತಂತ್ರಜ್ಞಾನವೂ ಬಹಳವಾಗಿಯೇ ಮುಂದುವರಿದಿದೆ. ಕೈಗಾ ಅಣುಸ್ಥಾವರ, ಮೊನ್ನೆ ಮೊನ್ನೆ ನಿರ್ಮಾಣಗೊಂಡ ಸಿಗಂದೂರು ಸೇತುವೆ, ಅಯೋಧ್ಯೆಯ ರಾಮ ಮಂದಿರ (ಸಾವಿರ ವರ್ಷಗಳಾದರೂ ಏನೂ ಆಗದಂತೆ ನಿರ್ಮಿಸಲಾಗಿದೆಯಂತೆ) ನಿರ್ಮಾಣಗಳ ಯಶಸ್ಸು ವಿಜ್ಞಾನ, ತಂತ್ರಜ್ಞಾನಕ್ಕೆ ಸಾಕ್ಷಿ.
ಆದರೆ, ಅದೇ ವಿಜ್ಞಾನ ತಂತ್ರಜ್ಞಾನದ ಇದುವರೆಗಿನ ಅಧ್ಯಯನ ಸಂಶೋಧನೆಗಳೇ ಹೇಳುತ್ತವೆ, ಪರಿಸರ ವಿಜ್ಞಾನ ತಜ್ಞರೇ ಹೇಳುತ್ತಾರೆ ಮಲೆನಾಡಿನ ಶೃಂಗೇರಿ, ತೀರ್ಥಹಳ್ಳಿ, ಆಗುಂಬೆ, ಕಾರ್ಕಾಳಗಳಲ್ಲಿ ಬೃಹತ್ ಯೋಜನೆಗಳನ್ನು ತರುವಲ್ಲಿ ಇನ್ನಷ್ಟು ಆಳವಾದ ಅಧ್ಯಯನ ಆಗಬೇಕು ಅಂತ.
"ರಾಜ್ಯದ ಮಲೆನಾಡು ಭಾಗದ 7 ಜಿಲ್ಲೆಗಳ 43 ತಾಲೂಕುಗಳು ಭೂಕುಸಿತದ ತೀವ್ರ ಅಪಾಯದಲ್ಲಿವೆ ಎಂದು ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. 2006ರಿಂದ 2022ರವರೆಗೆ ಬರೋಬ್ಬರಿ 1495 ಕಡೆ ಭೂಕುಸಿತ ಸಂಭವಿಸಿದೆ. ಆದರೂ, ನಮ್ಮ ಆಡಳಿತಯಂತ್ರ ಮಾತ್ರ ಹಳೇ ವರದಿಗಳನ್ನು ಧೂಳು ಹಿಡಿಯಲು ಬಿಟ್ಟಿದೆಯೇ ಹೊರತು, ಅವುಗಳನ್ನು ಜಾರಿಗೆ ತರುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಿಲ್ಲ.
ಕಳೆದ 15 ವರ್ಷಗಳಲ್ಲಿ ಸರಕಾರ 7-8 ವರದಿಗಳನ್ನು ಸಿದ್ಧಪಡಿಸಿದೆ. ಆದರೆ, ಆ ವರದಿಗಳು ಕಪಾಟುಗಳಲ್ಲಷ್ಟೇ ಭದ್ರವಾಗಿವೆ. ರಸ್ತೆಗಳ ವಿಸ್ತರಣೆಗಾಗಿ ಲಂಬಾಕೃತಿಯಲ್ಲಿ ಗುಡ್ಡಗಳನ್ನು ಕೊರೆಯುವ ಅವೈಜ್ಞಾನಿಕ ಕಾಮಗಾರಿಗಳಿಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ." (ಈ ಆಘಾತಕಾರಿ ಮಾಹಿತಿಯು ವಿಜಯ ಕರ್ನಾಟಕ ಪತ್ರಿಕೆಯ ಜುಲೈ 8, 2026ರ ಸಂಪಾದಕೀಯದಲ್ಲಿದೆ)
ತೀವ್ರ ಅಪಾಯದಲ್ಲಿರುವ ಏಳು ಜಿಲ್ಲೆಗಳು:
೧. ಶಿವಮೊಗ್ಗ
೨. ಚಿಕ್ಕಮಗಳೂರು
೩. ಕೊಡಗು
೪. ಹಾಸನ
೫. ಉತ್ತರ ಕನ್ನಡ
೬. ದಕ್ಷಿಣ ಕನ್ನಡ
೭. ಉಡುಪಿ
ಆ ಏಳು ಜಿಲ್ಲೆಗಳ ತೀವ್ರ ಅಪಾಯದ 43 ತಾಲೂಕುಗಳಲ್ಲಿ ಪ್ರಮುಖವಾದ ಐದು ತಾಲೂಕುಗಳು
೧) ಶೃಂಗೇರಿ,
೨) ಮಂಗಳೂರು.
೩) ತೀರ್ಥಹಳ್ಳಿ,
೪) ಹೊಸನಗರ,
೫) ಕಾರ್ಕಳ,
ಈ ಐದು ತಾಲೂಕುಗಳಲ್ಲೇ ಯೋಜಿತ 332 ಕಿ.ಮೀ.ನ ಶಿವಮೊಗ್ಗ - ಶೃಂಗೇರಿ - ಮಂಗಳೂರು ರೈಲ್ವೇ ಮಾರ್ಗ ಬರುವುದು!!
ವಿಜ್ಞಾನಿಗಳು ಕೊಟ್ಟ ವರದಿಯನ್ನು ಕಪಾಟಿನಿಂದ ಹೊರ ತೆಗೆದು, ಪರಿಸರ ತಜ್ಞರು ನೀಡಿದ ಎಚ್ಚರಿಕೆಗಳನ್ನು ಗಮನಿಸಿ, ಎಷ್ಟೇ ಅಪಾಯ ಇದ್ದರೂ, ಯಾವುದೇ ಅಪಾಯಗಳು ಘಟಿಸದಂತೆ 57 ಸುರಂಗಗಳನ್ನು, 250 ಸೇತುವೆಗಳನ್ನು ನಿರ್ಮಿಸುವುದಕ್ಕೆ ಲಭ್ಯವಿರುವ ಜ್ಞಾನ-ವಿಜ್ಞಾನ-ತಂತ್ರಜ್ಞಾನಗಳಿಂದ ಸಾಧ್ಯವೆ ಎನ್ನುವ ಗಂಭೀರ ವೈಜ್ಞಾನಿಕ ಅಧ್ಯಯನ ಶೃಂಗೇರಿ ರೈಲು ಮಾರ್ಗ ಯೋಜನೆಗೆ ಆಗಬೇಕು.
ಕಪ್ಪೆಯನ್ನು ತನ್ನ ಆಹಾರವಾಗಿ ಸೇವಿಸುವ ಹಾವೊಂದು, ಬಿಸಿಲಿನಿಂದ ಆ ಕಪ್ಪೆಗೆ ರಕ್ಷಣೆ ನೀಡಲು ತನ್ನ ಹೆಡೆಯನ್ನು ಎತ್ತಿ ಛತ್ರಿಯಂತೆ ಆಶ್ರಯ ನೀಡಿತ್ತು. ಇದು ಶೃಂಗೇರಿ.
ಮಾನವ ನಿರ್ಮಿತ ರೈಲು ಮಾರ್ಗದ ಹಾವು ಶೃಂಗೇರಿಯ ಪರಿಸರ ಎಂಬ ಜೀವ ವೈವಿಧ್ಯದ ಗರ್ಭಿಣಿ ಕಪ್ಪೆಯನ್ನು ರಕ್ಷಿಸಬಹುದಾ?
ಶೃಂಗೇರಿ ರೈಲು ಮಾರ್ಗ ಯೋಜನೆ ಪರಿಸರದ ಮೇಲಿನ ಯುದ್ಧವಾಗಿ, ಮನುಷ್ಯ ಸೋತರೆ ಶೃಂಗೇರಿ ಮತ್ತೊಂದು ವೈನಾಡ್ ಆಗುತ್ತೆ. ಮನುಷ್ಯನ ಜ್ಞಾನ ಸೋತರೆ ಪರಿಸರ ಕಪ್ಪೆಯೂ ಉಳಿಯಲ್ಲ, ರೈಲು ಮಾರ್ಗದ ಹಾವೂ ಉಳಿಯಲ್ಲ.
ಈ ಹಿನ್ನಲೆಯಲ್ಲಿ, ಶೃಂಗೇರಿ ರೈಲು ಮಾರ್ಗ ಯೋಜನೆಗೆ ಸ್ಪಷ್ಟವಾದ ವೈಜ್ಞಾನಿಕ ಅಧ್ಯಯನ ಆಗಬೇಕು.
ವಿಮೃಶ್ಯೈತದಶೇಷೇಣ - ಮಲೆನಾಡಿನ ವಿಶಿಷ್ಟವಾದ ಪರಿಸರದ ರಹಸ್ಯಮಯ ಜ್ಞಾನವನ್ನು ಸಂಪೂರ್ಣವಾಗಿ ಅಧ್ಯಯನಮಾಡಿ, ಅನುಷ್ಠಾನ ಸಾಧ್ಯತೆಯ ಅವಕಾಶ ಇದ್ದರೆ ಯಥೇಚ್ಛಸಿ ತಥಾ ಕುರು.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

