ಎಸ್.ಡಿ.ಎಂ ಕಾಲೇಜು ಉಜಿರೆ: ಬೃಹತ್ ರಕ್ತದಾನ ಶಿಬಿರ

Upayuktha
0

ಕಾಲೇಜಿನ ನೂರಾರು ವಿದ್ಯಾರ್ಥಿಗಳಿಂದ ರಕ್ತದಾನ, ದಾಖಲೆಯ 220 ಯುನಿಟ್ ರಕ್ತ ಸಂಗ್ರಹ 



ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರೋಟರಿ ಕ್ಲಬ್ ಬೆಳ್ತಂಗಡಿ, ಫೆಡರಲ್ ಬ್ಯಾಂಕ್, ಮಂಗಳೂರಿನ ಕೆಎಂಸಿ ರಕ್ತ ನಿಧಿ ಕೇಂದ್ರ, ಅತ್ತಾವರ, ಮಂಗಳೂರು ವಿಭಾಗದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಉಜಿರೆಯ ಎಸ್‌ಡಿಎಂ ಕಾಲೇಜಿನ ರೆಡ್ ಕ್ರಾಸ್ ಘಟಕಗಳ ಸಹಯೋಗದೊಂದಿಗೆ ಕಾಲೇಜಿನ ಬೋಟನಿ ಲ್ಯಾಬ್ ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. 


ರಕ್ತದಾನದ ಉದ್ಘಾಟನಾ ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ ವಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ, ವಿಜ್ಞಾನದಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಆದರೆ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಯಾವುದೂ ಬಂದಿಲ್ಲ. ರಕ್ತದಾನ ಮಾಡುವುದು ಒಂದು ಮಹತ್ತರವಾದ ಕಾರ್ಯ. ಈ ಶಿಬಿರವು ಸೇವೆಯ ಜೊತೆಗೆ ಆರೋಗ್ಯದ ಜಾಗೃತಿಯನ್ನು ಮೂಡಿಸುತ್ತದೆ. ದಾನದಿಂದ ಸಂಗ್ರಹವಾದ ರಕ್ತ ಅನೇಕರ ಬದುಕನ್ನು ಉಳಿಸುತ್ತದೆ. ಇವೆಲ್ಲದಕ್ಕೂ ಮಿಗಿಲಾಗಿ ರಕ್ತದಾನದಿಂದ ಯಾವುದೇ ಆರೋಗ್ಯದ ನಷ್ಟ ಇಲ್ಲ. ಇಂತಹ ಶಿಬಿರಗಳಿಂದ ಸಂಗ್ರಹವಾದ ರಕ್ತ ಎಷ್ಟೋ ತುರ್ತು ಸನ್ನಿವೇಶದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದರ ಜೊತೆಗೆ ಸಮಾಜ ಮುಖಿ ಚಿಂತನೆಗಳನ್ನು ನಿರಂತರವಾಗಿ ಬೆಳೆಸುತ್ತಿದೆ. ಈಗಾಗಲೇ ಅನೇಕ ಶಿಬಿರಗಳನ್ನು ಕಾಲೇಜು ಆಯೋಜಿಸಿಕೊಂಡು ಬಂದಿದೆ. ಇದರ ಭಾಗವಾಗಿ ಈ ಬೃಹತ್ ರಕ್ತದಾನ ಶಿಬಿರವು ಒಂದು. ಇದಕ್ಕೆ ಹಲವು ಸಂಘ ಸಂಸ್ಥೆಗಳು ಸಹಕಾರ ನೀಡಿದೆ. ಈ ರಕ್ತದಾನ ನೂರಾರು ಜನರ ಆರೋಗ್ಯವನ್ನು ಬದುಕಿಸಲು ಉಪಯೋಗವಾಗಲಿದೆ. ಇಂತಹ ಸಾಮಾಜಮುಖಿ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಬೇಕು. ರಕ್ತದಾನ ಶ್ರೇಷ್ಠ ದಾನ ಮತ್ತು ಅನೇಕರ ಬದುಕಿಗೆ ಜೀವ ತುಂಬುವ ಮಹಾದಾನ ಎಂದರು. 


ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಮಾಲಿನಿ ಅಂಚನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪ್ರತೀ ವರ್ಷ ವರ್ಷಕ್ಕೆ ಎರಡು ಬಾರಿ ಸಂಘ ಸಂಸ್ಥೆಗಳ ಸಹಕಾರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಶಿಬಿರದಲ್ಲಿ 230 ರಿಂದ 250 ಯುನಿಟ್ ರಕ್ತದ ವರೆಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿ ರಕ್ತ ಸಂಗ್ರಹಣ ಕೇಂದ್ರಗಳಿಗೆ ಕಳಿಸಿಕೊಡುವಂತಹ ಮಹತ್ತರ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.



ಈ ವೇಳೆ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆಫಿಸರ್ ಡಾ. ವಿದ್ವತಾ ಮಾತನಾಡಿ, ರಕ್ತದಾನದಿಂದ ಯಾವುದೇ ಆರೋಗ್ಯದ ನಷ್ಟ ಇಲ್ಲ. ಒಂದು ಯುನಿಟ್ ರಕ್ತದಿಂದ ಅಗತ್ಯತೆ ಇದ್ದ ಮೂರು ಜನರನ್ನು ಬದುಕಿಸುವ ಶಕ್ತಿ ಇರುತ್ತದೆ ಎಂದು ಶಿಬಿರವನ್ನು ಆಯೋಜಿಸಿದ ಉಜಿರೆಯ ಎಸ್.ಡಿ.ಎಂ ಕಾಲೇಜಿಗೆ ಅಭಿನಂದನೆಯನ್ನು ತಿಳಿಸಿದರು. ಬಳಿಕೆ ಕಾಲೇಜಿನ ಪ್ರಾಂಶುಪಾಲ ಪ್ರೋ ವಿಶ್ವನಾಥ್ ಪಿ ರವರಿಗೆ ಕೆ.ಎಂ.ಸಿ ಆಸ್ಪತ್ರೆಯ ಅಭಿನಂದನ ಸ್ಮರಣಿಕೆಯನ್ನು ಹಸ್ತಾಂತರಿಸಿದರು.


ವೇದಿಕೆಯಲ್ಲಿ ಬೆಳ್ತಂಗಡಿ ಫೆಡರಲ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಸುಹಾಸ್ ಕುಮಾರ್ ಬಿ, ಯೋಜನಾಧಿಕಾರಿ ಡಾ. ಸುಧೀರ್ ಕೆ ವಿ, ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್ ಮೀನಾಕ್ಷಿ ರಮೇಶ್, ಹಿರಿಯ ಯೋಜನಾಧಿಕಾರಿ ಡಾ. ಮಹೇಶ್ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 


ಎನ್.ಎಸ್.ಎಸ್ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿನಿ ಹರ್ಷಿತಾ ನಿರೂಪಿಸಿ, ರೆಡ್ ಕ್ರಾಸ್ ವಿಭಾಗದ ಉಪನ್ಯಾಸಕಿ ಮಂಜುಶ್ರೀ ವಂದಿಸಿದರು.


ದಾಖಲೆಯ 220 ಯುನಿಟ್ ರಕ್ತ ಸಂಗ್ರಹ:


ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದರು. ಶಿಬಿರದಲ್ಲಿ ದಾಖಲೆಯ 220 ಯುನಿಟ್ ರಕ್ತ ಸಂಗ್ರಹ ಮಾಡಿ ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯ ರಕ್ತ ಸಂಗ್ರಹಣ ಘಟಕ ಹಾಗು ಮಂಗಳೂರು ವಿಭಾಗದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಕಳುಹಿಸಿಕೊಡಲಾಯಿತು.


"ಪ್ರತಿ ಬಾರಿ ರಕ್ತದಾನ ಮಾಡಿದಾಗಲು ಹೆಮ್ಮೆಯ ಸಂತೃಪ್ತ ಭಾವ ಮೂಡುತ್ತದೆ. ನಾವು ಕೊಡ ಮಾಡುವ  450 ಎಂಎಲ್ ರಕ್ತದಿಂದ ಮೂರು ಜೀವ ಉಳಿಸಬಹುದು ಎಂಬ ಸಮಾಜಮುಖಿ ಚಿಂತನೆ ಇತರರಿಗೆ ಪ್ರೇರಣೆಯಾಗಬೇಕು. ರಕ್ತದಾನ ಮಾಹಾದಾನ ಎಂಬ ಜಾಗೃತಿ ಎಲ್ಲೆಡೆ ಸಾರಬೇಕು. ಇಂತಹ ಸೇವಾ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿರುವ ಎಸ್.ಡಿ.ಎಂ ಕಾಲೇಜಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ."

- ಪುನೀತ್ ಶೆಟ್ಟಿ 

ಮಾನವ ಸಂಪನ್ಮೂಲ ವಿಭಾಗ 

ಎಸ್.ಡಿ.ಎಂ ಎಜುಕೇಷನಲ್ ಸೊಸೈಟಿ 

(16ನೇ ಬಾರಿ ರಕ್ತದಾನ)


"ರಕ್ತದಾನ ಎಂದಾಗ ಈ ಮೊದಲು ಭಯ ಇತ್ತು. ಆದರೆ ಇತರೆ ಸಹಪಾಠಿಗಳು ರಕ್ತದಾನ ಮಾಡುತ್ತಿರುವುದನ್ನು ಕಂಡು ಹಾಗು ಹಿರಿಯ ಮಾರ್ಗದರ್ಶನದಿಂದ ಮೊದಲಬಾರಿ ರಕ್ತದಾನ ಮಾಡಿದ್ದೇನೆ. ಈ ರಕ್ತದಾನ ಆರೋಗ್ಯಕ್ಕೆ ಹೊಸ ಚೈತನ್ಯವನ್ನು ನೀಡುವುದರ ಜೊತೆಗೆ ನನ್ನೊಳಗಿದ್ದ ಭಯವನ್ನು ಹೋಗಲಾಡಿಸಿದೆ. ಸ್ವ ಆರೋಗ್ಯ ಕಾಳಜಿ ಹಾಗು ತುರ್ತು ರಕ್ತದ ಅನಿವಾರ್ಯ ಇದ್ದವರಿಗೆ ಇಂತಹ ರಕ್ತದಾನ ಶಿಬಿರಗಳು ಅತ್ಯಂತ ಉಪಕಾರಿ. ಈ ಅವಕಾಶಕ್ಕೆ ವಂದಿಸುತ್ತೇನೆ." 

- ಪಂಚಮಿ ಕೆ ಎನ್ 

ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ

ಎಸ್.ಡಿ.ಎಂ ಕಾಲೇಜು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top