ವಿದ್ಯಾರ್ಥಿಗಳ ಕ್ರಿಯಾತ್ಮಕ ಚಿಂತನೆಗೆ ಇತಿಹಾಸ ವಿಭಾಗ ಆದ್ಯತೆ
ಉಜಿರೆ: ಇತಿಹಾಸವೆಂದರೆ ಕೇವಲ ಪುರಾಣ ಅಥವಾ ಗತಿಸಿದ ದಿನಗಳ ನೆನಪಷ್ಟೇ ಅಲ್ಲ; ಅದು ವಿದ್ಯಾರ್ಥಿಗಳ ಆಲೋಚನಾ ಶಕ್ತಿಯನ್ನು ಉನ್ನತೀಕರಿಸುವ ಮಾಧ್ಯಮ. ಮಹಾವಿದ್ಯಾಲಯದ ಇತಿಹಾಸ ವಿಭಾಗವು ಕೇವಲ ಬೋಧನೆಗೆ ಸೀಮಿತವಾಗದೆ ವಿದ್ಯಾರ್ಥಿಗಳ ಕ್ರಿಯಾತ್ಮಕ ಹುಮ್ಮಸ್ಸನ್ನು ಹೆಚ್ಚಿಸಲು ನಿರಂತರ ಶ್ರಮಿಸುತ್ತಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥೆ ಹಾಗೂ ಕಾರ್ಯಕ್ರಮದ ಅಧ್ಯಕ್ಷೆ ಡಾ. ಬೋಜಮ್ಮ ಕೆ.ಎನ್. ಹೇಳಿದರು.
ಅವರು ಇತ್ತೀಚೆಗೆ ಕಾಲೇಜಿನ ಆವರಣದಲ್ಲಿ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ನೂತನ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳ 'ಹೊಸ ಸೇರ್ಪಡೆ' ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಡಾ. ಅಶೋಕ್ ರಾಕೇಶ್ ಡಿಸೋಜ ಉದ್ಘಾಟಿಸಿ ಶುಭಕೋರಿದರು. ವೇದಿಕೆಯಲ್ಲಿ ವಿಭಾಗದ ಸಂಯೋಜಕರಾದ ಡಾ. ಸನ್ಮತಿ ಕುಮಾರ್ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಹಿರನ್ಮಯಿ ಮತ್ತು ಮಿಥುನ್ ಉಪಸ್ಥಿತರಿದ್ದರು.
ವಿಭಾಗಕ್ಕೆ ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ಪದವಿಯ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೀತಿಯ ಕಿರುಕಾಣಿಕೆಯನ್ನು ನೀಡಿ ಆತ್ಮೀಯವಾಗಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಈ ವಿನೂತನ ಸ್ವಾಗತ ಕ್ರಮವು ನೂತನ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಹಾಗೂ ಉತ್ಸಾಹವನ್ನು ಮೂಡಿಸಿತು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು.
ದ್ವಿತೀಯ ಬಿ.ಎ. ವಿದ್ಯಾರ್ಥಿನಿಯರಾದ ಭುವನೇಶ್ವರಿ, ಭವ್ಯ ಹಾಗೂ ಲಕ್ಷ್ಮಿ ಪ್ರಾರ್ಥಿಸಿ, ಅಂತಿಮ ಬಿ.ಎ. ವಿದ್ಯಾರ್ಥಿನಿ ಬಿಂಧುಶ್ರೀ ಸ್ವಾಗತಿಸಿ, ತನು ಉದ್ಘಾಟಕರನ್ನು ಪರಿಚಯಿಸಿದರು. ಸುಶೀರಾ ಕಾರ್ಯಕ್ರಮವನ್ನು ನಿರೂಪಿಸಿದರೆ, ಅಕ್ಷತಾ ಧನ್ಯವಾದ ಸಮರ್ಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


