ದಕ್ಷಿಣ ಕನ್ನಡದಲ್ಲಿ ಈಗಾಗಲೇ ಶಾಲಾ ಕಾಲೇಜುಗಳಿಗೆ ಹಲವು ಬಾರಿ ಮಳೆ ರಜೆ ದೊರಕಿದೆ ಆದರೆ ವಿಪರ್ಯಾಸ ಅಂದ್ರೆ ರಜೆ ಕೊಟ್ಟ ದಿನ ಮಳೆಯೇ ರಜೆ ತೆಗೆದುಕೊಂಡು ಬಿಟ್ಟು ಹವಾಮಾನ ಇಲಾಖೆಯನ್ನು ಬೆಪ್ಪಾಗಿಸಿ ಬಿಟ್ಟಿದೆ. ಜೂನ್, ಜುಲೈ ತಿಂಗಳು ಅತ್ಯಧಿಕ ಮಳೆಯ ತಿಂಗಳಾದರೂ ಈ ಬಾರಿ ಮಳೆಯೇ ನಷ್ಟವಾದಂತೆ ಕಾಣುತ್ತಿದೆ. ಬರುವ ಅಲ್ಪ ಸ್ವಲ್ಪ ತೀವ್ರ ಅನ್ನುವ ಮಳೆಗೆ ಈಗಾಗಲೇ ಪುಟ್ಟ ಕಂದಮ್ಮ ಸಹಿತವಾಗಿ ಕೆಲವು ಪ್ರಾಣ, ಸಂಪತ್ತು ನಷ್ಟವಾಗಿದೆ.
ಈ ಮಳೆಯ ಕಾರಣಕ್ಕೆ ಶಾಲೆಗಳಿಗೆ ರಜೆ ಕೊಟ್ಟಾಗಲೆಲ್ಲಾ ಕಾಡುವ ಪ್ರಶ್ನೆ, ಈ ರಜೆ ನಮಗೆ ಯಾಕೆ ಅನಿವಾರ್ಯವಾಯ್ತು...? ತೀವ್ರ ಮಳೆ ತಿಂಗಳಾದ ಜೂನ್ ಜುಲೈ ತಿಂಗಳನ್ನು ಯಾಕೆ ಶೈಕ್ಷಣಿಕ ರಜೆಯ ತಿಂಗಳಾಗಿ ಘೋಷಿಸಿಬಾರದು....? ಬ್ರಿಟಿಷರು ಪ್ರಸಾದಿಸಿದ ಬೇಸಿಗೆ ರಜೆ ಸ್ವತಂತ್ರ ಭಾರತಕ್ಕೆ ಯಾಕೆ ಅನಿವಾರ್ಯವಾಯ್ತು..? ಬ್ರಿಟಿಷರಿಗೆ ಬಿಸಿಲಿನ ತಾಪ ತಡೆಯಲು ಸಾಧ್ಯವಾಗದೆ ಆ ಸಮಯದಲ್ಲಿ ಇಡೀ ರಾಜಧಾನಿಯನ್ನೇ ಶಿಮ್ಲಾಕ್ಕೆ ಸ್ಥಳಾಂತರ ಮಾಡುತ್ತಿದ್ದರಂತೆ. ಶೀತಲ ವಾತಾವರಣಕ್ಕೆ ಹೊಂದಿಕೊಂಡಂತೆ ಇರುವ ಅವರ ದೇಹ ಪ್ರಕೃತಿಗೆ ಭಾರತದ ಬಿಸಿಲು ತಡೆಯಲು ಅಸಾಧ್ಯವಾಗಿತ್ತು ಅಲ್ಲದೆ ಭಾರತಕ್ಕೆ ಬಂದ ಅವರು ಕೂಡ ಒಂದಲ್ಲ ಒಂದು ಕಾರಣಕ್ಕೆ ಕೃಷಿಯನ್ನು ಪ್ರಮುಖವಾಗಿರಿಸಿ ಆ ಕೆಲಸ ಕಾರ್ಯಗಳಿಗೆ ಮಕ್ಕಳನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಬೇಸಿಗೆ ರಜೆ ನೀಡಿತ್ತಿದ್ದರು ಎನ್ನುವ ಹಾಗೆ ನಮಗೆ ಮಾಹಿತಿ ದೊರೆಯುತ್ತದೆ.
ಆ ಕಾರಣಗಳು ಏನೇ ಇರಲಿ ಈ ಕಾಲಕ್ಕೆ ಏಪ್ರಿಲ್ ಮೇ ತಿಂಗಳಲ್ಲೇ ರಜೆ ನೀಡಬೇಕು ಯಾಕೆ? ನಾವು ಈಗ ಯಾರ ಅಡಿಯಾಳುಗಳಲ್ಲ, ಸ್ವತಂತ್ರ ಭಾರತದಲ್ಲಿ ಇದ್ದೇವೆ ಈಗಿನ ಪರಿಸ್ಥಿತಿಗೆ ಹೊಂದಿಕೊಂಡಂತೆ ಬದಲಾವಣೆ ಸಾಧ್ಯವಿಲ್ಲವೇ. ಕೆಲವು ಖಾಸಗಿ ಶಾಲೆಗಳು ಬೇಸಿಗೆ ರಜೆಯನ್ನು ಕಡಿತಗೊಳಿಸಿ ಕ್ರಿಸ್ಮಸ್ ರಜೆ ನೀಡುವುದಿಲ್ಲವೇ ಹಾಗೆ ಸರಕಾರ ಕೂಡ ಈ ನಿಟ್ಟಿನಲ್ಲಿ ಯಾಕೆ ಯೋಚಿಸಬಾರದು...? ನಿಜವಾಗಿಯೂ ಮಳೆ ನೀಡುವಷ್ಟು ಗಂಭೀರ ಪರಿಸ್ಥಿತಿ ಬೇಸಿಗೆ ನೀಡುವುದೇ...? ಬೇಸಿಗೆಯಲ್ಲಿ ನೀರಿನ ಕೊರತೆಯಾಗಬಹುದು, ಆರೋಗ್ಯ ಸಮಸ್ಯೆಯಾಗಬಹುದು ಆದರೆ ಅದು ಪರಿಹರಿಸಲಾಗದ ಗಂಭೀರ ಸಮಸ್ಯೆಯೇ...? ಮಳೆಗಾಲದಲ್ಲಿ ಆಗುವ ಪ್ರಾಣ ಹಾನಿಗಳಿಗಿಂತ ತೀವ್ರ ಸ್ವರೂಪದ್ದೇ..?.
ರಜೆಯನ್ನು ನೀಡುವವರು ಸ್ಪಷ್ಟೀಕರಿಸುತ್ತಾರೆ, ಮಳೆ ಕಾರಣಕ್ಕೆ ರಜೆ ನೀಡುವುದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಎನ್ನುವ ಹಾಗೆ. ಹಾಗಾದರೆ ಒಂದು ದಿನದ ರಜೆ ಅವರಿಗೆ ಎಷ್ಟು ಸುರಕ್ಷತೆ ನೀಡಬಹುದು..? ಹಳ್ಳಿಗಾಡಿನ ಮಕ್ಕಳ ಬಗ್ಗೆ ಯೋಚಿಸಿ... ಶಿಥಿಲಗೊಂಡಿರುವ ಶಾಲಾ ಕಾಲೇಜಿನ ಕಟ್ಟಡಗಳು, ತುಂಬಿ ಹರಿಯುವ ಕೆರೆ, ಹಳ್ಳ, ನದಿಗಳು,ಅಸಮರ್ಪಕ ಸಾರಿಗೆ ವ್ಯವಸ್ಥೆ, ತೀವ್ರ ಗಾಳಿ ಮಳೆಗೆ ಉರುಳುವ ಮರಗಳು, ಇದು ಒಂದು ದಿನದ ರಜೆಯಲ್ಲಿ ಪರಿಹಾರವಾಗುವ ಅಥವಾ ಸುರಕ್ಷತೆ ನೀಡುವ ವಿಷಯವೇ...? ಮಕ್ಕಳನ್ನು ಶಾಲೆಗೆ ಕಳಿಸುವಾಗಿನ ಹೆತ್ತವರ ಆತಂಕ ಮಳೆಗಾಲ ಮುಗಿಯುವವರೆಗೂ ಇರುವುದಿಲ್ಲವೇ...? ನಗರ ಭಾಗದಲ್ಲಿ ಮಳೆಯ ಕಾರಣಕ್ಕೆ ಆಗುವ ಅವಾಂತರ ಏನು ಕಮ್ಮಿಯೇ..?
ನಿರಂತರವಾಗಿ ನೀಡುವ ರಜೆಯಿಂದಾಗಿ ಮಕ್ಕಳಿಗೆ ಶೈಕ್ಷಣಿಕವಾಗಿ ಆಗುವ ತೊಂದರೆ ಹಾಗೂ ಶಿಕ್ಷಕರಿಗೆ ಆಗುವ ಮಾನಸಿಕ ಒತ್ತಡ ಯಾರಿಗೂ ಕಾಣದೇ ಇರುವಂತದ್ದೇ..? ಸರಕಾರದ ಗಮನಕ್ಕೆ ಮಕ್ಕಳ ಸುರಕ್ಷತೆಯೇ ಪ್ರಥಮ ಆದ್ಯತೆ ಎಂದಾದರೆ ಯಾಕೆ ಏಪ್ರಿಲ್, ಮೇ ತಿಂಗಳ ಬದಲು ಜೂನ್ ಮತ್ತು ಜುಲೈ ತಿಂಗಳಲ್ಲಿ ರಜೆ ನೀಡಬಾರದು.
ಮಕ್ಕಳು ಕ್ಷೇಮವಾಗಿ ಮನೆಯಲ್ಲಿದ್ದರೆ ಎಲ್ಲರ ಆತಂಕ ಕಮ್ಮಿ ಆಗಬಹುದು. ಈಗ ಬೇಸಿಗೆ ರಜೆಯಲ್ಲಿ ಮಕ್ಕಳು ಎಲ್ಲಿ ಮನೆಯಲ್ಲಿರುತ್ತಾರೆ ಆ ಕ್ಯಾಂಪ್ ಈ ಕ್ಯಾಂಪ್ ಅಂತ ವ್ಯಸ್ತವಾಗಿರುತ್ತಾರೆ. ಯಾವ ವಿಶ್ರಾಂತಿ ಕಾರಣಕ್ಕಾಗಿ ರಜೆ ನೀಡಲಾಗುವುದೋ ಆ ತಿಂಗಳುಗಳಲ್ಲಿ ಹೆಚ್ಚಾಗಿ ದೇಹವನ್ನು ಇಚ್ಛೆ ಇದ್ದೋ ಇಚ್ಛೆ ಇಲ್ಲದೆಯೋ ದಂಡಿಸಿಕೊಳ್ಳುತ್ತಾರೆ. ಅದರ ಬದಲು ವಿಪರೀತ ಮಳೆ ಸಮಯದಲ್ಲಿ ಮನೆಯಲ್ಲಿದ್ದರೆ ಹೊಟ್ಟೆ ತುಂಬ ತಿಂದುಂಡು ತಮ್ಮ ಪರಿವಾರದಿಂದ ಸ್ವಲ್ಪ ಸಂಸ್ಕಾರದ ಪಾಠವನ್ನಾದರೂ ಕಲಿಯಬಹುದೇನೋ...?
✍️ ಗೀತಾ ಲಕ್ಷ್ಮೀಶ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



