ಮಳೆ, ಬೆಳೆಗಾಗಿ ಕಿಗ್ಗ ಶ್ರೀ ಋಷ್ಯಶೃಂಗೇಶ್ವರನಿಗೆ ಪ್ರಾರ್ಥನೆ: ಪೌರಾಣಿಕ ಹಿನ್ನೆಲೆ

Upayuktha
0



ಶೃಂಗೇರಿ ಇತಿಹಾಸ ನೆನಪಿಸಿಕೊಳ್ಳುತ್ತ, ಮಳೆ, ಬೆಳೆ, ಸುಭಿಕ್ಷೆಗಾಗಿ ರಾಜ್ಯ ಸರಕಾರದ ಜೊತೆ ನಾವೂ ಕಿಗ್ಗ ಶ್ರೀ ಋಷ್ಯಶೃಂಗೇಶ್ವರನನ್ನು ಪ್ರಾರ್ಥಿಸೋಣ.

​ವಿಭಾಂಡಕ ಎನ್ನುವ ಮಹರ್ಷಿಗಳು ಕಾಡಿನಲ್ಲಿ ಕಠಿಣ ತಪಸ್ಸು ಮಾಡುತ್ತಿರುತ್ತಾರೆ. ವಿಭಾಂಡಕರು ಒಮ್ಮೆ ನದಿಯಲ್ಲಿ ಸ್ನಾನ ಮಾಡುವಾಗ, ಅಪರೂಪದ ಹೆಣ್ಣು ಜಿಂಕೆಯೊಂದನ್ನು ನೋಡಿ ಅವರ ಮನಸ್ಸು ಚಲಿಸುತ್ತದೆ. ಆ ಚಂಚಲ ಮನಸ್ಸಿನಿಂದ ಜಿಂಕೆಯನ್ನು ನೋಡಿದ ಪರಿಣಾಮದಿಂದ, ಆ ಜಿಂಕೆಯ ಗರ್ಭದಿಂದ ಸದ್ಯೋಗರ್ಭ ವಿಧಾನದಲ್ಲಿ ಒಂದು ಗಂಡು ಮಗು ಜನಿಸುತ್ತದೆ. 


(ದಿವ್ಯ ದೃಷ್ಟಿ, ಮನಸ್ಸಿನ ಸಂಕಲ್ಪ, ಮಂತ್ರಶಕ್ತಿ ಅಥವಾ ದೈವಿಕ ತೇಜಸ್ಸಿನ ಪ್ರಭಾವದಿಂದ ಸ್ತ್ರೀ ಅಥವಾ ಯಾವುದೇ ಜೀವಿಯು ತಕ್ಷಣವೇ ಗರ್ಭಧರಿಸುವುದನ್ನು 'ಸದ್ಯೋಗರ್ಭ' ಎನ್ನಲಾಗುತ್ತದೆ. ಸಾಮಾನ್ಯ ಪ್ರಕೃತಿ ನಿಯಮದಂತೆ ಒಂಬತ್ತು ತಿಂಗಳು ಗರ್ಭದಲ್ಲಿ ಬೆಳೆಯದೆ, ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಗರ್ಭಧರಿಸಿ ಮಗುವಿನ ಜನನವಾಗುತ್ತದೆ) 


ಜಿಂಕೆಗೆ ಮನುಷ್ಯ ಸ್ವರೂಪದಲ್ಲಿ ಜನಿಸಿದ ಆ ಮಗುವಿನ ತಲೆಯಲ್ಲಿ ಜಿಂಕೆಯ ತರಹ ಒಂದು ಸಣ್ಣ ಕೋಡು (ಶೃಂಗ) ಇರುತ್ತದೆ. ಆದ್ದರಿಂದ ಆ ಮಗುವಿಗೆ 'ಋಷ್ಯಶೃಂಗ' ಎಂದು ಹೆಸರಿಡಲಾಗುತ್ತದೆ. 


​ವಿಭಾಂಡಕರು ಲೋಕದ ಮೋಹ, ಮಾಯೆಗಳಿಂದ ಬೇಸತ್ತಿರುತ್ತಾರೆ. ಹಾಗಾಗಿ, ತನ್ನ ಮಗ ಋಷ್ಯಶೃಂಗ ಈ ಪ್ರಪಂಚದ ಆಕರ್ಷಣೆಗಳಿಗೆ ಬಲಿಯಾಗಬಾರದು ಎಂದು ನಿರ್ಧರಿಸುತ್ತಾರೆ. ಅವರು ಮಗನನ್ನು ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ದೂರವಿಟ್ಟು, ಕೇವಲ ಕಾಡಿನ ಆಶ್ರಮದಲ್ಲಿ ಬೆಳೆಸುತ್ತಾರೆ. ಋಷ್ಯಶೃಂಗನಿಗೆ ಹೆಣ್ಣು ಎಂದರೇನು ಎಂದೇ ತಿಳಿದಿರುವುದಿಲ್ಲ. ಆತ ಸಂಪೂರ್ಣ ಬ್ರಹ್ಮಚಾರಿ ಮತ್ತು ಮಹಾ ತಪಸ್ವಿಯಾಗಿ ಬೆಳೆಯುತ್ತಾನೆ. ಆತನ ತಪಸ್ಸಿನ ಶಕ್ತಿ ಎಷ್ಟಿತ್ತೆಂದರೆ, ಆತ ಎಲ್ಲಿದ್ದರೂ ಅಲ್ಲಿ ಪ್ರಕೃತಿ ಸಮೃದ್ಧವಾಗಿರುತ್ತದೆ.


ಇನ್ನೊಂದು ಕಡೆ ಭರತ ಭೂಮಿಯ ಉತ್ತರ ಭಾಗದ ಅಂಗ ದೇಶದಲ್ಲಿ (ಅಂಗ ದೇಶವು ಈಗಿನ ಭಾರತದ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ಭಾಗವಾಗಿದೆ) ಭೀಕರ ಬರಗಾಲ. ಅಲ್ಲಿಯ ರಾಜ ರೋಮಪಾದ.  ಅಂಗ ದೇಶದಲ್ಲಿ ಹನಿ ಮಳೆಯೂ ಇಲ್ಲದೆ, ಬೆಳೆಗಳೆಲ್ಲ ಒಣಗಿ, ಪ್ರಜೆಗಳು ಹಸಿವಿನಿಂದ ತತ್ತರಿಸುತ್ತಿರುತ್ತಾರೆ. (ಬಹುಶಃ ಈಗಿನ ಭಾರತದ ಪರಿಸ್ಥಿತಿಯಂತೆ!!?)


​ರಾಜ ರೋಮಪಾದನು ತನ್ನ ರಾಜ್ಯದ ಪಂಡಿತರನ್ನು ಕರೆಸಿ ಇದಕ್ಕೆ ಪರಿಹಾರ ಕೇಳುತ್ತಾನೆ. ಆಗ ಅವರು, "ಮಹಾರಾಜನೇ, ಮಹಾ ತಪಸ್ವಿಯಾದ ಋಷ್ಯಶೃಂಗನು ಅತ್ಯಂತ ಪವಿತ್ರಾತ್ಮ. ಆತನ ಪಾದಗಳು ಈ ರಾಜ್ಯದಲ್ಲಿ ಸ್ಪರ್ಶ ಮಾಡಿದರೆ, ತಕ್ಷಣವೇ ಮಳೆ ಬರುತ್ತದೆ. ಆದರೆ ಆತನನ್ನು ಆಶ್ರಮದಿಂದ ಕರೆತರುವುದು ಸುಲಭವಲ್ಲ, ಏಕೆಂದರೆ ಆತನ ತಂದೆ ವಿಭಾಂಡಕರು ಅತ್ಯಂತ ಕೋಪಿಷ್ಟರು ಮತ್ತು ಮಗನನ್ನು ಪ್ರಾಪಂಚಿಕ ಬದುಕಿನಿಂದ ದೂರವಿಟ್ಟು ಬೆಳಸಿದ್ದಾರೆ. ಋಷ್ಯಶೃಂಗನನ್ನು ಇಲ್ಲಿಗೆ ಕರೆತರುವುದು ಸುಲಭ ಸಾಧ್ಯವಲ್ಲ" ಎಂದು ಹೇಳುತ್ತಾರೆ.

ಪಂಡಿತರ ಮಾತುಗಳನ್ನು ಅಲ್ಲಿಯೇ ಇದ್ದ ರೋಮಪಾದನ ಮಗಳು ಶಾಂತೆ ಕೇಳಿಸಿಕೊಳ್ಳುತ್ತಾಳೆ. ದೇಶವನ್ನು ಬರಗಾಲದಿಂದ ಪಾರು ಮಾಡಲು "ಋಷ್ಯಶೃಂಗರನ್ನು ನಾನು ಕರೆತರುತ್ತೇನೆ" ಎಂದು ಹೇಳಿ, ತಂದೆಯನ್ನು ಒಪ್ಪಿಸಿ ಋಷ್ಯಶೃಂಗರಿದ್ದ ಆಶ್ರಮಕ್ಕೆ ಬರುತ್ತಾಳೆ. 


ಇಲ್ಲಿ ಇನ್ನೊಂದು ಕತೆ ಇದೆ.  


ಶಾಂತೆ ಮೂಲತಃ ಅಯೋಧ್ಯೆಯ ಮಹಾರಾಜ ದಶರಥ ಮತ್ತು ಆತನ ಮೊದಲ ಪತ್ನಿ ಕೌಸಲ್ಯಾದೇವಿಯ ಮಗಳು. ಅಂದರೆ ಆಕೆ ಶ್ರೀರಾಮನಿಗಿಂತ ಅನೇಕ ವರ್ಷಗಳ ಮುಂಚೆ ಜನಿಸಿದವಳು. ಹಾಗಾಗಿ ಆಕೆ ರಾಮನ ಸ್ವಂತ ಅಕ್ಕ. ಅಂಗದೇಶದ ರಾಜ ರೋಮಪಾದ ಮತ್ತು ಆತನ ಪತ್ನಿ ವರ್ಷಿಣಿ (ಈಕೆ ಕೌಸಲ್ಯೆಯ ತಂಗಿ ಎನ್ನಲಾಗುತ್ತದೆ) ದಂಪತಿಗಳಿಗೆ ಮಕ್ಕಳ ಇರುವುದಿಲ್ಲ. ಒಮ್ಮೆ ರೋಮಪಾದನು ಅಯೋಧ್ಯೆಗೆ ಬಂದಾಗ ತನಗೆ ಮಕ್ಕಳಿಲ್ಲದ ದುಃಖವನ್ನು ದಶರಥನ ಬಳಿ ತೋಡಿಕೊಳ್ಳುತ್ತಾನೆ. ದಶರಥನು ತನ್ನ ಆಪ್ತ ಸ್ನೇಹಿತ ರೋಮಪಾದನ ಮೇಲಿನ ಪ್ರೀತಿಯಿಂದ ತನ್ನ ಮಗಳಾದ ಶಾಂತೆಯನ್ನು ಅವರಿಗೆ ದತ್ತು (ಸ್ವೀಕಾರ) ನೀಡುತ್ತಾನೆ. 


ರೋಮಪಾದರ ದತ್ತು ಪುತ್ರಿಯಾದ ಶಾಂತೆಯು ಋಷ್ಯಶೃಂಗರಿದ್ದ ಆಶ್ರಮಕ್ಕೆ ಬರುತ್ತಾಳೆ. ಶಾಂತೆಯು ಋಷ್ಯಶೃಂಗರಿದ್ದ ಆಶ್ರಮಕ್ಕೆ ಬಂದಾಗ ವಿಭಾಂಡಕ ಮುನಿಗಳು ಆಶ್ರಮದಲ್ಲಿ ಇರಲಿಲ್ಲ. ಯಾವತ್ತೂ ಸ್ತ್ರೀಯರನ್ನು ನೋಡಿರದ ಋಷ್ಯಶೃಂಗರು ಶಾಂತೆಯನ್ನು ವಿಭಿನ್ನ ರೀತಿಯ "ತಪಸ್ವಿಗಳು" ಎಂದು ಭಾವಿಸುತ್ತಾರೆ. ಶಾಂತೆಯ ಒತ್ತಾಯಕ್ಕೆ ಒಪ್ಪಿ, ಶಾಂತೆಯ ಜೊತೆಯಲ್ಲಿ ಋಷ್ಯಶೃಂಗರು ಅಂಗ ದೇಶಕ್ಕೆ ಬರುತ್ತಾರೆ. ಅಂಗದೇಶದ ಗಡಿಯನ್ನು ದಾಟುತ್ತಿದ್ದಂತೆ, ಅಲ್ಲಿಯವರೆಗೆ ಒಣಗಿದ್ದ ಭೂಮಿಯ ಮೇಲೆ ಆಕಾಶದಿಂದ ಭಾರಿ ಮಳೆ ಸುರಿಯಲು ಪ್ರಾರಂಭವಾಗುತ್ತದೆ. ಇಡೀ ರಾಜ್ಯ ಸಸ್ಯಶ್ಯಾಮಲವಾಗುತ್ತದೆ. ರಾಜ ರೋಮಪಾದನು ಸಂತೋಷಗೊಂಡು, ತನ್ನ ದತ್ತಪುತ್ರಿ ಶಾಂತೆಯನ್ನು (ನಿಜವಾಗಿ ದಶರಥನ ಮಗಳು) ಋಷ್ಯಶೃಂಗನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ತದನಂತರ ವಿಷಯ ತಿಳಿದ ವಿಭಾಂಡಕ ಮುನಿಗಳೂ ಸಹ ಮಗನ ಮದುವೆಯನ್ನು ಒಪ್ಪಿ ಆಶೀರ್ವದಿಸುತ್ತಾರೆ.


​ಇತ್ತ ಅಯೋಧ್ಯೆಯ ರಾಜ ದಶರಥನಿಗೆ ಮೂವರು ರಾಣಿಯರಿದ್ದರೂ (ಕೌಸಲ್ಯೆ, ಕೈಕೇಯಿ, ಸುಮಿತ್ರೆ) ಗಂಡು ಸಂತಾನ ಭಾಗ್ಯ ಇರುವುದಿಲ್ಲ.  ಇದ್ದ ಒಬ್ಬ ಹೆಣ್ಣು ಮಗಳನ್ನೂ ದತ್ತು ಕೊಟ್ಟಿರುವ ದಶರಥ, ಕುಲಗುರುಗಳಾದ ವಸಿಷ್ಟ ಮಹರ್ಷಿಗಳ ಸೂಚನೆಯಂತೆ ಪುತ್ರಕಾಮೇಷ್ಟಿ ಯಾಗವನ್ನು ಮಾಡುತ್ತಾನೆ. 


ಆ ಭವ್ಯವಾದ ಪುತ್ರಕಾಮೇಷ್ಠಿ ಯಾಗ ಋಷ್ಯಶೃಂಗ ಮಹರ್ಷಿಗಳ ನೇತೃತ್ವದಲ್ಲಿ ಅಯೋಧ್ಯಯಲ್ಲಿ ನಡೆಯುತ್ತದೆ. ಯಾಗದ ಫಲವಾಗಿ ಕೌಸಲ್ಯೆಯ ಗರ್ಭದಿಂದ ಶ್ರೀರಾಮ, ಕೈಕೇಯಿಯ ಗರ್ಭದಿಂದ ಭರತ ಹಾಗೂ ಸುಮಿತ್ರೆಯ ಗರ್ಭದಿಂದ ಲಕ್ಷ್ಮಣ ಮತ್ತು ಶತ್ರುಘ್ನರು ಜನಿಸುತ್ತಾರೆ.  


****


ಇಂದು ಕಿಗ್ಗದಲ್ಲಿರುವ ಮುಖ್ಯ ದೇವರನ್ನು ಶ್ರೀ ಶಾಂತಾ ಋಷ್ಯಶೃಂಗೇಶ್ವರ ಎಂದು ಕರೆಯಲಾಗುತ್ತದೆ. ಇಲ್ಲಿನ ಶಿವಲಿಂಗದ ಮೇಲೆ ಕಣ್ಣಿಗೆ ಕಾಣುವಂತೆ ಜಿಂಕೆಯ ಕೋಡಿನ ಆಕೃತಿ ಇದೆ. ತಪೋ ನಿರತರಾಗಿದ್ದ ಋಷ್ಯಶೃಂಗರು ತಪಸ್ಸು ಮಾಡುತ್ತಲೇ ಲಿಂಗದಲ್ಲಿ ಐಕ್ಯರಾಗಿ ಋಷ್ಯಶೃಂಗೇಶ್ವರ ಆಗಿದ್ದಾರೆ ಎಂದು ನಂಬಲಾಗಿದೆ.


ಕಿಗ್ಗ ಮತ್ತು ಸುತ್ತಲಿನ ಪ್ರದೇಶಗಳು ಋಷ್ಯಶೃಂಗರು ವಾಸವಿದ್ದ ಬೆಟ್ಟ, ಯಜ್ಞ ಯಾಗಾದಿಗಳ ಹಾಗು ತಪೋ ಭೂಮಿಯಾಗಿದ್ದರಿಂದ ಇದಕ್ಕೆ ಮೊದಲು 'ಋಷ್ಯಶೃಂಗಗಿರಿ' ಅಥವಾ 'ಶೃಂಗಗಿರಿ' ಎಂಬ ಹೆಸರಿತ್ತು. ಇದೇ ಕಾಲಕ್ರಮೇಣ ಬದಲಾಗಿ ಇಂದು 'ಶೃಂಗೇರಿ' ಆಗಿದೆ.  ಇದು ತ್ರೇತಾಯುಗದ ಕತೆ.


ಕಿಗ್ಗದಲ್ಲಿ ನೆಲಸಿರುವ ಶ್ರೀಮಲ್ಲಿಕಾರ್ಜುನ ದೇವರೇ ಶ್ರೀಶಂಕರಾಚಾರ್ಯರಾಗಿ ಜನಿಸಿ, ಇದೇ ಪವಿತ್ರ ಭೂಮಿಯಾದ ಶೃಂಗೇರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದ್ದು ಈ ಕಲಿಯುಗದ ಇತಿಹಾಸದ ಕತೆ.

ಮಲೆನಾಡಿನಲ್ಲಿ ಇಂದಿಗೂ ಮಳೆ ಬರದೇ ಇದ್ದಾಗ, ಕಿಗ್ಗದ ಋಷ್ಯಶೃಂಗ ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕಗಳನ್ನು ಮಾಡಿಸಿದರೆ ತಕ್ಷಣವೇ ಮಳೆ ಬರುತ್ತದೆ ಎಂಬ ಬಲವಾದ ನಂಬಿಕೆ ಇದೆ. ಮತ್ತದು ಸತ್ಯವೂ ಆಗಿದೆ. ಋಷ್ಯಶೃಂಗ ದೇವರು ಮಳೆ ದೇವರು ಎಂದೇ ಎಲ್ಲಡೆ ಪ್ರಸಿದ್ಧಿ.


****


ಸನಾತನ ಧರ್ಮದ ಮೇರು ಪುರುಷೋತ್ತಮನಾದ ಶ್ರೀರಾಮ ಜನಿಸುವುದಕ್ಕೆ ಋಷ್ಯಶೃಂಗ ಮಹರ್ಷಿಗಳ ನೇತೃತ್ವದಲ್ಲಿ ನೆಡೆದ ಪುತ್ರಕಾಮೇಷ್ಠಿ ಯಾಗವೇ ಕಾರಣವಾಗಿರುವುದು, ಮತ್ತು ಋಷ್ಯಶೃಂಗರ ತಪೋ ಭೂಮಿ ಈಗಿನ ನಮ್ಮ ಕಿಗ್ಗ ಎನ್ನುವುದು, ಋಷ್ಯಶೃಂಗರಿಂದ ಶೃಂಗೇರಿ ಆಗಿರುವುದು, ಕಿಗ್ಗ-ಶೃಂಗೇರಿ ತ್ರೇತಾಯುಗದ ಅಯೋಧ್ಯೆಯ ಶ್ರೀ ರಾಮನಿಗೂ ಕೊಂಡಿ ಬೆಸೆದಿರುವುದು, ಪರಮೇಶ್ವರನೇ ಶಂಕರಾಚಾರ್ಯರಾಗಿ ಜನಿಸಿ ಶಾರದಾ ಪೀಠವನ್ನು ಸ್ಥಾಪನೆ ಮಾಡಿರುವುದು... ಎಲ್ಲವೂ ಶೃಂಗೇರಿಯ ನಮ್ಮೆಲ್ಲರಿಗೂ ಹೆಮ್ಮೆಯೇ ವಿಷಯವೇ ಸರಿ. 


ಮಗಳನ್ನು ದತ್ತು ಕೊಟ್ಟಿದ್ದರೂ ದಶರಥನಿಗೆ ಶಾಂತಾ ಮಗಳೆ. ಶಾಂತಾ-ಶೃಂಗೇಶ್ವರರ ಮದುವೆಯ ನಂತರ ದಶರಥ ಕೌಸಲ್ಯೆಯರು ಮಗಳು ಅಳಿಯರನ್ನು ನೋಡುವುದಕ್ಕೆ ಖಂಡಿತವಾಗಿಯೂ ಶೃಂಗೇರಿ-ಕಿಗ್ಗಗಳಿಗೆ ಬಂದಿರುತ್ತಾರೆ. ಶ್ರೀರಾಮ ತನ್ನ ಸ್ವಂತ ಅಕ್ಕ ಭಾವರನ್ನು ನೋಡುವುದಕ್ಕೆ ಶೃಂಗೇರಿಗೆ ಬಂದಿರದೇ ಇರ್ತಾರಾ? ಕೊನೇ ಪಕ್ಷ ಹಬ್ಬದ ಬಿದಿಗೆಗಾದರೂ ಶ್ರೀರಾಮ ಶೃಂಗೇರಿ ಭಾವನ ಮನೆಗೆ ಬಂದಿರಲಿಕ್ಕಿಲ್ಲವೆ? ಸಾಧ್ಯತೆಯ ಊಹೆ ಮತ್ತು ಭಾವನಾತ್ಮಕವಾಗಿಯೂ ನಮ್ಮ ಶೃಂಗೇರಿ 'ರಾಮನಡಿ ಇಟ್ಟ ನೆಲ'. ಅನೇಕ ವಿಚಾರಗಳಿಂದ, ನಮ್ಮ ಶೃಂಗೇರಿಗೂ ನಮ್ಮ ರಾಮನ ಅಯೋಧ್ಯೆಗೂ ನೇರ ಸಂಪರ್ಕ ಇದೆ.


****


ಈ ಹಿಂದೆ ಅಡಿಕೆ ಎಲೆ ಚುಕ್ಕಿ ರೋಗ ಬಾಧೆಯ ನಿವಾರಣೆಗಾಗಿ ಸಂಕಷ್ಟದಲ್ಲಿದ್ದ ರೈತರೆಲ್ಲ ಸೇರಿ, ಶೃಂಗೇರಿ ಜಗದ್ಗುರುಗಳವರಲ್ಲಿ ನಾವು ಅಡಿಕೆ ಬೆಳೆಗಾರರೆಲ್ಲ ಸೇರಿ ನಮ್ಮ ಅಳಲನ್ನು ನಿವೇದಿಸಿಕೊಂಡಿದ್ದೆವು. ಅದಕ್ಕೆ ಪರಿಹಾರೋಪಾಯವಾಗಿ ಮಹಾ ಸನ್ನಿಧಾನಂಗಳ ಸೂಚನೆಯ ಮೇರೆಗೆ ಸನ್ನಿಧಾನಂಗಳವರು ಜಗನ್ಮಾತೆಗೆ ಕೋಟಿ ಕುಂಕುಮಾರ್ಚನೆಯನ್ನು, ಮತ್ತು ಲಲಿತಾ ಹೋಮವನ್ನು ಕೈಗೊಳ್ಳುವಂತೆ ಭಕ್ತಾದಿಗಳಿಗೆ ತಿಳಿಸಿದ್ದರು. ಅದರಂತೆ ಶೃಂಗೇರಿ ಶ್ರೀ ಮಠದಲ್ಲಿಯೇ ಕೋಟಿ ಕುಂಕುಮಾರ್ಚನೆ ಹಾಗೂ ಲಲಿತಾ ಹೋಮಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಶಾಸ್ತ್ರೋಕ್ತವಾಗಿ ನಡೆದಿದ್ದು, ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು, ಪ್ರಸಾದ ಸ್ವೀಕರಿಸಿದ ಅನೇಕ ಭಕ್ತ ರೈತರ ತೋಟಗಳಲ್ಲಿ ಅಡಿಕೆ ಎಲೆ ಚುಕ್ಕಿ ರೋಗದ ಬಾಧೆಯ ತೀವ್ರತೆ ಕ್ಷೀಣಿಸಿದ್ದನ್ನು ಸಾಂದರ್ಭಿಕವಾಗಿ ಇಲ್ಲಿ ನೆನಪಿಸಿಕೊಳ್ಳಬಹುದು.


*****


ರಾಜ್ಯದ ಮುಖ್ಯಮಂತ್ರಿಗಳ ಆದೇಶದ ಮೇರೆಗೆ, ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್‌ರವರ ಸಲಹೆ ಮೇರೆಗೆ, ಕ್ಷೇತ್ರದ ಶಾಸಕರಾದ ರಾಜೇಗೌಡರ ನೇತ್ರತ್ವದಲ್ಲಿ, ರಾಜ್ಯದೆಲ್ಲಡೆ ಮಳೆ, ಬೆಳೆ, ಸುಭಿಕ್ಷೆಗಾಗಿ ಪ್ರಾರ್ಥಿಸಿ, ಜುಲೈ 3 ರಂದು ಕಿಗ್ಗದಲ್ಲಿ ವಿಶೇಷ ಪೂಜೆ ಆಯೋಜನೆಯಾಗಿದೆ.


ಎಲ್‌ನಿನೋ ಸಮಸ್ಯೆ, ಎಲ್ಲಡೆ ಭೀಕರ ಬರದ ಸೂಚನೆ, ಪ್ರಾಕೃತಿಕ ವಿಕೋಪ ದುರಂತಗಳಂತಹ ಆತಂಕದ ಸುದ್ಧಿಗಳು ಹೆಚ್ಚುತ್ತಿರುವ ಕಾಲದಲ್ಲಿ, ಸರಕಾರವೇ ಆಯೋಜಿಸಿದ ಶೃಂಗೇರಿಯ ಕಿಗ್ಗದಲ್ಲಿನ ವಿಶೇಷ ಪೂಜಾ ಕಾರ್ಯಕ್ರಮ ಯಶಸ್ವಿಯಾಗಲಿ, ರಾಜ್ಯ, ದೇಶ, ವಿಶ್ವದೆಲ್ಲೆಡೆ ಮಳೆ, ಬೆಳೆ, ಸುಭೀಕ್ಷೆ ಉಂಟಾಗಲಿ. ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿ ಎಂದು ನಾವೂ ಪ್ರಾರ್ಥಿಸೋಣ.


ಪ್ರಾರ್ಥನೆ ಫಲಿಸುತ್ತದೆ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top