ಎಸ್.ಡಿ.ಎಂ ಕಾಲೇಜು ಉಜಿರೆಯಲ್ಲಿ ಕಾವ್ಯ ರಚನಾ ಕಮ್ಮಟ- ಸಿನಿ ಖ್ಯಾತಿಯ ಪೂರ್ಣಿಮಾ ಸುರೇಶ್ ರವರಿಂದ ಕಾರ್ಯಗಾರ

Upayuktha
0



ಉಜಿರೆ: ಕಾವ್ಯ ಎಂಬುದು ಮಾನವೀಯ ನೆಲೆಯಲ್ಲಿ ಮನಸ್ಸಿನ ಆಳದಿಂದ ಮೂಡುವ ಸಂವೇದನಾ ಪ್ರತಿಭೆ. ಕಾವ್ಯ ಕವನಗಳು ಸಂತೋಷ, ದುಃಖ, ಪ್ರೀತಿ, ಪ್ರಕೃತಿ, ಸಮಾಜ ಮತ್ತು ಬದುಕಿನ ನಾನಾ ಮುಖಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸುತ್ತದೆ. ಅಕ್ಷರಗಳ ಮೋಹ ಹಾಗು ಸಾಹಿತ್ಯ ಒಲವನ್ನು ಬೆಳೆಸಿಕೊಂಡಾಗ ರಸಭರಿತವಾದ ಜೀವನ ನಮ್ಮದಾಗುತ್ತದೆ. ಪರರ ನೋವು ಮತ್ತು ನಲಿವಿನೊಂದಿಗೆ ಬೆರೆತು ಸಮನ್ವಯದಿಂದ ಬದುಕುವ ಸಮಾಜ ರೂಪುಗೊಳ್ಳುತ್ತದೆ ಎಂದು ಸು ಫ್ರಮ್ ಸೋ ಸಿನೆಮಾ ಖ್ಯಾತಿಯ ಕವಯಿತ್ರಿ ಪೂರ್ಣಿಮಾ ಸುರೇಶ್ ಅಭಿಪ್ರಾಯ ಪಟ್ಟರು. 


ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ಒಂದು ದಿನದ ಕಾವ್ಯ ಕಟ್ಟುವ ಬಗೆ ಕಾವ್ಯ ರಚನಾ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. 


ಆಧುನಿಕ ಒತ್ತಡದ ಬದುಕಿನಲ್ಲಿ ಮನುಷ್ಯ ಸಂವೇದನಾ ರಹಿತನಾಗುತ್ತಿದ್ದಾನೆ. ಸಂವೇದನೆ ಇದ್ದಾಗ ಮಾತ್ರ ಮತ್ತೊಬ್ಬರ ನೋವನ್ನು ಅರಿತುಕೊಂಡು ಸ್ಪಂದಿಸಲು ಸಾಧ್ಯ. ಬದುಕಿನ ಪ್ರತಿಯೊಂದು ಮಜುಲುಗಳನ್ನು ಸವಿಯಬೇಕು ಹೊಸತನದಿಂದ ಅನುಭವಿಸಬೇಕು. ಸಾಹಿತ್ಯ ಸದಾ ಬದುಕಿಗೆ ಮುದ ನೀಡುವ ಜೊತೆಗೆ ಹೊಸ ಹೊಳವು ಮತ್ತು ಹೊಸ ದೃಷ್ಟಿಕೋನವನ್ನು ಬೆಳೆಸುತ್ತದೆ. ಪ್ರತಿಯೊಬ್ಬನೊಳಗೂ ಕತೆ, ಕವನ, ಕವಿತೆಯನ್ನು ಹೇಳಬಲ್ಲ ಕವಿ ಇರುತ್ತಾನೆ. ಅದನ್ನು ಮನಗಾಣುವ ಪ್ರಯತ್ನ ನಮ್ಮಿಂದಾಗಬೇಕು. ಈ ನಾಡಿನ ಮಹಾನ್ ಕವಿಗಳ ಬದುಕು ಮತ್ತು ಸಾಹಿತ್ಯ ಹೊಸ ತಲೆಮಾರಿನ ಕವಿಗಳಿಗೆ ಪ್ರೇರಣೆಯಾಗುವುದರ ಜೊತೆಗೆ ಹೊಸ ಸಾಹಿತ್ಯಗಳ ಹುಟ್ಟು ನಮ್ಮಿಂದ ಸಾಧ್ಯವಾಗಬೇಕು ಎಂದರು.


ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ. ಉದ್ಘಾಟಿಸಿ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಪಠ್ಯದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಾನಾ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತದೆ. ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಲು ನಾಡಿನ ಜ್ಞಾನ ಪೀಠ ಪ್ರಶಸ್ತಿ ವಿಜೇತರಂತಹ ಧೀಮಂತ ಸಾಹಿತಿಗಳನ್ನು ಈ ಕಾಲೇಜಿಗೆ ಆಮಂತ್ರಿಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಲಾಗಿದೆ. ಇದರ ಭಾಗವಾಗಿ ಇಂದು ಒಂದು ದಿನದ ಕಾವ್ಯ ರಚನಾ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರೇಮ ಮತ್ತು ಹೊಸ ಸಾಹಿತ್ಯವನ್ನು ಸೃಷ್ಟಿಸಲು ಅಡಿಪಾಯವಾಗಿದೆ. ವಿರಚಿತ ಕಾವ್ಯಗಳು ಮನಸುಗಳನ್ನು ಬೆಸೆಯುವಂತಾಗಲಿ ಎಂದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್ ಮಾತನಾಡಿ, ಕನ್ನಡ ಕಾವ್ಯವು ಕಾಲಕ್ಕೆ ತಕ್ಕಂತೆ ಹೊಸ ರೂಪಗಳನ್ನು ಮತ್ತು ಹೊಸ ವಿಚಾರಗಳನ್ನು ಅಳವಡಿಸಿಕೊಂಡಿದೆ. ಈ ಸಮೃದ್ಧ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆ ಇಂದಿನ ಯುವಜನತೆಯ ಮೇಲಿದೆ. ಇಂದಿನ ವಿದ್ಯಾರ್ಥಿಗಳು ಸಾಹಿತ್ಯವನ್ನು ಕೇವಲ ಪರೀಕ್ಷೆಯ ವಿಷಯವಾಗಿ ಮಾತ್ರವಲ್ಲ, ಜೀವನವನ್ನು ಅರ್ಥಮಾಡಿಕೊಳ್ಳುವ ಸಾಧನವಾಗಿಯೂ ನೋಡಬೇಕಾಗಿದೆ. ಉತ್ತಮ ಕಾವ್ಯ ರಚನೆಗೆ ಭಾಷೆಯ ಮೇಲೆ ಪ್ರಭುತ್ವವಿರುವುದಷ್ಟೇ ಸಾಕಾಗುವುದಿಲ್ಲ; ವಿಶಾಲವಾದ ಓದು. ಸೂಕ್ಷ್ಮವಾದ ಅವಲೋಕನ, ಸಮಾಜದ ಬಗೆಗಿನ ಕಾಳಜಿ ಮತ್ತು ನಿರಂತರವಾದ ಅಭ್ಯಾಸವೂ ಅಗತ್ಯವಾಗಿರುತ್ತದೆ. ನಾವು ಹೆಚ್ಚು ಓದಿದಷ್ಟೂ ಹೆಚ್ಚು ಚಿಂತಿಸಿದಷ್ಟೂ ಮತ್ತು ಹೆಚ್ಚು ಅನುಭವಿಸಿದಷ್ಟೂ ನಮ್ಮ ಬರವಣಿಗೆ ಸಮೃದ್ಧವಾಗುತ್ತದೆ ಎಂದರು. 


ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಕಾವ್ಯ ಕಟ್ಟುವ ಬಗೆ ಕಾವ್ಯ ರಚನಾ ಕಮ್ಮಟ ನಡೆಯಿತು.‌


ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ಸೇರಿದಂತೆ ವಿವಿಧ ಉಪನ್ಯಾಸಕ ಡಾ. ದಿವಾಕರ ಕೊಕ್ಕಡ, ಡಾ. ನಾಗಣ್ಣ, ಡಾ. ರವಿಶಂಕರ್ ಹಾಗೂ ಇತರೆ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರ. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕವನಾ ಚಾರ್ಮಾಡಿ ನಿರೂಪಿಸಿ, ವಂದಿಸಿದರು. ಸಹಪ್ರಾಧ್ಯಾಪಕ ಹಾಗೂ ಹಿರಿಯ ಕಥೆಗಾರ ಡಾ. ಹಳೆಮನೆ ರಾಜಶೇಖರ್ ಕಾರ್ಯಕ್ರಮವನ್ನು ಸಂಯೋಜಿಸಿದರು.


-ಕೋಟ್-


ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ. ಆದರೆ ಸೃಜನಶೀಲತೆಯ ಜೊತೆಗೆ ಭಾಷೆಯ ಸೌಂದರ್ಯ, ಸಾಹಿತ್ಯದ ಮೌಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ಕಾವ್ಯವು ವ್ಯಕ್ತಿಯೊಳಗಿನ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯನ್ನು ಹೊಂದಿದೆ. ಅದು ಕೇವಲ ಮನರಂಜನೆಯ ಸಾಧನವಲ್ಲ ಸಮಾಜವನ್ನು ಪರಿವರ್ತಿಸುವ ಸಾಮರ್ಥ್ಯವನ್ನೂ ಹೊಂದಿದೆ


ಈ ನಿಟ್ಟಿನಲ್ಲಿ ಕಾವ್ಯ ರಚನಾ ಕಮ್ಮಟದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಲು, ಅವರ ಸೃಜನಶೀಲ ಸಾಮರ್ಥ್ಯವನ್ನು ಹೊರತರಲು ಮತ್ತು ಕಾವ್ಯದ ಸೂಕ್ಷ್ಮತೆಯನ್ನು ಅರಿಯಲು ಉತ್ತಮ ವೇದಿಕೆಯನ್ನು ಒದಗಿಸುತ್ತವೆ. ಕಾವ್ಯ ಹೇಗೆ ಹುಟ್ಟುತ್ತದೆ, ಅದರ ರಚನಾ ತಂತ್ರಗಳು ಯಾವುವು ಭಾಷೆಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಲು ಇಂತಹ ಕಮ್ಮಟಗಳು ಸಹಕಾರಿಯಾಗುತ್ತವೆ. 


- ಡಾ. ಬೋಜಮ್ಮ ಕೆ.ಎನ್ 

 ಮುಖ್ಯಸ್ಥರು, ಕನ್ನಡ ವಿಭಾಗ ಎಸ್.ಡಿ.ಎಂ ಸ್ವಾಯತ್ತ ಕಾಲೇಜು ಉಜಿರೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top