ಪಿಲಿಕುಳ: ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ

Upayuktha
0



ಮಂಗಳೂರು: ಚಂದ್ರಯಾನದಲ್ಲಿ ಭಾರತವು, ಪ್ರಪಂಚದ ಯಾವುದೇ ದೇಶಗಳು ಮಾಡದಿರುವ ವಿಶಿಷ್ಟ  ಮೈಲಿಗಲ್ಲನ್ನು ಸಾಧಿಸಿದೆ. ಇದು ದೇಶದ ವೈಜ್ಞಾನಿಕ ಪ್ರಗತಿಯ ಸಂಕೇತವಾಗಿದ್ದು, ಮಕ್ಕಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಆಸಕ್ತಿ ಹಾಗೂ ಸ್ಫೂರ್ತಿಯನ್ನು ಹೆಚ್ಚಿಸಿದೆ ಎಂದು ಇಸ್ರೋ ಮಾಜಿ ವಿಜ್ಞಾನಿ ಡಾ. ಪಿ. ಜಿ. ದಿವಾಕರ್ ಹೇಳಿದರು.
    
ಅವರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    
ಯುವ ವಿಜ್ಞಾನಿಗಳಾದ ನೀವೆಲ್ಲರೂ ಸ್ಪಷ್ಟವಾದ ಗುರಿ, ವೈಜ್ಞಾನಿಕ ಮನೋಭಾವ ಮತ್ತು ದೃಢ ಸಂಕಲ್ಪದೊಂದಿಗೆ ಮುನ್ನಡೆಯಬೇಕು. ಜ್ಞಾನ, ಪರಿಶ್ರಮ ಮತ್ತು ಹೊಸತನದ ಚಿಂತನೆಯೇ ಭಾರತದ ಮುಂದಿನ ಬಾಹ್ಯಾಕಾಶ ಸಾಧನೆಗಳಿಗೆ ಭದ್ರ ಅಡಿಪಾಯವಾಗಲಿದೆ ಎಂದು ಹೇಳಿದರು.

ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಈಶ್ವರ್ ಮಾತನಾಡಿ,  ವಿದ್ಯಾರ್ಥಿ ಜೀವನದಲ್ಲಿ ಸಮಯವನ್ನು ವ್ಯರ್ಥ ಮಾಡದೆ ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಮಾತ್ರ ಭವಿಷ್ಯದಲ್ಲಿ ದೊಡ್ಡ ಸಾಧನೆಗಳನ್ನು ಮಾಡಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರಿ, ಪರಿಶ್ರಮ ಮತ್ತು ಶಿಸ್ತಿನೊಂದಿಗೆ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
    
ಎನ್‍ಐಟಿಕೆಯ ನಿವೃತ್ತ ಡೀನ್ ಹಾಗೂ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಉಪಸಮಿತಿ ಅಧ್ಯಕ್ಷ ಡಾ.ಶ್ರೀನಿಕೇತನ್ ಚಂದ್ರಯಾನದ ಯಶಸ್ಸಿನಂತೆ ಯುವ ವಿಜ್ಞಾನಿಗಳ ಆಲೋಚನೆಗಳು ಕಕ್ಷೆಯಲ್ಲಿ ಸಾಗಲಿ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕೇಂದ್ರದ ನಿರ್ದೇಶಕ ಡಾ. ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಡಿಜಿಟಲ್ ಪ್ರಸ್ತುತ ಎಐ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ನಾವು ಇಡುವ ಪ್ರತಿಯೊಂದು ಪ್ರೇರಣಾದಾಯಕ ಹೆಜ್ಜೆಯೂ ಅಭಿವೃದ್ಧಿಯತ್ತ ಕೊಂಡೊಯ್ಯುವಂತಿರಬೇಕು. ವಿಜ್ಞಾನ, ತಂತ್ರಜ್ಞಾನ ಮತ್ತು ನವೋದ್ಯಮವನ್ನು ಅಳವಡಿಸಿಕೊಂಡು ಪ್ರಗತಿಯ ಪಥದಲ್ಲಿ ಸಾಗಿದಾಗ ಮಾತ್ರ ಭವ್ಯ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು.
     
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಬೆಳವಣಿಗೆ, ಚಂದ್ರನ ಕುರಿತಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವದ ಸಂಶೋಧನೆಗಳು ಹಾಗೂ ಚಂದ್ರಯಾನ ಯೋಜನೆಗಳ ಕುರಿತ ವಿಶೇಷ ಉಪನ್ಯಾಸದ ನಂತರ, ವಂದನ ವಿದ್ಯಾರ್ಥಿಗಳಿಗೆ “ಚಂದ್ರ ಮತ್ತು ಬಾಹ್ಯಾಕಾಶ”ದ ಬಗ್ಗೆ ರಸಪ್ರಸ್ನೆ ಕಾರ್ಯಕ್ರಮವನ್ನು ನಡೆಸಿದರು.
     
ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಇನ್ನೋವೇಶನ್ ಹಬ್‍ನಲ್ಲಿ ವಿವಿಧ ವೈಜ್ಞಾನಿಕ ಮಾದರಿಗಳ ವೀಕ್ಷಣೆ, ಪ್ರಾತ್ಯಕ್ಷಿಕೆಗಳನ್ನು ಹಾಗೂ ತಾರಾಲಯದಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಯಿತು. ಜಿಲ್ಲೆಯ ಆಯ್ದ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ ಸುಮಾರು 200 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ಕೇಂದ್ರದ ಕ್ಯುರೇಟರ್ ಜಗನ್ನಾಥ್ ಸ್ವಾಗತಿಸಿದರು.  ವಿಘ್ನೇಶ್ ಭಟ್ ವಂದಿಸಿ, ಚಂಚಲಾಕ್ಷಿ ನಿರೂಪಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top