ಹಾಸನ: ಒಳಿತನ್ನು ನಾವು ಎಲ್ಲಾ ಕಡೆಗಳಿಂದಲೂ ಸ್ವೀಕರಿಸಬೇಕು. ಮನೆಗೊಂದು ಗ್ರಂಥಾಲಯ ಅನುಷ್ಠಾನವು ಬಹು ಆಯಾಮದ ಕಾರ್ಯಕ್ರಮವಾಗಿದೆ. ಪುಸ್ತಕ ಪ್ರಾಧಿಕಾರದ ಕಟ್ಟಡದ ಹೊರಗೆ ರಾಜ್ಯದ ವಿವಿಧ ಭಾಗಗಳಲ್ಲಿ ಗ್ರಂಥಾಲಯದ ಮೂಲಕ ಜ್ಞಾನದ ಹಣತೆಯನ್ನು ಹಚ್ಚಲು ಹೊರಟಿದ್ದೇವೆ ಎಂದು ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಹೇಳಿದರು.
ನಗರದ ಉದಯಗಿರಿಯ ಕೆಂಪೇಗೌಡ ರಸ್ತೆಯಲ್ಲಿರುವ ನಿವೃತ್ತ ಪ್ರಾಂಶುಪಾಲ ಎ.ಹೆಚ್. ಗಣೇಶ್ ಅಂಕಪುರ ನಿವಾಸದಲ್ಲಿ ಗ್ರಂಥಾಲಯವನ್ನು ಉದ್ಘಾಟಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ಆಹ್ವಾನಿತರನ್ನು ಉದ್ದೇಶಿಸಿ ಮಾತನಾಡಿದ ಅವರು ಹಾಸನ ಜಿಲ್ಲೆಯಲ್ಲಿ ಇದೇ ಮೊದಲ ಕಾರ್ಯಕ್ರಮವಾಗಿದ್ದು ಬಹಳ ಶಿಸ್ತುಬದ್ಧವಾಗಿ ಮತ್ತು ಅಚ್ಚುಕಟ್ಟಾಗಿ ಏರ್ಪಾಟಾಗಿರವುದು ಕಾರ್ಯಕ್ರಮ ಅನುಷ್ಠಾನಕ್ಕೆ ಸಿಕ್ಕ ಮೊದಲ ಯಶಸ್ಸು ಎಂದರು.
ನಾವು ಮನೆಕಟ್ಟುವಾಗ, ವಾಸಿಸುವಾಗ ಅಲ್ಲೊಂದು ಪೂಜಾ ಮನೆಯಿರಬೇಕು, ಮಲಗುವ, ಕೂರುವ, ನಿಲ್ಲುವ ಜಾಗಗಳಿರಬೇಕು. ಅವುಗಳ ತುಂಬಾ ವಿವಿಧ ಪೀಠೋಪಕರಣಗಳಿರಬೇಕು. ಅದಕ್ಕೆ ಭೂಷಣವಾಗಿ ಲಕ್ಷಾಂತರ ರೂಗಳ ಟಿ.ವಿ., ಹೋಂಥಿಯೇಟರ್ ಮತ್ತಿತರ ಐಷಾರಮಿ ಅಲಂಕಾರಿಕ ವಸ್ತುಗಳಿರಬೇಕು. ಅದರಿಂದ ನಮ್ಮ ಮನೆಯ ಪ್ರತಿಷ್ಠೆ ಹೆಚ್ಚಾಗುತ್ತದೆ ಎಂದು ಹಂಬಲಿಸುತ್ತೇವೆ. ನಿಜ, ಅದು ತಪ್ಪಲ್ಲ. ಆದರೆ ಅದಷ್ಟೇ ನಮ್ಮ ಸಂಸ್ಕೃತಿಯಲ್ಲ. ಅದರಿಂದ ನಮಗೆ ನೆಮ್ಮದಿ ಸಿಗುವುದಿಲ್ಲ. ಅದೆಲ್ಲಾ ಸಿಗಬೇಕೆಂದರೆ ಅಲ್ಲೊಂದು ಪುಟ್ಟ ಗ್ರಂಥಾಲಯವಿರಬೇಕು. ಗ್ರಂಥಾಲಯವೆಂದರೆ ಅದೊಂದು ಕೇವಲ ಪುಸ್ತಕಗಳ ಸರಕಲ್ಲ. ನಮ್ಮ ದೇಹದೊಳಗಣ ಆತ್ಮದಂತೆ ನಮ್ಮ ಮನೆಯೆಂಬ ದೇವಾಲಯದ ಜ್ಞಾನ ಸಂಸ್ಕೃತಿಯ ಕಳಶ ಎಂದರು. ಉತ್ತಮ ಓದುಗರನ್ನು ಗುರ್ತಿಸಿ, ವರ್ಷದಲ್ಲಿ ನಾಲ್ಕು ರೀತಿಯ ಪ್ರಶಸ್ತಿಗಳನ್ನು ಪ್ರಾಧಿಕಾರದ ವತಿಯಿಂದ ನೀಡುವ ಮೂಲಕ ಓದುಗರನ್ನು ಪ್ರೋತ್ಸಾಹಿಸಲಾಗುತ್ತದೆ ಎಂದರು.
ಶಿಕ್ಷಕರು ಮತ್ತು ಸಾಹಿತಿಗಳಾದ ಕೆ.ಎನ್. ಚಿದಾನಂದರವರು "ನಾ ಮೆಚ್ಚಿದ ಪುಸ್ತಕ " ಮತ್ತು "ನಾ ಓದಿನ ಪುಸ್ತಕ " ಎಂಬ ಪರಿಕಲ್ಪನೆಯಲ್ಲಿ ಎಸ್. ಲಲಿತ ರವರ "ಮನದ ಕಣಿವೆಯಿಂದ " ಪುಸ್ತಕವನ್ನು ಪರಿಚಯಿಸಿದರು.
ಕಾರ್ಯಕ್ರಮದ ಅತಿಥೇಯರಾದ ಎ.ಹೆಚ್. ಗಣೇಶ್ ದಂಪತಿಗಳನ್ನು ಪ್ರಾಧಿಕಾರವು ಸನ್ಮಾನಸಿ ಗೌರವಿಸಿತು. ನಂತರ ಮಾತನಾಡಿದ ಎ ಹೆಚ್ ಗಣೇಶ್ ರವರು ಜ್ಞಾನದ ಸಂಕೇತವೆನಿಸಿದ ಮನೆಗೊಂದು ಗ್ರಂಥಾಲಯದ ಅನುಷ್ಠಾನವು ತಮ್ಮ ಮನೆಯಿಂದ ಪ್ರಾರಂಭವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲೂ ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರಲಿ ಎಂದು ಶುಭ ಹಾರೈಸಿ ಪ್ರಾಧಿಕಾರಕ್ಕೆ ವಂದಿಸಿದರು.
ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕರಾದ ಗೊರೂರು ಅನಂತರಾಜುರವರು ಸರ್ವರನ್ನು ಪರಿಚಯಿಸುತ್ತ ಪುಸ್ತಕಗಳು ಜ್ಞಾನವಾಹಿನಿಯಾಗಿ ಕಾರ್ಯ ನಿರ್ವಹಿಸುತ್ತವೆ. ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗುವಂತೆ ಮಾಡುವುದೇ ನಮ್ಮ ಜಾಗೃತ ಸಮಿತಿಯ ಉದ್ದೇಶವಾಗಿದೆ ಎಂದರು.
ಡಾ. ಕುಶಾಲ್ ಬರಗೂರು, ಸತ್ಯವತಿ ಅಧ್ಯಕ್ಷರು ಮಾನವ ಹಕ್ಕುಗಳ ಒಕ್ಕೂಟ ಹಾಸನ ಜಿಲ್ಲೆ, ಶಿಕ್ಷಕ ಸಾಹಿತಿ ಕೆ.ಎನ್. ಚಿದಾನಂದ, ಯದುರಾಜ್, ರಾಜ್ ಕುಮಾರ್ ಅಂಕಪುರ, ಡಾ. ಸೀಮಾ ಮುರಳೀಧರ, ಶೋಭಾಗಣೇಶ್, ವಿಶ್ವಾಸ್ ಡಿ ಗೌಡ ಮುಂತಾದವರು ಉಪಸ್ಥಿತರಿದ್ದರು.
ಶ್ರೀಕಂಠುರವರು ಪ್ರಾರ್ಥಿಸಿದರೆ, ಶಶಿಕಲಾ ಜಗದೀಶ್ ರವರು ನಿರೂಪಿಸಿದರು. ಸೀಮಾ ಮುರಳೀಧರ್ ಸ್ವಾಗತಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


