ಒಪ್ಪಿತ ನಾಡಗೀತೆಗೆ 'ಮತ್ತೆ ತಿದ್ದುಪಡಿ' ಸಂಪ್ರದಾಯ ಜಾರಿಗೆ ಬರದಿರಲಿ

Upayuktha
0

 


ಪ್ಪಿತ ನಾಡ ಗೀತೆಯನ್ನು ಮತ್ತೆ ತಿದ್ದುಪಡಿಗೆ ಒಳಪಡಿಸುವ ಪ್ರಯತ್ನ ನಡೆಯುತ್ತಿದೆ!! ಒಂದು ಗೀತೆಯನ್ನು ಹೀಗೆ ಪದೇ ಪದೇ ಬದಲಿಸುತ್ತಾ, ಕಳೆಯುತ್ತಾ, ಸೇರಿಸುತ್ತಾ ತಿದ್ದುಪಡಿ ಮಾಡುತ್ತಾ ಹೋದರೆ, ಕವಿಯ ಮೂಲ ರಚನೆಯ ಭವ್ಯತೆಯೇ ಒಂದು ಕಾಲಕ್ಕೆ ಕಳೆದು ಹೋಗಬಹುದಾ?


ಇವತ್ತು ರಾಜಕೀಯ ಲಾಭಕ್ಕಾಗಿ ಒಂದು ಧರ್ಮದ ಹೆಸರನ್ನು ಸೇರಿಸಿದಂತೆ, ನಾಳೆ ಈಗಾಗಲೆ ಗೀತೆಯಲ್ಲಿ ಇರುವ ಇನ್ನೊಂದು ಧರ್ಮದ ಹೆಸರನ್ನು ಕೈ ಬಿಡುವ ಸಂದರ್ಭವೂ ಬರಬಹುದಾ?


ಇವತ್ತು ರಾಜಕೀಯ ಲಾಭಕ್ಕಾಗಿ ಒಂದು ಧರ್ಮದ ಹೆಸರನ್ನು ಸೇರಿಸಲು, ತಮಗೆ ಬೇಕಾದ ಸದಸ್ಯರನ್ನು ಸೇರಿಸಿ, ಸಮಿತಿ ಮಾಡಿದಂತೆ, ನಾಳೆ ಅದೇ ರೀತಿಯ ರಾಜಕೀಯ ಲಾಭಕ್ಕಾಗಿ ಇನ್ನೊಂದು ಧರ್ಮದ ಹೆಸರನ್ನು ಗೀತೆಯಿಂದ ಕೈ ಬಿಡಲು ಅವತ್ತಿನ ಸರಕಾರ ಅವರಿಗೆ ಬೇಕಾದ ಜನರನ್ನು ಸದಸ್ಯರನ್ನಾಗಿಸಿ ಸಮಿತಿ ಮಾಡಿ, ವರದಿ ಆಧರಿಸಿ, ಗೀತೆಯ ಶಬ್ದಗಳನ್ನು ಕೈ ಬಿಡುವ ಸಾಧ್ಯತೆಗೂ ದಾರಿ ಮಾಡಿ ಕೊಟ್ಟಂತಾಗುತ್ತದೆ ಅಲ್ವಾ?


ಕುವೆಂಪು ಕವಿ ಮಾತ್ರ ಅಲ್ಲ, ದಾರ್ಶನಿಕ ಕವಿ. ರಾಷ್ಟ್ರಕವಿ.  


ಕುವೆಂಪುರವರು ನಮ್ಮ ಜೊತೆಗಿದ್ದಾಗಲೇ, ಅವರ ಗೀತೆಯನ್ನು ನಾಡಗೀತೆಯಾಗಿಸುವ ಸಂದರ್ಭ ಸೃಷ್ಟಿ ಮಾಡಿ, ಗೀತೆಯಲ್ಲಿನ ಬದಲಾವಣೆಗಳಿಗೆ ಅವರು ಒಪ್ಪಿಗೆ ಕೊಟ್ಟಿದ್ದರೆ ಆ ಮಾತು ಬೇರೆ. ಈಗ ಅವರು ನಮ್ಮೊಂದಿಗೆ ಇಲ್ಲದಿರುವಾಗ, ಅವರು ರಚಿಸಿದ ಗೀತೆಯ ಮೇಲೆ ಮತ್ತೆ ಮತ್ತೆ ಬದಲಾವಣೆ, ತಿದ್ದುಪಡಿ, ಪದಗಳನ್ನು ಸೇರ್ಪಡೆ, ಪದಗಳನ್ನು ತೆಗೆದು ಹಾಕುವುದು ಮಾಡಿದರೆ, ಅದು ರಾಷ್ಟ್ರಕವಿಗೆ ಗೌರವ ಕಡಿಮೆ ಮಾಡಿದಂತೆ ಆಗಬಹುದಲ್ವಾ?  


ಸರಳವಾಗಿ ಹೇಳುವುದಾದರೆ "ನಿಮಗೆ ಸರಿಯಾಗಿ ಬರೆಯುವುದಕ್ಕೆ ಬರುತ್ತಿರಲಿಲ್ಲ, ನಿಮ್ಮ ನಂತರ ನಾವದನ್ನು ಬದಲಾವಣೆ, ತಿದ್ದುಪಡಿ, ಪದಗಳ ಸೇರ್ಪಡೆ, ಪದಗಳನ್ನು ತೆಗೆದು ಹಾಕುವ ಮೂಲಕ ಸರಿ ಮಾಡಿದ್ದೇವೆ" ಎಂಬಂತೆ ಆಗುವುದಿಲ್ಲವೆ?


ಕುವೆಂಪುರವರಿಗಿಂತ ದೊಡ್ಡ ಕವಿಗಳು ಯಾರಾದರು ಇದ್ದರೆ ಆ ರೀತಿ ಮಾಡುವುದು ಸರಿಯಾದೀತೇನೋ.  


ಆದರೆ, ಕುವೆಂಪುರವರ ಗೀತೆಯನ್ನು ತಿದ್ದುಪಡಿ ಮಾಡುವುದಕ್ಕೆ ಒಬ್ಬ ದಾರ್ಶನಿಕ ಕವಿಯನ್ನು/ಸಾಹಿತಿಯನ್ನು ನಿಯುಕ್ತಿಗೊಳಿಸಿದರೆ, ಅದೂ ಕುವೆಂಪುರವರನ್ನು ಸಣ್ಣದು ಮಾಡಿದಂತೆ ಆಗುವುದಿಲ್ಲವೆ? ಹನ್ನೆರಡು ಜನ ಶ್ರೇಷ್ಠ ಕವಿ/ಸಾಹಿತಿಗಳನ್ನು ಸೇರಿಸಿದರೂ, ಇಡೀ ಸಮಿತಿಯನ್ನು ಕುವೆಂಪುರವರಿಗಿಂತ ದೊಡ್ಡವರು ಅಂತ ತೀರ್ಮಾನಿಸಲು ಸಾಧ್ಯವೆ?  


ಈ ಹಿನ್ನೆಲೆಯಲ್ಲಿ ನಿಯೋಜಿತ ಸಮಿತಿ ಈಗಾಗಲೆ ಒಪ್ಪಿರುವ ನಾಡ ಗೀತೆಯ ಸಾಲುಗಳನ್ನು ಬದಲಿಸುವ ಸಾಧ್ಯತೆ ಕಡಿಮೆ.  


ಒಂದು ವೇಳೆ ಗೀತೆಯನ್ನು ಮತ್ತೆ  ಬದಲಿಸುವ ಪ್ರಯತ್ನ ಮಾಡಿದರೆ, ಕುವೆಂಪುರವರ ಅಗಾಧವಾದ ದಾರ್ಶನಿಕತ್ವವನ್ನು ಒಪ್ಪಿಕೊಂಡು ಪ್ರೀತಿಸುವ, ಗೌರವಿಸುವ, ಅಭಿಮಾನಿಸುವ ಅನೇಕರಿಗೆ, ಗೀತೆ ಬದಲಿಸಲು ಹೊರಟ ಸಮಿತಿಯ ಸದಸ್ಯರನ್ನು "ನೀವು ಕುವೆಂಪುರವರಿಗಿಂತ ದೊಡ್ಡವರಾ?" ಅಂತ ಕೇಳುವ ಪರಿಸ್ಥಿತಿ ಒದಗಿದರೆ, "ಹೌದು" ಅಂತ ಉತ್ತರಿಸುವ ಸ್ಥಾನದಲ್ಲಿ ಸಮಿತಿಯವರು ಇರುವ ಸಾಧ್ಯತೆ ಇದೆಯಾ?


ಇನ್ನೊಂದು ಮುಖದಿಂದ ನೋಡಿದರೆ, ಒಂದು ವೇಳೆ ಸಮಿತಿ ಸದಸ್ಯರು, ಯಾರೂ ಕುವೆಂಪುರವರಿಗಿಂತ ದೊಡ್ಡವರಲ್ಲ, ಗೀತೆಯನ್ನು ಮತ್ತೆ ಮತ್ತೆ ತಿದ್ದುಪಡಿ ಮಾಡುವುದು ಸರಿಯಲ್ಲ, ಗೀತೆಯನ್ನು ಮತ್ತೆ ಮತ್ತೆ ಬದಲಿಸುತ್ತಾ ಮೂಲ ಕವಿಯ ಆಶಯಕ್ಕೆ ಧಕ್ಕೆ ತರುವುದು ಸಮಂಜಸ ಅಲ್ಲ ಎಂದು ತಿದ್ದುಪಡಿಯನ್ನು ಕೈ ಬಿಟ್ಟರೆ, ಸರಕಾರ "ನಾವು ಸಮಿತಿ ಮಾಡಿದ್ವಿ, ಅದರ ವರದಿ ಆಧರಿಸಿ ಮತ್ತೆ ತಿದ್ದುಪಡಿ ಮಾಡುವುದನ್ನು ಕೈ ಬಿಟ್ಟಿದ್ದೇವೆ" ಎಂದು ಹೇಳಿ, ಒಂದು ನಿರ್ಧಿಷ್ಟ ಸಮುದಾಯದ ಜನರನ್ನು ಸಮಾಧಾನ ಮಾಡಿ ಕೈ ತೊಳೆದುಕೊಳ್ಳಲು ಈ ಸಮಿತಿ ರಚನೆಯ ಹೆಜ್ಜೆ ಇಟ್ಟಿದೆಯಾ?  ಸಮಿತಿ ರಚನೆಯನ್ನೇ ರಕ್ಷಣಾ ಕವಚವನ್ನಾಗಿಸಿಕೊಳ್ಳುವ ಯತ್ನವೆ? 


ಅದೇ ಹೌದಾಗಿದ್ದರೆ, ಕುವೆಂಪುರಂತಹ ಮೇರು ಕವಿಯ ಗೀತೆಯನ್ನು ಮುಂದಿಟ್ಟುಕೊಂಡು ವಿವಾದ ಮಾಡುವುದು ಒಳ್ಳೆಯ ನಡೆಯಲ್ಲ.


ಗೀತೆಯ ರಚನೆಕಾರ ಕವಿಯಲ್ಲದೆ ಬೇರೆಯವರು ಮತ್ತೆ ಮತ್ತೆ ಒಂದು ಗೀತೆಯನ್ನು ತಿದ್ದುಪಡಿ, ಸೇರ್ಪಡೆ, ಬದಲಾವಣೆ ಅಂತ ಮಾಡುತ್ತಾ ಹೋಗುವುದು ಕವಿಯ ಸೃಜನಶೀಲ ಸಾಹಿತ್ಯ ಶಕ್ತಿಯನ್ನು ಪ್ರಶ್ನಿಸಿದಂತೆ.


ಗೀತೆಯನ್ನು ಮತ್ತೆ ಮತ್ತೆ ಮತ್ತೆ ತಿದ್ದುಪಡಿ, ಸೇರ್ಪಡೆ, ಬದಲಾವಣೆ ಮಾಡುತ್ತಾ ಕವಿಯ ಸೃಜನಶೀಲ ಸಾಹಿತ್ಯ ಶಕ್ತಿಯನ್ನು ಪ್ರಶ್ನಿಸುವ ಈ ನೋವು ಕೊಡುವ ಸಂಪ್ರದಾಯ ಜಾರಿಗೆ ಬರದಿರಲಿ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top