ಮಾಜಿ ಸಚಿವ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ನ ಮುಖ್ಯ ಆಯುಕ್ತ ಡಾ. ಪಿ.ಜಿ.ಆರ್ ಸಿಂಧ್ಯ ಜತೆ ಸಂವಾದ
ನೀರ್ಚಾಲು: ಕಾಸರಗೋಡು ಪ್ರದೇಶವು ಕನ್ನಡ ಭಾಷೆ ಸಂಸ್ಕೃತಿಯ ಚಿನ್ನದ ಗಣಿ. ಅಗೆದಷ್ಟು ಕನ್ನಡದ ಸತ್ವವನ್ನು ಈ ಮಣ್ಣಿನಿಂದ ತೆಗೆಯಲು ಸಾಧ್ಯ. ಸಾಂಸ್ಕೃತಿಕವಾಗಿ ಸಂಪನ್ನವಾಗಿರುವ ಈ ಭೂಮಿಯು ಕರ್ನಾಟಕದಿಂದ ಬೇರ್ಪಡಬಾರದಿತ್ತು ಎಂದು ಕರ್ನಾಟಕ ರಾಜ್ಯದ ಮಾಜಿ ಸಚಿವ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ನ ಮುಖ್ಯ ಆಯುಕ್ತ ಡಾ. ಪಿ.ಜಿ.ಆರ್ ಸಿಂಧ್ಯ ಅವರು ಅಭಿಪ್ರಾಯಪಟ್ಟರು.
ಇವರು ಡಾ. ರತ್ನಾಕರ ಮಲ್ಲಮೂಲೆಯವರ ನೀರ್ಚಾಲು ಸಮೀಪದ ಬನವಾಸಿ ಪ್ರಕೃತಿಧಾಮದಲ್ಲಿ ಇತ್ತೀಚೆಗೆ ನಡೆದ ಆತ್ಮೀಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾಸರಗೋಡು ಎಂದಾಗ ಕಯ್ಯಾರ ಕಿಂಞ್ಞಣ್ಣ ರೈಯವರ ಭೇಟಿಯ ನೆನಪು ಮರುಕಳಿಸುತ್ತದೆ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಅವರ ಆಸೆ ಕೈಗೂಡದೆ ಹೋದರೂ ಈ ಮಣ್ಣಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಶಾಶ್ವತವಾಗಿಡುವಲ್ಲಿ ಗೋವಿಂದ ಪೈ, ಕಯ್ಯಾರ ಹಾಗೂ ಇವರಂತಹ ಅನೇಕ ಧುರೀಣರ ಶ್ರಮ ಇಂದಿಗೂ ಫಲಕಾಣುತ್ತಿದೆ. ವ್ಯಕ್ತಿತ್ವ ರೂಪು ಮತ್ತು ಸಾಮುದಾಯಿಕ ಚಿಂತನೆಗಳ ಪೂರಕ ಬೆಳವಣಿಗೆಗೆ ಸ್ಕೌಂಟಿಂಗ್ ಅತ್ಯಂತ ಪರಿಣಾಮಕಾರಿ ಎಂದರು.
ಬನವಾಸಿ ಮನೆ, ಪರಿಸರ ಮತ್ತು ಮಲ್ಲಮೂಲೆ ಕುಟುಂಬದ ಆದರ ಮತ್ತು ಆತಿಥ್ಯವು ಬಾಲ್ಯಕಾಲದಲ್ಲಿದ್ದ ಸಾಮಾಜಿಕ ಮೌಲ್ಯಗಳನ್ನು ಮತ್ತೊಮ್ಮೆ ನೆನೆಪಿಸಿತು. ಜೀವನದ ಮೌಲ್ಯಗಳನ್ನು ಹಾಗೂ ಪಕೃತಿಯ ಗುಣಪಾಠಗಳನ್ನು ಬೋದಿಸುವುದು ಸುಲಭ. ಆದರೆ ಬದುಕಿನಲ್ಲಿ ಅವೆಲ್ಲವನ್ನೂ ಅಳವಡಿಸಿಕೊಂಡು ಸಾಗುವುದು ಸುಲಭವಲ್ಲ. ಆದರೆ ಬನವಾಸಿಯ ಮನೆ, ಮನಸ್ಸು ಮತ್ತು ಪರಿಸರದಲ್ಲಿ ಎಲ್ಲ ಮೌಲ್ಯಗಳು ಸಾಕಾರಗೊಂಡಿವೆ ಎಂದು ನುಡಿದರು.
ಕಠಿಣ ಪರಿಶ್ರಮದಿಂದ ಬಂಜರುನೆಲವನ್ನು ಹಸನುಗೊಳಿಸಿ ಬನವಾಸಿಯನ್ನಾಗಿಸಿದ ಮಲ್ಲಮೂಲೆಯವರ ಪರಿಶ್ರಮವನ್ನು ತಿಳಿದ ಸಿಂಧ್ಯ ಅವರು ಈ ಪ್ರದೇಶವನ್ನು ಖುದ್ದಾಗಿ ನೋಡಲು ಬನವಾಸಿಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಆತ್ಮೀಯ ಸಂವಾದವನ್ನು ಏರ್ಪಡಿಸಲಾಗಿತ್ತು. ಸಂವಾದ ಕಾರ್ಯಕ್ರಮದಲ್ಲಿ ಸುಮಾರು ಎಪ್ಪತ್ತು ಮಂದಿ ಭಾಗವಹಿಸಿದರು.
ಕಾಸರಗೋಡಿನ ಕನ್ನಡ ಸಮಸ್ಯೆ, ಕನ್ನಡ ಮಾಧ್ಯಮ ಶಾಲೆಗಳು ಎದುರಿಸುತ್ತಿರುವಂತಹ ಸವಾಲುಗಳು, ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಉದ್ಯೋಗಿಗಳ ಸಮಸ್ಯೆ, ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯಗಳ ಪರಿಣಾಮ, ಸ್ಕೌಟ್ಸ್ ಮತ್ತು ಗೈಡ್ಸ್ ನ ಅನುಭವ ಮತ್ತು ದೂರದೃಷ್ಟಿತ್ವ, ಯಕ್ಷಗಾನ ಕಲಾವಿದರ ಬಗೆಗಿನ ವಿಚಾರಗಳು ಸಂವಾದದಲ್ಲಿ ಚರ್ಚಿತವಾದುವು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ತೊಟ್ಟೆತ್ತೋಡಿ, ಯಕ್ಷಗಾನ ಹಿರಿಯ ಕಲಾವಿದ ದಿವಾಣ ಶಿವಶಂಕರ ಭಟ್, ಕೃಷಿಕ ನಾರಾಯಣ ಮಲ್ಲಮೂಲೆ, ರಮೇಶ್ ಶೆಟ್ಟಿ, ಪತ್ರಕರ್ತರಾದ ವಿ.ಜಿ ಕಾಸರಗೋಡು, ಪುರುಷೋತ್ತಮ ಭಟ್, ಪುರುಷೋತ್ತಮ ಪೆರ್ಲ, ಗಂಗಾಧರ ತೆಕ್ಕೆಮೂಲೆ, ನಿವೃತ್ತ ಅಧ್ಯಾಪಿಕೆ ವಾಣಿ ಪಿ.ಎಸ್, ನಿವೃತ್ತ ಪ್ರಾಧ್ಯಾಪಕ ಡಾ. ಕಮಲಾಕ್ಷ ಕೆ, ಪ್ರೊ. ಎ. ಶ್ರೀನಾಥ್, ಪ್ರೊ. ಪದ್ಮನಾಭ ಪೂಜಾರಿ, ನೀರ್ಚಾಲು ಶಾಲೆಯ ವ್ಯವಸ್ಥಪಕ ಜಯದೇವ ಖಂಡಿಗೆ, ಸಾಹಿತಿ ಸುಂದರ ಬಾರಡ್ಕ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿನಿ ಸರಿತ ಡಿಸೋಜ, ನಿವೃತ್ತ ಅಧ್ಯಾಪಕ ಎಂ.ಜಿ ಕಜೆ, ಸಾರಿಗೆ ಇಲಾಖೆಯ ನಿವೃತ್ತ ಉದ್ಯೋಗಿ ಹರಿಶ್ಚಂದ್ರ ಪುತ್ತೂರು, ಮಹಮ್ಮದ್ ಹುಸೈನ್ ಈ ಮುಂತಾದವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬನವಾಸಿ ಮನೆ ಮತ್ತು ಮಲ್ಲಮೂಲೆ ಕುಟುಂಬದ ಪರವಾಗಿ ಹಾಗೂ ಕಸಾಪ ಕೇರಳ ಗಡಿನಾಡ ಘಟಕದ ವತಿಯಿಂದ ಅವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು. ಸಿಂಧ್ಯ ಭೇಟಿಯ ನೆನಪಿಗಾಗಿ ಗಿಡವೊಂದನ್ನು ನೆಡಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯ ಸಹಾಯಕ ಸಂಘಟನ ಆಯುಕ್ತ ಭರತರಾಜ ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಕೃಷ್ಣ ಮಣಿಯಾಣಿ ಮಲ್ಲಮೂಲೆ ವಂದಿಸಿದರು. ಕೃತಿ ಮಲ್ಲಮೂಲೆ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ಸಂಶೋಧನ ವಿದ್ಯಾರ್ಥಿಗಳು, ವಿಶ್ರಾಂತ ಅಧ್ಯಾಪಕರು, ಪ್ರಾಧ್ಯಾಪಕರು, ಶಾಲಾ ವ್ಯವಸ್ಥಪಕರು, ಕೃಷಿಕರು, ಗೃಹಿಣಿಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಾಧ್ಯಮದವರು, ಸಾರಿಗೆ ಇಲಾಖೆಯ ನಿವೃತ್ತ ಉದ್ಯೋಗಿಗಳು ಭಾಗವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


