ಮಂಗಳೂರು ವಿವಿಯಲ್ಲಿ ಭಾರತೀಯ ಭಾಷೆಗಳ ಸ್ನಾತಕೋತ್ತರ ವಿಭಾಗಗಳ ಮುಚ್ಚುವಿಕೆ ಖಂಡನೀಯ

Upayuktha
0

ತಕ್ಷಣ ಕ್ರಮಕ್ಕೆ ಅ.ಭಾ.ಸಾ.ಪ. ಆಗ್ರಹ 




ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಭಾಷೆಗಳು ದಿನದಿಂದ ದಿನಕ್ಕೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಳವಳ ವ್ಯಕ್ತಪಡಿಸಿದೆ.


ಕರಾವಳಿ ಹಾಗೂ ಮಲೆನಾಡು ಭಾಗದ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿರುವ ಮಂಗಳೂರು ವಿಶ್ವವಿದ್ಯಾನಿಲಯವು ಶಿಕ್ಷಣ, ಸಂಶೋಧನೆ ಮತ್ತು ಭಾಷಾ–ಸಂಸ್ಕೃತಿಯ ಸಂರಕ್ಷಣೆ ಹಾಗೂ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಆದರೆ ಇತ್ತೀಚಿನ ಆಡಳಿತಾತ್ಮಕ ನಿರ್ಧಾರಗಳಿಂದ ವಿಶ್ವವಿದ್ಯಾನಿಲಯದ ಶೈಕ್ಷಣಿಕ ವಾತಾವರಣ ಕುಸಿಯುತ್ತಿದ್ದು, ಭಾರತೀಯ ಭಾಷೆಗಳ ಉನ್ನತ ಶಿಕ್ಷಣಕ್ಕೆ ಗಂಭೀರ ಹಿನ್ನಡೆಯಾಗುತ್ತಿದೆ.


ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತುಳು, ಕೊಂಕಣಿ ಹಾಗೂ ಹಿಂದಿ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿ ಪ್ರವೇಶ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿರುವುದು, ಶುಲ್ಕವನ್ನು ಹೆಚ್ಚಿಸಿರುವುದು ಹಾಗೂ ನಂತರ ವಿದ್ಯಾರ್ಥಿಗಳ ಕೊರತೆಯನ್ನು ನೆಪವನ್ನಾಗಿ ಮಾಡಿಕೊಂಡು ವಿಭಾಗಗಳನ್ನು ಮುಚ್ಚಿರುವುದು ಖಂಡನೀಯ. ಅಲ್ಲದೆ, ನಗರ ಮಧ್ಯಭಾಗದಲ್ಲಿದ್ದ ಈ ವಿಭಾಗಗಳನ್ನು ಸುಮಾರು 15–20 ಕಿಲೋಮೀಟರ್ ದೂರದಲ್ಲಿರುವ ವಿಶ್ವವಿದ್ಯಾನಿಲಯ ಆವರಣಕ್ಕೆ ಸ್ಥಳಾಂತರಿಸಿರುವುದು ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲವನ್ನು ಉಂಟುಮಾಡಿದೆ.


ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಒಡಿಯೂರು‌ ಶ್ರೀಗುರುದೇವ ದತ್ತ ಸಂಸ್ಥಾನದಿಂದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಲಕ್ಷಾಂತರ ರುಪಾಯಿ ಖರ್ಚುಮಾಡಿ ತುಳು ಅಧ್ಯಯನ ಕೇಂದ್ರವನ್ನೇ ತೆರೆದರು ಅದನ್ನು ಕೂಡಾ ಮುಚ್ಚಿ ಅವರಿಗೂ ಅವರ ತುಳು ಸೇವೆಗೂ ಅವಮಾನ ಮಾಡಿದ್ದಾರೆ.


ಹಿಂದಿ ವಿಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ ಹಲವರು ಪಿಎಚ್.ಡಿ. ಪದವಿಯನ್ನು ಪಡೆದಿದ್ದು, ಅವರಲ್ಲಿ ಬಹುತೇಕರು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಯಶಸ್ವಿ ವಿಭಾಗವನ್ನು ಸಹ ಮುಚ್ಚಿರುವುದು ಭಾರತೀಯ ಭಾಷೆಗಳ ಅಭಿವೃದ್ಧಿಗೆ ದೊಡ್ಡ ಹೊಡೆತವಾಗಿದೆ.


ಮಂಗಳೂರು‌ ವಿಶ್ವವಿದ್ಯಾನಿಲಯದಲ್ಲೇ ತುಳು ಭಾಷೆ ಕಲಿಯುವ ಅವಕಾಶ ಇಲ್ಲ ಎಂದಾದ ಮೇಲೆ ಬೇರೆಲ್ಲಿ ದೊರಕಲು ಸಾಧ್ಯ. ತುಳು, ಕನ್ನಡ, ಕೊಂಕಣಿ ಸೇರಿದಂತೆ ವಿವಿಧ ಭಾಷೆಗಳ ಅಧ್ಯಯನ, ಸಂಶೋಧನೆ ಮತ್ತು ಅಭಿವೃದ್ಧಿಗೆ ಮಂಗಳೂರು ವಿಶ್ವವಿದ್ಯಾನಿಲಯವು ವಿಶೇಷ ಉತ್ತೇಜನ ನೀಡಬೇಕಾದ ಹೊಣೆಗಾರಿಕೆಯನ್ನು ಹೊಂದಿದೆ.


ಆದ್ದರಿಂದ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿನ ಶೈಕ್ಷಣಿಕ ಅವ್ಯವಸ್ಥೆಯನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ, ಮುಚ್ಚಲ್ಪಟ್ಟಿರುವ ಭಾರತೀಯ ಭಾಷೆಗಳ ಸ್ನಾತಕೋತ್ತರ ವಿಭಾಗಗಳನ್ನು ತಕ್ಷಣ ಪುನರಾರಂಭಿಸಬೇಕು. ವಿದ್ಯಾರ್ಥಿ ಸ್ನೇಹಿ ನೀತಿಗಳನ್ನು ಜಾರಿಗೆ ತಂದು, ಭಾರತೀಯ ಭಾಷೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಂಡು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಘನತೆಯನ್ನು ಪುನಃಸ್ಥಾಪಿಸಬೇಕೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಗ್ರಹಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top