ಸುಳ್ಳಿನ ಸ್ವರದಲ್ಲಿ ಚಿಗುರಿದ ಪ್ರೀತಿ( ಭಾಗ 3)

Upayuktha
0

ಕಾರ್ಯಕ್ರಮ ಮುಗಿದ ನಂತರ ಮನೆಗೆ ಹಿಂದಿರುಗಿದ ಹೃದಯ್ ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳು. ಹಿಮಾಳ ಮೇಲಿನ ಭಾವನೆ, ಮೈತ್ರಿಯ ಮೇಲಿನ ಗೌರವ, ತನ್ನ ಆರ್ಥಿಕ ಪರಿಸ್ಥಿತಿ, ತನ್ನ ಕನಸುಗಳು—ಎಲ್ಲವೂ ಒಂದೇ ಸಮಯದಲ್ಲಿ ಮನಸ್ಸಿನಲ್ಲಿ ಓಡಾಡುತ್ತಿದ್ದವು. ಆದರೆ ಆ ರಾತ್ರಿ ಅವನು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ.


ಮರುದಿನ ಬೆಳಗ್ಗೆ ಕನ್ನಡಿಯ ಮುಂದೆ ನಿಂತು ತನ್ನನ್ನೇ ನೋಡಿಕೊಂಡು ಸಣ್ಣದಾಗಿ ನಕ್ಕ."ಇಲ್ಲಿಯವರೆಗೂ ನಾನು ಎಲ್ಲರನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ನನ್ನನ್ನೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲೇ ಇಲ್ಲ."ಆ ಒಂದು ವಾಕ್ಯ ಅವನ ಜೀವನದ ದಿಕ್ಕನ್ನೇ ಬದಲಿಸಿತು.

ಕೆಲ ದಿನಗಳ ನಂತರ ಹೃದಯ್ ಹಿಮಾಳನ್ನು ಭೇಟಿಯಾದ. ಇಬ್ಬರೂ ಮೊದಲಿನಂತೆ ಅಲ್ಲದಿದ್ದರೂ ಗೌರವದಿಂದ ಮಾತನಾಡಿದರು. ಹೃದಯ್ ಮನಸ್ಸಿನಲ್ಲಿ ಇದ್ದ ಎಲ್ಲ ಪ್ರಶ್ನೆಗಳನ್ನು ಶಾಂತವಾಗಿ ಕೇಳಿದ.ಹಿಮಾ ಒಂದು ಕ್ಷಣ ಮೌನವಾಗಿದ್ದಳು."ಆ ಹಾಡಿನ ವಿಷಯದಲ್ಲಿ ನಾನು ಸುಳ್ಳು ಹೇಳಿದ್ದು ನಿಜ. ನಿನಗೆ ಇಷ್ಟವಾಗಲಿ ಎಂಬ ಕಾರಣಕ್ಕೆ ಹಾಗೆ ಮಾಡಿದೆ. ನಂತರ ಸತ್ಯ ಹೇಳಲು ಧೈರ್ಯವಾಗಲಿಲ್ಲ. ಕ್ಷಮಿಸು..." ಎಂದು ಹೇಳಿದಳು.ಆ ಮಾತು ಕೇಳಿದ ಹೃದಯ್ ಕೋಪಗೊಳ್ಳಲಿಲ್ಲ."ಕೆಲವೊಮ್ಮೆ ಸುಳ್ಳಿಗಿಂತ ಅದನ್ನು ಮುಚ್ಚಿಡುವ ಭಯವೇ ದೊಡ್ಡದು. ನಿನ್ನನ್ನು ಕ್ಷಮಿಸಿದ್ದೇನೆ. ಆದರೆ ಒಂದು ಸಂಬಂಧದಲ್ಲಿ ನಂಬಿಕೆ ಒಮ್ಮೆ ಒಡೆದರೆ, ಅದನ್ನು ಮೊದಲಿನಂತೆ ಕಟ್ಟುವುದು ಕಷ್ಟ."ಇಬ್ಬರೂ ಒಬ್ಬರಿಗೊಬ್ಬರು ಶುಭ ಹಾರೈಸಿ ತಮ್ಮ ತಮ್ಮ ದಾರಿಯಲ್ಲಿ ನಡೆದರು.

ಕೆಲ ದಿನಗಳ ನಂತರ ಹೃದಯ್ ಮೈತ್ರಿಯನ್ನು ಭೇಟಿಯಾದ. "ನೀನು ಹೇಳಿದ ಒಂದು ಮಾತು ನನಗೆ ಇನ್ನೂ ನೆನಪಿದೆ," ಎಂದ ಹೃದಯ್. "ಯಾವ ಮಾತು? ಗುರಿಗಿಂತ ದೊಡ್ಡ ಪ್ರೀತಿ ಯಾವುದೂ ಇಲ್ಲ" ಮೈತ್ರಿ ನಕ್ಕಳು. "ನಾನು ಇಂದಿಗೂ ಅದನ್ನೇ ನಂಬುತ್ತೇನೆ.ನಾನೂ ಈಗ ಅದನ್ನೇ ನಂಬುತ್ತಿದ್ದೇನೆ." ಇಬ್ಬರೂ ನಕ್ಕರು. ಅವರ ನಡುವೆ ಪ್ರೀತಿ ಇರಲಿಲ್ಲ. ಆದರೆ ಜೀವಮಾನವಿಡೀ ಉಳಿಯುವ ಸ್ನೇಹ ಮತ್ತು ಪರಸ್ಪರ ಗೌರವ ಇತ್ತು.

ತಿಂಗಳುಗಳು ಕಳೆದವು.ಹಿಮಾ ತನ್ನ ಕನಸಿನ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದಳು.ಮೈತ್ರಿ ತನ್ನ ಗುರಿಯ ಕಡೆ ಸಂಪೂರ್ಣ ಗಮನ ಹರಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿದಳು.ಹೃದಯ್ ತನ್ನ ಹಳೆಯ ಹವ್ಯಾಸಗಳತ್ತ ಮರಳಿದ. ಮತ್ತೆ ಕಥೆಗಳನ್ನು ಬರೆಯಲು ಆರಂಭಿಸಿದ. ಹಾಡುಗಳನ್ನು ಬರೆಯುತ್ತಿದ್ದ. ಹೊಸ ಹೊಸ ಪುಸ್ತಕಗಳನ್ನು ಓದುತ್ತಿದ್ದ. ತನ್ನ ಅನುಭವಗಳನ್ನು ಬರಹಗಳಾಗಿ ರೂಪಿಸಿ ಜನರ ಮುಂದೆ ಇಡುತ್ತಿದ್ದ.

ಒಂದು ದಿನ ಅವನ ಕಥೆಯೊಂದು ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಯಿತು.ಅದನ್ನು ಓದಿದ ಅನೇಕರು ಅವನಿಗೆ ಕರೆ ಮಾಡಿ ಅಭಿನಂದಿಸಿದರು.ಆಗ ಹೃದಯ್ ಮನಸ್ಸಿನಲ್ಲಿ ಒಂದು ನಗು ಮೂಡಿತು."ಒಂದು ಕಾಲದಲ್ಲಿ  'ನನ್ನ ಬರಹವನ್ನು ಓದುವವರು ಯಾರು?' ಎಂದು ಯೋಚಿಸುತ್ತಿದ್ದೆ. ಇಂದು ನನ್ನ ಪದಗಳು ಅಪರಿಚಿತರ ಮನಸ್ಸನ್ನೂ ತಲುಪಿವೆ."ಆ ಕ್ಷಣದಲ್ಲಿ ಅವನಿಗೆ ಅರ್ಥವಾಯಿತು;ಕೆಲವರು ನಮ್ಮ ಜೀವನಕ್ಕೆ ಜೊತೆಯಾಗಿ ನಡೆಯಲು ಬರುವುದಿಲ್ಲ.ಅವರು ನಮ್ಮನ್ನು ಬದಲಾಯಿಸಲು ಬರುತ್ತಾರೆ.ಹಿಮಾ ಅವನಿಗೆ ನಂಬಿಕೆಯ ಬೆಲೆಯನ್ನು ಕಲಿಸಿದಳು.ಮೈತ್ರಿ ಆತ್ಮಗೌರವ ಮತ್ತು ಗುರಿಯ ಮಹತ್ವವನ್ನು ಕಲಿಸಿದಳು.ಅವರಿಬ್ಬರೂ ಅವನ ಜೀವನದಲ್ಲಿ ಉಳಿಯಲಿಲ್ಲ.ಆದರೆ ಅವರು ಕಲಿಸಿದ ಪಾಠಗಳು ಮಾತ್ರ ಶಾಶ್ವತವಾಗಿ ಉಳಿದವು.

ವರ್ಷಗಳ ನಂತರ...ಒಂದು ಸಾಹಿತ್ಯ ಕಾರ್ಯಕ್ರಮದಲ್ಲಿ ಹೃದಯ್, ಹಿಮಾ ಮತ್ತು ಮೈತ್ರಿ ಮತ್ತೆ ಭೇಟಿಯಾದರು.ಮೂರೂ ಜನರ ಮುಖದಲ್ಲೂ ನಗು ಇತ್ತು.ಯಾರ ಕಣ್ಣಲ್ಲೂ ಬೇಸರ ಇರಲಿಲ್ಲ.ಯಾರ ಮನಸ್ಸಿನಲ್ಲೂ ಅಪೂರ್ಣ ಪ್ರೀತಿಯ ನೋವು ಇರಲಿಲ್ಲ.ಒಬ್ಬರ ಸಾಧನೆಯನ್ನು ಮತ್ತೊಬ್ಬರು ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಆ ದಿನ ಹೃದಯ್ ತನ್ನ ಡೈರಿಯಲ್ಲಿ ಹೀಗೆ ಬರೆದಿದ್ದ—"ಎಲ್ಲಾ ಪ್ರೇಮಕಥೆಗಳು ಮದುವೆಯಲ್ಲಿ ಕೊನೆಗೊಳ್ಳಬೇಕೆಂದಿಲ್ಲ. ಕೆಲವು ಕಥೆಗಳು ನಮ್ಮನ್ನು ಒಳ್ಳೆಯ ಮನುಷ್ಯರನ್ನಾಗಿ ಮಾಡುವುದರಲ್ಲೇ ಪೂರ್ಣಗೊಳ್ಳುತ್ತವೆ."

ಆ ದಿನ ಮೂವರೂ ತಮ್ಮ ತಮ್ಮ ದಾರಿಯಲ್ಲಿ ನಡೆದರು.ಯಾರೂ ಒಂಟಿಯಾಗಿರಲಿಲ್ಲ...ಏಕೆಂದರೆ ಅವರ ಜೊತೆ ಅವರ ಕನಸುಗಳಿದ್ದವು.


"ಪ್ರೀತಿ ಸಿಗಲಿಲ್ಲವೆಂದು ಬದುಕು ಸೋಲುವುದಿಲ್ಲ,
ಗೌರವ ಉಳಿದಿದ್ದರೆ ಸಂಬಂಧ ಎಂದಿಗೂ ಸಾಯುವುದಿಲ್ಲ.
ಕನಸುಗಳ ಜೊತೆ ನಡೆದ ಹೆಜ್ಜೆಯೇ ನಿಜವಾದ ಗೆಲುವು,
ನಗುತ್ತಲೇ ಮುಂದುವರಿಯುವುದೇ ಜೀವನದ ಸೊಬಗು."


-- ಮುಕ್ತಾಯ --


- ಈಶಕೃಷ್ಣ
ಡೇಟಾ ಸೈನ್ ವಿಭಾಗ 
ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ 


ಸುಳ್ಳಿನ ಸ್ವರದಲ್ಲಿ ಚಿಗುರಿದ ಪ್ರೀತಿ(ಭಾಗ 1) 
https://www.upayuktha.com/2026/05/Love-Blossomed-in-the-Tone-of-Lies.html


ಸುಳ್ಳಿನ ಸ್ವರದಲ್ಲಿ ಚಿಗುರಿದ ಪ್ರೀತಿ(ಭಾಗ 2) 
https://www.upayuktha.com/2026/05/Love-Blossomed-in-the-Tone-of-Lies_01102668798.html

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top