ಪಂಢರಪುರಕೆ ಹೋಗೋಣ… ಭಕ್ತಿಯ ಹೆಜ್ಜೆಗಳ ಮಹಾಯಾತ್ರೆ

Upayuktha
0

 ಜುಲೈ 25 – ಆಷಾಢ ಶುದ್ಧ ಏಕಾದಶಿ ವಿಶೇಷ



ಮಹಾರಾಷ್ಟ್ರದ ಸೊಲ್ಲಾಪುರದಿಂದ ಸುಮಾರು ೬೨ ಕಿ.ಮೀ. ದೂರದಲ್ಲಿರುವ ಪಂಢರಪುರವು ಭಾರತದ ಭಕ್ತಿ ಸಂಸ್ಕೃತಿಯ ಜೀವಂತ ಕೇಂದ್ರ. ಇಲ್ಲಿ ನೆಲೆಸಿರುವ ವಿಠ್ಠಲನು ಕೇವಲ ದೇವರಲ್ಲ; ಕೋಟ್ಯಂತರ ಭಕ್ತರ ಬದುಕಿನ ಉಸಿರು. ಆಷಾಢ ಹಾಗೂ ಕಾರ್ತಿಕ ಏಕಾದಶಿಯಂದು ಲಕ್ಷಾಂತರ ವಾರ್ಕರಿಗಳು ನೂರಾರು ಕಿಲೋಮೀಟರ್ ಪಾದಯಾತ್ರೆ ಮಾಡಿ "ವಿಠ್ಠಲ… ವಿಠ್ಠಲ…" ಎಂಬ ನಾಮಸ್ಮರಣೆಯೊಂದಿಗೆ ಪಂಢರಪುರವನ್ನು ಸೇರುತ್ತಾರೆ. ಈ ಯಾತ್ರೆ ಭಕ್ತಿ, ಸಮಾನತೆ, ಸೇವೆ ಮತ್ತು ಸೌಹಾರ್ದದ ಮಹೋತ್ಸವವಾಗಿದೆ.


ಪುಂಡಲೀಕನ ಭಕ್ತಿಯ ಪ್ರತೀಕ

ಸ್ಥಳಪುರಾಣದ ಪ್ರಕಾರ ಪುಂಡಲೀಕನು ತಂದೆ-ತಾಯಿಯ ಸೇವೆಯಲ್ಲಿ ತಲ್ಲೀನನಾಗಿದ್ದಾಗ ಶ್ರೀಹರಿಯೇ ಮನೆಗೆ ಬಂದನು. ಸೇವೆಗೆ ಅಡ್ಡಿಯಾಗಬಾರದೆಂದು ಪುಂಡಲೀಕನು ಒಂದು ಇಟ್ಟಿಗೆಯನ್ನು ಹೊರಗೆ ಎಸೆದು ಅದರ ಮೇಲೆ ನಿಲ್ಲುವಂತೆ ವಿನಂತಿಸಿದನು. ಭಕ್ತನ ಮಾತಿಗೆ ಮಣಿದ ಶ್ರೀಹರಿ ಕೈಗಳನ್ನು ಸೊಂಟದ ಮೇಲೆ ಇಟ್ಟು ಇಟ್ಟಿಗೆಯ ಮೇಲೆ ನಿಂತನು. ಭಕ್ತನ ಪ್ರಾರ್ಥನೆಯಂತೆ ಅಲ್ಲಿಯೇ ವಿಠ್ಠಲನಾಗಿ ನೆಲೆಸಿದನು. ಇಂದಿಗೂ ವಿಠ್ಠಲನ ವಿಗ್ರಹವು ಇದೇ ಭಂಗಿಯಲ್ಲಿ ಕಾಣುತ್ತದೆ. ಈ ಕಥೆ ಭಾರತೀಯ ಸಂಸ್ಕೃತಿಯಲ್ಲಿ ಮಾತೃಪಿತೃ ಸೇವೆಯೇ ಪರಮ ಭಕ್ತಿ ಎಂಬ ಸಂದೇಶವನ್ನು ಸಾರುತ್ತದೆ.


ವಿಠ್ಠಲನ ದೇಗುಲ

ಭೀಮಾ ಅಥವಾ ಚಂದ್ರಭಾಗಾ ನದಿಯ ತಟದಲ್ಲಿರುವ ಪಂಢರಪುರದ ದೇವಾಲಯವು ಸುಮಾರು ೧೩ನೇ ಶತಮಾನದಲ್ಲಿ ನಿರ್ಮಾಣಗೊಂಡಿತು. ಸುಮಾರು ನಾಲ್ಕು ಅಡಿ ಎತ್ತರದ ಕೃಷ್ಣಶಿಲೆಯ ವಿಠ್ಠಲ ವಿಗ್ರಹ, ತಲೆಯ ಕಿರೀಟ, ಕಂಠದ ತುಳಸಿ ಮಾಲೆ ಮತ್ತು ಸೊಂಟದ ಮೇಲಿರುವ ಎರಡು ಕೈಗಳು ಭಕ್ತರನ್ನು ಆಕರ್ಷಿಸುತ್ತವೆ. ಪಕ್ಕದಲ್ಲೇ ರುಕ್ಮಿಣಿದೇವಿಯ ದೇವಾಲಯವೂ ಇದೆ.


ನಾಮದೇವನ ಮೆಟ್ಟಿಲು

ಪಂಢರಪುರದ ದೇವಾಲಯದ ಮೊದಲ ಮೆಟ್ಟಿಲನ್ನು ಇಂದಿಗೂ "ನಾಮದೇವ್ ಚಿ ಪಾಯರಿ" ಎಂದು ಕರೆಯುತ್ತಾರೆ. ಬಾಲ್ಯದಲ್ಲಿ ದೇವರು ಸ್ವತಃ ಬಂದು ತಾನು ಅರ್ಪಿಸಿದ ನೈವೇದ್ಯವನ್ನು ಸ್ವೀಕರಿಸಬೇಕು ಎಂದು ಅಳುತ್ತ ಪ್ರಾರ್ಥಿಸಿದ ನಾಮದೇವನ ನಿರ್ಮಲ ಭಕ್ತಿಗೆ ವಿಠ್ಠಲನು ಪ್ರತ್ಯಕ್ಷನಾಗಿ ನೈವೇದ್ಯವನ್ನು ಸ್ವೀಕರಿಸಿದನೆಂಬ ನಂಬಿಕೆ ಇದೆ. ಆದ್ದರಿಂದ ಭಕ್ತರು ಮೊದಲು ಈ ಮೆಟ್ಟಿಲಿಗೆ ನಮಸ್ಕರಿಸಿ ನಂತರ ದೇವರ ದರ್ಶನ ಪಡೆಯುತ್ತಾರೆ.


ಸಮಾನತೆಯ ಸಂದೇಶ

ಒಂದು ಕಾಲದಲ್ಲಿ ಈ ದೇವಾಲಯದಲ್ಲಿ ಅಸ್ಪೃಶ್ಯತೆ ಮತ್ತು ಜಾತಿಭೇದಗಳಿದ್ದವು. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾದಿ ಸಾನೆ ಗುರುಜಿಯವರ ಸತ್ಯಾಗ್ರಹದ ಫಲವಾಗಿ ದೇವಾಲಯದ ಬಾಗಿಲು ಎಲ್ಲರಿಗೂ ತೆರೆದಿತು. ಇಂದು ಯಾವುದೇ ಜಾತಿ, ವರ್ಣ ಅಥವಾ ಭಾಷೆಯ ಭೇದವಿಲ್ಲದೆ ಪ್ರತಿಯೊಬ್ಬ ಭಕ್ತರೂ ವಿಠ್ಠಲನ ಪಾದಸ್ಪರ್ಶ ಮಾಡಿ ನಮಸ್ಕರಿಸಬಹುದು. ಪಂಢರಪುರವು ಸಮಾನತೆಯ ಸಂದೇಶ ಸಾರುವ ಪವಿತ್ರ ಕ್ಷೇತ್ರವಾಗಿದೆ.


ಸಂತರ ಆರಾಧ್ಯದೈವ

ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮ, ಚೋಖಾಮೇಳ, ಜನಾಬಾಯಿ ಸೇರಿದಂತೆ ಮಹಾರಾಷ್ಟ್ರದ ಸಂತ ಪರಂಪರೆ ಹಾಗೂ ಕರ್ನಾಟಕದ ಪುರಂದರದಾಸ, ವಿಜಯದಾಸ, ಗೋಪಾಲದಾಸ, ಜಗನ್ನಾಥದಾಸ ಮೊದಲಾದ ಹರಿದಾಸರು ವಿಠ್ಠಲನನ್ನು ತಮ್ಮ ಆರಾಧ್ಯದೈವವನ್ನಾಗಿ ಪೂಜಿಸಿದ್ದಾರೆ. ಅವರ ಅಭಂಗಗಳು ಮತ್ತು ಕೀರ್ತನೆಗಳು ಇಂದಿಗೂ ಪಂಢರಪುರದ ಬೀದಿಗಳಲ್ಲಿ ಮೊಳಗುತ್ತಿವೆ.


ಆಷಾಢ ಏಕಾದಶಿಯ ಮಹಾಯಾತ್ರೆ

ಆಷಾಢ ಶುದ್ಧ ಏಕಾದಶಿಯಂದು ಪಂಢರಪುರವು ಭಕ್ತಿಸಾಗರವಾಗುತ್ತದೆ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ವಾರ್ಕರಿಗಳು ಕಾಲ್ನಡಿಗೆಯಲ್ಲೇ ಯಾತ್ರೆ ಕೈಗೊಳ್ಳುತ್ತಾರೆ. ದಾರಿಯುದ್ದಕ್ಕೂ ನಾಮಸಂಕೀರ್ತನೆ, ಭಜನೆ, ಕೀರ್ತನೆ ಹಾಗೂ ಹರಿನಾಮದ ಘೋಷಣೆ ನಿರಂತರವಾಗಿ ಕೇಳಿಬರುತ್ತದೆ. ಈ ಪಾದಯಾತ್ರೆಯನ್ನು 'ವಾರಿ' ಅಥವಾ 'ಡಿಂಡಿ ಯಾತ್ರೆ' ಎಂದು ಕರೆಯುತ್ತಾರೆ.

ಪಾದಯಾತ್ರೆಯು ಕೇವಲ ದೇವರ ದರ್ಶನಕ್ಕಾಗಿ ನಡೆಯುವ ಪ್ರಯಾಣವಲ್ಲ. ಅದು ಮನಸ್ಸಿನ ಶುದ್ಧೀಕರಣ, ಆತ್ಮಸಾಧನೆ ಮತ್ತು ಜೀವನ ಮೌಲ್ಯಗಳ ಪುನರುಜ್ಜೀವನದ ಪಯಣವಾಗಿದೆ.


ಭಕ್ತಿಯ ಹೆಜ್ಜೆಗಳು

ನಡೆಯುವುದು ದೇಹಕ್ಕೆ ವ್ಯಾಯಾಮವಾದರೆ, ಪಾದಯಾತ್ರೆ ಆತ್ಮಕ್ಕೆ ಸಾಧನೆ. ಪ್ರತಿಯೊಂದು ಹೆಜ್ಜೆಯಲ್ಲೂ ಭಕ್ತನು ತನ್ನ ಅಹಂಕಾರವನ್ನು ತೊರೆದು ವಿನಯವನ್ನು ಕಲಿಯುತ್ತಾನೆ. ಆಯಾಸದ ಮಧ್ಯೆಯೂ ಹರಿನಾಮವೇ ಶಕ್ತಿ ನೀಡುತ್ತದೆ. ಆದ್ದರಿಂದ ಪಾದಯಾತ್ರಿಕರಿಗೆ ದಣಿವಿಗಿಂತ ಭಕ್ತಿಯೇ ಹೆಚ್ಚಾಗಿರುತ್ತದೆ.

ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ "ನಡಿಯುವ ಮನುಷ್ಯ ಎಡವತಾನ; ಎಡವಿದವ ನಡೆಯುವುದ ಕಲಿತಾನ" ಎಂಬ ಗಾದೆಯಂತೆ ಬದುಕಿನ ಸೋಲು-ಗೆಲುವುಗಳನ್ನೂ ಪಾದಯಾತ್ರೆ ಆತ್ಮವಿಶ್ವಾಸದ ಪಾಠವನ್ನಾಗಿ ಮಾಡುತ್ತದೆ.


ಕನ್ನಡಿಗರ ವಿಠ್ಠಲ

ಮಹಾರಾಷ್ಟ್ರದಲ್ಲಿದ್ದರೂ ವಿಠ್ಠಲನನ್ನು ಅನೇಕ ಸಂತರು "ಕಾನಡಿ ವಿಠ್ಠಲ" ಎಂದು ಕರೆದಿದ್ದಾರೆ. ಉತ್ತರ ಕರ್ನಾಟಕದ ಸಾವಿರಾರು ಭಕ್ತರು ಪ್ರತಿ ವರ್ಷ ಪಾದಯಾತ್ರೆಯ ಮೂಲಕ ಪಂಢರಪುರ ತಲುಪುವುದು ಇಂದಿಗೂ ಜೀವಂತ ಸಂಪ್ರದಾಯವಾಗಿದೆ. ಈ ಯಾತ್ರೆಯಲ್ಲಿ ಭಾಷೆ, ಜಾತಿ, ಧರ್ಮದ ಯಾವುದೇ ಗೋಡೆಗಳಿಲ್ಲ. ಭಕ್ತಿಯೇ ಎಲ್ಲರನ್ನು ಒಂದಾಗಿಸುತ್ತದೆ.


ಸೌಹಾರ್ದದ ಸೇತು

ಪಂಢರಪುರ ಯಾತ್ರೆಯ ಮತ್ತೊಂದು ವಿಶೇಷತೆ ಸೇವಾ ಮನೋಭಾವ. ಯಾತ್ರಿಕರಿಗೆ ಉಚಿತ ಅನ್ನ, ನೀರು, ವೈದ್ಯಕೀಯ ನೆರವು, ವಿಶ್ರಾಂತಿ, ಪಾದಮಸಾಜ್ ಮೊದಲಾದ ಸೇವೆಗಳನ್ನು ಸಾವಿರಾರು ಸ್ವಯಂಸೇವಕರು ಸಲ್ಲಿಸುತ್ತಾರೆ. ಕೆಲವರು ತಮ್ಮ ಭಕ್ತಿಯನ್ನು ನಡೆಯುವುದರಲ್ಲಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸೇವೆ ಮಾಡುವುದರ ಮೂಲಕ ವಿಠ್ಠಲನ ದರ್ಶನ ಪಡೆಯುತ್ತಾರೆ.

ಈ ಯಾತ್ರೆ ಮಹಾರಾಷ್ಟ್ರ–ಕರ್ನಾಟಕಗಳ ನಡುವೆ ಭಾಷಾ ಸೌಹಾರ್ದವನ್ನಷ್ಟೇ ಅಲ್ಲ, ವಿವಿಧ ಧರ್ಮ ಹಾಗೂ ಸಮುದಾಯಗಳ ನಡುವೆ ಮಾನವೀಯ ಬಂಧವನ್ನೂ ಗಟ್ಟಿಗೊಳಿಸುತ್ತದೆ.


ಸಮೀಪದ ಪುಣ್ಯಕ್ಷೇತ್ರಗಳು

ಪಂಢರಪುರದ ಸುತ್ತಮುತ್ತ ಪುಂಡಲೀಕ ದೇವಾಲಯ, ವಿಷ್ಣುಪಾದ, ಪದ್ಮಾವತಿ ಹಾಗೂ ಅಂಬಾಭವಾನಿ ದೇವಾಲಯಗಳಿವೆ. ಅಲ್ಲದೆ ತುಳಜಾಪುರದ ತುಳಜಾಭವಾನಿ, ಅಕ್ಕಲಕೋಟದ ಸ್ವಾಮಿ ಸಮರ್ಥ ಹಾಗೂ ಗಾಣಗಾಪುರದ ಶ್ರೀ ದತ್ತಾತ್ರೇಯ ಕ್ಷೇತ್ರಗಳೂ ಯಾತ್ರಿಕರನ್ನು ಆಕರ್ಷಿಸುತ್ತವೆ.

ಇಂದಿನ ಯಾಂತ್ರಿಕ ಬದುಕಿನಲ್ಲಿ ಪಂಢರಪುರದ ಪಾದಯಾತ್ರೆ ನಮಗೆ ಒಂದು ಮಹತ್ವದ ಪಾಠ ಕಲಿಸುತ್ತದೆ. ಜೀವನದ ನಿಜವಾದ ಸಂತೋಷವು ವೇಗದಲ್ಲಲ್ಲ, ನಡೆಯುವಿಕೆಯಲ್ಲಿ ಇದೆ; ಅಧಿಕಾರದಲ್ಲಲ್ಲ, ಸೇವೆಯಲ್ಲಿ ಇದೆ; ಅಹಂಕಾರದಲ್ಲಲ್ಲ, ಭಕ್ತಿಯಲ್ಲಿ ಇದೆ. ಆದ್ದರಿಂದ ಆಷಾಢ ಏಕಾದಶಿಯ ಪಂಢರಪುರ ಯಾತ್ರೆ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಮಾನವೀಯತೆ, ಸಮಾನತೆ, ಸೇವೆ ಮತ್ತು ಆತ್ಮಸಾಕ್ಷಾತ್ಕಾರದ ಮಹಾಯಾತ್ರೆಯಾಗಿದೆ.


"ವಿಠ್ಠಲ… ವಿಠ್ಠಲ…" ಎಂಬ ನಾಮಸ್ಮರಣೆಯೊಂದಿಗೆ ಪಂಢರಪುರದತ್ತ ಸಾಗುವ ಪ್ರತಿಯೊಂದು ಹೆಜ್ಜೆಯೂ ದೇವರತ್ತ ಸಾಗುವ ಹೆಜ್ಜೆಯೇ ಆಗಿದೆ.


- ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)
ಸಂಸ್ಕೃತಿ ಚಿಂತಕರು

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top