ಕನ್ನಡದ ವೈವಿಧ್ಯಮಯ ಸಂಗೀತ ಲೋಕವನ್ನು ತೆರೆದಿಟ್ಟ ‘ಕನ್ನಡ ಗಾನಗುಚ್ಛ' ಕಾರ‍್ಯಕ್ರಮ

Upayuktha
0

 


ಮೂಡುಬಿದಿರೆ: ಕನ್ನಡ ಸಾಹಿತ್ಯದ ಸಂಗೀತ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ಅಪರೂಪದ ಪ್ರಯೋಗವೇ ‘ಕನ್ನಡ ಗಾನಗುಚ್ಛ’ ಕಾರ‍್ಯಕ್ರಮ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನುಡಿದರು.
 
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ ಜೀವನರಾಮ್  ಸುಳ್ಯರ  ಸಂಯೋಜನೆಯಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಆಯೋಜನೆಗೊಂಡ 2 ಗಂಟೆಗಳ ‘ಕನ್ನಡ ಗಾನಗುಚ್ಛ' ಕಾರ‍್ಯಕ್ರಮವನ್ನು ವೀಕ್ಷಿಸಿ ಮಾತನಾಡಿದರು.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರ ಪ್ರದರ್ಶನವನ್ನು ಶ್ಲಾಘಿಸಿದ ಅವರು, ಹಾಡಿಗೆ ಇರುವ ಅಪಾರ ಶಕ್ತಿಯನ್ನು ಕಲಾವಿದರು ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದಾರೆ. ಸ್ವರದ ಏರಿಳಿತ, ಆಂಗಿಕ ಅಭಿನಯ, ಭಾವಾಭಿವ್ಯಕ್ತಿ ಹಾಗೂ ಕಲ್ಪನೆಯನ್ನು ಪ್ರೇಕ್ಷಕರ ಕಣ್ಮುಂದೆ ಜೀವಂತವಾಗಿ ಮೂಡಿಸಿದ ರೀತಿ ಅಭಿನಂದನೀಯ. ಇಡೀ ರಂಗಭೂಮಿಯ ಚಿತ್ರಣವನ್ನು ಸಂಗೀತದ ಮೂಲಕವೇ ಕಟ್ಟಿಕೊಟ್ಟ ಈ ಕಾರ್ಯಕ್ರಮ ಜೀವಕಳೆಯಿಂದ ತುಂಬಿತ್ತು, ಎಂದು ಹೇಳಿದರು.


ರಂಗಗೀತೆಗಳಲ್ಲಿ ಜನಪದದ ಸೊಗಡು ಮಾತ್ರವಲ್ಲ, ಸುಗಮ ಸಂಗೀತದ ಸೊಗಸಾದ ಲೇಪನವೂ ಇರುತ್ತದೆ. ಅವುಗಳಲ್ಲಿ ವಸ್ತು ವಿವೇಚನೆ, ಸಂದರ್ಭದ ವಿಶ್ಲೇಷಣೆ, ಸಂಘರ್ಷ, ಸಂಭಾಷಣೆಯ ಸತ್ವ ಅಡಗಿರುತ್ತದೆ ಎಂದರು.  

ಕಾರ್ಯಕ್ರಮದಲ್ಲಿ ಒಟ್ಟು 28 ವೈವಿಧ್ಯಮಯ ಗೀತೆಗಳನ್ನು ಪ್ರಸ್ತುತಪಡಿಸಲಾಗಿದ್ದು, ಕಂದಪದ್ಯ, ರಂಗಗೀತೆ, ಜಾನಪದ ಗೀತೆ, ಮಕ್ಕಳ ಗೀತೆ, ಜೋಗುಳ, ವಚನ, ದಾಸರ ಪದ, ಭಜನೆ, ಕವ್ವಾಲಿ, ಗೀಗಿಪದ, ಕಂಸಾಳೆ ಪದ, ಸೋಲಿಗರ ಹಾಡು, ಮಂಟೇಶ್ವರ ಸ್ವಾಮಿಯ ಪದ್ಯ ಹಾಗೂ ತುಳು ಪಾಡ್ದನ ಸೇರಿದಂತೆ ಕನ್ನಡದ ವಿವಿಧ ಸಂಗೀತ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಲಾಯಿತು.


ಆಳ್ವಾಸ್ ರಂಗ ಅಧ್ಯಯನ ಕೇಂದ್ರದ  ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ, ಮಮತಾ ಕಲ್ಮಕಾರು, ಮನುಜ ನೇಹಿಗ ಸುಳ್ಯ, ಸಮನ್ವಿತ ಹುಬ್ಬಳ್ಳಿ, ಸತ್ಯಜಿತ್ ರಾವ್, ಸತೀಶ್ ಸುರತ್ಕಲ್, ಸಂತೋಷ್ ಉಡುಪಿ, ತೇಜಸ್ವಿನಿ ತರೀಕೆರೆ, ನಿಶ್ಮಿತಾ, ವಿಸ್ಮಯ ಪೈ, ಸಿಂಚನಾ ಶೆಟ್ಟಿ ಹಾಗೂ ಕೃಪಾ ನಾಯಕ್ ಸೇರಿದಂತೆ ಕಲಾವಿದರು ವಿವಿಧ ಗೀತೆಗಳನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top