ಮೈಸೂರು ದಸರಾದಲ್ಲಿ ಕಂಬಳ: ಕರಾವಳಿ ಆಯೋಜಕರೊಂದಿಗೆ ಚರ್ಚಿಸಲು ವಿ. ಸುನಿಲ್ ಕುಮಾರ್ ಆಗ್ರಹ

Upayuktha
0

 



ಮಂಗಳೂರು: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವ ಸರ್ಕಾರದ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಮುನ್ನ ಕರಾವಳಿಯ ಕಂಬಳ ಆಯೋಜಕರು ಹಾಗೂ ಕೋಣಗಳ ಮಾಲೀಕರೊಂದಿಗೆ ಸರ್ಕಾರ ಸಮಾಲೋಚನೆ ನಡೆಸಬೇಕು ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.


ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ ಅವರು, ಮೈಸೂರಿನಲ್ಲಿ ಕಂಬಳ ನಡೆಸಲೇಬೇಕೆಂದು ಸರ್ಕಾರ ಹಠಕ್ಕೆ ಬಿದ್ದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಎಲ್ಲ ಆಯಾಮಗಳನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ ಎಂದರು.


ಕರಾವಳಿಯ ಸಂಸ್ಕೃತಿ ರಫ್ತು ಮಾಡುವ ಮುನ್ನ ಯೋಚಿಸಿ:

ಕಂಬಳವು ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಕ್ರೀಡೆಯಾಗಿದ್ದು, ಅದಕ್ಕೇ ಆದ ಇತಿಹಾಸ ಮತ್ತು ಸ್ಥಳೀಯ ಸೊಗಡಿದೆ. ಪ್ರದೇಶದಿಂದ ಪ್ರದೇಶಕ್ಕೆ ಭಾಷೆ, ಸಂಸ್ಕೃತಿ ಮತ್ತು ಆಚರಣೆಗಳು ಬದಲಾಗುತ್ತವೆ. ಹೀಗಿರುವಾಗ ದಸರಾ ನೆಪದಲ್ಲಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯನ್ನು ಮೈಸೂರಿಗೆ ರಫ್ತು ಮಾಡುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವ ಮೊದಲು, ಕರಾವಳಿಯ ಕಂಬಳದ ನೈಜ ಪಾಲುದಾರರೊಂದಿಗೆ ಸರ್ಕಾರ ಸಭೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.


ದಸರಾ ಕಂಬಳ ಆಯೋಜನೆಗೆ ಸರ್ಕಾರ ಸುಮಾರು 8 ಕೋಟಿ ರೂಪಾಯಿ ವೆಚ್ಚ ಮಾಡಲು ಮುಂದಾಗಿರುವ ಮಾಹಿತಿ ತಮಗೆ ತೀವ್ರ ಅಚ್ಚರಿ ಮೂಡಿಸಿದೆ. ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳಗಳಿಗೆ ತಲಾ 2.5 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಕೂಡ ಹಿಂದೆ-ಮುಂದೆ ನೋಡಿದೆ. ಈ ತಾರತಮ್ಯದ ವಿರುದ್ಧ ನಾವು ಸದನದಲ್ಲೂ ಪಕ್ಷಾತೀತವಾಗಿ ಧ್ವನಿ ಎತ್ತಿದ್ದೇವೆ. ಸರ್ಕಾರಕ್ಕೆ ನಿಜವಾಗಿಯೂ ಕಂಬಳದ ಮೇಲೆ ಪ್ರೀತಿಯಿದ್ದರೆ, ಮೊದಲು ಕರಾವಳಿಯ ಜಿಲ್ಲಾಮಟ್ಟದ 20 ಕಂಬಳಗಳಿಗೆ ತಲಾ 25 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲು ಮುಂದಾಗಲಿ ಎಂದು ಅವರು ಸವಾಲು ಹಾಕಿದರು.


ಸ್ಥಳೀಯವಾಗಿ ಕಂಬಳಗಳಿಗೆ ಸೂಕ್ತ ಆರ್ಥಿಕ ನೆರವು ನೀಡಿದರೆ ಕ್ರೀಡೆಯ ವೈಭವ ಇನ್ನಷ್ಟು ಹೆಚ್ಚುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಕರಾವಳಿಗೆ ಬಂದು ಕಂಬಳ ವೀಕ್ಷಿಸುವಂತಹ ವಾತಾವರಣವನ್ನು ಸ್ಥಳೀಯರ ಸಹಭಾಗಿತ್ವದಲ್ಲಿ ನಿರ್ಮಿಸಲು ಸರ್ಕಾರ ಆದ್ಯತೆ ನೀಡಬೇಕು. ಈ ಹಿನ್ನೆಲೆಯಲ್ಲಿ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವ ಹಠ ಕೈಬಿಟ್ಟು, ಮೊದಲು ಕರಾವಳಿಯ ಆಯೋಜಕರು ಮತ್ತು ಕೋಣಗಳ ಮಾಲೀಕರ ಸಭೆ ಕರೆಯಬೇಕು ಎಂದು ಕಂಬಳ ಆಯೋಜಕರೂ ಆಗಿರುವ ಸುನಿಲ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top