ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಕೀಲಿಕೈ – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಜೀ ಮಹಾರಾಜ್
ಫೊಂಡಾ (ಗೋವಾ): ಕಲಿಯುಗದ ಈ ಬಿಕ್ಕಟ್ಟಿನ ಸ್ಥಿತಿಯಲ್ಲಿ ಕೇವಲ ಭಕ್ತಿಯಿಂದ ಮಾತ್ರ ಸಾಲದು. ಇಂದಿನ ಕಾಲದ ಅವಶ್ಯಕತೆ ಏನೆಂದರೆ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗಿನ ಸಾತ್ವಿಕತೆಯನ್ನು ಜಾಗೃತಗೊಳಿಸಿ ಸಂಘಟಿತನಾಗಬೇಕು. ಮಾನವ ಯೋನಿಯಲ್ಲಿಯೇ ತನ್ನ ಭಾಗ್ಯವನ್ನು ಬದಲಾಯಿಸುವ ಸಾಮರ್ಥ್ಯವಿದೆ. ಯೋಗ್ಯ ಗುರುಗಳ ಮಾರ್ಗದರ್ಶನದಲ್ಲಿ ಕಾರ್ಯ ಮಾಡಿದರೆ ವಿಶ್ವಶಾಂತಿಯ ಗುರಿಯನ್ನು ಖಚಿತವಾಗಿ ಸಾಧಿಸಬಹುದು ಎಂದು ರಾಮಾನಂದಾಚಾರ್ಯ ದಕ್ಷಿಣ ಪೀಠ, ನಾಣಿಜಧಾಮದ ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಜೀ ಮಹಾರಾಜರು ವ್ಯಕ್ತಪಡಿಸಿದರು.
ಅವರು ಇತ್ತೀಚೆಗೆ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಾಜಕ್ಕೆ ಈ ಅತ್ಯಂತ ಮಹತ್ವದ ಹಾಗೂ ಸಮಷ್ಟಿ ಕಲ್ಯಾಣದ ಸಂದೇಶವನ್ನು ನೀಡಿ ಮಾತನಾಡುತ್ತಿದ್ದರು.
ಕಲಿಯುಗದ ಸ್ಥಿತಿಯ ಕುರಿತು ಬೆಳಕು ಚೆಲ್ಲಿದ ಜಗದ್ಗುರು ಮಹಾರಾಜರು, ಈ ಯುಗದಲ್ಲಿ ‘ರಜ’ ಮತ್ತು ‘ತಮ’ ಗುಣಗಳು ಯಾವುದೇ ಆಹ್ವಾನವಿಲ್ಲದೆ ಸ್ವತಃ ಹೆಚ್ಚಾಗುತ್ತವೆ. ಅವು ಮಾನವನ ಜೀವನವನ್ನು ಅಧೋಗತಿಯತ್ತ ಕೊಂಡೊಯ್ಯುತ್ತವೆ. ಈ ನಕಾರಾತ್ಮಕ ಪರಿಣಾಮಗಳನ್ನು ನಿವಾರಿಸಿ ಜೀವನದಲ್ಲಿ ಸಾತ್ವಿಕತೆಯನ್ನು ಹೆಚ್ಚಿಸಲು ಸಮಾಜವು ‘ಸಾಧನೆ’ ಮಾಡುವುದು ಅನಿವಾರ್ಯವಾಗಿದೆ. ಸಂತರ ಸಾನ್ನಿಧ್ಯದಿಂದ ಹೊರಹೊಮ್ಮುವ ಸಾತ್ವಿಕ ಸ್ಪಂದನಗಳು ಮನುಷ್ಯನನ್ನು ಆತ್ಮಚೈತನ್ಯದತ್ತ ಕೊಂಡೊಯ್ಯುತ್ತವೆ ಎಂದು ಹೇಳಿದರು.
ಅವರು ಸನಾತನ ಆಶ್ರಮದ ಸಾಧಕರು ತಮ್ಮ ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಂಡು ಆತ್ಮಚಿಂತನೆ ಮಾಡುವ ಪದ್ಧತಿಯನ್ನು ವಿಶೇಷವಾಗಿ ಪ್ರಶಂಸಿಸಿದರು. ಸಂದೇಶ ನೀಡುತ್ತಾ ಮಹಾರಾಜರು, “ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೋಷಗಳನ್ನು ಹುಡುಕಿ ಅವುಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ದೋಷಮುಕ್ತ, ಸಂಸ್ಕಾರಯುತ ಹಾಗೂ ಆದರ್ಶ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ.” ಎಂದು ಹೇಳಿದರು.
ಈ ಸಂದರ್ಭದಲ್ಲಿ ‘ಸನಾತನ ಪ್ರಭಾತ’ ವಾರ್ತಾಪತ್ರಿಕೆ ಸಮೂಹದ ಸಂಪಾದಕರಾದ ಶ್ರೀ ಯೋಗೇಶ ಜಲತಾರೆ ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ-ಧರ್ಮದ ಕಾರ್ಯಗಳು ಹಾಗೂ ಆಧ್ಯಾತ್ಮಿಕ ಸಂಶೋಧನೆಯ ಕುರಿತು ಅವರಿಗೆ ಮಾಹಿತಿ ನೀಡಿದರು. ಆಶ್ರಮ ಪ್ರವಾಸದ ವೇಳೆ ಜಗದ್ಗುರು ಮಹಾರಾಜರು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಜೀ ಅವರನ್ನು ಭೇಟಿಯಾದರು. ಈ ಅಲೌಕಿಕ ಭೇಟಿಯ ನಂತರ ಸನಾತನ ಸಂಸ್ಥೆಯ ಪೂಜ್ಯ ಪೃಥ್ವೀರಾಜ ಹಜಾರೆ ಅವರು ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಜೀ ಮಹಾರಾಜರನ್ನು ಭಾವಪೂರ್ಣವಾಗಿ ಸನ್ಮಾನಿಸಿದರು. ಈ ಮಂಗಳಕರ ಸಂದರ್ಭದಲ್ಲಿ ಭಾರತಾಚಾರ್ಯ ಸು. ಗ. ಶೇವಡೆ ಹಾಗೂ ಸನಾತನ ಸಂಸ್ಥೆಯ ಜ್ಯೋತಿ ಢವಳೀಕರ ಉಪಸ್ಥಿತರಿದ್ದರು.


