ಆನಂದಮಯ ಜೀವನಕ್ಕಾಗಿ ಗುರುಕೃಪೆಯ ಮಹತ್ವ

Upayuktha
0



ಗುರುಗಳು ಜೀವನಕ್ಕೆ ಯೋಗ್ಯವಾದ ಮಾರ್ಗದರ್ಶನ ನೀಡುವವರಾಗಿದ್ದಾರೆ. ಶ್ರೀ ದತ್ತಗುರುಗಳು ಹೇಗೆ 24 ಗುಣಗುರುಗಳನ್ನು ಮಾಡಿಕೊಂಡರೋ, ಹಾಗೆಯೇ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಪ್ರಸಂಗದಲ್ಲಿನ ಒಳ್ಳೆಯ ಗುಣಗಳನ್ನು ನೋಡುವ ದೃಷ್ಟಿಯನ್ನು ಗುರುಗಳು ನಮಗೆ ಕರುಣಿಸುತ್ತಾರೆ. ಆದರೆ ನಾವು ಸಾಮಾನ್ಯವಾಗಿ ನಮ್ಮಲ್ಲಿನ ಮತ್ತು ಇತರರಲ್ಲಿನ ಗುಣಗಳನ್ನು ನೋಡುವ ಬದಲು, ಸ್ವಭಾವದೋಷ ಹಾಗೂ ಕೊರತೆಗಳ ಕಡೆಗೇ ಹೆಚ್ಚು ಗಮನ ಹರಿಸುತ್ತೇವೆ. ಇದರಿಂದಾಗಿ ಜೀವನದ ಆನಂದದ ಅನೇಕ ಕ್ಷಣಗಳನ್ನು ಅನುಭವಿಸುವುದರಿಂದ ವಂಚಿತರಾಗುತ್ತೇವೆ. ನಿಜವಾದ ಆನಂದಮಯ ಜೀವನವನ್ನು ನಡೆಸಲು ಶ್ರೀ ದತ್ತಗುರುಗಳಂತೆ ಪ್ರತಿಯೊಬ್ಬರಲ್ಲಿನ ಒಳ್ಳೆಯ ಗುಣಗಳನ್ನು ನೋಡುವ ವೃತ್ತಿ (ದೃಷ್ಟಿಕೋನ) ಅತ್ಯಗತ್ಯವಾಗಿದೆ. ಗುರುಕೃಪಾಯೋಗದ ಪ್ರಕಾರ ವ್ಯಕ್ತಿಯಲ್ಲಿನ ಸ್ವಭಾವದೋಷ ಮತ್ತು ಅಹಂ ಹೇಗೆ ದೂರವಾಗುತ್ತವೆ, ಹಾಗೂ ಆನಂದಮಯ ಜೀವನದ ಕಡೆಗೆ ಹೆಜ್ಜೆ ಇಡುವುದು ಹೇಗೆ ಸಾಧ್ಯವಾಗುತ್ತದೆ ಎಂಬುದರ ಕುರಿತು ಸನಾತನ ಸಂಸ್ಥೆಯು ಸಂಕಲಿಸಿರುವ ಈ ಲೇಖನದಿಂದ ತಿಳಿದುಕೊಳ್ಳೋಣ.

ಗುರುಕೃಪೆಯ ಮಹತ್ವ

ಶ್ರೀ ಗುರುಚರಿತ್ರೆಯಲ್ಲಿ (೧೩:೧೩೦) ಹೀಗೆ ಹೇಳಲಾಗಿದೆ, "ಗಂಗೆಯಿಂದ ಪಾಪ, ಶಶಿಯಿಂದ (ಚಂದ್ರನಿಂದ) ತಾಪ ಮತ್ತು ಕಲ್ಪತರುವಿನಿಂದ ದಾರಿದ್ರ್ಯವು ನಾಶವಾಗುತ್ತದೆ; ಆದರೆ ಶ್ರೀಗುರುಗಳ ದರ್ಶನ ಮಾತ್ರದಿಂದಲೇ ಪಾಪ, ತಾಪ ಮತ್ತು ದಾರಿದ್ರ್ಯ ಎಂಬ ಮೂರೂ ನಾಶವಾಗುತ್ತವೆ." ಗುರುಗಳು ಜೀವಿಗೆ ಮೋಕ್ಷಪ್ರಾಪ್ತಿಯ ಮಾರ್ಗವನ್ನು ತೋರಿಸುತ್ತಾರೆ. ಗುರುಕೃಪೆಯಿಂದಾಗಿ ಸಾಧಕನ ಜೀವನದಲ್ಲಿ ಅಂತರ್ಮುಖತೆ, ಸಾತ್ತ್ವಿಕತೆ ಮತ್ತು ಆತ್ಮಿಕ ಆನಂದವು ನಿರ್ಮಾಣವಾಗುತ್ತದೆ. ಈಶ್ವರನಲ್ಲಿ ಸ್ವಭಾವದೋಷ ಮತ್ತು ಅಹಂ ಇಲ್ಲದಿರುವುದರಿಂದ, ಈಶ್ವರನೊಂದಿಗೆ ಏಕರೂಪವಾಗಲು ನಮ್ಮಲ್ಲಿನ ಸ್ವಭಾವದೋಷ ಹಾಗೂ ಅಹಂ ಅನ್ನು ದೂರ ಮಾಡಿಕೊಳ್ಳುವುದು ಅತ್ಯಗತ್ಯ. ಸಾಧನೆಯಿಂದ ಮನಸ್ಸು ಶುದ್ಧವಾಗಿ ಸೂಕ್ಷ್ಮದೃಷ್ಟಿ ಜಾಗೃತವಾಗುತ್ತದೆ ಮತ್ತು ಜೀವನವನ್ನು ನೋಡುವ ದೃಷ್ಟಿಕೋನವು ಸಕಾರಾತ್ಮಕವಾಗುತ್ತದೆ. ಇದು ಗುರುಕೃಪೆಯಿಂದಲೇ ಸಾಧ್ಯವಾಗುತ್ತದೆ.

ಅಷ್ಟಾಂಗ ಸಾಧನೆ

ನಾಮಜಪ, ಸತ್ಸಂಗ, ಸತ್ಸೇವೆ, ಸತ್ಕಾರ್ಯಕ್ಕಾಗಿ ತ್ಯಾಗ, ನಿರಪೇಕ್ಷ ಪ್ರೇಮ, ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ ಮತ್ತು ಭಾವವೃದ್ಧಿ ಇವು ಗುರುಕೃಪಾಯೋಗದಲ್ಲಿನ ಅಷ್ಟಾಂಗ ಸಾಧನೆಯ ಹಂತಗಳಾಗಿವೆ. ಇದರಿಂದ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. "ಎಲ್ಲವೂ ಈಶ್ವರನ ಇಚ್ಛೆಯಂತೆಯೇ ನಡೆಯಲಿ" ಎಂಬ ಭಾವವು ಅಷ್ಟಾಂಗ ಸಾಧನೆಯಿಂದ ಸಾಧಕನಲ್ಲಿ ನಿರ್ಮಾಣವಾಗುತ್ತದೆ.

ಇಂದೇ ಸಾಧನೆಯನ್ನು ಪ್ರಾರಂಭಿಸಿ

ಯುವಕರು ವೃದ್ಧಾಪ್ಯದವರೆಗೆ ಕಾಯದೆ ಯೌವನದಲ್ಲೇ ಸಾಧನೆಯನ್ನು ಆರಂಭಿಸಬೇಕು; ಏಕೆಂದರೆ ಮನುಷ್ಯ ಜನ್ಮದ ನಿಜವಾದ ಉದ್ದೇಶವೇ ಈಶ್ವರಪ್ರಾಪ್ತಿಯಾಗಿದೆ. ವೃದ್ಧಾಪ್ಯದಲ್ಲಿ ವಿವಿಧ ಕಾಯಿಲೆಗಳು ಪ್ರಾರಂಭವಾಗುವುದರಿಂದ ಗಮನವೆಲ್ಲಾ ಅದರ ಕಡೆಗೇ ಇರುತ್ತದೆ. ಅಂತಹ ಸಮಯದಲ್ಲಿ ಕಾಯಿಲೆಯು ಸಹನೀಯವಾಗಲು ಸಾಧನೆಯು ಅತ್ಯಗತ್ಯ. ಗುರುಕೃಪೆಯ ಬಲದಿಂದ ಸಾಧಕನು ಆನಂದಮಯ ಜೀವನವನ್ನು ನಡೆಸಲು ಸಕ್ಷಮನಾಗುತ್ತಾನೆ.

ಗುರುತತ್ತ್ವದ ಚರಣಗಳಲ್ಲಿ ಪ್ರಾರ್ಥನೆ

ಈ ರೀತಿಯಾಗಿ, ಗುರುಕೃಪಾಯೋಗದಲ್ಲಿನ ಅಷ್ಟಾಂಗ ಸಾಧನೆಯು ಸಾಧಕನನ್ನು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಮೂಲಕ ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ಕರೆದೊಯ್ದು, ಕಲಿಯುಗದ ಅಸ್ಥಿರ ಜೀವನದಲ್ಲಿ ಚಿರಂತನ ಆನಂದವನ್ನು ನೀಡುತ್ತದೆ. ಆದ್ದರಿಂದ ಗುರುಕೃಪಾಯೋಗವು ಕೇವಲ ಸಾಧನೆಯ ಮಾರ್ಗವಲ್ಲ, ಬದಲಿಗೆ ಆನಂದಮಯ ಆದರ್ಶ ಜೀವನವನ್ನು ನಡೆಸುವ ಅತ್ಯುತ್ತಮ ಮಾರ್ಗವಾಗಿದೆ.

ನಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂ ಅನ್ನು ದೂರ ಮಾಡಿ ಜೀವನದ ಪ್ರತಿಯೊಂದು ಕ್ಷಣದ ನಿಜವಾದ ಆನಂದವನ್ನು ಅನುಭವಿಸುವುದೇ ಗುರುಕೃಪೆಯಾಗಿದೆ. ಈ ಗುರುಪೂರ್ಣಿಮೆಯ ಪವಿತ್ರ ಪರ್ವದಂದು ಗುರುತತ್ತ್ವದ ಚರಣಗಳಲ್ಲಿ ನಾವು ಪ್ರಾರ್ಥಿಸೋಣ— "ಹೇ ಭಗವಂತನೇ, ಹೇ ಗುರುಮಾವುಲಿ (ಗುರುಮಾತೆಯೇ), ನಮಗೆ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದದಿಂದ ಅನುಭವಿಸಲು ಸಾಧ್ಯವಾಗಲಿ. ಅದಕ್ಕಾಗಿ ನಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂ ಅನ್ನು ದೂರ ಮಾಡುವ ಶಕ್ತಿ, ಹಂಬಲ ಮತ್ತು ಸತತವಾಗಿ ಸಾಧನೆ ಮಾಡುವ ಪ್ರೇರಣೆಯನ್ನು ನಮಗೆ ದಯಪಾಲಿಸು."

ಆಧಾರ : ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ತೇಜಸ್ವಿ ವಿಚಾರಗಳು

ಸಂಕಲನಕಾರರು: 
ವಿನೋದ್ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ.
ಸಂಪರ್ಕ ಸಂಖ್ಯೆ: 9342599299

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top