ನವದೆಹಲಿ: ದೆಹಲಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಭವಿಷ್ಯದಲ್ಲಿ ದೆಹಲಿಯ ಬಸ್‌ಗಳನ್ನು ನಗರದಲ್ಲಿ ಸಂಗ್ರಹವಾಗುವ ಘನತ್ಯಾಜ್ಯದಿಂದ ಉತ್ಪಾದಿಸಲಾದ ಹಸಿರು ಹೈಡ್ರೋಜನ್ ಇಂಧನದಲ್ಲಿ ಓಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿದ ಗಡ್ಕರಿ, ಮುನ್ಸಿಪಲ್ ಘನತ್ಯಾಜ್ಯವನ್ನು ಆರ್ಗಾನಿಕ್ ಮತ್ತು ಇನ್-ಆರ್ಗಾನಿಕ್ ಎಂದು ಪ್ರತ್ಯೇಕಿಸಿ, ಬಯೋ-ಡೈಜೆಸ್ಟರ್ ತಂತ್ರಜ್ಞಾನದ ಮೂಲಕ ಹಸಿರು ಹೈಡ್ರೋಜನ್ ಉತ್ಪಾದಿಸಲಾಗುತ್ತದೆ ಎಂದರು. ಈ ಯೋಜನೆಯಿಂದ ಕಸದ ವಿಲೇವಾರಿ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಪರಿಸರ ಸ್ನೇಹಿ ಇಂಧನವೂ ದೊರೆಯಲಿದೆ ಎಂದು ಹೇಳಿದರು.
"ಕಸದಿಂದ ಹೈಡ್ರೋಜನ್ ತಯಾರಿಸಿ ಬಸ್ ಓಡಿಸುತ್ತೇನೆ ಎಂದಾಗ ಹಲವರು ನಗುತ್ತಾರೆ. ಆದರೆ ನಾನು ಹೇಳಿದ ಮಾತು ಕಾರ್ಯರೂಪಕ್ಕೆ ಬಾರದ ಇತಿಹಾಸವೇ ಇಲ್ಲ," ಎಂದು ಗಡ್ಕರಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಈ ಯೋಜನೆಯಿಂದ ದೆಹಲಿಯಲ್ಲಿರುವ ಕಸದ ರಾಶಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದ್ದು, ನಗರವನ್ನು ಕಸಮುಕ್ತಗೊಳಿಸುವತ್ತ ಮಹತ್ವದ ಹೆಜ್ಜೆಯಾಗಲಿದೆ. ಈಗಾಗಲೇ ದೆಹಲಿಯ ಕಸದ ರಾಶಿಯಿಂದ ಸುಮಾರು 80 ಲಕ್ಷ ಟನ್ ಕಸವನ್ನು ಸಂಸ್ಕರಿಸಿ ಹೆದ್ದಾರಿ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಅವರು ತಿಳಿಸಿದರು.
ಹೈಡ್ರೋಜನ್ ಇಂಧನ ಚಾಲಿತ ಬಸ್‌ಗಳು ಹೊರಸೂಸುವ ಪ್ರಮುಖ ಉಪಉತ್ಪನ್ನ ನೀರಿನ ಬಾಷ್ಪವಾಗಿರುವುದರಿಂದ ವಾಯುಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ. ಜೊತೆಗೆ ಕಚ್ಚಾ ತೈಲದ ಆಮದು ಮೇಲಿನ ಅವಲಂಬನೆ ತಗ್ಗಿ, ದೇಶದ ಆರ್ಥಿಕತೆಗೂ ಉತ್ತೇಜನ ಸಿಗಲಿದೆ ಎಂದು ಗಡ್ಕರಿ ಅಭಿಪ್ರಾಯಪಟ್ಟರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


