ಭಾರತೀಯ ಸಂಸ್ಕೃತಿಯಲ್ಲಿನ ‘ಗುರು-ಶಿಷ್ಯ ಪರಂಪರೆ’ಯು ಮಾನವಕುಲಕ್ಕೆ ಹಿಂದೂ ಧರ್ಮವು ನೀಡಿದ ಅದ್ವಿತೀಯ ಕೊಡುಗೆಯಾಗಿದೆ! ರಾಷ್ಟ್ರ ಮತ್ತು ಧರ್ಮವು ಸಂಕಷ್ಟದಲ್ಲಿರುವಾಗ ಧರ್ಮಸಂಸ್ಥಾಪನೆಯ ಕಾರ್ಯವನ್ನು ಇದೇ ‘ಗುರು-ಶಿಷ್ಯ’ ಪರಂಪರೆಯು ಮಾಡಿದೆ. ಗುರುಪೂರ್ಣಿಮೆಯ ನಿಮಿತ್ತ ಈ ಶ್ರೇಷ್ಠ ಗುರು-ಶಿಷ್ಯ ಪರಂಪರೆಯನ್ನು ಸ್ಮರಿಸುವುದು ಅತ್ಯಂತ ಅಗತ್ಯವಾಗಿದೆ. ಹಾಗೆಯೇ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಯಶಸ್ಸು ಸಾಧಿಸಲು ಗುರುಕೃಪೆ ಮತ್ತು ಸಾಧನೆಯ ಅವಶ್ಯಕತೆ ಇರುತ್ತದೆ, ಇದರ ಕುರಿತು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಗುರು-ಶಿಷ್ಯ ಪರಂಪರೆ
ಒಮ್ಮೆ ವಿದೇಶಿ ವ್ಯಕ್ತಿಯೊಬ್ಬರು ಸ್ವಾಮಿ ವಿವೇಕಾನಂದರಿಗೆ, ‘‘ಭಾರತವನ್ನು ಒಂದೇ ವಾಕ್ಯದಲ್ಲಿ ವರ್ಣಿಸುವುದಾದರೆ ಹೇಗೆ ಮಾಡುತ್ತೀರಿ?’’ ಎಂದು ಪ್ರಶ್ನಿಸಿದರು. ಆಗ ಸ್ವಾಮಿ ವಿವೇಕಾನಂದರು, ‘‘ಗುರು-ಶಿಷ್ಯ ಪರಂಪರೆ !’’ ಎಂದು ಉತ್ತರಿಸಿದರು. ‘ಗುರು-ಶಿಷ್ಯ ಪರಂಪರೆ’ಯು ಹಿಂದೂಗಳ ಲಕ್ಷಾಂತರ ವರ್ಷಗಳ ಚೈತನ್ಯಮಯ ಸಂಸ್ಕೃತಿಯಾಗಿದೆ; ಆದರೆ ಕಾಲದ ಪ್ರವಾಹದಲ್ಲಿ ರಜ-ತಮಪ್ರಧಾನ ಸಂಸ್ಕೃತಿಯ ಪ್ರಭಾವದಿಂದಾಗಿ ಈ ಮಹಾನ್ ಗುರು-ಶಿಷ್ಯ ಪರಂಪರೆಯು ಉಪೇಕ್ಷೆಗೊಳಗಾಗುತ್ತಿದೆ. ಗುರು-ಶಿಷ್ಯರ ಇಂತಹ ಸುಂದರ ಸಂಗಮದಿಂದ ಮಹಾನ್ ರಾಷ್ಟ್ರದ ನಿರ್ಮಾಣವಾದ ಅನೇಕ ಉದಾಹರಣೆಗಳು ಪುರಾಣಕಾಲದಿಂದ ಇತಿಹಾಸದವರೆಗೆ ಕಂಡುಬರುತ್ತವೆ. ಉದಾ. ಶ್ರೀರಾಮ ಮತ್ತು ವಸಿಷ್ಠ ಋಷಿ, ಪಾಂಡವರು ಮತ್ತು ಶ್ರೀಕೃಷ್ಣ. ಚಂದ್ರಗುಪ್ತ ಮೌರ್ಯನಿಗೆ ಆರ್ಯ ಚಾಣಕ್ಯರು ಗುರುವಾಗಿ ಮಾರ್ಗದರ್ಶನ ನೀಡಿ ಒಂದು ಬಲಿಷ್ಠ ರಾಷ್ಟ್ರವನ್ನು ಕಟ್ಟಿದರು.
‘ಗುರು-ಶಿಷ್ಯ ಪರಂಪರೆ’ ಭಾರತದ ವಿಶಿಷ್ಟತೆಯಾಗಿದೆ. ಅನೇಕ ಪರಕೀಯರ ಆಕ್ರಮಣಗಳ ಹೊರತಾಗಿಯೂ ಹಿಂದೂ ಧರ್ಮವು ಸಮರ್ಥವಾಗಿ ಉಳಿದುಕೊಂಡಿರುವುದು ಇದೇ ‘ಗುರು-ಶಿಷ್ಯ ಪರಂಪರೆ’ಯಿಂದಾಗಿ. ಇಂದು ಗುರು-ಶಿಷ್ಯ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಸಮಯ ಬಂದಿದೆ. ಅದಕ್ಕಾಗಿ ಭಾರತವು ಮತ್ತೊಮ್ಮೆ ಹಿಂದೂ ರಾಷ್ಟ್ರವಾಗುವುದು ಅಗತ್ಯವಾಗಿದೆ.
ಗುರುಪೂರ್ಣಿಮೆ ಮತ್ತು ಗುರುಪೂಜೆ
ಗುರುಪೂರ್ಣಿಮೆಯ ದಿನದಂದು ಶಿಷ್ಯರು ತಮ್ಮ ಗುರುಗಳ ಪಾದಪೂಜೆ ಮಾಡಿ ಶ್ರದ್ಧೆಯಿಂದ ಗುರುದಕ್ಷಿಣೆಯನ್ನು ಅರ್ಪಿಸುತ್ತಾರೆ. ಈ ದಿನದಂದು ಮಹರ್ಷಿ ವೇದವ್ಯಾಸರನ್ನು ಪೂಜಿಸುವ ಪರಂಪರೆ ಇದೆ. ಕುಂಭಕೋಣಂ ಮತ್ತು ಶೃಂಗೇರಿಯಲ್ಲಿ ವ್ಯಾಸಪೂಜೆಯ ವಿಶೇಷ ಉತ್ಸವವನ್ನು ಆಚರಿಸಲಾಗುತ್ತದೆ. ಸನ್ಯಾಸಿಗಳು ಈ ದಿನದಂದು ಶಂಕರಾಚಾರ್ಯರನ್ನು ವ್ಯಾಸಸ್ವರೂಪರೆಂದು ಭಾವಿಸಿ ಪೂಜಿಸುತ್ತಾರೆ. ಗುರುಪೂಜೆಗಾಗಿ ಸ್ನಾನದ ನಂತರ ಸಂಕಲ್ಪ ಮಾಡಿ ವ್ಯಾಸಪೀಠವನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಬ್ರಹ್ಮ, ಪರಾತ್ಪರಶಕ್ತಿ, ವ್ಯಾಸ, ಶುಕದೇವ, ಗೌಡಪಾದ, ಗೋವಿಂದಸ್ವಾಮಿ ಮತ್ತು ಶಂಕರಾಚಾರ್ಯರ ಷೋಡಶೋಪಚಾರ ಪೂಜೆಯನ್ನು ಮಾಡಲಾಗುತ್ತದೆ. ಹಾಗೆಯೇ ದೀಕ್ಷಾಗುರು ಮತ್ತು ಮಾತಾ-ಪಿತೃಗಳನ್ನು ಪೂಜಿಸುವ ಪದ್ಧತಿಯೂ ಇದೆ.
‘ಸಾಧನೆ ಮತ್ತು ಧರ್ಮ’ವು ಸಂಘಟನೆಯ ಅಡಿಪಾಯವಾಗಿದ್ದರೆ, ರಾಷ್ಟ್ರ-ಧರ್ಮ ಕಾರ್ಯದ ಭವನದ ಅಡಿಪಾಯವು ಸಾಧನೆಯಿಂದಾಗಿ ಭದ್ರವಾಗುತ್ತದೆ. ಸಾಧನೆಯಿಂದಲೇ ಯಾವುದೇ ಪರಿಸ್ಥಿತಿಯಲ್ಲಿ ಸ್ಥಿರವಾಗಿರಲು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಲಭಿಸುತ್ತದೆ. ಕಲಿಯುಗದಲ್ಲಿ ನಾಮಸ್ಮರಣೆಯೇ ಸರ್ವಶ್ರೇಷ್ಠ ಸಾಧನೆಯಾಗಿದೆ. ಭಗವಂತನ ನಾಮವೇ ನಮ್ಮನ್ನು ಉದ್ಧರಿಸುತ್ತದೆ. ಅದಕ್ಕಾಗಿಯೇ ಯಾರು ನಾಮಸಾಧನೆಯನ್ನು ಪ್ರಾರಂಭಿಸಿಲ್ಲವೋ, ಅವರು ಇಂದಿನಿಂದಲೇ ಕುಲದೇವತೆಯ ನಾಮಜಪದಿಂದ ಸಾಧನೆಯನ್ನು ಪ್ರಾರಂಭಿಸಬೇಕು. ಉದಾಹರಣೆಗೆ, ಕುಲದೇವಿ ಶ್ರೀ ಮಹಾಲಕ್ಷ್ಮಿ ಆಗಿದ್ದರೆ, ‘ಶ್ರೀ ಮಹಾಲಕ್ಷ್ಮ್ಯೈ ನಮಃ ।’ ಎಂದು ನಾಮಜಪ ಮಾಡಬೇಕು, ಕುಲದೇವಿ ಶ್ರೀ ರೇಣುಕಾಮಾತೆ ಆಗಿದ್ದರೆ, ‘ಶ್ರೀ ರೇಣುಕಾದೇವ್ಯೈ ನಮಃ ।’ ಎಂದು ನಾಮಜಪ ಮಾಡಬೇಕು. ಒಂದು ವೇಳೆ ಕುಲದೇವತೆ ತಿಳಿಯದಿದ್ದರೆ, ‘ಶ್ರೀ ಕುಲದೇವತಾಯೈ ನಮಃ ।’ ಎಂದು ನಾಮಜಪ ಮಾಡಬೇಕು. ಗುರುಮಂತ್ರ ಪಡೆದವರು ಗುರುಮಂತ್ರವನ್ನು ಹೆಚ್ಚೆಚ್ಚು ಜಪಿಸಬೇಕು. ಸಾಧನೆ ಮತ್ತು ಗುರುಕೃಪೆಯೇ ಸಂಘಟನೆಯ ಅದೃಶ್ಯ ಶಕ್ತಿಯಾಗಿದೆ.
ಧರ್ಮ ಮತ್ತು ರಾಷ್ಟ್ರ ಒಂದೇ ನಾಣ್ಯದ ಎರಡು ಮುಖಗಳು!
ಸನಾತನ ಧರ್ಮ ಮತ್ತು ರಾಷ್ಟ್ರ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಹಿಂದೂ ಧರ್ಮವಿಲ್ಲದಿದ್ದರೆ ರಾಷ್ಟ್ರವು ಉಳಿಯುವುದಿಲ್ಲ ಮತ್ತು ರಾಷ್ಟ್ರವಿಲ್ಲದಿದ್ದರೆ ಧರ್ಮಪಾಲನೆ ಮಾಡಲು ಸಾಧ್ಯವಿಲ್ಲ. ಇಂದು ಇಡೀ ವಿಶ್ವವು ಮೂರನೇ ಮಹಾಯುದ್ಧದ ಹೊಸ್ತಿಲಲ್ಲಿದೆ. ಇದರೊಂದಿಗೆ ಅನೇಕ ನೈಸರ್ಗಿಕ ವಿಕೋಪಗಳು ಎದುರಾಗಿವೆ. ಎಲ್ಲೋ ಯುದ್ಧ, ಎಲ್ಲೋ ಆಂತರಿಕ ಅರಾಜಕತೆ ಮತ್ತು ಅಸ್ಥಿರತೆ, ಎಲ್ಲೋ ಅತಿವೃಷ್ಟಿ, ಎಲ್ಲೋ ಅನಾವೃಷ್ಟಿ, ಇನ್ನು ಯುರೋಪ್‌ನಂತಹ ದೇಶಗಳು ತೀವ್ರ ಉಷ್ಣಹವೆಯಿಂದ ತತ್ತರಿಸುತ್ತಿವೆ. ಮೇಲ್ನೋಟಕ್ಕೆ ಇದು ಸಾಮಾನ್ಯವೆಂದು ತೋರಿದರೂ, ಧರ್ಮಗ್ರಂಥಗಳಲ್ಲಿ ಇದಕ್ಕೆ ಕಾರಣಗಳನ್ನು ಹೇಳಲಾಗಿದೆ. ಧರ್ಮಗ್ರಂಥಗಳ 'ಸಪ್ತ ಈತಿ' (ಏಳು ವಿಪತ್ತುಗಳು) ಪ್ರಕಾರ:
ಅತಿವೃಷ್ಟಿರನಾವೃಷ್ಟಿಃ ಶಲಭಾ ಮೂಷಕಾಃ ಶುಕಾಃ ।
ಸ್ವಚಕ್ರಂ ಪರಚಕ್ರಂ ಚ ಸಪ್ತೈತಾ ಈತಯಃ ಸ್ಮೃತಾಃ ॥'
ಅರ್ಥ : ಅತಿವೃಷ್ಟಿ (ಹೆಚ್ಚಿನ ಮಳೆ), ಅನಾವೃಷ್ಟಿ (ಬರಗಾಲ), ಮಿಡತೆಗಳ ಕಾಟ, ಇಲಿಗಳ ಉಪಟಳ, ಗಿಳಿಗಳಿಂದ (ಪಕ್ಷಿಗಳಿಂದ) ಬೆಳೆಹಾನಿ, ಆಂತರಿಕ ಕಲಹ (ಅಂತರ್ಯುದ್ಧ) ಮತ್ತು ಪರಕೀಯರ ಆಕ್ರಮಣ — ಈ ಏಳು ರೀತಿಯ ಆಪತ್ತುಗಳನ್ನು 'ಸಪ್ತ ಈತಿ' ಎಂದು ಕರೆಯಲಾಗುತ್ತದೆ.
ಇದರರ್ಥ ಏನೆಂದರೆ, ಸಮಾಜದಲ್ಲಿ ಧರ್ಮ, ನೀತಿ ಮತ್ತು ಸುಶಾಸನದ ರ್‍ಹಾಸವಾದಾಗ (ಕುಸಿತವಾದಾಗ), ಪ್ರಕೃತಿ, ಕೃಷಿ, ಆರ್ಥಿಕತೆ ಮತ್ತು ರಾಷ್ಟ್ರವ್ಯವಸ್ಥೆಯ ಮೇಲೆ ವಿವಿಧ ರೀತಿಯ ಸಂಕಟಗಳು ಎದುರಾಗುತ್ತವೆ. ಈ ರೀತಿಯಾಗಿ ಧರ್ಮ ಮತ್ತು ರಾಷ್ಟ್ರ ಪರಸ್ಪರ ಪೂರಕವಾಗಿವೆ.
ಮಹಾಭಾರತದ ಸಮಯದಲ್ಲಿ ಕೇವಲ ಕೌರವರು-ಪಾಂಡವರು ಮತ್ತು ಅವರ ಸೇನೆಗಳ ನಡುವೆ ಯುದ್ಧ ನಡೆಯಿತು. ಇಂದು ಕಲಿಯುಗದಲ್ಲಿ ಈ ಧರ್ಮಯುದ್ಧದ ಪ್ರಭಾವವು ಎಲ್ಲರ ಮೇಲಿದೆ. ಇದರಲ್ಲಿ ಯಾರೂ ತಟಸ್ಥರಾಗಿ ಉಳಿಯಲು ಸಾಧ್ಯವಿಲ್ಲ. ಅಂದೂ ಮತ್ತು ಇಂದೂ ಕೇವಲ ಎರಡೇ ಆಯ್ಕೆಗಳಿದ್ದವು – ಧರ್ಮ ಮತ್ತು ಅಧರ್ಮ! ಇಂತಹ ಸಮಯದಲ್ಲಿ ಧರ್ಮದ ಪರವಾಗಿ ನಿಂತು ಸಮರ್ಪಣೆ ಮಾಡುವುದು ಇಂದಿನ ಕಾಲದ ಸಾಧನೆಯಾಗಿದೆ ಮತ್ತು ಅದೇ ಆಧ್ಯಾತ್ಮಿಕ ಉನ್ನತಿಯ ಅಥವಾ ಮುಕ್ತಿಯ ಮಾರ್ಗವೂ ಆಗಿದೆ. ಮಹಾಭಾರತದ ಸಮಯದಲ್ಲಿ ಅರ್ಜುನನು ಗೊಂದಲದಲ್ಲಿದ್ದಾಗ, ಭಗವಾನ್ ಶ್ರೀಕೃಷ್ಣನು ‘ಅಧರ್ಮದ ವಿರುದ್ಧ ಹೋರಾಡುವುದೇ ಧರ್ಮ’ ಎಂದು ಉಪದೇಶಿಸಿದನು. ಇಂದು ಗುರುತತ್ತ್ವಕ್ಕೂ ಇದೇ ಅಪೇಕ್ಷಿತವಾಗಿದೆ — ‘ಸಾಧನೆ ಮಾಡಿ ತನ್ನಲ್ಲಿನ ಬ್ರಾಹ್ಮತೇಜವನ್ನು ಹೆಚ್ಚಿಸುವುದು ಮತ್ತು ಅಧರ್ಮದ ವಿರುದ್ಧ ಹೋರಾಡಲು ತನ್ನೊಳಗೆ ಕ್ಷಾತ್ರತೇಜವನ್ನು ಜಾಗೃತಗೊಳಿಸುವುದು.’
‘ನಾವು ರಾಷ್ಟ್ರ-ಧರ್ಮದ ಕಾರ್ಯದಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ. ಪೂರ್ಣ ಸಾಮರ್ಥ್ಯದಿಂದ ರಾಷ್ಟ್ರ-ಧರ್ಮ ರಕ್ಷಣೆಯ ಕಾರ್ಯವನ್ನು ಮಾಡೋಣ.’ ಹಾಗೆ ಮಾಡುವುದೇ ನಿಜವಾದ ಗುರುದಕ್ಷಿಣೆಯಾಗಲಿದೆ. ‘ಅದಕ್ಕಾಗಿ ಶ್ರೀ ಗುರುಗಳು ನಮಗೆ ಶಕ್ತಿಯನ್ನು ನೀಡಲಿ’, ಇದೇ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ!
ಸಂಕಲನಕಾರರು :
ಶ್ರೀ.ಮೋಹನ್ ಗೌಡ ,
ರಾಜ್ಯ ವಕ್ತಾರರು,ಹಿಂದೂ ಜನಜಾಗೃತಿ ಸಮಿತಿ
ಸಂಪರ್ಕ ಸಂಖ್ಯೆ: 7204082609


