ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ (85) ಅವರು ಶನಿವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿದ್ದ (ICU) ಅವರಿಗೆ ಇಂದು ಸಂಜೆ 4:30ರ ಸುಮಾರಿಗೆ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸಾರ್ಥಕ ದಾಂಪತ್ಯ ಜೀವನ:
ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಮೂಲದವರಾದ ಚೆನ್ನಮ್ಮ ಅವರು, 1954ರ ಮೇ 25ರಂದು ಎಚ್.ಡಿ. ದೇವೇಗೌಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುದೀರ್ಘ 7 ದಶಕಗಳ ಕಾಲ ದೇವೇಗೌಡರಿಗೆ ನೆರಳಾಗಿ ನಿಂತಿದ್ದ ಅವರು ಸರಳತೆ ಹಾಗೂ ದೈವಭಕ್ತಿಗೆ ಹೆಸರಾಗಿದ್ದರು. ಮೃತರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಸೇರಿದಂತೆ ಆರು ಜನ ಮಕ್ಕಳನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಗಣ್ಯರಿಂದ ತೀವ್ರ ಸಂತಾಪ
ಶ್ರೀಮತಿ ಚೆನ್ನಮ್ಮ ಅವರ ನಿಧನಕ್ಕೆ ನಾಡಿನ ಪ್ರಮುಖ ಮಠಾಧೀಶರು ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ:
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೊದಲು 'ಎಕ್ಸ್' ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡ ಅವರು, ನಂತರ ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇಳಿವಯಸ್ಸಿನಲ್ಲಿ ಸಂಗಾತಿಯನ್ನು ಕಳೆದುಕೊಂಡು ಶೋಕದಲ್ಲಿದ್ದ ದೇವೇಗೌಡರ ಪಕ್ಕದಲ್ಲೇ ಕುಳಿತು, ಅವರ ಕೈಹಿಡಿದು ಸಾಂತ್ವನ ಹೇಳಿದರು. ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಮಾನವೀಯತೆ ಮೆರೆದ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹೆಚ್.ಡಿ. ರೇವಣ್ಣ ಅವರಿಗೂ ಧೈರ್ಯ ತುಂಬಿದರು.
ವೈ.ಎಸ್.ವಿ ದತ್ತಾ ಸಂತಾಪ:
ಚೆನ್ನಮ್ಮ ನಿಧನದಿಂದ ದೇವೇಗೌಡರ ಇಡೀ ಕುಟುಂಬಕ್ಕೆ ದುಃಖದ ಕತ್ತಲು ಕವಿದಿದೆ. ದೇವೇಗೌಡರ ಹಾಗೂ ಅವರ ಕುಟುಂಬದ ಹಿಂದೆ ಚೆನ್ನಮ್ಮ ಒಂದು ಬಲವಾದ ಒಂದು ಶಕ್ತಿಯಾಗಿ ನಿಂತಿದ್ದರು. ಅವರು ರಾಜಕೀಯದಲ್ಲಿ ಎಂದೂ ಮುಂದೆ ಬಂದಿರಲಿಲ್ಲ. ಆದರೆ, ದೊಡ್ಡ ದೈವಭಕ್ತೆಯಾಗಿದ್ದ ಚೆನ್ನಮ್ಮ ಅವರ ಬಗ್ಗೆ ಹಲವು ಆಶ್ಚರ್ಯಕರ ವಿಷಯಗಳನ್ನು ಮಾಜಿ ಶಾಸಕ ವೈ.ಎಸ್.ವಿ ದತ್ತಾ ಅವರು ಹಂಚಿಕೊಂಡಿದ್ದಾರೆ.
ಪೇಜಾವರ ಶ್ರೀಗಳ ಸಂತಾಪ:
"ಶ್ರೀಮತಿ ಚೆನ್ನಮ್ಮನವರ ದೈವಶ್ರದ್ಧೆ ಅಪಾರವಾದುದು. ಪತಿಯ ನೆರಳಾಗಿ ಸುದೀರ್ಘ ಸಾರ್ಥಕ ದಾಂಪತ್ಯ ಜೀವನ ನಡೆಸಿದ ಆದರ್ಶ ಮಹಿಳೆ ಅವರು. ಉಡುಪಿ ಶ್ರೀ ಕೃಷ್ಣ, ಶ್ರೀಮಠ ಹಾಗೂ ನಮ್ಮ ಗುರುಗಳಾದ ಶ್ರೀ ವಿಶ್ವೇಷತೀರ್ಥರ ಮೇಲೆ ಅವರಿಗೆ ಅಪಾರ ಭಕ್ತಿ ಇತ್ತು. ಭಗವಂತನು ಅವರಿಗೆ ಸದ್ಗತಿಯನ್ನು ಕರುಣಿಸಲಿ" ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪ್ರಾರ್ಥಿಸಿದ್ದಾರೆ.
ಪುತ್ತಿಗೆ ಶ್ರೀಗಳ ಸಂತಾಪ:
ಮಾಜಿ ಪ್ರಧಾನಿ ದೇವೇಗೌಡರ ಪತ್ನಿಯವರ ಅಗಲಿಕೆಗೆ ಉಡುಪಿ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


