ಡಾ.ಎನ್.ಎಸ್.ಎ.ಎಮ್.ಪ್ರಥಮದರ್ಜೆ ಕಾಲೇಜಿನಲ್ಲಿ ಒರಿಯಂಟೇಶನ್ ಕಾರ್ಯಕ್ರಮ ಉದ್ಘಾಟನೆ

Upayuktha
0

 


ಕಾರ್ಕಳ: ಇತ್ತೀಚೆಗೆ ಕಾರ್ಕಳದ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಐದು ದಿನಗಳ ಒರಿಯೆಂಟೇಶನ್ ಕೌಶಲ್ಯ ತರಬೇತಿ ಶಿಬಿರವನ್ನು ಎಲ್ಸವೇರ್ ಟೆಕ್ನೋಲಾಜಿಯಾದ ಎಚ್.ಆರ್ ಲೀಡರ್ ರೋಹಿತ್ ಕ್ಯಾಸ್ಟಲಿನೋ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಿಟ್ಟೆಯಂತಹ ಪುಟ್ಟ ಹಳ್ಳಿಯಲ್ಲಿ ಈ ರೀತಿಯ ಸುಸಜ್ಜಿತ ಕಾಲೇಜು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ, ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಪಡೆದಂತೆ ಪದವಿ ಶಿಕ್ಷಣವನ್ನು ಗ್ರಹಿಸಬಾರದು, ಪದವಿಯ ಸಂದರ್ಭದಲ್ಲಿ ಶಿಸ್ತು, ಜ್ಞಾನಾಕಾಂಕ್ಷೆ, ಬದುಕಿನ ಕುರಿತ ನಿರ್ಧಾರಗಳನ್ನೆಲ್ಲ ನಮ್ಮೊಳಗಿಂದಲೇ ಬರಬೇಕು ಎಂದು ತಿಳಿಸಿದರು, ಹಾಗೆಯೇ ಮಾತನಾಡುತ್ತ ಪದವಿ ಶಿಕ್ಷಣ ಅನ್ನುವುದು ಕೇವಲ ಅಂಕಪಟ್ಟಿಯನ್ನು ಗಳಿಸಲು ಸೀಮಿತವಾದದ್ದಲ್ಲ ಅದು ನಿಜವಾಗಿಯೂ ಮುಂದಿನ ನಮ್ಮ ಜೀವನದ ತಯಾರಿಯ ಸಮಯ ಹಾಗಾಗಿ ಶಿಸ್ತು, ಸಂಯಮ, ಬದ್ದತೆಯಿಂದ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿ ಎಂದು ಕರೆನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು ಕ್ಯಾಂಪಸ್ ನ ಡೆಪ್ಯುಟಿ ರಿಜಿಸ್ಟ್ರಾರ್ ಡಾ. ಸುಮಾ ಬಲ್ಲಾಳ್ ಮಾತನಾಡಿ ಪ್ರಜ್ಞಾವಂತಿಕೆಯೇ ಶಿಕ್ಷಣದ ಮಹತ್ವದ ಉದ್ದೇಶ ಹಾಗಾಗಿ ವಿದ್ಯಾರ್ಥಿಗಳು ಸಮಾಜ ಬಾಹಿರ ಚಟುವಿಟಿಕೆಗಳು ಮತ್ತು ಚಟಗಳ ದಾಸರಾಗದೇ  ಶಿಕ್ಷಣ, ಕೌಶಲ್ಯ, ಉದ್ಯೋಗಗಳ ಕಡೆಗೆ ಗಮನ ನೀಡಬೇಕು. ನಮ್ಮ ಕುರಿತ ಎಚ್ಚರ,ಅರಿವು, ಪ್ರಜ್ಞೆಗಳೇ ನಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಗೌರವ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಆಫ್ ಕ್ಯಾಂಪಸ್ ಸೆಂಟರಿನ ಡೆಪ್ಯುಟಿ ರಿಜಿಸ್ಟ್ರಾರ್ ಡಾ. ರೇಖಾ ಭಂಡಾರ್ಕರ್ ಮಾತನಾಡಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯಕ್ಕೆ ಸ್ವಾಗತಿಸಿ, ಶುಭಾಶಯ ಕೋರಿದರು. 

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಆಫ್ ಕ್ಯಾಂಪಸ್ ಸೆಂಟರಿನ ಪರೀಕ್ಷಾಂಗ ನಿಯಂತ್ರಕ ಡಾ.ಸುಬ್ರಹ್ಮಣ್ಯ ಭಟ್ ವೇದಿಕೆಯಲ್ಲಿ ಉಪಸ್ಥಿರಿದ್ದರು.

ಐದು ದಿನಗಳ ಕಾಲ ನಡೆದ ಈ ಕಾರ್ಯಗಾರದಲ್ಲಿ ಮೇಜರ್ ರಾಧಕೃಷ್ಣ, ಡಾ.ಇನ್ನಾ ಚಂದ್ರಕಾಂತ್ ರಾವ್, ಡಾ. ದೇವಿಪ್ರಭಾ ಆಳ್ವಾ, ಪ್ರೀತಿ ಕೀರ್ತಿ ಡಿ’ಸೋಜಾ, ಕಾರ್ಕಳ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಶ್ರೀ ಪ್ರಸನ್ನ ಎಂ.ಎಸ್, ಶ್ರೀ ಸುಭಾಶ್ ಬಂಗೇರ, ಶ್ರೀ ಭರತ್ ಜಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಕುಮಾರಿ ಬಿ.ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕ ಪ್ರಕಾಶ್ ಬಿ ವಂದಿಸಿದರು, ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ಶ್ವೇತಾ ಭರತ್ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ವಿದ್ಯಾರ್ಥಿ ಉದ್ಯೋಗ ನಿರ್ವಹಣಾ ಅಧಿಕಾರಿ ಶ್ರೀ ನಾಯಕ್ ಚಿನ್ಮಯ್ ಸದಾನಂದ ಕಾರ್ಯಕ್ರಮವನ್ನು ಸಂಯೋಜಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top