ದೆಹಲಿಯ ಜಂತರ್ ಮಂತರ್ 'ಉಪವಾಸ ಸತ್ಯಾಗ್ರಹ' ಎಂಬ ಗೇಮ್‌ನ ಕ್ರೀಡಾಂಗಣ ಆಗಬಾರದು!!

Upayuktha
0



NEET ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ, ಶಿಕ್ಷಣ ಮಂತ್ರಿಗಳ ರಾಜಿನಾಮೆಗೆ ಒತ್ತಾಯಿಸಿ, ದೆಹಲಿಯ ಜಂತರ್ ಮಂತರ್‌ನಲ್ಲಿ ನೆಡೆಸುತ್ತಿದ್ದ ಸೋನಂ ವಾಂಗ್ಚುಕ್‌ರವರ ಉಪವಾಸ ಸತ್ಯಾಗ್ರಹ, ದಿನ ಕಳೆದಂತೆ ಏನೇನೋ ತಿರುವು ತೆಗೆದುಕೊಂಡು, ಯಾವ ಯಾವುದೋ ಸಿದ್ಧಾಂತದ ಅಜೆಂಡಗಳ ಸಭೆಯಾದ ಸಮಯದಲ್ಲಿ, ಮೂಲ ಪ್ರತಿಭಟನೆಯ ಉದ್ದೇಶ ಗೌಣವಾಗಿ, ಎಡ ಪಂಥಿಯರ ಅಸಂಬದ್ದ ಪ್ರಲಾಪ, ದೇವರು ಧರ್ಮಗಳನ್ನು ತಂದು ಅವಹೇಳನ, 370 ಆರ್ಟಿಕಲ್ ಮರುಸ್ಥಾಪನೆ, ಜಾತಿ-ಧರ್ಮಗಳಿಂದ ಒಡಕು ಮೂಡಿಸುವ ಅಬ್ಬರದ ಭಾಷಣಗಳ ತಾಣವಾಯ್ತು ಜಂತರ್ ಮಂತರ್.


ಅಸಂಬದ್ದ ಮತ್ತು ಅಪ್ರಸ್ತುತ ಭಾಷಣಗಳ ವೀಡಿಯೋ ತುಣುಕನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿ, ಉಪವಾಸ ಸತ್ಯಾಗ್ರಹ ಪ್ರತಿಭಟನೆ ಹೇಗೆ ಹಳ್ಳ ಹಿಡಿಯುತ್ತಿದೆ ಎಂದು ಅಭಿಪ್ರಾಯಿಸಿದಾಗ, ಪರಿಚಿತ ಕಾರ್ತಿಕ್ ಎನ್ನುವವರು ಪ್ರತಿಕ್ರಿಯಿಸಿ, ಪ್ರಶ್ನಿಸಿದ್ದು ಹೀಗೆ:


Neet ಪೇಪರ್ leak ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಏನು? ಹೋರಾಟಗಾರರ ಅಜೆಂಡಾ ಪ್ರಶ್ನಿಸುವ ಮೊದಲು ಸರ್ಕಾರದ failure ಅನ್ನು ಪ್ರಶ್ನಿಸಬೇಕಲ್ಲವೇ? ನೈತಿಕ ಹೊಣೆ ಹೊತ್ತು education minister ರಾಜೀನಾಮೆ ಕೊಡಬೇಕಿತ್ತು." ಎಂದು.


ಈ ಪ್ರತಿಕ್ರಿಯೆ ಓದಿದಾಗ, ಪಕ್ಕನೆ "ಹೌದಲ್ವಾ?" ಅಂತ ಅನ್ನಿಸಿದರೂ, ಇಡೀ ಪ್ರಕರಣದ ABCD ಯಿಂದ XYZ ವರೆಗೆ ಕೂಲಂಕಷವಾಗಿ ಗಮನಿಸಿದಾಗ ದೊರೆತ ಮಾಹಿತಿಗಳು, ಘಟನೆಗಳು, ಪರಿಣಾಮಗಳು ಅಸಂಬದ್ದ ಮತ್ತು ಅಪ್ರಸ್ತುತ ಭಾಷಣಗಳ ವೀಡಿಯೋ ತುಣುಕನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿ, ಉಪವಾಸ ಸತ್ಯಾಗ್ರಹ ಪ್ರತಿಭಟನೆ ಹೇಗೆ ಹಳ್ಳ ಹಿಡಿಯುತ್ತಿದೆ ಎಂದು ಅಭಿಪ್ರಾಯಿಸಿದ್ದು ಸರಿ ಇದೆ ಅನ್ನುವ ತೀರ್ಮಾನಕ್ಕೆ ಬರುವಂತಾಯ್ತು!!


ಕಾರ್ತಿಕ್‌ರವರ ಮೂರು ಪ್ರಶ್ನೆಗಳನ್ನು ಇಟ್ಟುಕೊಂಡು ಬರೆದ, ಸುದೀರ್ಘವಾಗಿ ಅನೇಕ *Read more* ಗ್ರೀನ್ ಅಕ್ಷರಗಳನ್ನು ಹೊಂದಿದ ಒಂದು ಬರಹವನ್ನು ಸೆಂಡ್ ಮಾಡಿದೆ.  


ಪ್ರಶ್ನೆ : "Neet ಪೇಪರ್ leak ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಏನು?"

೧) CBI ತನಿಖೆಗೆ ಆದೇಶ ನೀಡಿದೆ.


೨) ಮತ್ತೆ leak ಆಗದಂತೆ ಸಮಸ್ತ ಭದ್ರತೆಯೊಂದಿಗೆ ಮರು ಪರೀಕ್ಷೆ ನೆಡೆಸಿ ಯಶಸ್ವಿಯಾಗಿದೆ.


೩) ನೀಟ್ ಪೇಪರ್ ಲೀಕ್ ಹಗರಣಕ್ಕೆ ಸಂಬಂಧಿಸಿದಂತೆ ಯಶ್ ಯಾದವ್ ಎಂಬಾತನನ್ನು ಬಂಧಿಸಲಾಗಿದೆ. ಈತ ಪ್ರಶ್ನೆ ಪತ್ರಿಕೆ ಹಂಚಿಕೆ ಮತ್ತು ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಯಾಗಿದ್ದಾನೆ. ಆರೋಪಿ ಆಗಿರುವುದರಿಂದ (ಅಪರಾಧಿ ಅಂತ ನಿರ್ಣಯ ಆಗುವವರೆಗೆ ಆತ ಆರೋಪಿ ಮಾತ್ರ ಆಗಿರುತ್ತಾನೆ) ಆತನನ್ನು ಬಂಧನದಲ್ಲಿಟ್ಟಿದ್ದರೂ ಸಹ, ನ್ಯಾಯಾಲಯವು ಆತನಿಗೆ ಜೂನ್ 21 ರಂದು ನಡೆದ ಮರುಪರೀಕ್ಷೆಯನ್ನು ಬರೆಯಲು ಅನುಮತಿ ನೀಡಿತ್ತು.


೪) ಅಲ್ಲದೆ, ಸುಮಾರು 13ಕ್ಕೂ ಹೆಚ್ಚು ಜನರನ್ನು ಇದುವರೆಗೆ ಬಂಧಿಸಿದೆ. ಬಂಧಿತರಲ್ಲಿ ರಾಜಸ್ಥಾನ, ಬಿಹಾರ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.


೫) ತನಿಖೆ ನೆಡೆಯುತ್ತಿದೆ.


*****


ಪ್ರಶ್ನೆ : "ಹೋರಾಟಗಾರರ ಅಜೆಂಡಾ ಪ್ರಶ್ನಿಸುವ ಮೊದಲು ಸರ್ಕಾರದ failure ಅನ್ನು ಪ್ರಶ್ನಿಸಬೇಕಲ್ಲವೇ?"


೧) ಹೌದು. ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ leak ಆದಾಗ, ಪತ್ರಿಕೆಯಲ್ಲಿ ಬಂದ ಒಂದು ವ್ಯಂಗ್ಯ ಚಿತ್ರದೊಂದಿಗೆ ನನ್ನ ಪ್ರಶ್ನಿಸುವ ಅಭಿಪ್ರಾಯದೊಂದಿಗೆ, ಹಗರಣವನ್ನು ಕಂಡಿಸುವ ಬರಹ ಒಂದನ್ನು ಪ್ರಕಟಿಸಿದ್ದೇನೆ.


೨) ಯಾವುದೇ ಸರಕಾರದ ಯಾವುದೇ failureಗಳು ಸಮರ್ಥನೀಯವಲ್ಲ. ಅದನ್ನು ಖಂಡಿಸಬೇಕು, ಪ್ರಶ್ನಿಸಬೇಕು. ಒಂದು ಪಕ್ಷಕ್ಕೆ, ಒಬ್ಬ ವ್ಯಕ್ತಿಗೆ ಓಟ್ ಹಾಕಿದ್ದೇನೆ ಎನ್ನುವ ಕಾರಣಕ್ಕೋ, ಅಥವಾ ಗೆದ್ದ ಅಭ್ಯರ್ಥಿ ನನ್ನ ಪರಿಚಿತ, ವಿಶ್ವಾಸಿ, ಸಂಬಂಧಿ.... ಎನ್ನುವ ಕಾರಣಕ್ಕೋ, ಪಕ್ಷದ ಅನೇಕ ಸಿದ್ಧಾಂತಗಳನ್ನು ಒಪ್ಪಿದ್ದೇನೆ ಅನ್ನುವ ಕಾರಣಕ್ಕೋ ಸರಕಾರಗಳ failureಗಳನ್ನು ಖಂಡಿಸದೆ, ಪ್ರಶ್ನಿಸದೆ ಮೌನವಾಗಿರಬಾರದು. ರೈತರ ಸಮಸ್ಯೆ, ಮೂಲಭೂತ ಸೌಕರ್ಯಗಳ ಸಮಸ್ಯೆ, ವಿದೇಶಿ ಅಕ್ರಮ ಅಡಿಕೆ ಆಮದು ಸಮಸ್ಯೆ, ಆನೆ ದಾಳಿ ಸಮಸ್ಯೆ.... ಎಲ್ಲ ಸಂಸದರ್ಭಗಳಲ್ಲೂ ನಾನು ಒಪ್ಪಿರುವ ಸಿದ್ಧಾಂತದ ಪಕ್ಷ, ನಾನು ಮತ ಹಾಕಿದ ಪಕ್ಷ, ನನ್ನ ಪರಿಚಿತ/ವಿಶ್ವಾಸದ/ಸಂಬಂಧಿ ಜನಪ್ರತಿನಿಧಿ ಇರುವ ಸರಕಾರ ಎನ್ನದೆ ಪ್ರಶ್ನಿಸುವುದು, ಖಂಡಿಸುವುದು, ಪ್ರತಿಭಟಿಸುವುದು ಮಾಡಲೇಬೇಕು. ಅದು ಮತದಾರನಿಗೆ ಸಂವಿಧಾನ ನೀಡಿದ ಹಕ್ಕು ಮತ್ತು ಕರ್ತವ್ಯ. ಜಾಲ ತಾಣಗಳಲ್ಲಿ ಅಕ್ಷರ ಪ್ರತಿಭಟನೆಗಳು, ಪ್ರಶ್ನೆಗಳು ನಿರಂತರವಾಗಿವೆ. ಸಂಬಂಧಿಸಿದವರಿಗೆ ಅದನ್ನು ಕಳಿಸುವ ಕ್ರಿಯೆಯೂ ನೆಡೆಯುತ್ತಿದೆ.


****


ಪ್ರಶ್ನೆ : "ನೈತಿಕ ಹೊಣೆ ಹೊತ್ತು education minister ರಾಜೀನಾಮೆ ಕೊಡಬೇಕಿತ್ತು?"


೧) ಇದು ಅವರವರ ಅಭಿಪ್ರಾಯ.


೨) ರಾಜಿನಾಮೆ ಕೊಡಲು ಒತ್ತಾಯಿಸಬಹುದು.


೩) ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಲು ಮಂತ್ರಿ ಮುಂದಾದರೆ ಅದನ್ನೂ ವಿರೋಧಿಸಬಹುದು ಅಥವಾ ಒಪ್ಪಬಹುದು.


೪) failure, ಹಗರಣ ಮತ್ತು ಸಾಂದರ್ಭಿಕ ಘಟನೆಗಳಿಗೆ ರಾಜಿನಾಮೆ ಸರಿಯಾದ ಪರಿಹಾರವೇ? ಎನ್ನುವುದನ್ನೂ ಮತದಾರ, ಪ್ರಜೆ ಯೋಚಿಸಬೇಕು.  


****


ಕಾರ್ತಿಕ್‌ರವರಿಗೆ ಹೀಗೆ ಉತ್ತರ ಕೊಟ್ಟ ಮೇಲೂ, ಮುಂದುವರೆದು, ಜಂತರ್ ಮಂತರ್‌ನಲ್ಲಿನ 'ರಾಜಿನಾಮೆಗಾಗಿ (ಅದೇ ಮೊದಲ ಉದ್ದೇಶ) ಉಪವಾಸ ಸತ್ಯಾಗ್ರಹ'ದ ಬಗ್ಗೆ ಸ್ವಲ್ಪ ವಿವರಣೆಯನ್ನು ವಿಸ್ತರಿಸಿ, ನಿರೂಪಿಸಿ, ಅಭಿಪ್ರಾಯಿಸಿದ್ದು ಹೀಗೆ:


ಇಷ್ಟು ಹಿನ್ನಲೆಯಲ್ಲಿ, NEET ಪರಿಕ್ಷೆಯ ಪ್ರಶ್ನೆ ಪತ್ರಿಕೆ ಪ್ರಕರಣದ *ಪ್ರಶ್ನೆ ಪತ್ರಿಕೆಗೆ* ಶಿಕ್ಷಣ ಮಂತ್ರಿಯ ರಾಜಿನಾಮೆ *ಉತ್ತರ* ಅಂತ ಅನ್ನಿಸುತ್ತಿಲ್ಲ.  


ಸಾಂವಿಧಾನಿಕವಾಗಿಯೂ, ಕಾನೂನಾತ್ಮಕವಾಗಿಯೂ ಸದರಿ ಪ್ರಕರಣದಲ್ಲಿ, ಮಂತ್ರಿಯೊಬ್ಬನು ಆರೋಪಿಯೂ ಅಲ್ಲ, ಅಪರಾಧಿಯೂ ಅಲ್ಲ.  ಅಂದರೆ, ನೇರ ಮಂತ್ರಿಯೇ ಪ್ರಕರಣದಲ್ಲಿ ಬಾಗೀದಾರನಲ್ಲ.  ಆದುದರಿಂದ ರಾಜಿನಾಮೆ *ಉತ್ತರ* ಆಗುವುದಿಲ್ಲ.  


ಆದರೂ ಮತದಾರ ಮಂತ್ರಿಯ  ರಾಜಿನಾಮೆಗೆ ಅಭಿಪ್ರಾಯಿಸಿ, ಬೇಡಿಕೆ ಸಲ್ಲಿಸಬಹುದು ಅಥವಾ ಒತ್ತಾಯಿಸಬಹುದು ಅಷ್ಟೆ.  "ರಾಜಿನಾಮೆ ಕೊಡ ತಕ್ಕದ್ದು" ಅಂತ ಹೇರಿಕೆ ಮಾಡುವ ಅವಕಾಶ ಮತದಾರನಿಗೆ ಇರುವುದಿಲ್ಲ.  


ಮಂತ್ರಿಯ Failure, ಮಂತ್ರಿ ಮಾಡಿದ ಅಪರಾಧ ಆಗುವುದಿಲ್ಲ, ಕಾನೂನಾತ್ಮಕವಾದ ಆರೋಪವೂ ಆಗುವುದಿಲ್ಲ.  Failure ಅಲ್ಲದ ಅಪರಾಧ ಪ್ರಕರಣದಲ್ಲಿ ಮಂತ್ರಿಯೊಬ್ಬ ನೇರ ಬಾಗೀದಾರನಾದರೆ, ಪಾಲುದಾರನಾದರೆ, ಫಲಾನುಭವಿಯಾದರೆ... ನೋ ಡೌಟ್, ಆತ ರಾಜಿನಾಮೆ ಕೊಡಬೇಕು(ವಾಲ್ಮೀಕಿ ಹಗರಣ, ದೆಹಲಿಯ ಹಿಂದಿನ ಮುಖ್ಯಮಂತ್ರಿಯ ಕಿಕ್‌ಬ್ಯಾಕ್ ಹಗರಣ.... ಇತ್ಯಾದಿ)


ಸಂವಿಧಾನದಲ್ಲಿ, ಮಂತ್ರಿ ಆಗಲು ವಿದ್ಯಾರ್ಹತೆಯ ಅಂಶ ಇಲ್ಲದಿರುವುದೂ ಒಂದು ಸಮಸ್ಯೆ.


ಈ ಹಿನ್ನಲೆಯಲ್ಲಿ, NEET ಪರೀಕ್ಷೆ ಪ್ರಶ್ನೆ ಪತ್ರಿಕೆ ಪ್ರಕರಣದಲ್ಲಿ ಶಿಕ್ಷಣ ಮಂತ್ರಿಯ ನೇರ ಪಾಲ್ಗೊಳ್ಳುವಿಕೆ, ಬಾಗಿದಾರಿಕೆ, ಪಾಲುದಾರಿಕೆ, ಫಲಾನುಭವಿಕೆ ಮೇಲ್ನೋಟಕ್ಕೆ ಇಲ್ಲದಿರುವುದರಿಂದ (ನಾಳೆ CBI ತನಿಖೆಯಲ್ಲಿ ಮಂತ್ರಿ ಆರೋಪಿ ಅಂತಾದರೆ ಅದು ಬೇರೆ ವಿಚಾರ. ಈ ವ್ಯಾಪ್ತಿಗೆ ಬರುವುದಿಲ್ಲ. ಸಹಜವಾಗಿ ಆಗ ಕಾನೂನು ವ್ಯಾಪ್ತಿಗೆ ಬರುತ್ತದೆ), ಶಿಕ್ಷಣ ಮಂತ್ರಿ ರಾಜಿನಾಮೆ ಕೊಡಬೇಕಾದ್ದಿಲ್ಲ.


ರಾಜಿನಾಮೆ ಕೊಡಬೇಕು ಅಥವಾ ಬೇಡ ಎನ್ನುವುದು ಕೇವಲ ಅಭಿಪ್ರಾಯಗಳು. ರಾಜಿನಾಮೆ ಕೊಡಬೇಕಾದ್ದಿಲ್ಲ ಎನ್ನುವ ಅಭಿಪ್ರಾಯ ಹೊಂದಿದವರು, ಸೋನಂ ವಾಂಗ್ಚುಕ್‌ರವರ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಬೇಕಿಲ್ಲ. 


NEET ಪರೀಕ್ಷಾ ಪ್ರಶ್ನೆ ಪತ್ರಿಕೆ leak ಪ್ರಕರಣದಲ್ಲಿ ಶಿಕ್ಷಣ ಮಂತ್ರಿಗಳ ರಾಜಿನಾಮೆ ವಿಚಾರ ಮತ್ತು ಸೋನಂ ವಾಂಗ್ಚುಕ್ ಉಪವಾಸ ವಿಚಾರಗಳು ದೇಶವಾಸಿಗಳ ಅಭಿಪ್ರಾಯ ಮಿತಿಗೆ ಸೀಮಿತವಾಗಿರುವುದರಿಂದ, ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು.


ಇನ್ನು ರಾಜಿನಾಮೆ ಒಂದು ಪನಿಷ್ಮೆಂಟಾ? ಜನಪ್ರತಿನಿಧಿಯನ್ನು ಬದಲಾಯಿಸಿ, ಮತ್ತೊಬ್ಬ ಜನಪ್ರತಿನಿಧಿಯನ್ನು ಕೂರಿಸಿ ಸಂಬಳ, ಭತ್ಯೆ ಕೊಟ್ಟು ಸಾಕುವ ಒಂದು ಕಾರ್ಯಕ್ರಮ ಅಷ್ಟೆ. (ಕಾರ್ಯಾಂಗದಲ್ಲೂ ಇದೇ ರೀತಿ) ಹೊಸ ಜನಪ್ರತಿನಿಧಿಯ ಕೆಳಗಡೆ ಹಗರಣ ನೆಡೆಯುವವರೆಗೂ ಅವನಿಗೆ ಅಧಿಕಾರ!! ಈ ರಾಜಿನಾಮೆಗೆ ಉಪವಾಸ ಸತ್ಯಾಗ್ರಹ ಮಾಡಿದರೆ ಅದು ಖಂಡಿತ ಬೆಂಬಲಿಸುವ ವಿಚಾರ ಅಲ್ಲ. 


ಆದುದರಿಂದ, NEET ಪರಿಕ್ಷೆ ಪ್ರಶ್ನೆ ಪತ್ರಿಕೆ leak ಪ್ರಕರಣದಲ್ಲಿ ಶಿಕ್ಷಣ ಮಂತ್ರಿಗಳು ರಾಜಿನಾಮೆ ಕೊಡಬೇಕಾದ್ದಿಲ್ಲ ಮತ್ತು ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹವನ್ನು ನಾನು ಬೆಂಬಲಿಸುವುದೂ ಇಲ್ಲ. ಇದು ನನ್ನ ಅಭಿಪ್ರಾಯ ಎಂದು ಕಾರ್ತಿಕ್‌ರವರಿಗೆ ಕಳಿಸಿದ್ದೇನೆ.  ನನ್ನ ಅಭಿಪ್ರಾಯವನ್ನು ಒಪ್ಪುವುದೂ, ತಿರಸ್ಕರಿಸುವುದೂ ಅವರ ಅಭಿಪ್ರಾಯಕ್ಕೆ ಬಿಟ್ಟಿದ್ದು.


ಯಾವುದೇ ವಿಚಾರದಲ್ಲಿ ವ್ಯಕ್ತಿಯೊಬ್ಬರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ ಮತ್ತು ಅವರ ಆರೋಗ್ಯ ವಿಷಮ ಪರಿಸ್ಥಿತಿಯಲ್ಲಿದೆ ಅನ್ನುವಾಗ, ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಬೇಕು. ಸರಕಾರ ಸೋನಂ ವಾಂಗ್ಚುಕ್‌ರವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಉಪವಾಸ ಸತ್ಯಾಗ್ರಹದಿಂದ ವಿಮುಖರಾಗುವಂತೆ ಮಾಡಬಹುದಾದ ಸೂಕ್ತ ಕ್ರಮಗಳನ್ನು ನಿರ್ಧರಿಸಿ ಮುಂದುವರಿಯಬೇಕು.  


ಸರಕಾರ ಉಪವಾಸ ಸತ್ಯಾಗ್ರಹಕ್ಕೆ ಮನ್ನಣೆ ನೀಡಿ, ಶಿಕ್ಷಣ ಮಂತ್ರಿಗಳಿಂದ ರಾಜಿನಾಮೆ ಪಡೆದರೆ, ಅದು ಸಮರ್ಥ ಆಡಳಿತ ಸರಕಾರದ ಸೋಲು ಆಗುತ್ತದೆಯೇ ಹೊರೆತು, ಸೋನಂ ವಾಂಗ್ಚುಕ್‌ರವರ ಅಭಿಪ್ರಾಯಕ್ಕೆ ಸಿಕ್ಕ ಗೆಲುವು ಆಗುವುದಿಲ್ಲ. ಹೇಗೆ ಆಗುವುದಿಲ್ಲ? ಮೇಲ್ನೋಟಕ್ಕೆ ತಾತ್ಕಾಲಿಕ ಗೆಲುವು ಅಂತ ಅನಿಸಿದರೂ, ಅದು ಸೋನಂ ವಾಂಗ್ಚುಕ್‌ರವರ ಸೋಲೇ ಹೊರೆತು ಗೆಲುವು ಆಗುವುದಿಲ್ಲ ಹೇಗೆ ಅಂತ ನೋಡುವ: 


ಒಂದು ವೇಳೆ ಶಿಕ್ಷಣ ಮಂತ್ರಿ ರಾಜಿನಾಮೆ ಕೊಟ್ಟರೂ, ನಾಳೆ ಇನ್ನೋರ್ವ ವ್ಯಕ್ತಿ ಜಂತರ್ ಮಂತರ್‌ನಲ್ಲಿ ಉಪವಾಸ ಕುಳಿತು "ಶಿಕ್ಷಣ ಮಂತ್ರಿಗಳು ರಾಜಿನಾಮೆ ಕೊಡಬಾರದು" ಅಂತ ಪ್ರತಿಭಟಿಸುತ್ತ, 20 ದಿನ ಆದಾಗ, ಆತನ ಆರೋಗ್ಯ ಕ್ಷೀಣಿಸಿದರೆ... ಸರಕಾರ ಮಂತ್ರಿಗಳ ರಾಜಿನಾಮೆಯನ್ನು ರದ್ದು ಮಾಡುವಂತಾಗಬಹುದು. ರಾಜಿನಾಮೆಯನ್ನು ಅಂಗೀಕರಿಸದಂತೆ ಹಿಂಪಡೆಯಬಹುದು. ಪುನಃ ಅವರೇ ಶಿಕ್ಷಣ ಮಂತ್ರಿ ಆದರೆ.... ಅದೂ ಸರಕಾರದ ಸೋಲೆ!! ರಾಜನಾಮೆ ಪಡೆದರೂ ಸರಕಾರದ ಸೋಲು, ನಂತರ ರಾಜಿನಾಮೆಯನ್ನು ಹಿಂಪಡೆಯುವಂತೆ ಮಾಡಿದರೂ ಸರಕಾರದ ಸೋಲೆ. ಪ್ರತಿಭಟನೆ ಮಾಡಿದವರದ್ದೂ ಸೋಲೇ ಆಗುವುದು.


ಮತ್ತೆ ಸೋನಂ ವಾಂಗ್ಚುಕ್‌‌ರವರು ರಾಜಿನಾಮೆಯನ್ನು ಹಿಂಪಡೆದುದ್ದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಕೂರಬಹುದು!!?


ದೆಹಲಿಯ ಜಂತರ್ ಮಂತರ್ ಬಯಲು 'ಉಪವಾಸ ಸತ್ಯಾಗ್ರಹ' ಎಂಬ ಗೇಮ್‌ನ ಕ್ರೀಡಾಂಗಣ ಆಗಬಾರದು!! ಅಲ್ವಾ?


****


ಇನ್ನು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗ ವಿಚಾರಕ್ಕೆ ಮತ್ತೆ ಬರುವ. ಪ್ರಶ್ನೆ ಪತ್ರಿಕೆ ಬಹಿರಂಗ ವಿಚಾರ ಇವತ್ತಿಗೆ ಹೊಸದಲ್ಲ. ಪ್ರಶ್ನೆ ಪತ್ರಿಕೆ ಬಹಿರಂಗಗೊಂಡು, ಮರು ಪರೀಕ್ಷೆ ಯಂತಹ ಪ್ರಕರಣಗಳು 3-4 ದಶಕಗಳಿಂದಲೂ ನೆಡೆಯುತ್ತಿದೆ. 80 ರ ದಶಕದಲ್ಲಿ ನಾನು ಹೈಸ್ಕೂಲು ಓದುವಾಗಲೂ ಈ ಸಮಸ್ಯೆ ಇತ್ತು. ಒಂದು ಬಾರಿ ಒಂದ ಸಬ್ಜೆಕ್ಟ್‌ನ್ನು ಇಂತಹದೇ ಕಾರಣಕ್ಕಾಗಿ ಎರಡನೇ ಬಾರಿ ಬರೆದಿದ್ದು ನೆನಪಿನಲ್ಲಿ ಇನ್ನೂ ಇದೆ. ಸರಕಾರಗಳು ಗಂಭೀರವಾದ ರಕ್ಷಣಾತ್ಮಕವಾದ, ಭ್ರಷ್ಟಾಚಾರ ರಹಿತವಾದ ಶಿಸ್ತಿನ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವವರೆಗೂ ಇಂತಹ ಸಮಸ್ಯೆಗಳಿಗೆ ಮುಕ್ತಿ ಇಲ್ಲ. ಇದೇ ರೀತಿಯಲ್ಲಿ ಇತರ ಕ್ಷೇತ್ರಗಳಲ್ಲೂ ಈ ಸಮಸ್ಯೆ ಇದೆ. ಅಕ್ರಮ ಮರಳು ದಂದೆ ಪ್ರತೀ ಹಳ್ಳಿಯಲ್ಲೂ ಇದೆ. ಮನೆ ಕಟ್ಟುವ ಕಂಟ್ರಾಕ್ಟರ್‌ಗಳು/ಮಾಲಿಕರು ಕಬ್ಬಿಣ, ಸಿಮೆಂಟುಗಳಿಗೆ GST ಬಿಲ್ ಹಾಕಿಸಿ, ಸರಕಾರಕ್ಕೆ ತೆರಿಗೆ ಕಟ್ಟುವುದಿಲ್ಲ, ಅಕ್ರಮ ವಿದೇಶಿ ಅಡಿಕೆ ಆಮದು ಈಗಲೂ ಭಾರತವನ್ನು ಪ್ರವೇಶಿಸುತ್ತಿದೆ, ತಡೆಯುವ ಕ್ರಮಗಳನ್ನು ಸರಕಾರ ಮಾಡುತ್ತಿಲ್ಲ.  ಶಿಕ್ಷಣ ಮಾತ್ರ ಅಲ್ಲ, ಕೃಷಿ, ವಾಣಿಜ್ಯದಂತಹ ಹಲವಾರು ಕ್ಷೇತ್ರಗಳಲ್ಲಿ 'ರಕ್ಷಣಾತ್ಮಕವಾದ ಕ್ರಮಗಳು' ಈಗಲೂ ಇಲ್ಲ. ವಾಸ್ತವವಾಗಿ ಮಂತ್ರಿಗಳು ರಾಜಿನಾಮೆ ಕೊಡಬೇಕಾಗಿದ್ದು ಇಂತಹ ಕ್ಷೇತ್ರಗಳ failureಗಾಗಿ. ಇಲ್ಲಿರುವುದು ಸರಕಾರಗಳ failure ಅನ್ನುವುದಕ್ಕಿಂತ, ಜನಪ್ರತಿನಿಧಿಗಳ (ಆಢಳಿತ ಮತ್ತು ವಿರೋಧ ಪಕ್ಷ) ಮತ್ತು ಅಧಿಕಾರಿಗಳ ಉದ್ದೇಶಪೂರ್ವಕ ಪಾಲುದಾರಿಕೆ!!


ಹಾಗಂತ, ಪರೀಕ್ಷಾ ಅಕ್ರಮಗಳು ಸರಿ ಅಂತ ಅಲ್ಲ. ಅದು ಸಮರ್ಥನೀಯವೂ ಅಲ್ಲ. ಈ ಹಿಂದಿನ ಇನ್ನೊಂದು ಪಕ್ಷ ಅಧಿಕಾರದಲ್ಲಿದ್ದಾಗ ನೆಡೆದ ಪರಿಕ್ಷಾ ಅಕ್ರಮಗಳನ್ನು ಮುಂದಿಟ್ಟು, ಈಗಿನ ಹಗರಣಕ್ಕೆ ಚಕ್‌ಮೇಟ್ ಕೊಟ್ಟು ಸಮರ್ಥಿಸುವುದೂ ಸರಿಯಾದ ಕ್ರಮ ಅಲ್ಲ.  ಅದಕ್ಕೊಂದು ಶಾಶ್ವತವಾದ ಪರಿಹಾರ ಕಂಡು ಹಿಡಿಯಲು ಪ್ರತಿಭಟನೆಗಳು ಆಗಬೇಕು, ಹೋರಾಟಗಳು ಆಗಬೇಕು. ಸರಕಾರಗಳು ಗಂಭೀರವಾಗಿ, ಸಣ್ಣ ಅಧಿಕಾರ ಭಯದಿಂದಲಾದರೂ ಕ್ರಮಕೈಗೊಳಗಳುವಂತಹ ಪರಿಸ್ಥಿತಿ ನಿರ್ಮಾಣ ಆಗುವಷ್ಟು ಗಟ್ಟಿ ಧ್ವನಿಯ ಪ್ರತಿಭಟನೆ ಆಗಬೇಕು.  


ಆದರೆ ಹಾಗಾಗುತ್ತಾ? ಎಲೆಕ್ಷನ್ ಹಿಂದಿನ ದಿನ ಅಭ್ಯರ್ಥಿಗಳಿಂದ ಹಣ ಪಡೆದು, ಮರುದಿನ ಹೆಚ್ಚು ಹಣ ನೀಡಿದವರಿಗೆ ಓಟ್ ಹಾಕುವ ಮನಸ್ಥಿತಿ ಸಾಮಾನ್ಯ ಆಗಿರುವಾಗ, ಅನ್ಯಾಯದ ವಿರುದ್ಧದ ಪ್ರತಿಭಟನೆ, ಹೋರಾಟ, ಸತ್ಯಾಗ್ರಹ, ಸತ್ಯಾಗ್ರಹಕ್ಕೆ ಬೆಂಬಲ ಕೊಡುವ ಮನೋಭಾವ ಸಹಜವಾಗಿಯೇ ಇರುವುದಿಲ್ಲ.  


ಇನ್ನು ಯಾವುದೇ ಹೋರಾಟ ಅಂತ ಶುರುವಾದರೂ ನಿಧಾನವಾಗಿ ಅದರ ಒಳಗಡೆ ಸಿದ್ಧಾಂತಗಳು, ಪಕ್ಷಗಳು, ಬೇರೆ ಅಜೆಂಡಗಳು ನುಸುಳುತ್ತವೆ.


ಬಲ ಪಂಥೀಯ v/s ಎಡ ಪಂಥಿಯ,  

NDA v/s INDIA,  

ಸೆಂಟ್ರಲ್ v/s ಸ್ಟೇಟ್ಸ್, 

ನಗರ ನಕ್ಸಲೇಟ್ v/s ರಾಷ್ಟ್ರೀಯ ವಾದಿಗಳು

BJP v/s CJP

ಆಗಿ ಹೋರಾಟದಲ್ಲಿ ಒಡಕು ಉದ್ಭವಿಸಿ, ಹೋರಾಟವೇ failure ಆಗುವಂತೆ ಮಾಡಲ್ಪಡುತ್ತದೆ.


****


ಕೊನೆಯದಾಗಿ, ಈ NEET ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಇನ್ನೊಂದು ಗಂಭೀರ ವಿಚಾರ ಇದೆ. ಸೋನಂ ವಾಂಗ್ಚುಕ್‌ನಂತವರೂ ಸೇರಿದಂತೆ ಶಿಕ್ಷಣ ತಜ್ಞರೂ, ಸರಕಾರ, ಶಿಕ್ಷಕರು, ಪೋಷಕರು ಗಮನಿಸಬೇಕಾದ, ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.  ಅದು ಜಸ್ಟ್ ಒಂದು ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ವಿದ್ಯಾರ್ಥಿಗಳ ದುರ್ಬಲ ಮನಸ್ಥಿತಿಗೆ ಸಂಬಂಧಿಸಿದ್ದು. ಒಮ್ಮೆ ಪರೀಕ್ಷೆ ಬರೆದ ಮೇಲೆ, ಇನ್ನೊಮ್ಮೆ ಪರೀಕ್ಷೆ ಬರೆಯಲು ಆಗದಷ್ಟು ಕಲಿತಿದ್ದು 'ಡಿಲೀಟ್' ಆಗಿರುತ್ತದೆಯಾ?  ಹೌದಾದರೆ, MBBS-MD ಫೈನಲ್ ಎಕ್ಸಾಮ್ ಬರೆದು ಆಸ್ಪತ್ರೆಗೆ ಬಂದಾಗ, ತಲೆಯಲ್ಲಿ ಎಲ್ಲ ಡಿಲೀಟ್ ಆಗಿದ್ರೆ ಕತೆ ಏನು? ವಿದ್ಯಾರ್ಥಿಗಳು ಒಂದು ಪರೀಕ್ಷೆಯನ್ನು ಮತ್ತೊಂದು ಬಾರಿ ಬರೆಯಲು ಸಾಧ್ಯವಾಗದಂತಹ, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಸ್ಥಿತಿಯವರಾಗಿರುವುದಕ್ಕೆ ಕಾರಣವೇನು?  ಇನ್ನೊಮ್ಮೆ ಪರೀಕ್ಷೆಯನ್ನೇ ಎದುರಿಸಲಾಗದ ಮನಸ್ಥಿತಿಯಲ್ಲಿ ನಾಳೆ ಜೀವನ ಪರೀಕ್ಷೆಗಳ failure ಗಳನ್ನು ಹೇಗೆ ಎದುರಿಸುತ್ತಾರೆ? ಬರೆದ ಪರೀಕ್ಷೆಗಳಲ್ಲೇ fail ಆದರೆ, ಅದನ್ನು ಹೇಗೆ ಎದುರಿಸುತ್ತಾರೆ?. ಯಾಕೆ ವಿದ್ಯಾರ್ಥಿಗಳ ಮನಸ್ಸು ದುರ್ಬಲವಾಗುತ್ತಿದೆ?.   


ಶಿಕ್ಷಣ ಸಂಬಂಧಿತ ಸಮಸ್ಯೆಯ ವಿರುದ್ಧದ ಉಪವಾಸ ಸತ್ಯಾಗ್ರಹ ಮಂತ್ರಿಯ ರಾಜಿನಾಮೆ ಉದ್ದೇಶ ಆಗುವ ಬದಲು, ಧರ್ಮ- ದೇವರ ನಿಂದನೆ, ಪಕ್ಷಗಳ ನಿಂದನೆ, ಜಾತಿ ವಿಷ ಬೀಜ ಬಿತ್ತನೆ, ಆರ್ಟಿಕಲ್ 370 ಮರುಸ್ಥಾಪನೆಗಳಂತಹ ಅಸಂಬದ್ದ ಪ್ರಲಾಪದ ಬದಲು, ನೈಜ ಮತ್ತು ತಾರ್ಕಿಕ ಮೂಲ ವಿಚಾರಗಳ ಮೇಲೆ ಕೇಂದ್ರೀಕೃತವಾಗಿರಲಿ.  


ದೆಹಲಿಯ ಜಂತರ್ ಮಂತರ್ ಬಯಲು 'ಉಪವಾಸ ಸತ್ಯಾಗ್ರಹ' ಎಂಬ ಗೇಮ್‌ನ ಕ್ರೀಡಾಂಗಣ ಆಗವುದು ಬೇಡ. 


ಒಳ್ಳೆಯ ಉದ್ದೇಶ ಇಟ್ಟುಕೊಂಡು ಪ್ರತಿಭಟನೆ ಮಾಡುವಾಗ ಒಂದು ಪರ್ಫೆಕ್ಟ್ ಪ್ಲಾನ್ ಇರಬೇಕು. ಇಲ್ಲಾಂದರೆ, ಪ್ರತಿಭಟನೆಯನ್ನೇ ಶಿಥಿಲಗೊಳಿಸುವಂತೆ ಕಡಿಯುವ, ಕೊರೆಯುವ ಗೆದ್ದಲು, ಕಟ್ಟಿರುವೆ, ಚೇಳು, ಜಿರಳೆ, ಜಿಗಣೆ, ಇಲಿ, ಹೆಗ್ಗಣಗಳು ಬಂದಾವು!!. ಈ ಮಣ್ಣಿನಲ್ಲಿ ಎಲ್ಲ ಪ್ರಾಣಿಗಳೂ ಇವೆ. ಶಿಷ್ಟವೂ ಇವೆ, ದುಷ್ಟವೂ ಇವೆ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top