ಮಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ವಿವೇಚನಾ ರಹಿತ ನಿರ್ಧಾರಗಳು ಹಾಗೂ ಮಹಾನಗರ ಪಾಲಿಕೆಯ ಬೇಜವಾಬ್ದಾರಿತನದಿಂದಾಗಿ ಮಂಗಳೂರು ನಗರದಲ್ಲಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆಯುತ್ತಿರುವ ಸರಣಿ ಗೊಂದಲಗಳು ಮತ್ತು ಸಾರ್ವಜನಿಕರ ಹಕ್ಕುಗಳ ಹರಣದ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
1. ಪಾಲಿಕೆಯಲ್ಲಿ ಜನನ-ಮರಣ ಅರ್ಜಿ ಸ್ವೀಕಾರ ಬಂದ್: ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಆಡಳಿತ ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನು ಎಸ್‌ಐಆರ್ ಕರ್ತವ್ಯಕ್ಕೆ ನೇಮಿಸಿರುವ ನೆಪವೊಡ್ಡಿ, ಇನ್ನು ಒಂದು ತಿಂಗಳ ಕಾಲ ಜನನ ಮತ್ತು ಮರಣಗಳ ನೋಂದಣಿ ಘಟಕದಲ್ಲಿ ಅರ್ಜಿ ಸ್ವೀಕಾರವನ್ನು ಬಂದ್ ಮಾಡಲಾಗಿದೆ ಎಂದು ಬೋರ್ಡ್ ಹಾಕಲಾಗಿತ್ತು. ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, "ಆಡಳಿತಾಧಿಕಾರಿ ಮೂಲಕ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಪ್ರಕಾರ ಇನ್ನು ಒಂದು ತಿಂಗಳು ಮಂಗಳೂರಿನಲ್ಲಿ ಜನನ ಮರಣಗಳೇ ಇರುವುದಿಲ್ಲವೇ?" ಎಂದು ಪ್ರಶ್ನಿಸಿದರು.
ಶಾಲಾ ಮಕ್ಕಳ ದಾಖಲಾತಿಗೆ ಜನನ ಪ್ರಮಾಣ ಪತ್ರ ಬೇಕಿರುವ ಪೋಷಕರು ಹಾಗೂ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವವರು ಕಂಗಾಲಾಗಿದ್ದಾರೆ. ಸಾರ್ವಜನಿಕರು ಶಾಸಕರಿಗೆ ದೂರು ನೀಡುವ ಎಚ್ಚರಿಕೆ ನೀಡಿದ ಬಳಿಕ, ನಿನ್ನೆಯಿಂದ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಲಾಗಿದೆಯಾದರೂ, "ಪ್ರಮಾಣ ಪತ್ರಕ್ಕೆ ಅರ್ಜೆಂಟ್ ಮಾಡುವ ಹಾಗಿಲ್ಲ" ಎಂಬ ತುಘಲಕ್ ನಿಯಮ ಹೇರಲಾಗಿದೆ.
"ಇದೇ ರೀತಿ ಸಾರ್ವಜನಿಕರ ಕೆಲಸಗಳನ್ನು ನಿಲ್ಲಿಸುವುದಾದರೆ, ಇನ್ನು ಒಂದು ತಿಂಗಳು ಮಂಗಳೂರಿನ ಜನರಿಂದ ಯಾವುದೇ ರೀತಿಯ ತೆರಿಗೆ ವಸೂಲಿ ಮಾಡುವುದಿಲ್ಲ ಎಂದೂ ಪಾಲಿಕೆಯವರು ಬೋರ್ಡ್ ಹಾಕಲಿ. ಪ್ರತಿನಿತ್ಯ ಜನರು ಕಚೇರಿ ಮುಂದೆ ಸಾಲುಗಟ್ಟಿ ನಿಂತಿರುವುದೇ ಈ ಸರ್ಕಾರದ ಹಿಂಸಾತ್ಮಕ ಆಡಳಿತಕ್ಕೆ ಸಾಕ್ಷಿ. ಸಾರ್ವಜನಿಕರ ಹಾಗೂ ಸಿಬ್ಬಂದಿಗಳ ನಡುವಿನ ಮಾತಿನ ಚಕಮಕಿಗೆ ಅಂತ್ಯ ಹಾಡಿ, ಕೆಲಸಗಳು ಸುಗಮವಾಗಿ ನಡೆಯದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾದೀತು," ಎಂದು ಶಾಸಕರು ಎಚ್ಚರಿಸಿದರು.
2. ಭೂಪರಿವರ್ತನೆ (ಕನ್ವರ್ಷನ್) ಕಗ್ಗಂಟು: ಅಸಹಾಯಕತೆಯಲ್ಲಿ ಜನಸಾಮಾನ್ಯರು ಮಂಗಳೂರು ನಗರ ವ್ಯಾಪ್ತಿಯಲ್ಲಿ ಈಗ ಭೂಪರಿವರ್ತನೆ (ಕನ್ವರ್ಷನ್) ಪ್ರಕ್ರಿಯೆಯು ಸಂಪೂರ್ಣ ಕಗ್ಗಂಟಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಕಂದಾಯ ಇಲಾಖೆಯಡಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುಲಭವಾಗಿ ಆಗುತ್ತಿದ್ದ ಈ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರವು ಈಗ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ವಹಿಸಿಕೊಟ್ಟಿದೆ.
ಹಿಂದೆ ಕಂದಾಯ ಇಲಾಖೆಯ ಸರ್ವೇಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ, ನಕ್ಷೆ ತಯಾರಿಸಿ ಕೊಡುತ್ತಿದ್ದರು. ಅದರ ಆಧಾರದಲ್ಲಿ ಸಾರ್ವಜನಿಕರು ಕನ್ವರ್ಷನ್ ಪಡೆಯುತ್ತಿದ್ದರು. ಆದರೆ ಈಗ ದಾಖಲೆ ಮತ್ತು ಸರ್ವೇಯರ್‌ಗಳನ್ನು ಕಂದಾಯ ಇಲಾಖೆಯಲ್ಲೇ ಉಳಿಸಿಕೊಂಡು, ಕೆಲಸವನ್ನು ಮುಡಾಗೆ ವಹಿಸಲಾಗಿದೆ. ಪರಿಣಾಮವಾಗಿ "ನಕ್ಷೆ ಇಲ್ಲದೆ ಕನ್ವರ್ಷನ್ ಸಾಧ್ಯವಿಲ್ಲ" ಎಂದು ಮುಡಾ ಹೇಳುತ್ತಿದ್ದರೆ, "ಸರ್ಕಾರದ ಆದೇಶದಂತೆ ನಾವು ನಕ್ಷೆ ಮಾಡುವಂತಿಲ್ಲ" ಎಂದು ಕಂದಾಯ ಇಲಾಖೆ ಕೈತೊಳೆದುಕೊಳ್ಳುತ್ತಿದೆ.
ಕನ್ವರ್ಷನ್ ಆಗದ ಕಾರಣ ಯಾವುದೇ ಸೈಟ್ ಮಾರಾಟ ಮಾಡಲು ಅಥವಾ ಖರೀದಿಸಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಮುಡಾದಲ್ಲಿ ಮೂಲ ಕೆಲಸಗಳೇ ಆಗುತ್ತಿಲ್ಲ. ಇದರ ನಡುವೆ ಸರ್ಕಾರದ ಈ ನಿರ್ಧಾರದಿಂದಾಗಿ ಪ್ರಾಪರ್ಟಿ ಕಾರ್ಡ್, ಆರ್.ಟಿ.ಸಿ ಹಾಗೂ ಕನ್ವರ್ಷನ್ ಪ್ರಕ್ರಿಯೆಗಳು ಸಂಪೂರ್ಣ ಅಯೋಮಯವಾಗಿವೆ.
ತಾಂತ್ರಿಕ ದೋಷಗಳ ಸರಮಾಲೆ: ಸರ್ಕಾರದ ಗಮನಕ್ಕೆ ಆಗ್ರಹ ಮಂಗಳೂರಿನ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಬಹುತೇಕ ಸಂದರ್ಭಗಳಲ್ಲಿ ಸರ್ವರ್ ಇರುವುದಿಲ್ಲ, ಅದು ಸರಿಯಾಗುವ ಮುನ್ನವೇ ಮತ್ತೊಂದು ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತದೆ. ಇಂತಹ ದುರವಸ್ಥೆಯ ನಡುವೆ ಸರ್ಕಾರ ಅರ್ಥವಿಲ್ಲದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಜನರ ಪಾಡು ಹೇಳತೀರದಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ಈ ಗೊಂದಲಗಳಿಗೆ ಮುಕ್ತಿ ಹಾಡಿ, ಜನರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕು ಎಂದು ಕಾಮತ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಹಾಗೂ ಮಂಡಲದ ಪದಾಧಿಕಾರಿ ಮಂಗಳಾ ಆಚಾರ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


