ವಿದ್ಯಾರ್ಥಿಗಳಿಗೆ ಸ್ಪಂದಿಸುವುದು ಅಗತ್ಯ : ಡಾ. ಎಚ್. ಮಾಧವ ಭಟ್
ಪುತ್ತೂರು: ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ನೀಟ್, ಜೆಇಇಯಂತಹಾ ಪರೀಕ್ಷೆಗಳಿಗೆ ಉನ್ನತಮಟ್ಟದಲ್ಲಿ ಸಿದ್ಧತೆಗಳನ್ನು ನಡೆಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಂದು ದಿನ, ಗಂಟೆ, ನಿಮಿಷವೂ ಅಮೂಲ್ಯವಾದದ್ದು. ಪ್ರಾಕೃತಿಕ ಅನನುಕೂಲತೆಯಿಂದ ಘೋಷಣೆಯಾಗುವ ರಜಾ ದಿನಗಳಲ್ಲಿ ಆನ್ ಲೈನ್ ತರಗತಿ ನಡೆಸುವ ನಿರ್ಧಾರ ಕೈಗೊಳ್ಳುವುದು ಉತ್ತಮ ವಿಚಾರ ಎಂದು ವಿಶ್ರಾಂತ ಪ್ರಾಚಾರ್ಯ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಚ್. ಮಾಧವ ಭಟ್ ಎಚ್. ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಮಳೆಯಿಂದಾಗಿ ಘೋಷಣೆಯಾಗುವ ರಜಾ ದಿನಗಳಲ್ಲಿ ನಡೆಸಲ್ಪಡುವ ಆನ್ ಲೈನ್ ತರಗತಿಗಳಿಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ದೂರವಾಗುವುದು ಆನ್ ಲೈನ್ ತರಗತಿಗಳ ಮೂಲಕ ತಪ್ಪುತ್ತದೆ. ಸಮಯದ ಸದುಪಯೋಗ ಹಾಗೂ ತಾಂತ್ರಿಕತೆಯ ಬಳಕೆಯ ಮೂಲಕ ವಿದ್ಯಾರ್ಥಿಗಳಿಗೆ ಸ್ಪಂದಿಸುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅಂಬಿಕಾ ಸಂಸ್ಥೆಗಳು ಸದಾ ವಿದ್ಯಾರ್ಥಿಗಳ ಪರವಾಗಿ ನಿಲ್ಲುತ್ತಿವೆ. ಕೊರೋನಾ ಸಂದರ್ಭದಲ್ಲಿಯೂ ಆನ್ ಲೈನ್ ತರಗತಿಗಳನ್ನು ಆರಂಭಿಸಿದ ಹೆಗ್ಗಳಿಕೆಗೆ ಅಂಬಿಕಾ ಪಾತ್ರವಾಗಿತ್ತು. ಇದೀಗ ಮಳೆಯ ಕಾರಣದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಆನ್ ಲೈನ್ ತರಗತಿ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಚಟುವಟಿಕೆಯಿಂದ ಇರುವಂತೆ ಮಾಡಿ, ಅವರು ಮುಂದಿನ ಶೈಕ್ಷಣಿಕ ತಯಾರಿ ನಡೆಸಲು ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ ಎಂದರು.
ಅಂಬಿಕಾ ನೀಟ್ ಅಕಾಡೆಮಿ ಪ್ರಾಂಶುಪಾಲ ಕೆ. ಕಿಶೋರ್ ಉಪಸ್ಥಿತರಿದ್ದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


