ಆಳ್ವಾಸ್ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ಆಯೋಗದ ಅಧಿಕೃತ ಅನುಮತಿ: 150 ಎಂಬಿಬಿಎಸ್ ಸೀಟುಗಳಿಗೆ ಅವಕಾಶ

Upayuktha
0

 



ಮೂಡುಬಿದಿರೆ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷೆಯ ವೈದ್ಯಕೀಯ ಶಿಕ್ಷಣ ಯೋಜನೆಗೆ ಮಹತ್ವದ ಮೈಲಿಗಲ್ಲು ದೊರೆತಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗ 2026–27ನೇ ಶೈಕ್ಷಣಿಕ ಸಾಲಿನಿಂದ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರಕ್ಕೆ 150 ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಧಿಕೃತ ಅನುಮೋದನೆಯನ್ನು  ನೀಡಿದೆ.

ಮೂಡುಬಿದಿರೆಯ ಮಿಜಾರಿನಲ್ಲಿ ಸ್ಥಾಪನೆಯಾಗಿರುವ ಆಳ್ವಾಸ್ ವೈದ್ಯಕೀಯ ಕಾಲೇಜು, ವೈದ್ಯಕೀಯ ಶಿಕ್ಷಣ, ಅತ್ಯಾಧುನಿಕ ಆರೋಗ್ಯ ಸೇವೆ ಹಾಗೂ ಸಂಶೋಧನೆಯನ್ನು ಸಮನ್ವಯಗೊಳಿಸುವ ಉದ್ದೇಶದೊಂದಿಗೆ ಕಾರ್ಯನಿರ್ವಹಿಸಲಿದೆ. ಅತ್ಯಾಧುನಿಕ ಮೂಲಸೌಕರ್ಯ, ಸುಸಜ್ಜಿತ ಪ್ರಯೋಗಾಲಯಗಳು, ಆಸ್ಪತ್ರೆ ಸೌಲಭ್ಯಗಳು ಹಾಗೂ ಅನುಭವಿ ಬೋಧಕ ವರ್ಗದೊಂದಿಗೆ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡಲು ಸಂಸ್ಥೆ ಸಿದ್ಧವಾಗಿದೆ.

ಈ ಅನುಮತಿಯಿಂದ ಮೊದಲ ಶೈಕ್ಷಣಿಕ ವರ್ಷದಲ್ಲೇ 150 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ವ್ಯಾಸಂಗದ ಅವಕಾಶ ದೊರೆಯಲಿದ್ದು, ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಉನ್ನತ ಮಟ್ಟಕ್ಕೇರಿಸುವ ಜೊತೆಗೆ, ಆರೋಗ್ಯ ಸೇವೆ ಮತ್ತು ವೈದ್ಯಕೀಯ ಸಂಶೋಧನೆ ಕ್ಷೇತ್ರಕ್ಕೂ ಈ ಸಂಸ್ಥೆ ಮಹತ್ವದ ಕೊಡುಗೆ ನೀಡುವ ನಿರೀಕ್ಷೆಯಿದೆ.

ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು, ಆಳ್ವಾಸ್ ವೈದ್ಯಕೀಯ ಕಾಲೇಜಿಗೆ ಅಧಿಕೃತ ಅನುಮತಿ ನೀಡಿದ ರಾಷ್ಟ್ರೀಯ ವೈದ್ಯಕೀಯ ಆಯೋಗ, ಕೇಂದ್ರ ಸರ್ಕಾರ,  ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಸರ್ಕಾರ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಸೇರಿದಂತೆ ಈ ಮಹತ್ವದ ಯೋಜನೆಗೆ ಬೆಂಬಲ, ಮಾರ್ಗದರ್ಶನ ಮತ್ತು ಸಹಕಾರ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಪಯಣದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಇದೊಂದು ಹೊಸ ಅಧ್ಯಾಯವಾಗಿದ್ದು, ಭವಿಷ್ಯದ ಸಮರ್ಥ ವೈದ್ಯರನ್ನು ರೂಪಿಸುವ ಹಾಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಸಮಾಜಕ್ಕೆ ಒದಗಿಸುವ ದಿಸೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದ್ದಾರೆ. 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top