ಶಿವಮೊಗ್ಗ, ಜುಲೈ 26: ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಲ್ಲಿ ಸಾಕಷ್ಟು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ಈ ಹಂತದಲ್ಲಿ ಮಕ್ಕಳಿಗೆ ಜೀವನ ಮೌಲ್ಯಗಳು ಮತ್ತು ನೀತಿ ಪಾಠಗಳನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಬೋಧಿಸುವುದು ಅತ್ಯಗತ್ಯವಾಗಿದೆ. ಶಾಲೆಗಳಲ್ಲಿ ನೀತಿ ಶಿಕ್ಷಣಕ್ಕೆ ಪ್ರತ್ಯೇಕ ಸಮಯವನ್ನು ಮೀಸಲಿಡುವ ಪ್ರಯತ್ನಗಳು ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಕಿಶೋರ ದೀಪಿಕಾ ಪುಸ್ತಕದ ಸಂಪಾದಕರಾದ ಶ್ರೀಮತಿ ಹೆಚ್. ಎಂ. ರುಕ್ಮಿಣಿ ನಾಯಕ್ ಅಭಿಪ್ರಾಯಪಟ್ಟರು.
ನಗರದ ಸನ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಥನ ಹಾಗೂ ಸಂಸ್ಕಾರ ಭಾರತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಿಶೋರ ದೀಪಿಕಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಶೋಕ್ ಕಾಮತ್ ಮಾತನಾಡಿ, ಸ್ವಾವಲಂಬನೆಯೇ ಯಶಸ್ವಿ ಜೀವನದ ಆಧಾರ ಎಂದು ತಿಳಿಸಿದರು. ತಮ್ಮ ತಂದೆಯವರಿಂದ ಪಡೆದ ಜೀವನ ಪಾಠಗಳನ್ನು ಸ್ಮರಿಸಿದ ಅವರು, ಉತ್ತಮ ಅಂಕಗಳೊಂದಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಸಣ್ಣ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ನಾಲ್ಕು ವರ್ಷ ದುಡಿದು ಸಂಪಾದಿಸಿದ ಹಣದಲ್ಲಿಯೇ ಫ್ರಾನ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆದ ಅನುಭವವನ್ನು ಹಂಚಿಕೊಂಡರು. ತಮ್ಮ ಈ ಸಾಧನೆ ತಂದೆಗೆ ಅಪಾರ ಸಂತೋಷವನ್ನುಂಟು ಮಾಡಿತ್ತು ಎಂದರು.
ಇಂದಿನ ಒತ್ತಡದ ಬದುಕಿನಲ್ಲಿ ಪೋಷಕರು ಮೊಬೈಲ್ ಹಾಗೂ ಕೆಲಸದಲ್ಲಿ ತೊಡಗಿಸಿಕೊಂಡು ಮಕ್ಕಳ ಮಾತುಗಳನ್ನು ಆಲಿಸಲು ಸಮಯ ನೀಡುತ್ತಿಲ್ಲ. ಶಾಲೆಯಲ್ಲಿ ನಡೆದ ಅನುಭವಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ಮೊದಲ ಆಶ್ರಯವೇ ತಂದೆ-ತಾಯಿಯರು. ಅವರ ಮಾತುಗಳನ್ನು ಕಾಳಜಿಯಿಂದ ಆಲಿಸಿದರೆ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸನ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಆಕಾಶ್ ಮಾತನಾಡಿ, ಮಕ್ಕಳ ಉತ್ತಮ ಬೆಳವಣಿಗೆಯಲ್ಲಿ ತಂದೆ-ತಾಯಿ, ಶಿಕ್ಷಕರು ಹಾಗೂ ಸಮಾಜ ಎಲ್ಲರೂ ಸಮಾನ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂದು ಹೇಳಿದರು. ಮಕ್ಕಳ ಜವಾಬ್ದಾರಿಯನ್ನು ಒಬ್ಬರ ಮೇಲೆ ಮತ್ತೊಬ್ಬರು ಹೊರಿಸುವ ಬದಲು ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಉತ್ತಮ ಸ್ನೇಹಿತರು ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತಾರೆ. ನಾವು ಮಾತ್ರ ಒಳ್ಳೆಯವರಾಗುವುದಲ್ಲ, ಸಮಾಜದಲ್ಲೂ ಉತ್ತಮ ಮೌಲ್ಯಗಳನ್ನು ಬೆಳೆಸುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಉಷಾ ನಟೇಶ್ ಕಾಸರವಳ್ಳಿ ಸ್ವಾಗತಿಸಿದರು. ಡಾ. ರಂಜನಿ ಬಿದರಳ್ಳಿ ಕಾರ್ಯಕ್ರಮ ನಿರೂಪಿಸಿದರು. ನಿತಿನ್ ವಂದಿಸಿದರು. ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ ರಂಗನಾಥ್ ಉಪಸ್ಥಿತರಿದ್ದರು. ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬಾಲಗೋಕುಲ ಮತ್ತು ಸಂಸ್ಕಾರ ಭಾರತಿ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬಾಲಗೋಕುಲದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದ ಕಾ. ಗು. ಶ್ರೀಪಾದರಾವ್ ಅವರನ್ನು ಸನ್ಮಾನಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


