ಆ ಸಂಜೆಯ ತಂಗಾಳಿಗೆ ಚಳಿ ಸುಯ್ಯನೆ ಕೊರೆಯುತ್ತಿತ್ತು. ಗುಡ್ಡಗಾಡು ಪ್ರದೇಶಕ್ಕೆ ಹೊಸತಾಗಿ ಬಂದ ಫಾರೆಸ್ಟ್ ಆಫೀಸರ್ ಗೆ ತರಬೇತಿ ಏನೋ ಇತ್ತು. ಆದರೆ ಮುಖತಃ ಅನುಭವ ಇದೇ ಮೊದಲು.
ಬೆಂಗಳೂರಿನಲ್ಲಿ ಓದಿದವನಿಗೆ ಇದು ತುಂಬಾ ಭಿನ್ನ ಎನಿಸಿದ್ದು ತಪ್ಪಿಲ್ಲ.
ಮಾತಿಲ್ಲದೆ ತನ್ನ ರೂಮ್ನಿಂದ ಹೊರ ಬಂದು ನಿಂತವನಿಗೆ ದೂರದಲ್ಲೊಂದು ಜೀಪ್ ಬರುವುದು ಕಾಣಿಸಿತು.
ಸೋಮಪ್ಪ ಇರಬೇಕೆಂದುಕೊಂಡ. ಸೋಮಪ್ಪ ಅವನ ಅಸಿಸ್ಟೆಂಟ್. ಪೇಟೆಗೆ ಹೋಗಿ ಅಡುಗೆ ಸಾಮಗ್ರಿ ತರುತ್ತಿದ್ದ. ಪ್ರಾಯದ ಮನುಷ್ಯ ತುಂಬಾ ಒಳ್ಳೆಯವ.
ಸೋಮಪ್ಪ ಬಂದವನೇ, ಸರ್ ನಿಮ್ಗೆ ಚಳಿ ಆಗ್ಬಹುದು ಒಳಗೆ ಬನ್ನಿ ಎಂದ. ಇವನು ಸೂರ್ಯಾಸ್ತ ವರೆಗೆ ಇಲ್ಲಿಯೇ ಇರುವೆ ಆಮೇಲೆ ಬರ್ತೆ ಎಂದ. ಸೋಮಪ್ಪ ಹೆಚ್ಚು ಒತ್ತಾಯ ಮಾಡಲಿಲ್ಲ, ಆಗಲಿ ನಿಮಗೆ ಕಾಫಿ ತರುವೆ ಎಂದು ಕ್ವಾರ್ಟರ್ಸ್ ಒಳಗೆ ಬಂದ.
ಇವನು ಹಾಗೆ ಸುಮ್ಮನೆ ಒಮ್ಮೆ ಗಾಳಿ ಸೇವನೆ ಮಾಡಿ ಬರುವ ಎಂದು ಕೋಲು, ಟಾರ್ಚ್, ಜಾಕೆಟ್ ತೆಗೆದುಕೊಂಡು ಹೊರಟ.
ಆಗಲೇ ಕತ್ತಲಾಗಲು ತೊಡಗಿತ್ತು. ಅಂದಾಜು ಒಂದು ಕಿಲೋಮೀಟರ್ ನಡೆದ ಅವನಿಗೆ ಇನ್ನು ಸಾಕೆನಿಸಿತು. ಹಿಂತಿರುಗೋಣ ಎಂದು ಹಿಂದೆ ನಡೆಯ ತೊಡಗಿದ. ಏನೋ ಯೋಚಿಸಿದವನಿಗೆ ನಡೆದದ್ದು ಗೊತ್ತೇ ಆಗಲಿಲ್ಲ. ಯಾಕಿನ್ನೂ ಕ್ವಾರ್ಟರ್ಸ್ ಬರಲಿಲ್ಲ ಎಂದು ಜೋರು ಜೋರು ನಡೆದ. ಬಂದದಕ್ಕಿಂತ ಜಾಸ್ತಿ ಆಯ್ತಲ್ವಾ ಅಂತ ಅನಿಸಿತು ಅವನಿಗೆ. ಆದರೂ ಹುಡುಕಿ ಹಿಡಿವೆ ಎಂದು ನಡೆದ. ಮತ್ತೊಂದೆರಡು ನಿಮಿಷದಲ್ಲಿ ಅವನಿಗರಿವಾಯಿತು ತಾನು ದಾರಿ ತಪ್ಪಿದೆ ಎಂದು. ಕತ್ತಲಾಗಿತ್ತು. ಕಾಡಿನ ಜಂತುಗಳ ಕಲರವ ಜೋರಾಗಿಯೇ ಇತ್ತು. ಸೋಮಪ್ಪನಿಗೆ ಕಾಲ್ ಮಾಡುವ ಎಂದು ಮೊಬೈಲ್ ತೆಗೆದರೆ ಮೊಬೈಲ್ನಲ್ಲಿ ನೆಟ್ವರ್ಕ್ ಇರಲಿಲ್ಲ. ಟಾರ್ಚ್ ಹಾಕಿ ಹುಡುಕಿ ಹುಡುಕಿ ದಣಿವಾಯಿತು. ಮರ ಹತ್ತಿ ಹುಡುಕಿದರೆ ಸಿಗಬಹುದೋ ಎಂದೆನಿಸಿತು. ಜಿಗಣೆಗಳ ಜಂತುಗಳ ನಡುವೆ ಹೇಗೋ ಮಾಡಿ ಮರ ಹತ್ತಿದ. ಕಪ್ಪನೆಯ ಆಕಾಶ, ಅದರಲ್ಲೊಂದು ನಾಲ್ಕು ನಕ್ಷತ್ರ. ದೂರದಲ್ಲೊಂದು ಮನೆ ಗೋಚರವಾಯಿತು. ಅದೊಂದೇ ಅವನಿಗೀಗ ಆಸರೆ. ಸರಸರನೆ ಮರದಿಂದ ಇಳಿದು ಮನೆ ಇದ್ದ ಕಡೆಗೆ ದಾಪುಗಾಲು ಹಾಕಿ ನಡೆದ. ಹಳೆಯ ಹಳ್ಳಿ ಮನೆ. ನೇರವಾಗಿ ಕದ ತಟ್ಟಿದವನಿಗೆ ಒಬ್ಬ ಅಜ್ಜ ಬಾಗಿಲು ತೆರೆದ. ಯಾರು ನೀವು ಎನ್ನಲು ಇವನು ನಾನು ಫಾರೆಸ್ಟ್ ಆಫೀಸರ್ ದಾರಿ ತಪ್ಪಿ ಬಂದೆ ನಾಳೆ ಬೆಳಗಾಗುತ್ತಿದ್ದಂತೆ ಹೊರಟು ಹೋಗುವೆ ಎಂದ. ಅಜ್ಜ ನಕ್ಕು ಏನಯ್ಯ ಫಾರೆಸ್ಟ್ ಆಫೀಸರ್ ಎನ್ನುವೆ ಕಾಡಿನಲ್ಲಿ ದಾರಿ ತಪ್ಪಿದೆ ಎನ್ನುವೆ, ಫಾರೆಸ್ಟ್ ಆಫೀಸರ್ ಕಾಡಿನಲ್ಲಿ ದಾರಿ ತಪ್ಪುವ ಪ್ರಮೇಯ ಇದೆಯೇ ಎಂದ.
ಅದಕ್ಕೆ ಅವನು “ನಾನು ಹೊಸಬ ನಾಳೆ ಕೆಲಸಕ್ಕೆ ಸೇರುವೆ ಆಮೇಲೆ ತಿಳಿದುಕೊಳ್ಳಬೇಕಷ್ಟೆ” ಎಂದ.
ಅಜ್ಜ ಸರಿ ಎಂದು “ನೀನು ಒಳಗಿನ ಕೋಣೆಯಲ್ಲಿ ಹಾಸಿಗೆ ಹಾಸಿದೆ, ಮಲಗು, ಬೆಳಗೆದ್ದು ಹೋಗುವಿಯಂತೆ” ಎಂದ.
ಒಳಗೋಗಿ ಮಲಗಿದವನಿಗೆ ಒಳಗಿಂದೊಳಗೆ ಏನೋ ಭಯ ಕಳವಳ, ಈ ಅಜ್ಜ ಯಾರೋ ಏನೋ. ನಾನ್ಯಾಕೆ ಸೋಮಪ್ಪನ ಮಾತು ಕೇಳದೇ ಹೊರಟೆ ಎಂದೆಲ್ಲ ಯೋಚನೆಯ ನಡುವೆ ನಿದ್ದೆಗೆ ಜಾರಿದ.
ಬೆಳಗೆದ್ದು ಮನೆಯಿಂದ ಹೊರಗೆ ಬಂದವನಿಗೆ ಅಜ್ಜ ಅಂಗಳದ ಮೂಲೆಯಲ್ಲಿ ಏನೋ ಕೆಲ್ಸ ಮಾಡುವುದು ಕಂಡಿತು.
ಅವನು “ಧನ್ಯವಾದ ನಿಮಗೆ, ತುಂಬಾ ಉಪಕಾರವಾಯ್ತು, ನಾನಿನ್ನು ಹೊರಡುವೆ” ಎಂದ.
ಅಜ್ಜ “ಕಾಫಿ ಕುಡಿದು ಹೊರಡಿ ಸಾಹೇಬ್ರೆ, ಮೊದಲ ದಿನ ಇವತ್ತು ನಿಮ್ಮದು, ಹಾಗೇ ಹೋದರೆ ಹೇಗೆ”
ಎನ್ನುತ್ತಾ ಒತ್ತಾಯವಾಗಿ ಕರೆದೊಯ್ದು “ಜಾನಕಿ ಕಾಫಿ ಕೊಡು ಸಾಹೇಬ್ರಿಗೆ” ಎನ್ನಲು.
ಅಜ್ಜಿ ಜಾನಕಿ ಇಡ್ಲಿ ಮತ್ತು ಕಾಫಿ ಕೊಟ್ಟಳು.
ಸಂಕೋಚದಿಂದ ತಿಂಡಿ ತಿಂದವನು ಇನ್ನೊಮ್ಮೆ ಬರುವೆ ಎಂದು ಹೊರಡಲನುವಾದ. ಕುಳಿತಲ್ಲಿಂದ ಎದ್ದವನಿಗೆ ಹಾಗೇ ಗುಯ್ಯನೇ ತಲೆ ಗಿರ್ ಎನ್ನಿಸಿತು. ಮನೆಯ ಒಳಾಂಗಣದಿಂದ ತಲೆ ಮೇಲೆತ್ತಿ ಹೊರಟವನಿಗೆ ಗೋಡೆಯಲ್ಲಿ ಕನ್ನಿಕಾ ಳ ಫೋಟೋ.
ಅಜ್ಜ “ಇನ್ನೊಮ್ಮೆ ಬರಲು ನೀವು ಈಗ ಹೇಗೆ ಹೋಗುವಿರಿ” ಎಂದು ಸಣ್ಣಕೆ ನಕ್ಕ.
ಅಷ್ಟರಲ್ಲಿ ಅವನು ನೆಲಕ್ಕೆ ಬಿದ್ದ. ಬಾಯಿಯಿಂದ ನೊರೆ ಬರುತ್ತಿತ್ತು.
ಅಜ್ಜ “ಜಾನಕಿ, ನಮ್ಮ ಕನ್ನಿಕಾಳಿಗೆ ಮಾಡಿದ ಮೋಸಕ್ಕೆ ಶಾಸ್ತಿ ಆಯಿತು, ಇಂದು ಅವಳ ಆತ್ಮಕ್ಕೆ ನೆಮ್ಮದಿ ದೊರಕಿತು”
ಜಾನಕಿ “ಈಗ ಈ ಶವವನ್ನು ಏನು ಮಾಡಲಿ”
ಅಜ್ಜ ಮೆಲ್ಲನೆ ಬಾಗಿಲು ಕಡೆಗೆ ತಿರುಗಿದ. “ಅದಕ್ಕೆ ಕನ್ನಿಕಾಳ ಮಾವನಾದ ನಾನು ವ್ಯವಸ್ಥೆ ಮಾಡುವೆ” ಎಂದು ಸೋಮಪ್ಪ ಒಳಗೆ ಬಂದ.!
-ಸಚಿನ್ ಕುಳಮರ್ವ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


