ಅಂಚೆ ಅಣ್ಣನಿಗೊಂದು ಪತ್ರ

Upayuktha
0

 



ಮಸ್ಕಾರ ಅಂಚೆಯ ಅಣ್ಣ,

ನಾವು ಚೆನ್ನಾಗಿ ಇದ್ದೇವೆ. ನೀನು ಹೇಗಿರುವೆ ಎಂದು ಕೇಳುವ ದರ್ದು ನಮಗಿಲ್ಲ ಎಂದು ನೀನು ಭಾವಿಸಿರಬಹುದು ನಿಜ ಇದು ವಾಸ್ತವವೂ ಹೌದು! ಬದಲಾವಣೆಯ ಬದುಕಿನ ಈ ನಾಗಾಲೋಟದಲ್ಲಿ ನಿನ್ನನ್ನು ತುಂಬಾ ದೂರ ಬಿಟ್ಟು ಮುಂದೆ ಬಂದಿದ್ದೇವೆ. ಇದು ಕೇವಲ ಒಬ್ಬಿಬ್ಬರ ತಪ್ಪಲ್ಲ.... ಆದರೂ ಕೂಡ ಇಂದಿಗೂ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಅಧಿಕೃತ ಕೆಲಸ ಕಾರ್ಯಗಳಿಗೆ ನಿನ್ನ ಕಚೇರಿಯ ಅವಶ್ಯಕತೆ ಇದ್ದೇ ಇದೆ.

ಈ ಹಿಂದೆ ಪ್ರೀತಿ ಪ್ರೇಮ ಪ್ರಣಯ ಅಕ್ಕರೆ ವಾತ್ಸಲ್ಯ ತುಂಬಿದ ಪತ್ರಗಳನ್ನು ಹೊತ್ತು ಸಾಗುತ್ತಿದ್ದ ನೀನು ಸಾವು ನೋವು ದೌರ್ಭಾಗ್ಯಗಳ ಸಮಾಚಾರಗಳನ್ನು ಕೂಡ ಹೊತ್ತು ಸಾಗುತ್ತಿದ್ದೆ. ಅತ್ಯವಶ್ಯಕ ಪ್ರಮಾಣ ಪತ್ರಗಳು ಕೂಡ ನಿನ್ನ ಭರವಸೆಯ ಸುಪರ್ದಿಯಲ್ಲಿ ಸೂಕ್ತ ವ್ಯಕ್ತಿಗಳನ್ನು ಹಾಗೂ ಸ್ಥಳವನ್ನು ಅರಸಿ ತಲುಪುತ್ತಿದ್ದವು. ಪ್ರತಿಯೊಂದು ಮನೆಗೆ ನಿನ್ನ ಆತ್ಮೀಯ  ಒಡನಾಟ ಇತ್ತು. ನೀನು ಬಂದರೆ ಚಾಪೆ ಇಲ್ಲವೇ ಜಮಖಾನೆ ಹಾಸಿ ಕೈಗೆ ತಣ್ಣನೆಯ ನೀರು ಕೊಟ್ಟು ನಂತರ ಮಜ್ಜಿಗೆ ಪಾನಕ ಚಹಾದ ಉಪಚಾರ ಮಾಡಿ ಎಲ್ಲರ ಕ್ಷೇಮ ಸಮಾಚಾರವನ್ನು ನೀಡುವ ಆತ್ಮೀಯ ವಲಯ ನಿನ್ನದಾಗಿತ್ತು.

ಆದರೆ ಬದಲಾದ ಕಾಲಘಟ್ಟದಲ್ಲಿ ನಮ್ಮ ನಿಮ್ಮ ಒಡನಾಟ ಕೆಲವೇ ಕೆಲವು ಬೆರಳೆಣಿಕೆಯ ವಿಷಯಗಳಿಗೆ ಉಂಟಾಗಬಹುದೇ ಹೊರತು ಇದೀಗ ನೀನು ನಮ್ಮ ದೈನಂದಿನ ಒಡನಾಡಿ ಖಂಡಿತವಾಗಿಯೂ ಅಲ್ಲ... ಇದು ಕಾಲದ ಪ್ರಭಾವ. ಇದನ್ನು ಅನಿವಾರ್ಯವಾಗಿ ಹಾಗೂ ಅಷ್ಟೇ ಸಹಜವಾಗಿ ನಾವು ನೀವೆಲ್ಲರೂ  ಒಪ್ಪಿಕೊಂಡಿದ್ದೇವೆ.

ಎಲ್ಲರೂ ಸೈಕಲ್ ಬಿಟ್ಟು ಮೊಪೆಡ್ ಗೆ ಮೊಪೆಡ್ ದಿಂದ ಬೈಕ್ ಗೆ, ಬೈಕ್ ನಿಂದ ಕಾರಿಗೆ, ಕಾರಿನಿಂದ ಈಗ ವಿಮಾನದ ಪ್ರಯಾಣಕ್ಕೆ ಬಡ್ತಿ ಪಡೆದು ಬದುಕಿನಲ್ಲಿ ಮುಂದೆ ಸಾಗಿದ್ದಾರೆ..... ಆದರೆ ನೀನು ಮಾತ್ರ ಕಾಲ್ನಡಿಗೆಯಿಂದ ಸೈಕಲ್ಗೆ ಬಂದವನು ಈಗಲೂ ಕೂಡ ತುಸು ಹೆಚ್ಚೆಂದರೆ ಮೊಪೆಡ್ ಗಳಿಗೆ ಬಡ್ತಿ ಪಡೆದಿರುವೆ.

ನಿನ್ನನ್ನು ನಾವು ಮರೆತೇ ಹೋಗಿದ್ದೇವೆ ಎಂಬಷ್ಟರ ಮಟ್ಟಿಗೆ ನಿನ್ನಿಂದ ನಾವು ದೂರವಾಗಿದ್ದೇವೆ. ನೀನು ಕೆಲಸ ಶುರು ಮಾಡಿದ ಮೊದಮೊದಲಲ್ಲಿ ಹಳ್ಳಕೊಳ್ಳಗಳನ್ನು ದಾಟಿ ಕಣಿವೆಗಳನ್ನು ಹತ್ತಿ ಇಳಿದು ಒಂದು ಪತ್ರವನ್ನು ತಲುಪಿಸಲು ಅದೆಷ್ಟೋ ದೂರ ಕ್ರಮಿಸಿದ ಉದಾಹರಣೆಗಳನ್ನು ನಾವು ಕೇಳಿದ್ದೇವೆ. ಮತ್ತೆ ಕೆಲಬಾರಿ ಓದಲು ಬಾರದ ಅನಕ್ಷರಸ್ಥರಿಗೆ ನೀನು ಅಕ್ಷರಶಹ ಬಂಧುವೇ ಸರಿ. ಅವರಿಗೆ ಬಂದ ಪತ್ರಗಳನ್ನು ಅವರ ಮುಂದೆಯೇ ಕುಳಿತು ಓದಿ ನಂತರ ಮತ್ತೊಂದು ಪತ್ರವನ್ನು ಅವರು ಹೇಳಿದಂತೆ ಉತ್ತರ ಬರೆದು ಕೊಂಡೊಯ್ಯುವ ನೀನು ಅವರ ಪಾಲಿಗೆ ಆತ್ಮ ಬಂಧು ಆತ್ಮಸಖ ಅಲ್ಲವೇ ?
ಅವರ ಕಷ್ಟ- ಸುಖಗಳಿಗೆ, ನೋವು ನಲಿವುಗಳಿಗೆ, ಅವರ ಮನೆಯ ಅನಿರೀಕ್ಷಿತ ಆಘಾತ ಸಾವು ಮುಂತಾದ ದುಃಖದ ಫಳಿಗೆಗಳಿಗೆ ನೀನು ಸದಾ ಜೊತೆಯಾಗಿರುವೆ. ಅವರ ಸುಖದಲ್ಲಿ ಹಿಗ್ಗಿರುವೆ, ದುಃಖದಲ್ಲಿ ಕಂಬನಿ ಮಿಡಿದಿರುವೆ, ನೋವಿನಲ್ಲಿ ಸಾಂತ್ವನ ನೀಡಿರುವೆ, ನಲಿವಿನಲ್ಲಿ ಭಾಗಿಯಾಗಿರುವೆ. ಬದುಕು ಒಡ್ಡುವ ಸವಾಲುಗಳಿಗೆ ಅವರು ಖತಿಗೊಂಡು  ಬೇಸರ ಪಟ್ಟಾಗ ಭರವಸೆ ಹುಟ್ಟಿಸಿರುವ ನೀನು ಅವರ ಎಲ್ಲ ಚರ್ಯೆಗಳಿಗೆ ಪ್ರತಿಬಿಂಬವಾಗಿ ನಿಂತಿರುವೆ. ಯಾರಲ್ಲೂ ಹೇಳಿಕೊಳ್ಳಲಾಗದ ತನ್ನ ಮನದಾಳದ ಎಷ್ಟೋ ನೋವುಗಳನ್ನು, ಪತಿಯ ಅಗಲಿಕೆಯಲ್ಲಿ ತಾನು ಪಡುತ್ತಿರುವ ಪಡಿಪಾಟಲನ್ನು ಪತ್ರ ಮುಖೇನ  ಪತ್ನಿ ದೂರದ ಊರಲ್ಲಿರುವ ತನ್ನ ಪತಿಗೆ ಹೇಳಿ ಬರೆಸುವಾಗ ಅಕ್ಷರಶಹ ಆಕೆಯ ಪಾಲಿಗೆ ನೀನು ಅಣ್ಣನೇ ಸರಿ. ನಿನ್ನ ಉದ್ಯೋಗ ಸಂದೇಶಗಳನ್ನು ಹೊತ್ತು ಪತ್ರಗಳನ್ನು ತಲುಪಿಸುವದಷ್ಟೇ ಆಗಿರದೆ ಅವರ ಜೀವ ಭಾವಗಳನ್ನು ಬೆಸೆಯುವ ಕೊಂಡಿ ಕೂಡ ನೀನಾಗಿದ್ದೆ ಎಂದರೆ ಅದೆಷ್ಟು ಭರವಸೆ ನಿನ್ನ ಮೇಲೆ ಅವರು ಇಟ್ಟಿರಬಹುದು ಅಲ್ಲವೇ ?

ಎಷ್ಟೋ ಬಾರಿ ಕೇವಲ ಒಂದು ಪತ್ರವನ್ನು ತಲುಪಿಸಲು, ಒಂದು ಮನಿ ಆರ್ಡರ್ ಮುಟ್ಟಿಸಲು ನೀನು ಹತ್ತಾರು ಕಿಲೋಮೀಟರ್ ನಡೆದರೆ, ಮತ್ತೆ ಕೆಲವೊಮ್ಮೆ ತೀವ್ರ ಅವಸರದ ವಿಷಯವನ್ನು ಹೊತ್ತ  ಒಂದು ಟೆಲಿಗ್ರಾಂ ಕೊಡಲು ನೀನು ಓಡಿ ಬಂದಿರುವುದು ಕೂಡ ಅಷ್ಟೇ ಸತ್ಯ. ಒಂದೊಮ್ಮೆ ದುರ್ಘಟನೆಗಳನ್ನು ಆಕಸ್ಮಿಕ ಸಾವುಗಳನ್ನು ಹೇಳುವಾಗ ಕೇಳಿದವರು ಎದೆಯೊಡೆದ ಪರಿಸ್ಥಿತಿಯಲ್ಲಿ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದವನು ನೀನಲ್ಲವೇ ?. ಮತ್ತೆ ಕೆಲವೊಮ್ಮೆ ಮರೆತ ಮಗನ ಪತ್ತಕ್ಕಾಗಿ, ಮನಿ ಆರ್ಡರ್ ಗಾಗಿ  ಕಾಯುತ್ತಿರುವ ವೃದ್ಧ ತಂದೆ ತಾಯಿಗೆ ಹುಸಿ ಪತ್ರವನ್ನು ಓದಿ ಹಣ ನೀಡಿ  ನೀನು ಸಹಾಯ ಮಾಡಿದವನಲ್ಲವೇ?

ಕೇವಲ ಸರ್ಕಾರ ನಿನಗೆ ಕೊಡುವ ಸಂಬಳಕ್ಕೆ ನೀನು ಕೆಲಸ ಮಾಡಿರುವೆ ಎಂಬುದು ನಿಜವಾದರೂ ಅದರ ಹಿಂದಿರುವ ಬದ್ಧತೆ ಹಾಗೂ ಪ್ರಾಮಾಣಿಕತೆಗೆ ನಿನ್ನನ್ನು ಅದೆಷ್ಟು ಕೊಂಡಾಡಿದರೂ ಸಾಲದು. ನೀನು ಆತ್ಮ ಸಖ, ಆತ್ಮ ಬಂಧು ಎಂದು ಎಲ್ಲರೂ ಹೇಳುವುದು ಇದೇ ಕಾರಣಕ್ಕೆ.

ಆದರೆ ಒಂದು ಮಾತಂತೂ ನಿಜ... ಒಂದು ತಲೆಮಾರಿನ ಹಿಂದಿನ ನಮ್ಮ ಬಾಲ್ಯದ ದಿನಗಳ ಬದುಕನ್ನು ಸುಂದರವಾಗಿಸಿದ ಕೀರ್ತಿ ನಿನಗೆ ಹಾಗೂ ನಮ್ಮ ಪಾಲಕರಿಗೆ ಖಂಡಿತವಾಗಿಯೂ ಸಲ್ಲಬೇಕು. ಈಗಿನ ಹಾಗೆ ಲ್ಯಾಂಡ್ ಲೈನ್, ಮೊಬೈಲ್ಗಳು ಇಲ್ಲದ ಕಾಲವದು. ಬೇರೆಯ ಊರುಗಳಲ್ಲಿ ಇರುವ ಸಂಬಂಧಿಗಳನ್ನು ಸ್ನೇಹಿತರನ್ನು ಸಂಪರ್ಕಿಸಲು ನಮಗೆ ಅಂಚೆಯ ಮಾಧ್ಯಮವೇ ಬೇಕಾಗಿತ್ತು. 

ಪರವೂರಿನಲ್ಲಿ ಓದುತ್ತಿದ್ದ ಮಕ್ಕಳು ತಂದೆ ತಾಯಿಗೆ, ತಂದೆ ತಾಯಿಯರು ಮಕ್ಕಳಿಗೆ, ಇನ್ನೇನು ವಿವಾಹ ನಿಶ್ಚಯವಾಗಿ ಕೆಲವೇ ತಿಂಗಳುಗಳಲ್ಲಿ ಮದುವೆಯಾಗುವ ಗಂಡು ಹೆಣ್ಣುಗಳು ಪರಸ್ಪರರಿಗೆ, ಪ್ರೇಮಿಗಳು ಸ್ನೇಹಿತರು ಒಡಹುಟ್ಟಿದವರು ಹೀಗೆ ಪತ್ರದ ಮೂಲಕವೇ ಸಂಪರ್ಕ ಬೆಳೆಸಬೇಕಿತ್ತು. ನನ್ನ ತಂದೆ ಮನೆಯಲ್ಲಿ ಹತ್ತಾರು ಪೋಸ್ಟ್ ಕಾರ್ಡ್ ಗಳನ್ನು ತಂದಿಟ್ಟು ವರ್ಗವಾಗಿ ದೂರದ ಊರುಗಳಿಗೆ ಹೋದ ನನ್ನ ಆತ್ಮೀಯ ಸ್ನೇಹಿತರಿಗೆ ಪತ್ರ ಬರೆಯಲು ಪ್ರೋತ್ಸಾಹಿಸುತ್ತಿದ್ದರು. ಇಂದಿಗೂ ಆ ಪತ್ರಗಳನ್ನು ನೋಡಿದಾಗ ಮನಸ್ಸಿಗೆ ಅದೆಷ್ಟು ಹಿತವೆನಿಸುತ್ತದೆ ಗೊತ್ತೆ ? ಬಾಲ್ಯದ ಆ ಮುಗ್ಧ ಸ್ನೇಹ ಪರಸ್ಪರರ ಕುರಿತಾದ ಒಳ್ಳೆಯ ಗೌರವ ಆತ್ಮೀಯತೆ ನಮ್ಮನ್ನು ಬೆಸೆದದ್ದು ಪತ್ರಗಳ ಮೂಲಕವೇ. 

ನಮಗೆ ಶಾಲೆಯಲ್ಲಿ ಪತ್ರ ಬರಹ ಎಂಬ ವ್ಯಾಕರಣದ ಒಂದು ಭಾಗವೂ ಕೂಡ ಪಠ್ಯಕ್ಕೆ ಇತ್ತು. ಇಂದಿಗೂ ಇದೆ ಆದರೆ ಅದರ ಉಪಯೋಗ ಎಷ್ಟರಮಟ್ಟಿಗೆ ಆಗುತ್ತದೆ ಎಂಬುದು ನಮಗೆ ಗೊತ್ತಿಲ್ಲ.... ನಾವು ಮಾತ್ರ ಪತ್ರ ಬರಹವನ್ನು ನಮ್ಮ ಬದುಕಿನ ಒಂದು ಭಾಗವಾಗಿಸಿಕೊಂಡಿದ್ದೆವು ಎಂಬುದು ನಮಗೆ ಅತ್ಯಂತ ಹೆಮ್ಮೆಯ ವಿಷಯ.

ಆ ದಿನಗಳಲ್ಲಿ ಪತ್ರ ಬರೆಯುವುದು ಎಂದರೆ ಒಂದು ಸಂಭ್ರಮದ ವಿಷಯ 15 ಪೈಸೆಯ ಹಳದಿ ಬಣ್ಣದ ಪೋಸ್ಟ್ ಕಾರ್ಡ್ 45 ಪೈಸೆಯ ಇಂಗ್ಲೆಂಡ್ ಲೆಟರ್ಗಳು ಎಂದು ಕರೆಯಲ್ಪಡುವ ಇನ್ ಲ್ಯಾಂಡ್ ಲೆಟರ್ ಗಳು  ಇದ್ದು ಸಾಮಾನ್ಯವಾಗಿ ಸ್ವಲ್ಪವೇ ವಿಷಯ ಇರುವಾಗ  15 ಪೈಸೆಯ ಪೋಸ್ಟ್ ಕಾರ್ಡ್ ನಲ್ಲಿ ಯಾ ಹೆಚ್ಚು ವಿಷಯಗಳು ಇದ್ದಾಗ  ಇನ್ ಲ್ಯಾಂಡ್ ಲೆಟರ್ ನಲ್ಲಿಯೂ ಬರೆಯುತ್ತಿದ್ದೆವು. ಕಾರ್ಡ್ ನ ಮೇಲ್ಭಾಗದ ಮಧ್ಯಭಾಗದಲ್ಲಿ ಶ್ರೀ ಎಂದು ಬರೆದು ಪತ್ರದ ಒಂದು ಮೂಲೆಯಲ್ಲಿ  ದಿನಾಂಕವನ್ನು ನಮೂದಿಸಿದರೆ ಮತ್ತೊಂದು ಮೂಲೆಯಲ್ಲಿ ಕ್ಷೇಮ ಎಂದು ಬರೆದು ಅವರವರು ನಮಗೆ ಸಂಬಂಧಿಸಿದ ರೀತಿಯಲ್ಲಿ ಹಿರಿಯರಿಗೆ ತೀರ್ಥರೂಪ ಎಂದೂ, ಸಮವಯಸ್ಕರಿಗೆ ಪ್ರೀತಿಯ ಎಂದೂ, ಸಂಗಾತಿ ಆಗುವ ಮತ್ತು ಆಗಿರುವವರಿಗೆ ಒಲುಮೆಯ ಎಂಬ ಆರಂಭಿಕ ಪದಗಳನ್ನು ಬಳಸಿ ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿ ಅವರ ಕ್ಷೇಮ ಸಮಾಚಾರವನ್ನು ವಿಚಾರಿಸಿ ನಮ್ಮ ಕ್ಷೇಮ ಸಮಾಚಾರದ ಕುರಿತು ಹೇಳಿ ಆರಂಭಿಸಿ ಮೊದಲ ಪ್ಯಾರಾದಲ್ಲಿ ಬರೆದರೆ  ಮಧ್ಯದ ಭಾಗದಲ್ಲಿ ಪತ್ರ ಬರೆದ ಕಾರಣವನ್ನು ತಿಳಿಸಿ ಬರೆಯುತ್ತಿದ್ದೆವು. ಮತ್ತೆ ಅಂತಿಮವಾಗಿ ಉತ್ತರವನ್ನು ಬರೆಯಲು ಕೇಳಿಕೊಂಡು ಪತ್ರಕ್ಕಾಗಿ ಕಾಯುತ್ತಿರುವೆ ಎಂಬ ಶರಾದೊಂದಿಗೆ ಇಂತಿ ನಿಮ್ಮ ಪ್ರೀತಿಯ ಎಂದು ಹೇಳಿ ಪತ್ರವನ್ನು ಮುಗಿಸಿ ಆಯಾ ಊರುಗಳ ವಿಳಾಸವನ್ನು ಬರೆದು ಪೋಸ್ಟಲ್ ಪಿನ್ ಕೋಡ್ ಅನ್ನು ನಮೂದಿಸಿ ಅಲ್ಲಲ್ಲಿ ಇರುತ್ತಿದ್ದ ಕೆಂಪು ಬಣ್ಣದ ಅಂಚೆ ಪೆಟ್ಟಿಗೆಗಳಿಗೆ ಹಾಕಿ ಬಂದರೆ ಒಂದು ಹಂತ ಮುಗಿಯಿತು. ಆ ಪತ್ರ ಈ ದಿನ ತಲುಪಿರಬಹುದು ಎಂದು ಮರುದಿನದಿಂದಲೇ ಎಣಿಕೆ ಆರಂಭಿಸಿ ಅವರ ಉತ್ತರಕ್ಕೆ ಕಾಯುತ್ತಾ ಪ್ರತಿದಿನ ಮನೆಯ ಬಳಿ ಎಡತಾಕುವ ಅಂಚೆ ಅಣ್ಣನಾದ ನಿನಗೆ ನಮ್ಮ ಪತ್ರ ಬಂದಿದೆಯೇ ಎಂದು ಕೇಳುತ್ತಿದ್ದ ನೆನಪು ಇನ್ನೂ ಹಚ್ಚಹಸಿರಾಗಿದೆ.
 
ಬರೆದ ಪತ್ರ ತಲುಪಿದೆಯೇ? ಎಂಬ ಕಾತರ, ತಲುಪಿದರೆ ಉತ್ತರ ಏಕೆ ಬಂದಿಲ್ಲ ? ಎಂಬ ಆತುರದ ಭಾವ, ಬಂದಿಲ್ಲ ಎಂದು ಹೇಳಿ ಹೇಳಿ ಬೇಸತ್ತ ನೀನು ಕೊನೆಗೊಮ್ಮೆ ಬಂದರೆ ಕೊಡುವುದಿಲ್ಲವೇ ಎಂದು ಅಂಚೆಯಣ್ಣನಾದ ನೀನು ಹೇಳುವ ಮಾತಿಗೆ ಬೇಸರ ಪಟ್ಟುಕೊಂಡು ಮನೆಯ ಒಳಗೆ ಬರುತ್ತಿದ್ದದ್ದು ಇನ್ನೂ ನೆನಪಿದೆ. ಹಾಗೆಯೇ ಬಂದ ದಿನ ಜೋರಾಗಿ ಕೂಗಿ ಕರೆಯುತ್ತಾ ನೋಡಿ ನಿಮ್ಮ ಪತ್ರ ಬಂತು ಎಂದು ಹೇಳುತ್ತಿದ್ದುದು ಕೂಡ. ನಿಜ! ನಮ್ಮ ಬಾಲ್ಯದ ಬಹುದೊಡ್ಡ ಕಾತರದ ಕಾಯುವಿಕೆಗೆ ನೀನು ಸಾಕ್ಷಿಯಾಗಿದ್ದೆ, ಸಂತೋಷಕ್ಕೆ ಕಾರಣನಾಗಿದ್ದೆ ಎಂಬುದು ಸುಳ್ಳಲ್ಲ. 

ನಾಲ್ಕು ದಶಕಗಳ ಹಿಂದೆ ಉಂಟಾದ ಟೆಲಿಕಾಂ ಕ್ರಾಂತಿಯಿಂದಾಗಿ ಮನೆ ಮನೆಗಳಿಗೆ ಟೆಲಿಫೋನ್ ಸಂಪರ್ಕಗಳು ದೊರೆತವು. ಕ್ಷೇಮ ಸಮಾಚಾರದ ವಿಷಯಗಳು ನೇರವಾಗಿ ಮಾತಾಡಲ್ಪಟ್ಟು ಪತ್ರ ಮೈತ್ರಿ ಕೊನೆಗೊಂಡಿತು. ಅಧಿಕೃತವಾಗಿ ಹಾಕಲೇಬೇಕಾದ, ಕಳುಹಿಸಲೇಬೇಕಾದ ಪತ್ರಗಳ ಹೊರತಾಗಿ ಪತ್ರದ ಬಳಕೆ ಕಡಿಮೆಯಾಯಿತು.

ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟಂತೆ ಇದೀಗ ಮೊಬೈಲ್ನಲ್ಲಿ ನೂರಾರು ಪುಟಗಳ ಮಾಹಿತಿಯನ್ನು ಕಳುಹಿಸುವ ಸೌಲಭ್ಯ ಇರುವಾಗ ಕೇವಲ ಒಂದೆರಡು ಪುಟಗಳನ್ನು ಬರೆಯುವ ಪಡಿಪಾಟಲು ಯಾರಿಗೆ ಬೇಕು ಅಲ್ವೇ ?

ಫ್ಯಾಕ್ಸ್ ಗಳು ಇಮೇಲ್ ಗಳು, ಪೇಜರ್ ಗಳು, ಹಳೆಯ ಮೊಬೈಲ್ ಸೆಟ್ ಗಳ ಟೆಕ್ಸ್ಟ್ ಮೆಸೇಜ್ಗಳು  ಬಂದ ನಂತರ ನಿನ್ನ ಜನಪ್ರಿಯತೆ ಮತ್ತಷ್ಟು ಕಡಿಮೆಯಾಯಿತು ಟೆಲಿಗ್ರಾಂ ತನ್ನ ಸೇವೆಯನ್ನು ಇತ್ತೀಚೆಗೆ ನಿಲ್ಲಿಸಿದಾಗ ಮನಸ್ಸಿಗೆ ಬೇಸರವಾದರೂ ಕೂಡ ಇದು ಕೂಡ ಬದಲಾವಣೆಯ ಒಂದು ಭಾಗ ಎಂದು ಸ್ವೀಕರಿಸಿದ್ದೆವು. ಈಗ ನೀನು ಕೂಡ ನೇಪಥ್ಯಕ್ಕೆ ಸರಿಯುತ್ತಿರುವೆ... 

ನಿನ್ನ ಕಚೇರಿ ನಿನ್ನನ್ನು ನಿನ್ನ ಸೇವೆಯನ್ನು ಜೀವಂತವಾಗಿರಿಸಿಕೊಳ್ಳಲು ಹಲವಾರು ಚಟುವಟಿಕೆಗಳನ್ನು ನಡೆಸುತ್ತಿದೆ. ಸರ್ಕಾರ ಇಂದಿಗೂ ನಿನ್ನ ಕಚೇರಿಯ ಮೂಲಕ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಉಳಿತಾಯ ಯೋಜನೆಗಳನ್ನು, ರಾಷ್ಟ್ರೀಯ ಉಳಿತಾಯ ಯೋಜನೆಯ ಎನ್ ಎಸ್ ಸಿ ಸರ್ಟಿಫಿಕೇಟ್ಗಳನ್ನು, ಸುಕನ್ಯಾ ಸಮೃದ್ಧಿ ಯೋಜನೆಯ ವಹಿವಾಟನ್ನು,ರೆಕರಿಂಗ್ ಡೆಪಾಸಿಟ್ ನಂತಹ ಸೇವಾ ಸೌಲಭ್ಯಗಳನ್ನು ಮಾತ್ರವಲ್ಲದೆ, ವಿಮಾ ಯೋಜನೆಗಳನ್ನು ಜಾರಿ ಮಾಡಿದ್ದು ಅದರ ಪ್ರಯೋಜನಗಳನ್ನು ಸಾಕಷ್ಟು ಜನರು ಪಡೆಯುತ್ತಿದ್ದಾರೆ ನಿಜ ಆದರೆ ಇದೆಲ್ಲಕ್ಕೂ ಮುಖ್ಯ ತಂತುವಾದ ನಿನ್ನ ಜೊತೆಗೆ ಮಾತ್ರ ಕಾಲನ ಸೆಳೆತಕ್ಕೆ ಸಿಲುಕಿ ನಿಸ್ತಂತುವಾಗಿ ದೂರ ಸರಿದಿರುವ ನಾವುಗಳು ಹೇಳುವುದಿಷ್ಟೇ. ನಮ್ಮ ಬಾಲ್ಯದ ಹತ್ತು ಹಲವಾರು ನೆನಪಿಸಿಕೊಳ್ಳುವ ವ್ಯಕ್ತಿಗಳಲ್ಲಿ ನೀನೂ ಒಬ್ಬ. ನಮ್ಮ ಕಾತರದ, ಕುತೂಹಲದ ಪ್ರಶ್ನೆಗಳಿಗೆ ನಕ್ಕು ತಲೆಯಾಡಿಸಿ ಸೈಕಲ್ ಏರಿ ಹೋಗುತ್ತಿದ್ದ  ನಿನ್ನ ಸೇವೆ ಸದಾಸ್ಮರಣೀಯ. ಅಷ್ಟರಮಟ್ಟಿಗೆ ನಾವು ನಿನಗೆ ಕೃತಜ್ಞರು.

 ಇಂತಿ ನಿನ್ನ ಪ್ರೀತಿಯ ಅಂಚೆ ಬಂಧುಗಳು



- ವೀಣಾ ಹೇಮಂತ್ ಗೌಡ ಪಾಟೀಲ್ 
ಮುಂಡರಗಿ ಗದಗ್

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top