ನಾಯಕನಾದವನು ತಮ್ಮ ಪಕ್ಷದ ಎಲ್ಲರನ್ನೂ ವಿಶ್ವಾಸದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ ಅಂತಾದರೆ... ಅದಕ್ಕೆ ನಾಯಕನಾದವನೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಇದು ಒಂದು.
ಹಿಂದೆ 'ಆಪರೇಷನ್' ಮಾಡಿ ಅಧಿಕಾರಕ್ಕೆ ಬರುವಾಗ ಹೆಣೆದ ತಂತ್ರಗಾರಿಕೆಯನ್ನು (ಅದು ಸರಿ ಅಥವಾ ತಪ್ಪು ಅನ್ನುವುದನ್ನು ಬದಿಗಿಡುವ, ಅದು ಬೇರೆ ಚರ್ಚೆ), ಅದೇ ರೀತಿಯಲ್ಲಿ 'ಆಪರೇಷನ್' ಮಾಡುವವರು ವಿರೋಧಿ ಪಕ್ಷದಲ್ಲಿ ಇರುತ್ತಾರೆ ಎನ್ನುವುದು ಪಕ್ಷ ನಾಯಕನು ಸದಾ ಗಮನದಲ್ಲಿ ಇಟ್ಟುಕೊಳ್ಳಬೇಕು. ಇದು ನಾಯಕನಲ್ಲಿ ಇಲ್ಲದಿರುವುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದು ಇನ್ನೊಂದು.
"ಎಲ್ಲರೂ ದೇವಸ್ಥಾನದಲ್ಲಿ ನಾಳೆ ಪ್ರಮಾಣ ಮಾಡಬೇಕು" ಎಂದು, ಪಕ್ಷದ ಎಲ್ಲಾ ಸದಸ್ಯರನ್ನು ದೇವಸ್ಥಾನಕ್ಕೆ ಕರೆದು, ಅಪರಾಧ ಪತ್ತೆ ಹಚ್ಚಲು, ತನಿಖೆ ಮಾಡಲು ದೇವಸ್ಥಾನವನ್ನು ಬಳಸಿಕೊಳ್ಳುವುದು ಪಕ್ಷದ ಇಮೇಜಿಗೆ ದಕ್ಕೆ ತರುವಂತಹದ್ದಾಗಬಹುದು ಎಂದೂ ಪಕ್ಷ ನಾಯಕ ಯೋಚಸದೇ ಇರುವುದೂ ಮತ್ತೊಂದು ಗಂಭೀರ ವಿಚಾರ.
"ತನಿಖೆಯ ನಂತರ ತಪ್ಪು ಮಾಡಿದವರನ್ನು ಉಚ್ಛಾಟನೆ ಮಾಡಲಾಗುವುದು" ಎಂಬ ಹೇಳಿಕೆಯೂ ಇವತ್ತು ನಾಯಕನ ಅಧಿಕಾರ ವ್ಯಾಪ್ತಿಯಲ್ಲಿ ಇದೆಯಾ? (ವಾಸ್ತವವಾಗಿ ಇದೆಯಾ?) ಎನ್ನುವುದನ್ನು ಸ್ವತಃ ನಾಯಕನೇ ಯೋಚಸದೇ ಹೇಳಿಕೆ ಕೊಡುವುದು ನಾಯಕನ ದೌರ್ಬಲ್ಯವಾಗಿ ಕಾಣಿಸುತ್ತದೆ. ಇದು ಮಗದೊಂದು.
ಅದಕ್ಕಿಂತ "ತನಿಖೆಯ ನಂತರ ತಪ್ಪು ಮಾಡಿದವರನ್ನು ಉಚ್ಛಾಟನೆ ಮಾಡಲಾಗುವುದು" ಎಂದು ಪಬ್ಲಿಕ್ ಡೊಮೈನ್‌ಗಳಲ್ಲಿ ಮಾತಾಗಿ ಆಡುವುದೂ... ನಾಯಕನಲ್ಲಿ ಇರುವ ಆಕ್ರಮಣಕಾರಿ ಸ್ವಭಾವ ಮತ್ತು ಸುಳ್ಳು ಬೆದರಿಕೆಯ ಪ್ರದರ್ಶನವಾಗಿ ಕಾಣಿಸುತ್ತಿದೆ. ಲೀಡರ್ ಆದವನಲ್ಲಿ ತಮ್ಮವರೊಂದಿಗೇ ಆಕ್ರಮಣಕಾರಿ ಸ್ವಭಾವ ಇರಬಾರದು. ಆಕ್ರಮಣಕಾರಿ ಗುಣ ಪ್ರದರ್ಶನ ಇರಬೇಕಾದುದು ವಿರೋಧಿಗಳ ಅಕ್ರಮ ನಡವಳಿಕೆಗಳ ಮೇಲೆ.
ಇದು ಮತ್ತೊಂದು.
ಓಕೆ, ನಾಳೆ ತಪ್ಪು ಮಾಡಿದವರು ಯಾರು ಅಂತ ಗೊತ್ತಾದ ಮೇಲೆ, ಆ ನಾಲ್ಕು ಜನರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಸಾಧ್ಯವಾಗದೇ ಹೋದರೆ, ಆಗ ನಾಯಕನ ವರ್ಚಸ್ಸು ಮತ್ತಷ್ಟು ಕಡಿಮೆ ಆಗುತ್ತದೆ. ಒಳ ಜಗಳದಲ್ಲಿ ನಾಯಕನ ವಿರುದ್ಧ ನಾಲ್ಕು ಜನರಿಗೆ ಗೆಲುವು ಸಿಕ್ಕಂತಾಗುತ್ತದೆ. ವಿರುದ್ಧವಾಗಿ ನಿಂತು ಗೆದ್ದವರನ್ನು ಬಿಸಿ ತುಪ್ಪವಾಗಿ ಪಕ್ಷದಲ್ಲಿ ಇಟ್ಟುಕೊಂಡು ಪಕ್ಷವನ್ನು ಮುನ್ನೆಡೆಸುವುದೂ ನಾಯಕನಿಗೆ ಒಂದು ಸವಾಲಿನ ಕೆಲಸ. ಅದು ನಾಯಕನಾದವನಿಗೆ ಸಾಧ್ಯವಾಗುತ್ತದೆಯಾ? ಅಂತ ನಾಯಕನಾದವನೇ ಪೂರ್ವದಲ್ಲೇ ಪರಾಮರ್ಶನ ಮಾಡಿಕೊಳ್ಳಬೇಕು.
ಅಷ್ಟಕ್ಕೂ ಆ ನಾಲ್ವರು ಯಾರು ಅನ್ನುವುದು ಈಗಾಗಲೆ ನಾಯಕನಿಗೆ ಗೊತ್ತಿರಬಹುದು!? ಗೊತ್ತಿದ್ದರೆ, ಅವರನ್ನು ಅಹಂಕಾರದಿಂದ ಎದುರಿಸುವುದರ ಬದಲಾಗಿ, ವಿಶ್ವಾಸದಿಂದ 'ಹತ್ತಿರಕ್ಕೆ' ಬರಮಾಡಿಕೊಂಡು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳವುದರ ಬಗ್ಗೆಯೂ ಯೋಚಿಸಬೇಕು. ಉತ್ತರ ಸಾಧ್ಯವಿಲ್ಲ ಅಂತಾದಲ್ಲಿ ಮೇಲಿನ ನಾಯಕರೊಂದಿಗೆ ಸಂವಹನ ಮಾಡಿ, ಮನವರಿಕೆ ಮಾಡಿ, ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಇಂತಹ ಸೂಕ್ಷ್ಮ ವಿಚಾರದಲ್ಲಿ ಮೇಲಿನ ನಾಯಕರು ತನ್ನ ಮಾತಿಗೆ ಬೆಲೆ ಕೊಡುವಷ್ಟು ತಾನು ಸಮರ್ಥ ನಾಯಕನಾಗಿ ತನ್ನನ್ನು ತಾನು ನಾಯಕತ್ವ ಗುಣಗಳ ಸಾಮರ್ಥ್ಯದಿಂದ ಪ್ರತಿಷ್ಟಾಪನೆ ಮಾಡಿಕೊಂಡಿದ್ದೇನಾ? ಅಂತಲೂ ನಾಯಕನಾದವನು ತನ್ನನ್ನು ತಾನು ಕೇಳಿಕೊಳ್ಳಬೇಕು.
ತಾನು ನಾಯಕನಾಗಿರುವುದು ತನ್ನ ಸ್ವ ಸಾಮರ್ಥ್ಯದಿಂದಲೋ ಅಥವಾ ಕುಟುಂಬದ ಪ್ರಭಾವ, ಜಾತಿ ಪ್ರಭಾವ, ಯಾರದ್ದೋ ಯಾವುದೋ ಒತ್ತಡಕ್ಕೋ ಎಂಬುದನ್ನೂ ನಾಯಕನಾದವನು ಚಿಂತನೆ ಮಾಡಿಕೊಳ್ಳಬೇಕು. ಒಂದು ವೇಳೆ ಕುಟುಂಬದ ಪ್ರಭಾವ, ಜಾತಿ ಪ್ರಭಾವ, ಯಾರದ್ದೋ ಯಾವುದೋ ಒತ್ತಡಕ್ಕೋ ಆಗಿದ್ದಲ್ಲಿ, ಸ್ವ ಸಾಮರ್ಥ್ಯದಿಂದ ನಾಯಕತ್ವ ಪಡೆದವನು ಹೊಂದಿರಬಹುದಾದ ಎಲ್ಲಾ ಸಾಮರ್ಥ್ಯ ಗುಣಗಳನ್ನು ಅಧ್ಯಯನ ಮಾಡಿ, ಅಳವಡಿಸಿಕೊಳ್ಳಬೇಕಾಗುತ್ತದೆ. ಅದಾಗಿದೆಯಾ? ಎಂದು ನಾಯಕನಾದವನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.
ಇಷ್ಟಕ್ಕೂ ಪಕ್ಷದಲ್ಲಿ ನಾಲ್ಕು ಜನರು ತಪ್ಪು ಮಾಡಿದ್ದರೆ, ಮಾಡಿ ಪಕ್ಷ ವಿರೋಧಿಯಾಗಿದ್ದರೆ... ಅದರ ಕಾರಣ ಕಂಡುಕೊಳ್ಳುವುದು ನಾಯಕನಾದವನ ಮೊದಲ ಆದ್ಯತೆ ಆಗಬೇಕು.
ಪಕ್ಷದ ನಾಯಕನಾದವನೇ ಮೊದಲು ಸಮರ್ಥ ನಾಯಕನಾಗಬೇಕು. ರಾಜಕಾರಣದ ಸ್ಥಳದಲ್ಲಿ ತಾನೇ ಸಮರ್ಥ ಧರ್ಮಾಧಿಕಾರಿಯಾಗಬೇಕು.
ನಾಯಕತ್ವದ ಅಧಿಕಾರ ಧರ್ಮ, ನ್ಯಾಯ, ನೀತಿ, ಸಹೃದಯತೆ, ಸಾಮರ್ಥ್ಯಗಳ ನೆರಳಿನಲ್ಲಿ ಇರಬೇಕು. ಅಹಂಕಾರ, ಪ್ರತಿಷ್ಠೆ, ದಾರ್ಷ್ಟ್ಗಳ ನೆರಳಿನಲ್ಲಿ ಅಲ್ಲ.
ಕೆಲವು ಫಲಿತಾಂಶಗಳ ಮೂಲಕ, ರಾಜಕೀಯದ ತಜ್ಞರ ಪ್ರಕಾರ, ಮಾಧ್ಯಮಗಳಲ್ಲಿ ಬಿಂಬಿಸಲ್ಪಡುತ್ತಿರುವುದರ ಪ್ರಕಾರ, ನಾಯಕನ ಮಾತಿನ ಧ್ವನಿಯ ಪ್ರಕಾರ ನಾಯಕ ಎರಡನೇ ನೆರಳಿನಲ್ಲಿ ಇರುವಂತಿದೆ!?
ಅದೇ ಹೌದಾಗಿದ್ದರೆ ಕೊರತೆಯನ್ನು ಕೂಡಲೇ ಸರಿಪಡಿಸಿಕೊಳ್ಳಬೇಕಾಗಿದೆ. ಮೊದಲ ನೆರಳಿಗೆ ಬರಬೇಕಾಗಿದೆ.
ಪಕ್ಷಕ್ಕೆ, ಪಕ್ಷ ಮುಂದೆ ಅಧಿಕಾರಕ್ಕೆ ಬರುವುದಕ್ಕೆ, ಪಕ್ಷ ಅಧಿಕಾರಕ್ಕೆ ಬಂದರೆ ಉನ್ನತ ಜವಾಬ್ದಾರಿಯ ಹೊಣೆ ಹೊತ್ತು ನಿಭಾಯಿಸುವುದಕ್ಕೆ ಕೊರತೆ ಸರಿಪಡಿಸುವ ಕೆಲಸವನ್ನು ನಾಯಕನೇ ಅಗತ್ಯ ಚಿಂತನೆಯೊಂದಿಗೆ ತಕ್ಷಣ ಮಾಡಬೇಕಾಗಿದೆ.
ಬಹುಶಃ ಪಕ್ಷದ ಸದಸ್ಯರ, ಕಾರ್ಯಕರ್ತರ, ಪಕ್ಷಕ್ಕೆ ಮತ ಹಾಕುವವರ ನಿರೀಕ್ಷೆಯೂ ಇದೇ ಆಗಿರುತ್ತದೆ?
(ಹಿಂದೆ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ, ಪ್ರಮೋಷನ್ ನೀಡಿ, ಜವಾಬ್ದಾರಿಯನ್ನು ಹೆಚ್ಚಿಸಿದ ಸಮಯದಲ್ಲಿ ನಾಯಕತ್ವ ಗುಣಗಳು ಸಬ್ಜೆಕ್ಟ್‌ನಲ್ಲಿ ನೀಡಲ್ಪಟ್ಟ ತರಬೇತಿ ಯಲ್ಲಿನ ಸಿಲಬಸ್ ಇಟ್ಟುಕೊಂಡು, ಸಾಂದರ್ಭಿಕವಾಗಿ ಈ ಬರಹ ಬರೆಯಲಾಗಿದೆ)
-ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


