ಪ್ರಾಚೀನ ವೈದ್ಯಶಾಸ್ತ್ರ ಪದ್ಧತಿಯ ಅನಾವರಣ ಇಂದಿನ ತುರ್ತು ಅಗತ್ಯ: ಡಾ. ನಾರಾಯಣಂ ಶ್ರೀಕಾಂತ್

Upayuktha
0

 


ಉಡುಪಿ: ಭಾರತೀಯ ಹಸ್ತಪ್ರತಿಗಳಲ್ಲಿ ಅಡಗಿರುವ ಪ್ರಾಚೀನ ವೈದ್ಯಶಾಸ್ತ್ರ ಹಾಗೂ ಆಯುರ್ವೇದ ಪದ್ಧತಿಯನ್ನು ಜಗತ್ತಿಗೆ ಅನಾವರಣಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕೇಂದ್ರೀಯ ಆಯುರ್ವೇದೀಯ ವಿಜ್ಞಾನ ಅನುಸಂಧಾನ ಪರಿಷತ್ (CCRAS) ಸಂಸ್ಥೆಯ ಉಪ ಮಹಾನಿರ್ದೇಶಕರಾದ ಡಾ. ನಾರಾಯಣಂ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.


ಉಡುಪಿಯ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ವಾರಗಳ 'ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರ'ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.


ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ಹಾಗೂ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರ ಪರಮಾನುಗ್ರಹದೊಂದಿಗೆ ಈ ಕಾರ್ಯಕ್ರಮ ಜರುಗಿತು. ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ (ರಿ), ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ (CSU) ಹಾಗೂ ಕೇಂದ್ರೀಯ ಆಯುರ್ವೇದೀಯ ವಿಜ್ಞಾನ ಅನುಸಂಧಾನ ಪರಿಷತ್ (CCRAS) ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ ಈ ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು.


ಕಾರ್ಯಾಗಾರದಲ್ಲಿ ತುಳು ಹಾಗೂ ಪ್ರಾಚೀನ ಕನ್ನಡ ಲಿಪಿಗಳನ್ನು ಯಶಸ್ವಿಯಾಗಿ ಕಲಿತ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ. ನಾರಾಯಣಂ ಶ್ರೀಕಾಂತ್ ಅವರು ಹಲವು ಪ್ರಮುಖ ಆಶ್ವಾಸನೆಗಳನ್ನು ನೀಡಿದರು. ಅವುಗಳೆಂದರೆ, 

ವ್ಯಾಪಕ ಯೋಜನೆ: ಮುಂದಿನ ದಿನಗಳಲ್ಲಿ ದೇಶಾದ್ಯಂತ ಮತ್ತಷ್ಟು ವ್ಯಾಪಕವಾದ ಲಿಪಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು.

ಪುಸ್ತಕ ಪ್ರಕಾಶನಕ್ಕೆ ಆರ್ಥಿಕ ಸಾಥ್: ಭಾರತದ ಮನೆ-ಮನೆಗಳಲ್ಲಿ ಲಭ್ಯವಿರುವ ವೈದ್ಯಶಾಸ್ತ್ರ, ರಸಶಾಸ್ತ್ರ ಹಾಗೂ ಮನೆಮದ್ದುಗಳ ಹಸ್ತಪ್ರತಿಗಳನ್ನು ಲಿಪ್ಯಂತರಗೊಳಿಸಿ, ಶುದ್ಧ ಪ್ರತಿಗಳನ್ನು ಸಿದ್ಧಪಡಿಸಲು ಮತ್ತು ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಭಾರತ ಸರ್ಕಾರದ CCRAS ಸಂಸ್ಥೆಯು ಸಂಪೂರ್ಣ ನೆರವು ನೀಡಲಿದೆ.

ಸಂಶೋಧಕರಿಗೆ ಮನ್ನಣೆ: ಲಿಪ್ಯಂತರ ನಡೆಸಿದ ಸಂಶೋಧಕರ ಹೆಸರಿನಲ್ಲೇ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಪ್ರಾಚೀನ ಜ್ಞಾನವನ್ನು ಸಾಮಾಜಿಕವಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಸಂಸ್ಥೆ ಕಟಿಬದ್ಧವಾಗಿದೆ.

ಕರಾವಳಿಯಲ್ಲಿ ಹೊಸ ಚಾಲನೆ: ಈಗಾಗಲೇ ಉತ್ತರ ಮತ್ತು ಪೂರ್ವ ಭಾರತದಲ್ಲಿ ಈ ಕಾರ್ಯವು ವೇಗವಾಗಿ ನಡೆಯುತ್ತಿದ್ದು, ಪ್ರಸ್ತುತ ಕಾರ್ಯಾಗಾರದ ಮೂಲಕ ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ಈ ಸಂಶೋಧನಾ ಕಾರ್ಯಕ್ಕೆ ದಿಕ್ಸೂಚಿ ಸಿಕ್ಕಂತಾಗಿದೆ.


ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ವಿದ್ವಾಂಸ ಡಾ. ಪಾದೇಕಲ್ ವಿಷ್ಣು ಭಟ್ ಅವರು ಹಸ್ತಪ್ರತಿ ಲಿಪಿಗಳ ಸೊಬಗು ಮತ್ತು ಅವುಗಳಲ್ಲಿ ಅಡಗಿರುವ ಸ್ವಾರಸ್ಯಕರ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಬೆಂಗಳೂರಿನ ಕೇಂದ್ರೀಯ ಆಯುರ್ವೇದ ಸಂಸ್ಥೆಯ ನಿರ್ದೇಶಕರಾದ ಡಾ. ಟಿ. ಮಹೇಶ್ವರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎರಡು ವಾರಗಳ ಕಾಲ ಶಿಬಿರದ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿದ್ದ ನವದೆಹಲಿ CCRAS ನ ಸಂಸ್ಕೃತ ವಿದ್ವಾಂಸ ಡಾ. ದಿಲೀಪ್ ಕುಮಾರ್ ಕಾರ್ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.


ಈ 15 ದಿನಗಳ ತರಬೇತಿ ಶಿಬಿರದಲ್ಲಿ ಉದ್ಯಾವರದ ಎಸ್‌ಡಿಎಂ (SDM) ಆಯುರ್ವೇದ ಕಾಲೇಜು, ಹಾಸನದ ಎಸ್‌ಡಿಎಂ ಕಾಲೇಜು ಹಾಗೂ ಶ್ರೀ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಲಿಪಿ ಜ್ಞಾನವನ್ನು ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.


ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಚ್ಯ ಸಂಚಯ ಪ್ರತಿಷ್ಠಾನದ ಡಾ. ಕೃಷ್ಣಯ್ಯ, ತುಳು ಲಿಪಿ ವಿದ್ವಾಂಸ ಹಾಗೂ 'ಸುಗುಣಮಾಲಾ' ಪತ್ರಿಕೆಯ ಸಂಪಾದಕ ಶ್ರೀ ಮಹಿತೋಷ ಆಚಾರ್ಯ, ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀನಿಕೇತನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಿ. ವಿ. ಕಲ್ಲಾಪುರ ಮತ್ತು ಬೆಂಗಳೂರು IGNC ಸಂಸ್ಥೆಯ ಡಾ. ಸದ್ಯೋಜಾತ ಭಟ್ ಭಾಗವಹಿಸಿದ್ದರು.


ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ವಿದ್ವಾನ್ ಶ್ರೀಧರ ಆಚಾರ್ಯ ಸ್ಥಳೀಯ ಸಂಯೋಜಕರಾಗಿ ಸಹಕರಿಸಿದರು. ಪ್ರತಿಷ್ಠಾನದ ನಿರ್ದೇಶಕ ಹಾಗೂ ಕಾರ್ಯಕ್ರಮದ ಮುಖ್ಯ ಸಂಘಟಕರಾದ ಡಾ. ಬಿ. ಗೋಪಾಲಾಚಾರ್ ಅವರು ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top