AI ಯುಗದಲ್ಲಿ ಬದಲಾವಣೆಗೆ ಹೊಂದಿಕೊಂಡವರೇ ಯಶಸ್ವಿಗಳು: ಕಿಶೋರ್ ಪಿ. ದುರ್ಗ್

Upayuktha
0


ಬೆಂಗಳೂರು: ಒಂದು ಕಾಲದಲ್ಲಿ ತಾಂತ್ರಿಕ ಬೆಳವಣಿಗೆಗಳು ಐದರಿಂದ ಹತ್ತು ವರ್ಷಗಳಿಗೊಮ್ಮೆ ಸಂಭವಿಸುತ್ತಿದ್ದವು. ಆದರೆ ಇಂದು ಕೃತಕ ಬುದ್ಧಿಮತ್ತೆ (AI) ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಬದಲಾವಣೆಗಳು ವಾರಗಳು ಅಥವಾ ದಿನಗಳಲ್ಲೇ ನಡೆಯುತ್ತಿವೆ. ಈ ವೇಗದ ಜಗತ್ತಿನಲ್ಲಿ ಹೊಂದಿಕೊಳ್ಳುವ ಸಾಮರ್ಥ್ಯವೇ ಯಶಸ್ಸಿನ ಗುಟ್ಟು ಎಂದು ಆಕ್ಸೆಂಚರ್ ಲರ್ನ್ ವೆಂಟೇಜ್‌ನ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಗ್ಲೋಬಲ್ ಲೀಡ್ ಕಿಶೋರ್ ಪಿ. ದುರ್ಗ್ ಹೇಳಿದರು.


ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2026-30ನೇ ಸಾಲಿನ ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು 18 ವರ್ಷಗಳಲ್ಲಿ ಪಡೆಯುವ ಜ್ಞಾನವನ್ನು AI ಕೆಲವೇ ತಿಂಗಳುಗಳಲ್ಲಿ ಅಥವಾ ವಾರಗಳಲ್ಲಿ ಅಳವಡಿಸಿಕೊಳ್ಳಬಲ್ಲದು. ಆದ್ದರಿಂದ ನಿರಂತರವಾಗಿ ಹೊಸ ಕೌಶಲ್ಯಗಳನ್ನು ಕಲಿತು, ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ. ನಿಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಸಮಾಜಕ್ಕೆ ಮೌಲ್ಯ ಸೃಷ್ಟಿಸುವ ದಿಕ್ಕಿನಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.


ಓರಿಯಂಟೇಶನ್ ಕಾರ್ಯಕ್ರಮದ ಎರಡನೇ ದಿನ ಮಾತನಾಡಿದ ಕರ್ನಾಟಕ ಹೈಬ್ರಿಡ್ ಮೈಕ್ರೋ ಡಿವೈಸಸ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ, ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ. ಇ. ದ್ವಾರಕದಾಸ್, ಯಶಸ್ಸು ಎಂದರೆ ಕೇವಲ ಹಣ ಸಂಪಾದಿಸುವುದಲ್ಲ; ಉತ್ತಮ ಹೆಸರು ಗಳಿಸಿ ಸಮಾಜದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವುದೇ ನಿಜವಾದ ಯಶಸ್ಸು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಪ್ರಥಮ ವರ್ಷದ ಬಿ.ಟೆಕ್‌ಗೆ ಪ್ರವೇಶ ಪಡೆದ ಸುಮಾರು 1,400 ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸಂಸ್ಥೆಯ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶಿಸ್ತು ಮತ್ತು ಸಮಯ ನಿರ್ವಹಣೆಯ ಮಹತ್ವವನ್ನು ತಿಳಿಸಿದರು. ಉಪಪ್ರಾಂಶುಪಾಲ ಡಾ. ಜೆ. ಸುಧೀರ್ ರೆಡ್ಡಿ ಉದ್ಯಮ ಬೆಂಬಲಿತ ಅತ್ಯಾಧುನಿಕ ಪ್ರಯೋಗಾಲಯಗಳು, ಅಂತರರಾಷ್ಟ್ರೀಯ ಸಹಯೋಗಗಳು ಹಾಗೂ ಸಂಸ್ಥೆಯ ವಿವಿಧ ಶೈಕ್ಷಣಿಕ ಉಪಕ್ರಮಗಳ ಕುರಿತು ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜಾ ವಹಿಸಿದ್ದರು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸ್ನೇಹ ಸಂಬಂಧಗಳನ್ನು ಬೆಳೆಸಿಕೊಳ್ಳುವ ಮಹತ್ವವನ್ನು ಅವರು ವಿವರಿಸಿದರು.


ಈ ಸಂದರ್ಭದಲ್ಲಿ ಬೆಂಗಳೂರು ಕ್ಯಾಂಪಸ್‌ನ ಡೆಪ್ಯೂಟಿ ರಿಜಿಸ್ಟ್ರಾರ್ ಡಾ. ಕವಿತಾ ಕಾಮತ್, ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಡಾ. ಕಿರಣ್ ಐತಾಳ್, ಪರೀಕ್ಷಾ ನಿಯಂತ್ರಕ ಡಾ. ಪ್ರಶಾಂತ್ ವಿ., ಡಾ. ಸುಮಶ್ರೀ ಪಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಹಿತಾ ಡಿ. ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top