ಕಥೆ: ಪ್ರೀತಿಯ ಬೆಳಕು

Upayuktha
0


ಗರದ ಆ ಪ್ರಸಿದ್ಧ ಬಟ್ಟೆ ಅಂಗಡಿಯಲ್ಲಿ ಆ ದಿನ ಜನ ತುಂಬಿ ತುಳುಕುತ್ತಿದ್ದರು. ಹಬ್ಬದ ಸೀಸನ್‌ನ ಗಡಿಬಿಡಿ ಒಂದೆಡೆಯಾದರೆ, ರಿಯಾಯಿತಿಯ ಆಕರ್ಷಣೆಗೆ ಮುಗಿಬಿದ್ದ ಜನರ ಗಲಾಟೆ ಇನ್ನೊಂದೆಡೆಯಾಗಿ ಜನರ ಜಾತ್ರೆ ನೆರೆದಂತಾಗಿತ್ತು.


ತನ್ನ ಆಪ್ತ ಗೆಳೆಯ ಮಾಧವನ ಜೊತೆ ಬಿಲ್ ಪಾವತಿಸಲು ಸಾಲಿನಲ್ಲಿ ನಿಂತಿದ್ದ ಸೂರ್ಯನಾರಾಯಣನ ದೃಷ್ಟಿ ಅನಿರೀಕ್ಷಿತವಾಗಿ ಪಕ್ಕದ ಸಾಲಿನಲ್ಲಿ ನಿಂತಿದ್ದ ಒಬ್ಬ ಮಹಿಳೆಯ ಮೇಲೆ ಬಿತ್ತು. ಹಸಿರು ಬಣ್ಣದ ಸೀರೆಯುಟ್ಟು ತಮಗೆ ಬೆನ್ನು ಹಾಕಿ ನಿಂತಿದ್ದ ಆಕೆಯನ್ನು ನೋಡಿದೊಡನೆ ಸೂರ್ಯನಾರಾಯಣನ ಎದೆಯಲ್ಲಿ ಯಾವುದೋ ಹಳೆಯ ನೆನಪಿನ ತಂತಿ ಮೀಟಿದಂತಾಯಿತು.


"ಅದು… ಆ ಸರಳಾ ಅಲ್ಲವೇ?" ಸೂರ್ಯನಾರಾಯಣ ತನ್ನ ಪಕ್ಕದಲ್ಲಿದ್ದ ಮಾಧವನ ಕಿವಿಯಲ್ಲಿ ಮೆಲ್ಲನೆ ಪಿಸುಗುಟ್ಟಿದ.


ಮಾಧವ ತಕ್ಷಣ ಆ ಕಡೆ ಕಣ್ಣು ಹಾಯಿಸಿದ. ಕ್ಷಣಾರ್ಧದಲ್ಲಿ ಆ ಮಹಿಳೆ ಇವರತ್ತ ತಿರುಗಿದಳು. ಹೌದು, ಅದು ಸರಳಾ! ಅವರ ಕಣ್ಣುಗಳು ಪರಸ್ಪರ ಸಂಧಿಸಿದವು. ಕಾಲದ ಸುಳಿಯಲ್ಲಿ ಹತ್ತು ವರ್ಷಗಳ ಹಿಂದಕ್ಕೆ ಜಾರಿದ್ದ ಆ ಮುಖ ಈಗ ಮತ್ತೆ ಕಣ್ಣೆದುರಿಗಿತ್ತು.


"ಸೂರ್ಯ….!" ಅವಳ ಧ್ವನಿಯಲ್ಲಿ ಆಶ್ಚರ್ಯ ಮತ್ತು ಅಳುಕಿನ ಮಿಶ್ರಣವಿತ್ತು. ನಿಧಾನವಾಗಿ ಹೆಜ್ಜೆ ಹಾಕುತ್ತಾ ಇವರ ಹತ್ತಿರ ಬಂದಳು.


ಸೂರ್ಯನಾರಾಯಣ ಮುಖದಲ್ಲಿ ಕಷ್ಟಪಟ್ಟು ಒಂದು ಸಣ್ಣ ನಗು ಮೂಡಿಸಿದ. ಸರಳಾ ಮೆಲ್ಲನೆ ಮಾಧವನತ್ತ ತಿರುಗಿ, "ಏ ಮಾಧವ… ನೀನು ಇನ್ನೂ ಇವನ ಜೊತೆಯಲ್ಲೇ ಇರುವೆಯಾ?" ಎಂದು ಕೇಳಿದಳು.


"ಮಧ್ಯದಲ್ಲಿ ಕೈ ಬಿಟ್ಟು ಹೋಗಲು ಸ್ನೇಹ ಅಂದರೆ ಪ್ರೀತಿಯಲ್ಲವಲ್ಲ ಸರಳಾ, ಅದು ಜೀವನಪರ್ಯಂತ ಇರುವ ಬಂಧ" ಮಾಧವ ಸಹಜವಾಗಿ ನಗುತ್ತಾ ಹೇಳಿದಾಗ ಆ ಮಾತಿನಲ್ಲಿದ್ದ ಅಂತರಾರ್ಥ ಸರಳಾಗೆ ತಟ್ಟಿತು. ಅವಳು ತಲೆ ತಗ್ಗಿಸಿದಳು.


ಸೂರ್ಯನಾರಾಯಣ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ. "ಸರಳಾ… ನೀನು ಇಲ್ಲಿ ಹೇಗೆ? ಈ ನಗರಕ್ಕೆ ಯಾವಾಗ ಬಂದೆ?" ಎಂದು ಕೇಳಿದ. ಅವನ ದನಿಯಲ್ಲಿ ವಿಶೇಷ ಕುತೂಹಲವೇನು ಇರಲಿಲ್ಲ. ಸಹಜವಾಗಿಯೇ ಮಾತನಾಡಿದ್ದ.


"ನನಗೆ ಇಲ್ಲಿಗೆ ಟ್ರಾನ್ಸ್‌ಫರ್ ಆಯ್ತು ಸೂರ್ಯ. ಸಿಟಿ ಬ್ಯಾಂಕ್ ಬ್ರಾಂಚ್‌ಗೆ… ನೀನು ಏನು ಮಾಡುತ್ತಿರುವೆ?" ಎಂದು ಅವನಲ್ಲಿ ವಿಚಾರಿಸಿದಳು ಸರಳಾ.


"ನಾನು ಸ್ವಂತ ಉದ್ಯಮ ನಡೆಸುತ್ತಿದ್ದೇನೆ," ಎಂದ ಸೂರ್ಯನಾರಾಯಣ.


"ಕುಟುಂಬ?" ಅವಳ ದನಿಯಲ್ಲಿ ಒಂದು ರೀತಿಯ ಸಂಕೋಚವಿತ್ತು.


"ಹೆಂಡತಿ ಸೌಮ್ಯ… ಮೂವರು ಮುದ್ದಾದ ಮಕ್ಕಳಿದ್ದಾರೆ," ಎಂದು ಸೂರ್ಯನಾರಾಯಣ ಹೆಮ್ಮೆಯಿಂದ ಹೇಳಿದ.


ಸರಳಾ ಕ್ಷಣಕಾಲ ಮೌನವಾದಳು. ಅವಳ ಕಣ್ಣುಗಳಲ್ಲಿ ಒಂದು ರೀತಿಯ ಶೂನ್ಯತೆ ಆವರಿಸಿತು. ಮೆಲ್ಲನೆ ದನಿ ಏರಿಸಿದವಳು, 


"ನಾನು… ಈಗ ಒಬ್ಬಳೇ ಇದ್ದೇನೆ. ಡಿವೋರ್ಸ್ ಆಗಿದೆ. ಮಕ್ಕಳು ಇಲ್ಲ. ಅಪ್ಪ-ಅಮ್ಮನ ಜೊತೆ ಮೈಸೂರಿನಲ್ಲಿದ್ದೆ, ಈಗ ಇಲ್ಲಿಗೆ ಬಂದಿದ್ದೇನೆ," ಎಂದಳು. ಅವಳು ನಗಲು ಯತ್ನಿಸಿದರೂ ಆ ನಗುವಿನಲ್ಲಿ ನೋವಿನ ಛಾಯೆ ಎದ್ದು ಕಾಣುತ್ತಿತ್ತು.


ಸೂರ್ಯನಾರಾಯಣನ ಮನಸ್ಸಿನಲ್ಲಿ ವಿಚಿತ್ರವಾದ ಸಂಕಟ ಮೂಡಿತು. ಒಂದು ಕಾಲದಲ್ಲಿ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ, ಇಂದು ಹೀಗೆ ಒಂಟಿಯಾಗಿ ನಿಂತಿರುವುದನ್ನು ನೋಡಿ ಮರುಕವಾಯಿತು. ಆದರೆ ಅವನೇನು ಹೇಳಲಿಲ್ಲ.


"ಸರಿ… ಮತ್ತೆ ಸಿಗೋಣ," ಎಂದು ಹೇಳಿ ಅವಳು ಅಲ್ಲಿಂದ ಹೊರಟುಹೋದಳು.


ಕಾರಿನಲ್ಲಿ ಹಿಂತಿರುಗುವಾಗ ಸೂರ್ಯನಾರಾಯಣ ಮೌನವಾಗಿದ್ದ. ಅವನ ಮನದ ತುಂಬಾ ಸರಳಾಳ ಕೊನೆಯ ಮಾತು ಕಾಡುತ್ತಿತ್ತು. ಮಾಧವ ಅವನ ಮನದ ತುಮುಲವನ್ನು ಅರಿತಿದ್ದ.


"ಸೂರ್ಯ… ಹಳೆಯದನ್ನು ನೆನೆದು ಮನಸ್ಸು ಭಾರ ಮಾಡಿಕೊಳ್ಳಬೇಡ. ಒಮ್ಮೆ ದಾರಿಗಳು ಬೇರೆಯಾದ ಮೇಲೆ, ಪ್ರತಿಯೊಬ್ಬರಿಗೂ ಅವರದ್ದೇ ಆದ ಜೀವನವಿರುತ್ತದೆ. ಈಗ ನೀನು ಸುಖವಾಗಿದ್ದೀಯಾ, ಅದನ್ನು ನೆನಪಿಸಿಕೋ," ಎಂದು ಮಾಧವ ಹಿತವಚನ ಹೇಳಿದ.


ಸೂರ್ಯನಾರಾಯಣನ ಮನಸ್ಸು ಮಾತ್ರ ಶಾಲಾ ದಿನಗಳ ಆ ಮಧುರ ನೆನಪುಗಳಿಗೆ ಜಾರಿತ್ತು. ಅಂದು ಅವರಿಬ್ಬರೂ ಆಡಿದ ಮಾತುಗಳು, ಮಳೆಯ ಹನಿಗಳಲ್ಲಿ ಹಂಚಿಕೊಂಡ ಕನಸುಗಳು, ಯಾವತ್ತೂ ಬೇರೆಯಾಗುವುದಿಲ್ಲ ಎಂದು ಮಾಡಿಕೊಂಡ ಸತ್ಯಗಳು… ಎಲ್ಲವೂ ಸುಳ್ಳಾಗಿದ್ದವು.


ಅವಳ ಮನೆಯವರ ಹಠ, ಇವನ ಅಂದಿನ ಕೆಲಸದ ಅನಿಶ್ಚಿತತೆ ಎರಡೂ ಸೇರಿ ಅವರ ಸುಂದರ ಸಂಬಂಧಕ್ಕೆ ಇತಿಶ್ರೀ ಹಾಡಿದ್ದವು. ಅವರ ಸುಂದರ ಕನಸುಗಳು ಅರ್ಧದಲ್ಲಿಯೇ ಕಮರಿ ಹೋಗಿದ್ದವು.


ಇಂದು ಅವಳು ಮತ್ತೆ ಎದುರಾಗಿದ್ದಳು, ಆದರೆ ಸೂರ್ಯನಾರಾಯಣನ ಜೀವನದಲ್ಲಿ ಈಗ ಸೌಮ್ಯಾ ಇದ್ದಾಳೆ. ಮುದ್ದಾದ ಮೂವರು ಮಕ್ಕಳು ಇದ್ದಾರೆ. ಅವರ ಬದುಕು ಶಾಂತವಾಗಿ ಸಾಗುತ್ತಿದೆ.


ಮನೆ ತಲುಪಿದಾಗ ಸೌಮ್ಯ ದೇವರ ಕೋಣೆಯಿಂದ ಹೊರಬರುತ್ತಿದ್ದಳು. ಅವಳ ಮುಖದಲ್ಲಿ ಶರತ್ಕಾಲದ ಚಂದ್ರನಂತಹ ಶಾಂತತೆ.


"ಬಂದಿರಾ? ಕಾಫಿ ಮಾಡಿಕೊಡಲೇ? ತುಂಬಾ ಸುಸ್ತಾಯಿತೇ?" ಎಂದು ಪ್ರೀತಿಯಿಂದ ಕೇಳಿದಳು.


ಸ್ನಾನ ಮುಗಿಸಿ ಬಂದ ನಂತರ, ಸೌಮ್ಯ ನೀಡಿದ ಬಿಸಿ ಕಾಫಿಯನ್ನು ಕೈಗೆತ್ತಿಕೊಳ್ಳುತ್ತಾ ಸೂರ್ಯನಾರಾಯಣ ಅವಳಲ್ಲಿ ಮಾತಿಗಿಳಿದ, "ಸೌಮ್ಯ, ಇವತ್ತು ಬಟ್ಟೆ ಅಂಗಡಿಯಲ್ಲಿ ಸರಳಾ ಸಿಕ್ಕಿದ್ದಳು." ಪ್ರತಿದಿನವೂ ಕಾಫಿ ಕುಡಿಯುವಾಗ ಅವಳ ಬಳಿ ಆ ದಿನದ ವಿಚಾರಗಳನ್ನೆಲ್ಲ ಹಂಚುವುದು ಅವನಿಗೆ ರೂಢಿಯಾಗಿತ್ತು ಹಾಗಾಗಿ ಸರಳಾಳನ್ನು ಕಂಡ ವಿಚಾರವನ್ನು ಸಹಾ ಹೇಳಿದ.


ಸರಳ ಎಂಬ ಹೆಸರು ಕೇಳಿದ ಸೌಮ್ಯ ಕಿಂಚಿತ್ತೂ ಗಾಬರಿಯಾಗಲಿಲ್ಲ, ಮುಖ ಕಿವುಚಲಿಲ್ಲ. ಬದಲಿಗೆ ಸಹಜವಾಗಿ, "ಹೌದೇ? ಚೆನ್ನಾಗಿದ್ದಾಳಾ? ಪಾಪ, ಅವಳಿಗೆ ಇಲ್ಲಿಗೆ ಟ್ರಾನ್ಸ್‌ಫರ್ ಆಗಿರಬೇಕು ಅಲ್ವಾ?" ಎಂದಳು.


"ನಿನಗೆ ಹೇಗೆ ಗೊತ್ತು ಅವಳಿಗೆ ಟ್ರಾನ್ಸ್‌ಫರ್ ಆಗಿದೆ ಎಂದು ! ನಿನಗೆ ಅವಳ ಪರಿಚಯವಿಲ್ಲವಲ್ಲ " ಪತ್ನಿಯ ಮಾತು ಅವನಲ್ಲಿ ಅಚ್ಚರಿ ಮೂಡಿಸಿತ್ತು.


"ನೋಡಿ, ಅವಳು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಾಳೆ ಅಂತ ನೀವು ಮೊದಲೇ ಹೇಳಿದ್ದಿರಿ. ಅವಳ ಊರು ಮೈಸೂರು ಅಂತಲೂ ಗೊತ್ತು. ಇಲ್ಲಿ ಸಿಕ್ಕಿದ್ದಾಳೆ ಅಂದರೆ ಕೆಲಸದ ನಿಮಿತ್ತವೇ ಬಂದಿರಬೇಕಲ್ಲವೇ? ಅಷ್ಟಕ್ಕೂ ಅವಳು ನಿಮ್ಮ ಹಳೆಯ ಗೆಳತಿ, ಸಿಕ್ಕಾಗ ಮಾತನಾಡಿಸಿದ್ದು ಒಳ್ಳೆ ಕೆಲಸವೇ ಆಯಿತು" ಸೌಮ್ಯ ಅವನ ಪಕ್ಕಕ್ಕೆ ಸರಿದು ಕುಳಿತು ಮೃದುವಾಗಿ ನಕ್ಕಳು


ಸೂರ್ಯನಾರಾಯಣನಿಗೆ ಸೌಮ್ಯಳ ಈ ಗುಣವೇ ಅಚ್ಚುಮೆಚ್ಚು. ಮದುವೆಯ ಮಾತುಕತೆ ನಡೆದ ದಿನವೇ ಅವನು ತನ್ನ ಮತ್ತು ಸರಳಾಳ ನಡುವಿನ ಹಳೆಯ ಪ್ರೇಮದ ಬಗ್ಗೆ ಎಲ್ಲವನ್ನೂ ವಿವರಿಸಿದ್ದ. ಸೌಮ್ಯ ಅಂದು ಅದನ್ನು ಕೇಳಿಸಿಕೊಂಡು ಮೃದುವಾಗಿ ನಗುತ್ತಾ ಸ್ವೀಕರಿಸಿದ್ದಳು. ಅಂದಿನಿಂದ ಇಂದಿನವರೆಗೂ ಅವಳು ಆ ವಿಷಯವನ್ನು ಎಂದೂ ಚುಚ್ಚಿ ಮಾತನಾಡಿದವಳಲ್ಲ.


"ಸೌಮ್ಯ, ನನ್ನ ಆಫೀಸ್ ಇರುವ ಕಟ್ಟಡದ ಕೆಳಮಹಡಿಯಲ್ಲೇ ಅವಳ ಬ್ಯಾಂಕ್ ಇದೆ. ಇನ್ನು ಮುಂದೆ ಪದೇ ಪದೇ ಕಾಣ ಸಿಗಬಹುದು. ಹಳೆಯ ನೆನಪುಗಳು ಮತ್ತೆ ಕಾಡಬಹುದೇನೋ ಎಂಬ ಭಯ ಕಾಡುತ್ತಿದೆ," ಎಂದ ಸೂರ್ಯನಾರಾಯಣ. ತನ್ನ ಮನದ ತುಮುಲವನ್ನು ಪತ್ನಿಯ ಬಳಿ ಹೇಳದೆ ಅವನಿಗೆ ಸಮಾಧಾನವಿರಲಿಲ್ಲ.


ಸೌಮ್ಯ ಅವನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದಳು. ಅವಳ ನೋಟದಲ್ಲಿ ಅಪಾರವಾದ ನಂಬಿಕೆಯಿತ್ತು. ಅವಳು ಅವನ ಕೈಗಳನ್ನು ತನ್ನ ಕೈಗಳಲ್ಲಿ ಹಿಡಿದು, ಅವನ ಕೆನ್ನೆಯನ್ನು ಮೆಲ್ಲನೆ ತಟ್ಟುತ್ತಾ ಹೇಳಿದಳು, "ನೆನಪುಗಳು ಬರಲಿ ಬಿಡಿ… ಆದರೆ ಅವು ನಿಮ್ಮನ್ನು ಆವರಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆ ಗೊತ್ತಾ? ಹತ್ತು ವರ್ಷಗಳ ಹಿಂದಿನ ಸೂರ್ಯನಾರಾಯಣನಿಗೂ, ಈಗಿನ ಸೂರ್ಯನಾರಾಯಣನಿಗೂ ತುಂಬಾ ವ್ಯತ್ಯಾಸವಿದೆ. ಅಂದು ನೀವು ಅನುಭವದ ಕೊರತೆಯಲ್ಲಿದ್ದಿರಿ. ಇಂದು ನೀವು ಜೀವನವನ್ನು ಅರಿತಿದ್ದೀರಿ, ನನ್ನನ್ನು ಅರಿತಿದ್ದೀರಿ." ಅವಳ ಮಾತಿನಲ್ಲಿರುವ ಭರವಸೆ ಕಂಡು ಸೂರ್ಯ ಬೆರಗಾದ.


"ಪ್ರೀತಿ ಅಂದರೆ ಒಟ್ಟಿಗೆ ಇದ್ದಾಗ ಕಾಣುವ ಹೊಸತನವಲ್ಲ. ಅದು ಒಬ್ಬರಿಗೊಬ್ಬರು ನೀಡುವ ಗೌರವ ಮತ್ತು ನಂಬಿಕೆ. ಒಮ್ಮೆ ಮುರಿದು ಹೋದ ಮಣ್ಣಿನ ಮಡಕೆ ಮತ್ತೆ ಹಳೆಯ ರೂಪಕ್ಕೆ ಬರುವುದು ಕಷ್ಟ. ಸರಳಾ ನಿಮ್ಮ ಬದುಕಿನ ಒಂದು ಸುಂದರ ನೆನಪು ಮಾತ್ರ. ಆದರೆ ನಾನು ನಿಮ್ಮ ಬದುಕಿನ ವರ್ತಮಾನ. ನನಗೂ ನಿಮ್ಮ ಮೇಲೆ ನಂಬಿಕೆಯಿದೆ, ನಿಮ್ಮ ಪ್ರೀತಿಯ ಮೇಲೂ ನಂಬಿಕೆಯಿದೆ." ಸೌಮ್ಯಳ ಈ ಮಾತುಗಳು ಸೂರ್ಯನಾರಾಯಣನ ಮನಸ್ಸಿನಲ್ಲಿದ್ದ ಆತಂಕದ ಮಂಜನ್ನು ಪೂರ್ತಿಯಾಗಿ ಕರಗಿಸಿದವು.


ಕೆಲವು ದಿನಗಳ ನಂತರ ಸರಳಾ ನೇರವಾಗಿ ಸೂರ್ಯನಾರಾಯಣನ ಆಫೀಸಿಗೇ ಬಂದಳು. ಅವಳ ಮುಖದಲ್ಲಿ ಏನೋ ಹೇಳಬೇಕೆಂಬ ಹಂಬಲವಿತ್ತು.


"ಸೂರ್ಯ, ನಿನ್ನ ಬಳಿ ಸ್ವಲ್ಪ ಮಾತನಾಡಬೇಕಿತ್ತು… ಹೊರಗೆ ಎಲ್ಲಿಗಾದರೂ ಕಾಫಿ ಕುಡಿಯಲು ಹೋಗೋಣವೇ?" ಎಂದು ಕೇಳಿದಳು.


ಸೂರ್ಯನಾರಾಯಣನಿಗೆ ಸ್ವಲ್ಪ ಮುಜುಗರವಾಯಿತು. ಅವನು ಸೌಮ್ಯವಾಗಿ ನಿರಾಕರಿಸಿ, "ಇಲ್ಲೇ ಹೇಳು ಸರಳಾ, ಕೆಲಸದ ನಡುವೆ ಹೊರಗೆ ಹೋಗುವುದು ಕಷ್ಟ," ಎಂದ.


"ಪ್ಲೀಸ್ ಸೂರ್ಯ… ಒಮ್ಮೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಮಾತನಾಡೋಣ" ಎಂದು ಅವಳು ಒತ್ತಾಯಿಸಿದಳು.


ಸೂರ್ಯನಾರಾಯಣನಿಗೆ ಅವಳ ಜೊತೆ ಹೊರಡಲು ಮನಸ್ಸಿರಲಿಲ್ಲ ಆದರೂ ಅವಳು ಮತ್ತೆ ಒತ್ತಾಯಿಸಿದಾಗ ಒಂದು ಕ್ಷಣ ಯೋಚಿಸಿ, "ಸರಿ, ನಾನು ಸೌಮ್ಯಳಿಗೆ ಒಂದು ಫೋನ್ ಮಾಡಿ ಹೇಳುತ್ತೇನೆ" ಎಂದು ಫೋನ್ ಎತ್ತಿಕೊಂಡ. ಅವನ ವರ್ತನೆಯಿಂದ ಸರಳಾ ಬೆಚ್ಚಿಬಿದ್ದಳು.


"ಯಾಕೆ ಅವಳಿಗೆ ಹೇಳಬೇಕು? ನಾವು ಸ್ನೇಹಿತರಾಗಿ ಮಾತನಾಡಬಾರದೇ? ನಿನಗೆ ಏನು ಮಾಡಬೇಕಿದ್ದರೂ ಅವಳ ಒಪ್ಪಿಗೆ ಬೇಕೇ?" ಎಂದಾಗ ಸೂರ್ಯ ಮಾತನಾಡಲಿಲ್ಲ. ತಕ್ಷಣವೇ ಸೌಮ್ಯಳಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಅವಳು ನಗುನಗುತ್ತಲೇ, "ಹೌದೇ..? ಪಾಪ ಅವಳು ಒಬ್ಬಳೇ ಇದ್ದಾಳಲ್ಲ, ಬೇಸರವಾಗಿರಬೇಕು. ಅವಳನ್ನು ಮನೆಗೇ ಕರೆದುಕೊಂಡು ಬನ್ನಿ, ನಾನು ಮಧ್ಯಾಹ್ನ ಸಿಹಿ ಅಡುಗೆ ಮಾಡುತ್ತೇನೆ, ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡೋಣ" ಎಂದಳು.


"ಸರಳಾ ಇಂದು ನಮ್ಮ ಮನೆಗೆ ಹೋಗೋಣ. ಸೌಮ್ಯ ಕೂಡ ನಿನ್ನನ್ನು ಭೇಟಿಯಾಗಲು ಕಾಯುತ್ತಿದ್ದಾಳೆ. ಅಲ್ಲಿ ಕುಳಿತು ಮುಕ್ತವಾಗಿ ಮಾತನಾಡೋಣ. ಇಷ್ಟವಿಲ್ಲದಿದ್ದರೆ ನಮ್ಮ ನಡುವೆ ಮಾತನಾಡಲು ಸೌಮ್ಯ ಬರಲಾರಳು" ಸೂರ್ಯನಾರಾಯಣ ಫೋನ್ ಇಟ್ಟು ಸರಳಾಗೆ ಹೇಳಿದ.


ಈ ಮಾತು ಕೇಳಿದ ಕೂಡಲೇ ಸರಳಾಳ ಮುಖ ಸಪ್ಪೆಯಾಯಿತು. "ಬೇಡ ಸೂರ್ಯ… ನಿನ್ನ ಹೆಂಡತಿಗೆ ನಮ್ಮ ಹಳೆಯ ವಿಷಯಗಳೆಲ್ಲ ಗೊತ್ತಾದರೆ ನಿನ್ನ ಸಂಸಾರದಲ್ಲಿ ಬಿರುಕು ಬರಬಹುದು. ನನಗೆ ಅವಳ ಎದುರು ನಿಲ್ಲುವ ಧೈರ್ಯವಿಲ್ಲ." ಎಂದಳು.


"ಸರಳಾ, ನನ್ನ ಮತ್ತು ಸೌಮ್ಯಳ ನಡುವೆ ಯಾವುದೇ ಮುಚ್ಚುಮರೆ ಇಲ್ಲ. ಅವಳಿಗೆ ಎಲ್ಲವೂ ಗೊತ್ತು. ನನ್ನ ಹೆಂಡತಿಗೆ ತಿಳಿಯದ ಯಾವುದೇ ಸ್ನೇಹ ಅಥವಾ ಸಂಬಂಧ ನನಗೆ ಬೇಕಾಗಿಲ್ಲ. ನಾನು ಅವಳನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ," ಸೂರ್ಯನಾರಾಯಣನ ಮಾತು ಕೇಳಿ ಸರಳಾಗೆ ಗಾಬರಿಯಾಯಿತು.


ಅವನ ಮಾತು ಕೇಳಿ ಸರಳಾಳ ಕಣ್ಣುಗಳು ತೇವವಾದವು. "ನಾನು ನಿನ್ನನ್ನು ನೋಡಲೆಂದೇ ಈ ನಗರಕ್ಕೆ ಟ್ರಾನ್ಸ್‌ಫರ್ ಮಾಡಿಸಿಕೊಂಡು ಬಂದೆ ಸೂರ್ಯ. ನಿನ್ನನ್ನು ಮರೆಯಲು ನನಗಾಗುತ್ತಿಲ್ಲ. ಮದುವೆಯಾದಾಗಲೂ ನಾನು ನನ್ನ ಗಂಡನ ಜೊತೆ ವಾಸಿಸುವಾಗಲು ನಿನ್ನನ್ನೇ ನೆನಪಿಸಿಕೊಳ್ಳುತ್ತಿದ್ದೆ. ನನ್ನ ಪ್ರೀತಿ ನಿನಗೆ ಅರ್ಥವಾಗುವುದಿಲ್ಲವೇ? ನಾವಿಬ್ಬರೇ ಎಲ್ಲಿಗಾದರೂ ಹೋಗೋಣ" ಕಣ್ಣೀರು ತುಂಬಿ ಕೇಳಿದಾಗಲೂ ಸೂರ್ಯ ವಿಚಲಿತನಾಗಲಿಲ್ಲ.


"ಸುಳ್ಳು ಹೇಳಬೇಡ ಸರಳ. ನನಗೆ ಎಲ್ಲವೂ ಅರ್ಥವಾಗುತ್ತದೆ. ಮದುವೆಯ ನಂತರ ಮರೆಯಬೇಕಾದ್ದನ್ನು ಮರೆಯಲೇಬೇಕು ಸರಳಾ. ನೆನಪುಗಳನ್ನು ಕೇವಲ ನೆನಪುಗಳಾಗಿ ಇಟ್ಟುಕೊಳ್ಳಬೇಕು. ನಾನು ಈಗ ಹಳೆಯ ಸೂರ್ಯನಾರಾಯಣ ಅಲ್ಲ. ಈಗ ನಾನು ಸೌಮ್ಯಳ ಗಂಡ, ಮೂರು ಮಕ್ಕಳ ತಂದೆ. ನನ್ನ ಪ್ರೀತಿ, ನನ್ನ ಸಮಯ ಎಲ್ಲವೂ ಈಗ ಅವರಿಗಾಗಿ ಮೀಸಲು. ನೀನು ಕೂಡ ನಿನ್ನ ಜೀವನದಲ್ಲಿ ಹೊಸ ದಾರಿಯನ್ನು ಹುಡುಕಿಕೋ," ಎಂಬ ಅವನ ಮಾತು ಕೇಳಿ ಸರಳಾ ಮೌನವಾಗಿ ಎದ್ದು ಹೊರನಡೆದಳು. ಅವಳಿಗೆ ತನ್ನ ತಪ್ಪಿನ ಅರಿವಾಗಿತ್ತು.


ಸಂಜೆ ಮನೆಗೆ ಬಂದಾಗ ವಾತಾವರಣ ತುಂಬ ಸೊಗಸಾಗಿತ್ತು. ಸೌಮ್ಯ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಸೂರ್ಯನಾರಾಯಣ ಬರುತ್ತಿದ್ದಂತೆ ಮಕ್ಕಳು ಓಡಿ ಬಂದು ಅವನನ್ನು ತಬ್ಬಿಕೊಂಡರು. ಸೌಮ್ಯ ಎದ್ದು ಬಂದು ಅವನ ಬ್ಯಾಗನ್ನು ಕೈಗೆತ್ತಿಕೊಂಡಳು.


"ಸರಳಾ ಬಂದಿದ್ದಳಾ?" ಎಂದು ಸಹಜವಾಗಿ ಕೇಳಿದಳು.


ಸೂರ್ಯನಾರಾಯಣ ಅವಳ ಕೈ ಹಿಡಿದು ಹತ್ತಿರಕ್ಕೆಳೆದುಕೊಂಡ. "ಬಂದಿದ್ದಳು… ನಮ್ಮ ಬದುಕಿನಲ್ಲಿ ಹಳೆಯ ನೆನಪುಗಳಿಗೆ ಸ್ಥಾನವಿದೆಯೇ ಹೊರತು, ಅವು ನಮ್ಮ ಇಂದಿನ ಸಂತೋಷವನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದು ಅವಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಅವಳಿಗೆ ಅದು ಸ್ಪಷ್ಟವಾಗಿ ಅರ್ಥವಾಗಿದೆ."


ಸೌಮ್ಯ ಮೃದುವಾಗಿ ನಗುತ್ತಾ ಅವನ ಕೆನ್ನೆಯನ್ನು ಸವರಿದಳು. "ನನಗೆ ಗೊತ್ತಿತ್ತು ಸೂರ್ಯ, ನೀವು ಹೀಗೆಯೇ ಹೇಳುತ್ತೀರಿ ಎಂದು. ಹಳೆಯ ಪ್ರೀತಿಯನ್ನು ಅಷ್ಟು ಸುಲಭವಾಗಿ ಮರೆಯಲು ಆಗುವುದಿಲ್ಲ ನಿಜ, ಆದರೆ ಅದಕ್ಕಿಂತ ದೊಡ್ಡದಾದ ಪ್ರೀತಿ ಜೀವನದಲ್ಲಿ ಸಿಕ್ಕಾಗ ಹಳೆಯದು ತಾನಾಗಿಯೇ ಮಸುಕಾಗುತ್ತದೆ."


ಸೂರ್ಯನಾರಾಯಣ ಅಕ್ಕರೆಯಿಂದ ಅವಳ ಹಣೆಗೆ ಮುತ್ತಿಟ್ಟ, "ಸೌಮ್ಯ, ನೀನು ಸಿಕ್ಕಿದ್ದು ನನ್ನ ಪುಣ್ಯ. ನಿನ್ನ ಪ್ರೀತಿಯ ಮುಂದೆ ಬೇರೆಲ್ಲವೂ ಶೂನ್ಯ. ಐ ಲವ್ ಯೂ," ಎಂದ.


ಸೌಮ್ಯ ಅವನ ಭುಜದ ಮೇಲೆ ತಲೆ ಇಟ್ಟು, "ಲವ್ ಯೂ ಟೂ…" ಎಂದು ಮೆಲ್ಲನೆ ಪಿಸುಗುಟ್ಟಿದಳು.


ಆ ಮನೆಯಲ್ಲಿ ಈಗ ಹಳೆಯ ನೋವಿನ ನೆರಳಿರಲಿಲ್ಲ, ಬದಲಿಗೆ ವರ್ತಮಾನದ ಸುಂದರ ಪ್ರೀತಿಯ ಬೆಳಕು ಹರಡಿತ್ತು.


- ಪ್ರಸನ್ನಾ ವಿ. ಚೆಕ್ಕೆಮನೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top