"ಅಪ್ಪಾ, ನಾನು ದೊಡ್ಡವಳಾದ ಮೇಲೆ ಮದುವೆಯೇ ಆಗುವುದಿಲ್ಲ!" ಎಂದು ನನ್ನ ಒಂಬತ್ತು ವರ್ಷದ ಮುದ್ದಿನ ಮಗಳು ಒಮ್ಮಿಂದೊಮ್ಮೆಗೇ ಹೇಳಿದಾಗ, ನನಗೆ ಮೊದಲು ನಗು ಬಂತು. ಹಾಲು ಹಲ್ಲು ಸಂಪೂರ್ಣವಾಗಿ ಬೀಳದ ಪುಟ್ಟ ಮಕ್ಕಳ ಆಟದ ಮಾತಿರಬಹುದು ಎಂದುಕೊಂಡೆ.
"ಅದೇನಮ್ಮ ಹಾಗೆ ಹೇಳಿದ್ದು? ಯಾಕೆ ನಮ್ಮ ಪುಟ್ಟಮ್ಮನಿಗೆ ಮದುವೆ ಅಂದ್ರೆ ಬೇಡವೆಂದಾಗಿದ್ದು ?" ನಾನು ಮುಖದಲ್ಲಿ ನಗು ಉಳಿಸಿಕೊಂಡೇ, ಅವಳ ಕೆನ್ನೆಯನ್ನು ಸವರುತ್ತಾ ಪ್ರೀತಿಯಿಂದ ಪ್ರಶ್ನಿಸಿದೆ. ಆದರೆ ಅವಳ ಮುಖದಲ್ಲಿದ್ದ ಅಪೂರ್ವ ಗಾಂಭೀರ್ಯ ನನ್ನ ಮುಖದ ನಗುವನ್ನು ಕ್ಷಣಾರ್ಧದಲ್ಲಿ ಮಾಯ ಮಾಡಿತು. ಆ ಪುಟ್ಟ ಕಣ್ಣುಗಳಲ್ಲಿ ತೇಲುತ್ತಿದ್ದ ಆತಂಕ ನನ್ನನ್ನು ದಿಗಿಲುಗೊಳಿಸಿತು.
ಅವಳು ಏನೋ ಯೋಚಿಸುತ್ತಾ ತುಸು ಅಳುಕಿನಿಂದ ನನ್ನ ಮುಖ ನೋಡಿದಳು. ನಾನು ' ಹೇಳು' ಎಂಬಂತೆ ಅವಳಿಗೆ ಧೈರ್ಯ ತುಂಬಿದೆ
"ಮದುವೆಯಾಗಿ ನಾನು ಬೇರೆ ಮನೆಗೆ ಹೋದರೆ, ಅಲ್ಲಿರುವ ಅತ್ತೆ ಯಾವಾಗಲೂ ಅವರ ಮಗನಿಗೆ ನನ್ನ ಬಗ್ಗೆ ಚಾಡಿ ಹೇಳ್ತಾ ಇರ್ತಾರೆ ಅಪ್ಪಾ. ಅವನು ತನ್ನ ಸಿಟ್ಟು ತಣಿಯುವವರೆಗೂ ನನ್ನನ್ನು ಜೋರಾಗಿ ಬೈಯುತ್ತಾನೆ ಅಥವಾ ಕೆಲವು ಬಾರಿ ಹೊಡೆಯಲುಬಹುದು. ನನ್ನನ್ನು ಹೊರಗಡೆ ಎಲ್ಲೂ ಕೆಲಸಕ್ಕೆ ಕಳುಹಿಸದೆ, ದಿನವಿಡೀ ಮನೆಯಲ್ಲೇ ದನದ ತರಹ ದುಡಿಸುತ್ತಾನೆ. ನನ್ನನ್ನೊಂದು ಸಿನಿಮಾಕ್ಕೂ ಕರೆದುಕೊಂಡು ಹೋಗಲಾರ, ನನಗೆ ಇಷ್ಟವಾದ ಅಡುಗೆನೂ ಮಾಡಿಕೊಳ್ಳಲು ಸ್ವಾತಂತ್ರ್ಯ ಇರಲಾರದು... ಅಷ್ಟೇ ಅಲ್ಲಪ್ಪಾ, ನಾನು ಕಾಲಿಗೆ ಬಿದ್ದು ಬೇಡಿಕೊಂಡರೂ, ನನ್ನ ಅಪ್ಪ-ಅಮ್ಮನನ್ನ ನೋಡಲು ಹೋಗಲು ಒಂದೇ ಒಂದು ದಿನವೂ ತವರುಮನೆಗೆ ಕಳುಹಿಸಿಕೊಡಲಾರ. ಆವಾಗ ಎಲ್ಲರೂ ಮಲಗಿದ ಮೇಲೆ, ನಾನು ಕತ್ತಲಲ್ಲಿ ತಲೆದಿಂಬಿನಲ್ಲಿ ಮುಖ ಮುಚ್ಚಿಕೊಂಡು ಒಂಟಿಯಾಗಿ ಅಳ್ತಾ ಇರಬೇಕಾಗುತ್ತೆ. ನನಗೆ ಅಂತಹ ನರಕದ ಬದುಕು ಬೇಡ ಅಪ್ಪಾ... ನಮ್ಮ ಅಜ್ಜಿ ಮತ್ತು ನಿನ್ನ ತರಹ ಜನರ ಇರುವ ಮನೆಗೆ ಹೋಗಲು ನನಗೆ ಇಷ್ಟವಿಲ್ಲ!. ನನಗೆ ಅಂಥವರೆಂದರೆ ಭಯ "
ಅವಳ ಬಾಯಿಯಿಂದ ಬಂದ ಆ ಕೊನೆಯ ಮಾತು ಕೇಳಿದಾಗ ನನ್ನ ಎದೆ ಸೀಳಿದಂತಾಯಿತು. ಮೈಮೇಲೆ ಬಿರುಗಾಳಿ ಸಹಿತ ಸಿಡಿಲು ಬಡಿದಂತೆ ನಾನು ಮರಗಟ್ಟಿ ನಿಂತುಬಿಟ್ಟೆ.
ಇಷ್ಟು ದಿನಗಳ ಕಾಲ ನಾನು ನನ್ನ ಹೆಂಡತಿಯನ್ನು ನಡೆಸಿಕೊಂಡ ರೀತಿ, ನನ್ನ ಮಗಳ ಎಳೆಯ ಮನಸ್ಸಿನ ಮೇಲೆ ಎಂತಹ ಘೋರ ಪರಿಣಾಮ ಬೀರಿದೆ ಎಂಬ ಕಟು ಸತ್ಯ ಅಂದು ನನಗೆ ಅರಿವಾಯಿತು.
ಅಲ್ಲಿ ಅವಳನ್ನು ತಪ್ಪು ಹೇಳಲು ಸಾಧ್ಯವೇ ಇರಲಿಲ್ಲ. ಗಂಡನಾಗಿ ನಾನು ಇಷ್ಟು ವರ್ಷ ನನ್ನ ಹೆಂಡತಿಗೆ ಕೊಟ್ಟ ಮಾನಸಿಕ ಹಾಗೂ ದೈಹಿಕ ಕಿರುಕುಳಗಳು, ನನ್ನ ಮಗಳ ಎಳೆಯ ಹೂವಿನಂತಹ ಮನಸ್ಸಿನಲ್ಲಿ ಎಷ್ಟು ಆಳವಾದ ಗಾಯವನ್ನು, ಪುರುಷ ಜನಾಂಗದ ಮೇಲೆಯೇ ಭಯವನ್ನು ಉಂಟುಮಾಡಿದ್ದವು ಎಂಬುದನ್ನು ನೆನೆದು ನನ್ನ ದೇಹ ನಡುಗಿಹೋಯಿತು. ಜಗತ್ತಿಗೆಲ್ಲ ಒಳ್ಳೆಯವನಂತೆ ನಟಿಸುತ್ತಿದ್ದ ನನ್ನ ಅಹಂಕಾರ ಆ ಒಂದು ಕ್ಷಣದಲ್ಲಿ ನನ್ನ ಮಗಳ ಮಾತಿನಿಂದ ಕಳಚಿ ಬಿದ್ದಿತ್ತು.
ನಾನು ಮೆಲ್ಲನೆ ಅವಳ ಹತ್ತಿರ ಕುಳಿತೆ. ಅವಳ ಮಾತು ಕೇಳಿ ನನ್ನ ಕಂಗಳು ತುಂಬಿ ಬಂದಿದ್ದವು. ಆದರೂ ಅದನ್ನು ಹತೋಟಿಗೆ ತಂದುಕೊಂಡು, ನನ್ನ ನಡುಗುವ ದನಿಯ ಏರಿಳಿತ ಅವಳಿಗೆ ತಿಳಿಯದಂತೆ ಮೃದುವಾಗಿ ಕೇಳಿದೆ,
"ಪುಟ್ಟಮ್ಮ, ನಿನಗೆ ನಿನ್ನ ಅಪ್ಪನನ್ನ ಕಂಡ್ರೆ ಇಷ್ಟ ಇಲ್ವಾ ಮುದ್ದೂ..?"
ಅವಳು ಅರಳಿದ ಕಣ್ಣುಗಳಿಂದ ನನ್ನನ್ನು ನೋಡಿ ತಲೆಯಾಡಿಸಿ,
"ಹೂಂ.. ಅಪ್ಪ ಅಂದ್ರೆ ಇಷ್ಟವೇ," ಎಂದಳು. ಆದರೆ ಆ ಮಾತಿನಲ್ಲಿ ಯಾವುದೇ ಬಲ ಇಲ್ಲ ಎಂದು ನನಗೆ ತಿಳಿಯಿತು. ಮುಖ ಸ್ತುತಿಗಾಗಿ ಆಡಿದ ಮಾತಿನಂತಿತ್ತು ಅದು. ಬಹುಶಃ ಅವಳಿಗೆ ನಿಜವನ್ನು ಹೇಳಲು ಭಯವಿರಬಹುದು ಎಂದೆನಿಸಿತು. ಮರುಕ್ಷಣವೇ ಕಣ್ಣಾಲಿಗಳು ತುಂಬಿಬಂದವು,
" ನಿಮಗೆ ಅಮ್ಮನನ್ನ ಕಂಡ್ರೆ ಸ್ವಲ್ಪನೂ ಇಷ್ಟ ಇಲ್ವಲ್ಲಾ ಅಪ್ಪಾ..." ಎಂದು ಬಾಡಿದ ಮುಖದಿಂದ ಕಣ್ಣೀರು ಸುರಿಸಿದಳು ಮಗಳು.
ನನಗೆ ಆಘಾತದ ಮೇಲೆ ಆಘಾತವಾಯಿತು. ಇಷ್ಟು ಪುಟ್ಟ ಮಗಳ ಬಾಯಲ್ಲಿ ಅದೆಂತಹ ಮಾತನ್ನು ಕೇಳುತ್ತಿದ್ದೇನೆ ಎಂದೆನಿಸಿತು.
"ಅದೇನಮ್ಮ ಹಾಗೆ ಹೇಳುತ್ತಿರುವೆ ?! ನಾನು ನಿನ್ನ ಅಮ್ಮನನ್ನು ಇಷ್ಟಪಡುತ್ತೇನೆ ಇಂದು ನಿನಗೆ ಗೊತ್ತಿಲ್ಲವೇ ?" ಎಂದು ಗಲಿಬಿಲಿಯಿಂದ ತೊದಲುತ್ತಾ ಕೇಳಿದೆ.
ಅದಕ್ಕವಳು ನನ್ನ ಕಣ್ಣುಗಳನ್ನು ನೇರವಾಗಿ ದಿಟ್ಟಿಸಿದಳು. ನನಗೆ ಯಾಕೋ ಅವಳ ನೋಟವನ್ನು ಎದುರಿಸಲು ಸಾಧ್ಯವಾಗಲಿಲ್ಲ.
"ನಾವು ಇಷ್ಟ ಪಡುವವರನ್ನ ಯಾರಾದರೂ ಆ ರೀತಿ ಹಿಂಸೆ ಮಾಡ್ತಾರಾ ಅಪ್ಪಾ? ದಿನಾ ಅಮ್ಮ ಅಳುವ ಹಾಗೆ ಮಾಡ್ತಾರಾ? ನನಗೆ ಈ ತರಹದ ಅಪ್ಪ ಸ್ವಲ್ಪವೂ ಇಷ್ಟ ಇಲ್ಲ...." ಎಂದಾಗ ಆ ಮಾತು ನನ್ನ ಕಪಾಳಕ್ಕೆ ಹೊಡೆದಂತಿತ್ತು. ನನ್ನದೇ ಮಗಳು ನನ್ನ ಕ್ರೌರ್ಯಕ್ಕೆ ಕನ್ನಡಿ ಹಿಡಿದಿದ್ದಳು.
ನಾನು ಕಣ್ಣೀರು ತಡೆಯಲಾರದೆ ಅವಳ ಕೈಹಿಡಿದು,
"ಹಾಗಾದ್ರೆ ಅಪ್ಪ ಹೆಗಿರಬೇಕು ಮಗಳೇ? ನಿನ್ನ ಆಸೆಯ ಅಪ್ಪ ಹೇಗಿರ್ತಾನೆ ಹೇಳು?" ಎಂದು ಕೇಳಿದೆ.
ಅವಳು ತನ್ನ ಪುಟ್ಟ ಕಣ್ಣುಗಳನ್ನು ಅರಳಿಸಿ, ಕನಸಿನ ಲೋಕದಲ್ಲಿ ತೇಲುವಂತೆ ಹೆಮ್ಮೆಯಿಂದ ಹೇಳಿದಳು,
"ಅಮ್ಮ ಅಡುಗೆಮನೆಯಲ್ಲಿ ಸುಸ್ತಾಗಿ ಟೀ ಮಾಡುವಾಗ ಅಪ್ಪ ಹೋಗಿ ಪ್ರೀತಿಯಿಂದ ಸಹಾಯ ಮಾಡಬೇಕು. ಅಮ್ಮನಿಗೆ ಜ್ವರ ಬಂದು, ಹುಷಾರಿಲ್ಲದ ದಿನ ಅಪ್ಪನೇ ಅಡುಗೆಮನೆಗೆ ನುಗ್ಗಿ ಬಿಸಿಬಿಸಿಯಾಗಿ ಅಡುಗೆ ಮಾಡಿಕೊಡಬೇಕು. ಅಮ್ಮ ತನ್ನ ತವರು ಮನೆಗೆ ಹೋಗ್ತೇನೆ ಎಂದಾಗ ಮುಖ ಗಂಟು ಹಾಕಿಕೊಳ್ಳದೆ, 'ಅದು ನಿನ್ನನ್ನು ಹೆತ್ತವರ ಮನೆ ಅಲ್ವೇ ಕಣೇ, ನಿನಗೆ ಯಾವಾಗ ಬೇಕೋ ಆವಾಗ ಹೋಗಿ ಬಾ, ನಿನ್ನ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡ್ಕೋ' ಅಂತ ಪ್ರೀತಿಯಿಂದ ಕಳುಹಿಸಿಕೊಡಬೇಕು. ಅಮ್ಮನಿಗೆ ಬೇಸರವಾದಾಗ, ಕಣ್ಣೀರು ಹಾಕುವಾಗ 'ಪರವಾಗಿಲ್ಲ ಬಿಡು, ನಾನಿದ್ದೇನಲ್ಲ ನಿನ್ನ ಜೊತೆ' ಅಂತ ಅಪ್ಪ ಅವಳನ್ನು ತಬ್ಬಿಕೊಂಡು ಸಮಾಧಾನ ಮಾಡಬೇಕು. ಇದೇ ತರಹ ಇರುವ ಅಪ್ಪ ಅಂದ್ರೆ ನನಗೆ ತುಂಬಾನೇ ಇಷ್ಟ....! ಅಜ್ಜಿ ನೋಡುವ ಧಾರಾವಾಹಿಗಳಲ್ಲಿ ಅಂತಹ ಗಂಡ ಇರ್ತಾರೆ. ಆದರೆ ನೀನು ಮಾತ್ರ ಹಾಗಲ್ಲ. ನನಗೂ ಅಂತಹ ಗಂಡ ಸಿಗಬೇಕು." ಅವಳ ಮಾತು ಕೇಳಿ ನನಗೆ ತಲೆಗೆ ಹೊಡೆತ ಬಿದ್ದಂತಾಗಿತ್ತು
ನಾನು ಅಂದುಕೊಂಡಿದ್ದೆ, ನನಗೂ ನನ್ನ ಹೆಂಡತಿಗೂ ನಡುವೆ ಬೆಡ್ರೂಮ್‌ನ ಒಳಗೋ, ಅಡುಗೆಮನೆಯಲ್ಲೋ ನಡೆಯುವ ಜಗಳಗಳು, ಅಭಿಪ್ರಾಯ ಬಿನ್ನತೆಗಳು, ನಾನು ಆಡುವ ಕಟು ಮಾತುಗಳು ಈ ಮಗುವಿಗೆ ತಿಳಿಯುತ್ತಿಲ್ಲ ಎಂದು. ಆದರೆ ಅವಳು ಪ್ರತಿಯೊಂದನ್ನೂ, ನನ್ನ ಪ್ರತಿಯೊಂದು ಹಾವಭಾವವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು ಎಂದು ತಿಳಿದಾಗ ನಾನು ಆತಂಕಗೊಂಡೆ.
ಹೌದು, ಮಕ್ಕಳು ನಾವು ಬಾಯಲ್ಲಿ ಹೇಳಿಕೊಡುವ ಆದರ್ಶಗಳಿಗಿಂತ, ನಾವು ದಿನನಿತ್ಯ ಮಾಡುವ ವರ್ತನೆಯನ್ನು ನೋಡಿ ಕಲಿಯುತ್ತಾರೆ. ನಾವು ಅವರಿಂದ ಮರೆಮಾಡಲು ಯತ್ನಿಸುವ ಕಹಿ ಸತ್ಯಗಳನ್ನು ಅವರ ಎಳೆಯ ಮನಸ್ಸುಗಳು ಮೌನವಾಗಿ ದಾಖಲಿಸಿಕೊಳ್ಳುತ್ತಿರುತ್ತವೆ ಎಂಬುದನ್ನು ನಾನು ತಡವಾಗಿ ಅರಿತುಕೊಂಡೆ.
ಎಷ್ಟೋ ಬಾರಿ ಅವಳ ಅಮ್ಮ ನನ್ನ ಅಹಂಕಾರದ ಮಾತುಗಳಿಗೆ ನೊಂದು ಮೂಲೆ ಸೇರಿ ಕಣ್ಣೀರು ಹಾಕುವಾಗ ನಾನು ಕಣ್ಣು ಮುಚ್ಚಿ, ಏನೂ ತಿಳಿಯದವನಂತೆ ಕುಳಿತಿದ್ದೆ. ಎಷ್ಟೋ ಬಾರಿ ಅವಳು ತನ್ನ ವಯಸ್ಸಾದ ಹೆತ್ತವರನ್ನು ನೋಡಲು ಹೋಗಬೇಕೆಂದಾಗ ಸಾಲು ಸಾಲು ನೆಪಗಳನ್ನು, ಕಟು ಶರತ್ತುಗಳನ್ನು ಹೇಳಿ ತಡೆದಿದ್ದೆ. ಮದುವೆಯಾದ ದಿನದಿಂದಲೇ ಅವಳ ಇಷ್ಟಗಳು, ಕನಸುಗಳು, ಪುಟ್ಟ ಪುಟ್ಟ ಆಸೆ ಆಕಾಂಕ್ಷೆಗಳು ನನ್ನ ಗಂಡೆಂಬ ಅಹಂಕಾರದ ಮುಂದೆ ಸಮಾಧಿಯಾಗಿದ್ದವು.
ಅವಳು ನೊಂದಾಗಲೆಲ್ಲಾ ನಾನದನ್ನು ಹೆಣ್ಣಿನ ಸಹಜ ಗುಣ ಎಂದು ಅಲಕ್ಷಿಸಿದ್ದೆನೇ ಹೊರತು, ಅದನ್ನೊಂದು ಸಮಸ್ಯೆಯಾಗಿಯೇ ಪರಿಗಣಿಸಿರಲಿಲ್ಲ. ಆದರೆ ಆ ನೋವುಗಳೇ ಒಟ್ಟುಗೂಡಿ ನನ್ನ ಮಗಳ ಮನಸ್ಸಿನಲ್ಲಿ ಮದುವೆಯ ಬಗೆಗಿನ ಹೆದರಿಕೆಯಾಗಿ, ಪುರುಷ ಸಂಕುಲದ ಮೇಲಿನ ಅಪನಂಬಿಕೆಯಾಗಿ ಹೆಮ್ಮರವಾಗಿ ಬೆಳೆಯುತ್ತಿತ್ತು ಎಂದು ನನಗೆ ಇದುವರೆಗೂ ತಿಳಿದಿರಲಿಲ್ಲ.
ಅಂದು ರಾತ್ರಿ ಹಾಸಿಗೆಯ ಮೇಲೆ ಮಲಗಿದರೂ ನನಗೆ ಕಣ್ಣಿಗೆ ನಿದ್ದೆ ಬರಲಿಲ್ಲ. ಎದೆಯೊಳಗೆ ಏನೋ ತಳಮಳ. ನನ್ನ ಪಕ್ಕದಲ್ಲೇ ನಿಶ್ಚಿಂತೆಯಾಗಿ ಮಲಗಿದ್ದ ಹೆಂಡತಿಯ ಮುಖವನ್ನು ದಿಟ್ಟಿಸಿ ನೋಡಿದೆ.
ಹತ್ತು ವರ್ಷಗಳ ಹಿಂದೆ ಕೋಟಿ ಕನಸುಗಳೊಂದಿಗೆ, ತನ್ನ ಹೆತ್ತವರನ್ನು, ಹುಟ್ಟಿ ಬೆಳೆದ ಮನೆಯನ್ನು ತೊರೆದು ನನ್ನನ್ನೇ ಸರ್ವಸ್ವ ಎಂದು ನಂಬಿ ನನ್ನ ಜೀವನಕ್ಕೆ ಬಂದ ಹುಡುಗಿ ಇವಳು. ಅವಳ ಮುಖದಲ್ಲಿದ್ದ ಆ ಹಾಲಿನಂತಹ ನಗುವನ್ನು ಕ್ರೂರಿಯಂತೆ ನಾನೇ ಕಸಿದುಕೊಂಡಿದ್ದೆ. ಅವಳ ಆತ್ಮವಿಶ್ವಾಸವನ್ನು ನನ್ನ ಅಧಿಕಾರದಿಂದ ಧೂಳೀಪಟ ಮಾಡಿದ್ದೆ. ಆದರೂ, ಅವಳು ನಮಗಾಗಿ, ನಮ್ಮ ಮಗಳ ಭವಿಷ್ಯಕ್ಕಾಗಿ, ನನ್ನ ಕುಟುಂಬಕ್ಕಾಗಿ ತನ್ನೆಲ್ಲಾ ನೋವನ್ನು ಒಡಲಲ್ಲೇ ನುಂಗಿ ನಗುತ್ತಾ ಬದುಕುತ್ತಿದ್ದಳು. ನಾನು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ ಎಂದು ಜಗತ್ತಿನ ಮುಂದೆ ಬೊಗಳೆ ಬಿಡುತ್ತಿದ್ದೆ. ಆದರೆ ನಿಜವಾದ ಪ್ರೀತಿ ಎಂದರೆ ಎದುರಿಗಿರುವವರನ್ನು ನಿಯಂತ್ರಿಸುವುದಾಗಲಿ, ಹೆದರಿಸಿ ಮುಷ್ಟಿಯಲ್ಲಿಟ್ಟುಕೊಳ್ಳುವುದಾಗಲಿ ಅಲ್ಲ, ಬದಲಿಗೆ ಅವರನ್ನು ಅವರಾಗಿಯೇ ಗೌರವಿಸುವುದು ಎಂದು ಅಂದು ರಾತ್ರಿ ನನಗೆ ಸಂಪೂರ್ಣವಾಗಿ ಮನವರಿಕೆಯಾಯಿತು.
ಮಾರನೇ ದಿನ ಬೆಳಗ್ಗೆ ನಾನು ಯಾರೂ ಏಳದಿದ್ದರೂ ಬೇಗನೆ ಎದ್ದು, ನೇರವಾಗಿ ಅಡುಗೆಮನೆಯಲ್ಲಿದ್ದ ಹೆಂಡತಿಯ ಬಳಿ ಹೋದೆ. ಅವಳ ಕೈಗಳನ್ನು ನನ್ನ ಕೈಯೊಳಗೆ ತೆಗೆದುಕೊಳ್ಳುವಾಗ ನನ್ನ ಕೈಗಳು ನಡುಗುತ್ತಿದ್ದವು.
"ನನ್ನನ್ನು ಕ್ಷಮಿಸಿಬಿಡು ಚಿನ್ನಾ... ಇಷ್ಟು ದಿನ ನಿನಗೆ ತುಂಬಾನೇ ನೋವು ಕೊಟ್ಟಿದ್ದೇನೆ," ಎಂದು ಕೇಳುವಾಗ ನನ್ನ ಧ್ವನಿ ಗದ್ಗದಿತವಾಗಿತ್ತು, ಕಣ್ಣುಗಳಿಂದ ನೀರು ಧಾರೆಧಾರೆಯಾಗಿ ಹರಿಯುತ್ತಿತ್ತು.
ಅವಳು ನಂಬಲಾಗದ ಆಶ್ಚರ್ಯದಿಂದ, ಆತಂಕದಿಂದ ನನ್ನನ್ನು ನೋಡಿದಳು.
"ಏನಾಯ್ತು ರೀ ನಿಮಗೆ ? ಯಾಕೆ ಅಳ್ತಾ ಇದ್ದೀರಾ ?" ಎಂದು ಕೇಳಿದ ಅವಳ ಕಣ್ಣುಗಳೂ ನನ್ನ ಕಣ್ಣೀರು ಕಂಡು ತುಂಬಿ ಬಂದವು. ಅವಳು ನನ್ನನ್ನು ಇಷ್ಟೊಂದು ಪ್ರೀತಿಸುತ್ತಿದ್ದಾಳೆ ಎಂದು ನಾನು ಮೊದಲ ಬಾರಿಗೆ ಅರ್ಥ ಮಾಡಿಕೊಂಡೆ.
ವರ್ಷಗಳ ನಂತರ ಮೊದಲ ಬಾರಿಗೆ ನಾನು ನನ್ನ ತಪ್ಪುಗಳನ್ನು ಅಹಂ ಬದಿಗಿಟ್ಟು ಅವಳ ಪ್ರೀತಿಯನ್ನು ಒಪ್ಪಿಕೊಂಡೆ. ಕೇವಲ ಒಂದು 'ಕ್ಷಮೆ'ಯಿಂದ ನಾನು ಇಷ್ಟು ವರ್ಷ ಕೊಟ್ಟ ಗಾಯಗಳು ಮಾಯವಾಗುವುದಿಲ್ಲ ಎಂದು ನನಗೆ ತಿಳಿದಿತ್ತು. ಆದರೆ ಪ್ರಾಯಶ್ಚಿತ್ತದ ಬದಲಾವಣೆ ಮತ್ತು ಹೊಸ ಬದುಕಿನ ಆರಂಭ ಅಲ್ಲಿಂದಲೇ ಆಗಬೇಕಿತ್ತಲ್ಲವೇ?
ಅಂದಿನಿಂದ ನಾನು ಒಬ್ಬ ಒಳ್ಳೆಯ ಗಂಡನಾಗಲು, ಒಬ್ಬ ಜವಾಬ್ದಾರಿಯುತ ಅಪ್ಪನಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸಲು ಆರಂಭಿಸಿದೆ.
ಏಕೆಂದರೆ, ನನ್ನ ಮಗಳು ನಾಳೆ ದೊಡ್ಡವಳಾದಾಗ ಮದುವೆ ಎಂಬ ಪವಿತ್ರ ಬಂಧನವನ್ನು ಕಂಡು ಹೆದರಿ ಓಡಬಾರದು. ಪ್ರೀತಿ ಮತ್ತು ಪರಸ್ಪರ ಗೌರವದ ಮೇಲೆ ಅವಳಿಗೆ ನಂಬಿಕೆ ಬರಬೇಕು. ನಾವು ನಮ್ಮ ಜೀವನಸಂಗಾತಿಯನ್ನು ಮಕ್ಕಳ ಮುಂದೆ ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದೇ, ಅವರು ಭವಿಷ್ಯದಲ್ಲಿ ಬೆಳೆಸಿಕೊಳ್ಳುವ ಸಂಬಂಧಗಳಿಗೆ ಮುಖ್ಯವಾದ ಪಾಠವಾಗುತ್ತದೆ.
ಅದಾದ ನಂತರ ನಮ್ಮ ಮನೆಯಲ್ಲಿ ಸಣ್ಣ ಸಣ್ಣ, ಆದರೆ ಸುಂದರವಾದ ಬದಲಾವಣೆಗಳು ಕಾಣಿಸತೊಡಗಿದವು. ಹೆಂಡತಿ ಕಾಫಿ ಮಾಡುವಾಗ ಜೊತೆಗೆ ನಿಂತು ಸಕ್ಕರೆ ಡಬ್ಬಿ ನೀಡಲು ಶುರುಮಾಡಿದೆ. ಅವಳು ತಿಂಡಿ ತಿನ್ನುವ ಹೊತ್ತಿಗೆ ಅವಳ ತಟ್ಟೆಗೆ ಚಟ್ನಿ ಸಾಂಬಾರ್ ಬಡಿಸತೊಡಗಿದೆ. ನಾನು ಅವಳ ಸನಿಹ ಹೋದಾಗ ಅವಳ ಕಂಗಳಲ್ಲಿ ಮೂಡುವ ಪ್ರೀತಿಯ ಹೊಳಪನ್ನು ನಾನು ಗುರುತಿಸಲಾರಂಭಿಸಿದೆ.
ಒಂದು ಭಾನುವಾರ ಬೆಳಗ್ಗೆ ವರ್ಷಗಳ ನಂತರ ಮೊದಲ ಬಾರಿಗೆ ನಾನು ಹೆಂಡತಿಯ ಬಳಿ ಪ್ರೀತಿಯಿಂದ ಹೇಳಿದೆ, " ಇಂದು ನಾವೆಲ್ಲರೂ ಹೊರಗೆ ಹೋಗಿ ಬರೋಣವೆ ? ನಿನ್ನ ಅಪ್ಪ-ಅಮ್ಮನ ಮನೆಗೆ ಹೋಗಿ ಬಹಳ ದಿನವಾಯ್ತು, ಅಲ್ಲಿಗೆ ಹೋಗಿ ಆಮೇಲೆ ಹೋಟೆಲ್‌ಗೆ ಹೋಗಿ ರಾತ್ರಿ ಮನೆ ತಲುಪುವಂತೆ ಹೊರಡೋಣ."
ನನ್ನ ಮಾತು ಕೇಳಿ ಅವಳಿಗೆ ಮೊದಲಿಗೆ ಇದು ತಮಾಷೆ ಇರಬೇಕು ಎನಿಸಿತು.
"ಅದೇನಿದು ಹಠಾತ್ತಾಗಿ ಇವತ್ತು? ಇಂದು ಏನಾದರೂ ವಿಶೇಷವಿದೆಯೇ ?" ಎಂದು ಆಶ್ಚರ್ಯದಿಂದ ಕೇಳಿದಳು. ನನ್ನ ಬದಲಾವಣೆಯನ್ನು ಅವಳು ಗಮನಿಸಿದ್ದು ಇಂದೇ ಇರಬೇಕು.
ಈವರೆಗಿನ ಚಿಕ್ಕಪುಟ್ಟ ಬದಲಾವಣೆಗಳಿಗೆ ಅವಳು ಹೆಚ್ಚು ಗಮನ ಕೊಟ್ಟಿರಲಿಲ್ಲ. ಒಂದು ಮಾತ್ರ ಅವಳಿಗೆ ಅಚ್ಚರಿ ತಡೆಯಲಾಗಲಿಲ್ಲ. "ಏನೂ ಇಲ್ಲ ಚಿನ್ನಾ, ಇಷ್ಟು ದಿನ ನಿನ್ನನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಆ ತಪ್ಪುಗಳನ್ನು ಸರಿಪಡಿಸಬೇಕು ಎಂಬ ಅಭಿಲಾಷೆ ನನಗೆ. ಇಂದು ನಿನ್ನ ಮತ್ತು ಮಗಳ ಜೊತೆ ಇಡೀ ದಿನ ಕಳೆಯಬೇಕು ಎನಿಸಿದೆ " ಎಂದೆ.
ಅವಳ ಮುಖದಲ್ಲಿ ಮೂಡಿದ ಆ ಕೋಟಿ ರೂಪಾಯಿ ಬೆಲೆಬಾಳುವ ಮಂದಹಾಸವನ್ನು ನಾನು ಕಂಡು ಎಷ್ಟೋ ವರ್ಷಗಳಾಗಿದ್ದವು! ಆ ದಿನ ನಾವು ಮೂವರೂ ಹೊರಗೆ ಹೋದೆವು, ಅವಳ ತವರು ಮನೆಗೆ ಹೋಗಿ ತಂದೆ-ತಾಯಿಯ ಆಶೀರ್ವಾದ ಪಡೆದೆವು, ಇಷ್ಟವಾದ ಆಹಾರ ಸವಿದು ಸಿನಿಮಾ ನೋಡಿದೆವು. ಕಾರಿನಲ್ಲಿ ಹಿಂತಿರುಗುವಾಗ, ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಗಳು ನನ್ನನ್ನು ಮತ್ತು ಅಮ್ಮನನ್ನು ಆತುರದಿಂದ, ಆನಂದದಿಂದ ಮಾರ್ಗ ಬದಲಿಸಿ ನೋಡುತ್ತಿರುವುದನ್ನು ನಾನು ರೇರ್-ವ್ಯೂ ಕನ್ನಡಿಯಲ್ಲಿ ಗಮನಿಸಿದೆ.
"ಏನಮ್ಮ ಹಾಗೆ ನೋಡ್ತಿದ್ದೀಯಾ ಕನ್ನಡಿಲಿ?" ನಾನು ನಗುತ್ತಾ ಕೇಳಿದೆ.
"ಏನೂ ಇಲ್ಲಪ್ಪಾ..." ಅವಳು ನಾಚಿ ಕಿಟಕಿಯಾಚೆ ಮುಖ ಮಾಡಿದಳು. ಆದರೆ ಆ ನಗುವಿನಲ್ಲಿ ಅವಳ ಇಡೀ ಪ್ರಪಂಚವೇ ನಿರಾಳವಾದ ಸಮಾಧಾನದ ಕಡಲಲ್ಲಿ ತೇಲುತ್ತಿತ್ತು.
ದಿನಗಳು ಉರುಳಿದಂತೆ ನಾನು ಹೆಂಡತಿಯ ಪ್ರತಿಯೊಂದು ಆಸೆಗೂ, ಸಣ್ಣ ಸಣ್ಣ ಅಭಿಪ್ರಾಯಕ್ಕೂ ಮೊದಲ ಆದ್ಯತೆ ನೀಡಿ ಬೆಲೆ ಕೊಡಲು ಪ್ರಾರಂಭಿಸಿದೆ. ಅಡುಗೆ ಮನೆಯಲ್ಲಿ ಅವಳಿಗೆ ಹೆಗಲುಕೊಟ್ಟೆ. ಮನೆಯ ನಿರ್ಧಾರಗಳಲ್ಲಿ ಅವಳೇ ಸಾರಥಿಯಾದಳು. ಮಾತ್ರವಲ್ಲ ನಮ್ಮಿಬ್ಬರ ಒಲವಿನ ಲತೆ ಮತ್ತೊಮ್ಮೆ ಪಲ್ಲವಿಸಿತು. ನಮ್ಮ ಮಗಳಿಗೆ ಜೊತೆಯಾಗಲು ಪುಟ್ಟ ತಮ್ಮನೋ ತಂಗಿಯೋ ಬರುತ್ತಿದ್ದಾರೆ ಎಂಬ ಸಂಭ್ರಮ ನಮ್ಮನ್ನು ಮತ್ತಷ್ಟು ಹತ್ತಿರವಾಗಿಸಿತು.
ತಾಯಿಯ ಮುಖದಲ್ಲಿ ದಿನೇ ದಿನೇ ಅರಳುತ್ತಿದ್ದ ಆತ್ಮಾಭಿಮಾನದ ಸಂತಸವನ್ನು ಮಗಳು ಕಣ್ಣಾರೆ ಕಾಣುತ್ತಾ ಸಂಭ್ರಮಿಸುತ್ತಿದ್ದಳು.
ಒಂದು ದಿನ ಸಂಜೆ ನಾನು ಕಚೇರಿಯಿಂದ ಬಂದಾಗ ಮಗಳು ಓಡಿ ಬಂದು, ನನ್ನ ಕುತ್ತಿಗೆಗೆ ತನ್ನ ಪುಟ್ಟ ಕೈಗಳನ್ನು ಹಾಕಿ ಬಿಗಿಯಾಗಿ ಅಪ್ಪಿಕೊಂಡು ಹೇಳಿದಳು,
"ಅಪ್ಪಾ, ಈಗ ನನಗೆ ದೊಡ್ಡವಳಾದ ಮೇಲೆ ಮದುವೆ ಆಗಲು ಹಿಂದಿನಂತೆ ಹೆದರಿಕೆ ಇಲ್ಲ ಅಪ್ಪಾ.. ನಾನು ಖಂಡಿತ ಮದುವೆ ಆಗ್ತೀನಿ!"
ಅವಳ ಮಾತು ಕೇಳಿನನಗೆ ಆಶ್ಚರ್ಯವಾಯಿತು. ಕೆಲವೇ ತಿಂಗಳುಗಳ ಹಿಂದೆ ಮದುವೆಯಾಗುವುದಿಲ್ಲ ಎಂದು ಮದುವೆಯ ಬಗ್ಗೆ ಭಯಪಟ್ಟ ಪುಟಾಣಿ ಎಂದು ಖುಷಿಯಿಂದ ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದಾಳೆ.
"ಹೌದಾ ? ಹಠಾತ್ತಾಗಿ ನಿರ್ಧಾರ ಬದಲಾಯಿಸಿಬಿಟ್ಟೆಯಲ್ಲಾ? ಯಾಕಮ್ಮ?" ನಾನು ವಾತ್ಸಲ್ಯದಿಂದ ಅವಳ ಹಣೆಗೆ ಮುತ್ತಿಟ್ಟು ಕುತೂಹಲದಿಂದ ಕೇಳಿದೆ.
ಅದಕ್ಕವಳು ಹೆಮ್ಮೆಯಿಂದ ನನ್ನ ಕುತ್ತಿಗೆ ಬಳಸಿದಳು, "ಯಾಕಂದ್ರೆ, ನನ್ನನ್ನು ಮದುವೆ ಆಗುವ ಹುಡುಗನಿಗೂ ನಿನ್ನ ತರಹ ಒಬ್ಬ ಒಳ್ಳೆಯ ಗಂಡ, ಅಮ್ಮನ ತರಹದ ಹೆಂಡತಿಯನ್ನು ಗೌರವಿಸುವ ಒಳ್ಳೆಯ ಅಪ್ಪ ಆಗಲು ಸಾಧ್ಯವಿದೆ ಎಂದು ನನಗೆ ಈಗ ಅರ್ಥ ಆಯ್ತು! ನೀನೇ ನನ್ನ ಹೀರೋ ಅಪ್ಪಾ!" ಎಂದಳು.
ಅವಳ ಆ ಮಾತು ಕೇಳಿದ ಕ್ಷಣ ನನ್ನ ಕಣ್ಣುಗಳು ಆನಂದಭಾಷ್ಪದಿಂದ ತೇವಗೊಂಡವು. ಪಕ್ಕದಲ್ಲೇ ನಿಂತಿದ್ದ ನನ್ನ ಹೆಂಡತಿಯೂ ಕಣ್ಣೊರೆಸಿಕೊಳ್ಳುತ್ತಾ ನನ್ನನ್ನು ಕೃತಜ್ಞತೆಯಿಂದ ನೋಡುತ್ತಿದ್ದಳು. ಅಂದು ಒಂದು ಪರಮ ಸತ್ಯವನ್ನು, ಶ್ರೇಷ್ಠ ಮಾನವೀಯ ಮೌಲ್ಯವನ್ನು ಅರಿತುಕೊಂಡೆವು.
ಮಕ್ಕಳು ನಾವು ಹೇಳುವ ದೊಡ್ಡ ದೊಡ್ಡ ವೇದಾಂತದ ಆದರ್ಶಗಳನ್ನು ಕೇಳಿ ಬೆಳೆಯುವುದಕ್ಕಿಂತಲೂ ನಾವು ಮನೆಯ ನಾಲ್ಕು ಗೋಡೆಗಳ ಮಧ್ಯೆ ಹೇಗೆ ಬದುಕುತ್ತೇವೆ ಎಂಬ ವಿಧಾನವನ್ನು ನೋಡಿ ಬೆಳೆಯುತ್ತಾರೆ.
ಪ್ರೀತಿ ಎಂದರೇನು, ಮಾನವೀಯತೆ ಎಂದರೇನು, ಪರಸ್ಪರ ಗೌರವ ಎಂದರೇನು ಮತ್ತು ಒಂದು ಸುಂದರ ಸಂಸಾರ ಹೇಗಿರಬೇಕು ಎಂಬುದನ್ನು ಅವರು ಕಲಿಯುವುದು ತಮ್ಮ ದೈನಂದಿನ ಜೀವನದಿಂದಲೇ ಹೊರತು ಶಾಲಾ ಪುಸ್ತಕಗಳಿಂದಲ್ಲ.
ಒಬ್ಬ ತಂದೆ-ತಾಯಿ ತನ್ನ ಮಕ್ಕಳಿಗೆ ನೀಡಬಹುದಾದ ಅತ್ಯಂತ ಅಮೂಲ್ಯವಾದ ಆಸ್ತಿ ಎಂದರೆ ಹಣ, ಆಸ್ತಿ, ಅಂತಸ್ತು ಅಥವಾ ಬಂಗಲೆಯಲ್ಲ; ಬದಲಿಗೆ ಪರಸ್ಪರ ಜೀವದಂತೆ ಪ್ರೀತಿಸುವ, ಒಬ್ಬರಿಗೊಬ್ಬರು ಅತ್ಯುನ್ನತ ಗೌರವ ಕೊಡುವ ಆದರ್ಶ ಅಪ್ಪ ಮತ್ತು ಅಮ್ಮನಾಗಿ ಬಾಳಿ ತೋರಿಸುವುದು ಮಾತ್ರ. ಅದೇ ನಿಜವಾದ ಮಾನವೀಯ ಮೌಲ್ಯ.
- ಪ್ರಸನ್ನಾ ವಿ. ಚೆಕ್ಕೆಮನೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


