ಜೂ. 7ರಂದು ಸಾರ್ಥಕ ಶಿಕ್ಷಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

Upayuktha
0

ಬೆಂಗಳೂರು: ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸುಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಸಾರ್ಥಕ ಶಿಕ್ಷಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2026ನೇ ಸಾಲಿನ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಜೂನ್ 7, 2026ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಜಯನಗರ 3ನೇ ಬಡಾವಣೆಯ ಪೈ ವೈಸರಾಯ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ರಕ್ಷಣಾ ಸಚಿವರ ಮಾಜಿ ವೈಜ್ಞಾನಿಕ ಆಪ್ತ ಸಲಹೆಗಾರರು ಹಾಗೂ ಡಿಆರ್‌ಡಿಒದ ಮಾಜಿ ನಿರ್ದೇಶಕರಾದ ಪದ್ಮವಿಭೂಷಣ ಡಾ. ವಾಸುದೇವ ಕೆ. ಆತ್ರೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಮಾಜಿ ನಿರ್ದೇಶಕರಾದ ಪದ್ಮಶ್ರೀ ಡಾ. ವಿಜಯಲಕ್ಷ್ಮಿ ದೇಶಮಾನೆ ವಹಿಸಲಿದ್ದಾರೆ.

ಶಿಕ್ಷಣ ತಜ್ಞರು ಹಾಗೂ ಇಂಡಸ್ ಟವರ್ಸ್ ಲಿಮಿಟೆಡ್‌ನ ಮಾಜಿ ಸಿಇಒ ಶ್ರೀ ಶಾಂತರಾಜು ಬಿ.ಎಸ್. ಭಾಗವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಪೈ ಗ್ರೂಪ್ ಆಫ್ ಹೋಟೆಲ್ಸ್‌ನ ಅಧ್ಯಕ್ಷ ಶ್ರೀ ಜಗನ್ನಾಥ ವಿ. ಪೈ ಹಾಗೂ ಉದ್ಯಮಿ-ದಾನಿಗಳಾದ ಶ್ರೀ ಶಶಾಂಕ್ ಕುಮಾರ್ ರೆಡ್ಡಿ ಉಪಸ್ಥಿತರಿರುವರು.

ಕಾರ್ಯಕ್ರಮದ ಆರಂಭದಲ್ಲಿ ಪ್ರೊ. ಯಶವಂತ್ ಮತ್ತು ತಂಡದವರಿಂದ ವೀಣಾವಾದನ ನಡೆಯಲಿದೆ. ಬಳಿಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುವುದು.

ಈ ಕುರಿತು ಮಾಹಿತಿ ನೀಡಿರುವ ಸಾರ್ಥಕ ಶಿಕ್ಷಣ ಚಾರಿಟೇಬಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ಕೆ. ಶೇಷಮೂರ್ತಿ, “ಯಾವುದೇ ಪ್ರತಿಭಾವಂತ ವಿದ್ಯಾರ್ಥಿ ಹಣದ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಟ್ರಸ್ಟ್‌ನ ಮೂಲ ಧ್ಯೇಯವಾಗಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಆರ್ಥಿಕ ನೆರವು ಒದಗಿಸುವ ಮೂಲಕ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಟ್ರಸ್ಟ್ ತೊಡಗಿಸಿಕೊಂಡಿದೆ” ಎಂದು ತಿಳಿಸಿದ್ದಾರೆ.

ಸಾರ್ಥಕ ಶಿಕ್ಷಣ ಚಾರಿಟೇಬಲ್ ಟ್ರಸ್ಟ್ 2024ರಲ್ಲಿ ಸ್ಥಾಪನೆಯಾಗಿ ಅಲ್ಪಾವಧಿಯಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದೆ. ಟ್ರಸ್ಟ್ ವತಿಯಿಂದ 2025ರಲ್ಲಿ 33 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗಿದ್ದು, 2026ನೇ ಸಾಲಿನಲ್ಲಿ 105 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

ಪಿಯುಸಿ, ಪದವಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅರ್ಜಿದಾರರು ಹಿಂದಿನ ಪರೀಕ್ಷೆಗಳಲ್ಲಿ ಕನಿಷ್ಠ 60 ಶೇಕಡಾ ಅಂಕಗಳನ್ನು ಪಡೆದಿರಬೇಕು ಹಾಗೂ ಪೋಷಕರ ವಾರ್ಷಿಕ ಆದಾಯ ₹6 ಲಕ್ಷ ಮೀರಿರಬಾರದು. ಏಕಪೋಷಕ ಕುಟುಂಬದ ವಿದ್ಯಾರ್ಥಿಗಳು, ಅನಾಥರು ಹಾಗೂ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಪೋಷಕರ ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದೆ.

ಹಿರಿಯ ಶಿಕ್ಷಣ ತಜ್ಞ ಹಾಗೂ ಸಮಾಜಸೇವಕರಾದ ಡಾ. ಕೆ. ಶೇಷಮೂರ್ತಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟ್, ದಾನಿಗಳ ಸಹಕಾರದೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದು, “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಧ್ಯೇಯವಾಕ್ಯದೊಂದಿಗೆ ಶಿಕ್ಷಣದ ಮೂಲಕ ಸಮಾಜ ನಿರ್ಮಾಣದ ಮಹತ್ತರ ಕಾರ್ಯದಲ್ಲಿ ತೊಡಗಿಕೊಂಡಿದೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top