ದೃಢ ನಿರ್ಧಾರಗಳು ಬದುಕನ್ನು ಬದಲಿಸುತ್ತವೆ: ಸೋನಿಯಾ ಯಶೋವರ್ಮ
ಉಜಿರೆ: ಪಿಯುಸಿ ಶಿಕ್ಷಣ ವಿದ್ಯಾರ್ಥಿ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭ ಮಾಡುವ ಹಾಗು ನಮ್ಮ ಕನಸುಗಳಿಗೆ ಹತ್ತಿರವಾಗುವ ಮತ್ತೊಂದು ಪಯಣವನ್ನು ಪ್ರಾರಂಭಿಸುವ ಸಂದರ್ಭದ. ಸಣ್ಣ ಸಣ್ಣ ಒಳ್ಳೆಯ ಅಭ್ಯಾಸಗಳು ನಿಮ್ಮ ಜೀವನದ ಭವ್ಯ ದೇವಾಲಯವನ್ನು ನಿರ್ಮಿಸುತ್ತದೆ. ಕನಸು ಯಾವುದೇ ಆಗಿದ್ದರು ಅದನ್ನು ಸಾಕಾರಗೊಳಿಸುವ ಶಕ್ತಿ ನಮ್ಮೊಳಗೆ ಇದೆ. ನಮ್ಮ ಪರಿಸ್ಥಿತಿಗಳು ನಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ ನಾವು ಕೈಗೊಳ್ಳವ ದೃಢ ನಿರ್ಧಾರಗಳು ನಮ್ಮ ಭವಿಷ್ಯವನ್ನು ನಿರ್ಮಿಸುತ್ತದೆ ಎಂದು ಉಜಿರೆಯ ಸೋನಿಯಾ ಯಶೋವರ್ಮ ಅಭಿಪ್ರಾಯ ಪಟ್ಟರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ನೂತನ ಪಿಯುಸಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಒಂದು ದಿನ ಓದುವುದು ಸುಲಭ. ಒಂದು ವಾರ ಓದುವುದು ಸಾಧ್ಯ, ಒಂದು ತಿಂಗಳು ಕೂಡ ಓದುವುದು ಸಾಧ್ಯ. ಆದರೆ ಎರಡು ವರ್ಷಗಳ ಕಾಲ ನಿರಂತರವಾಗಿ ಪ್ರಯತ್ನ ಪಟ್ಟಾಗ ಮಾತ್ರ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಎರಡು ವರ್ಷ ಅತ್ಯಮೂಲ್ಯವಾದ ಸಮಯ ಆಗಲಿದೆ. ಎರಡು ವರ್ಷಗಳಲ್ಲಿ ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸುವುದಲ್ಲದೇ, ವ್ಯಕ್ತಿತ್ವ ರೂಪಿಸಿಕೊಳ್ಳಲು, ಕನಸುಗಳಿಗೆ ದಿಕ್ಕು ನೀಡಲು, ಜೀವನದ ಮೌಲ್ಯ ಅರ್ಥ ಮಾಡಿಕೊಳ್ಳಲು ಹಾಗೂ ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗಿ ಬೆಳೆದು ನಿಲ್ಲುವಂತಾಗಬೇಕು.
ಪ್ರತಿಯೊಂದು ಸಂಸ್ಥೆಯ ಹೆಮ್ಮೆ ಅದರ ಕಟ್ಟಡಗಳಲ್ಲ, ಅದರ ಹಿರಿಯ ವಿದ್ಯಾರ್ಥಿಗಳಾಗಿರುತ್ತಾರೆ. ಈ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಅವರ ಯಶಸ್ವಿನ ಮೂಲ ಬುದ್ಧಿವಂತಿಕೆ ಮಾತ್ರವಲ್ಲ ಅವರು ಇಲ್ಲಿ ಕಲಿತ ಶಿಸ್ತು, ಪರಿಶ್ರಮ ಸಮಯ ಪಾಲನೆ ಹಾಗೂ ಇಲ್ಲಿನ ಮೌಲ್ಯಗಳು.
ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಕೇವಲ ಸಹಪಾಠಿಗಳನ್ನು ಪಡೆಯುವುದಿಲ್ಲ. ಒಳ್ಳೆಯ ಸ್ನೇಹಿತರನ್ನು ಪಡೆಯುತ್ತಾರೆ. ಕೇವಲ ಶಿಕ್ಷಕರನ್ನು ಪಡೆಯುವುದಿಲ್ಲದೇ ಬದುಕಿನ ಮಾರ್ಗದರ್ಶಕರನ್ನು ಪಡೆಯುತ್ತಾರೆ. ಕೇವಲ ಶಿಕ್ಷಣವನ್ನು ಪಡೆಯುವುದಲ್ಲದೇ ಬದುಕಿನ ದಾರಿದೀಪವನ್ನು ಪಡೆಯುತ್ತಾರೆ ಎಂದು ವಿದ್ಯಾರ್ಥಿ ಹಾಗು ಪೋಷಕರಿಗೆ ಕಿವಿಮಾತು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಯಶಸ್ಸು ಕಾಣಲು ತೆರೆದ ಮನಸ್ಸಿನ ಕಲಿಕೆಯ ಹಂಬಲ ಮತ್ತು ಆಸಕ್ತಿ ಮುಖ್ಯ. ಹೊಸತವನ್ನು ಕಲಿಯುವುದರಿಂದ ಅದು ನಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ವಸತಿ ನಿಲಯಗಳು ಜೀವನ ಶಿಕ್ಷಣವನ್ನು ಕಲಿಸುತ್ತದೆ. ಇಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸುವುದರ ಜೊತೆಗೆ ಮಹತ್ತರವಾದ ಬದಲಾವಣೆಗಳನ್ನು ತರುತ್ತದೆ. ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯ ಜೊತೆಗೆ ಕೃತಜ್ಞಾ ಭಾವ ಸಕಾರಾತ್ಮಕ ಚಿಂತನೆಯನ್ನು ಬೆಳೆಸಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಸುನೀಲ್ ಪಂಡಿತ್ ಮಾತನಾಡಿ, ವಸತಿ ನಿಲಯದ ವ್ಯವಸ್ಥೆಗಳು ಹಾಗು ಶೈಕ್ಷಣಿಕ ಚಟುವಟಿಕೆಗಳ ಮಾಹಿತಿಯನ್ನು ಹಂಚಿಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಚಾರ್ಯ ಮನೀಶ್ ಕುಮಾರ್, ನಿಲಯದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪವಿತ್ರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳ ಪೋಷಕರು, ನಿಲಯದ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ವಾಣಿ ಸ್ವಾಗತಿಸಿ, ಕವಿತಾ ನಿರೂಪಿಸಿ ವಂದಿಸಿದರು.
"ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯು ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಮಾತ್ರವಲ್ಲದೇ ನೂರಾರು ಸಾಮಾಜಮುಖಿ ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಇಲ್ಲಿನ ಪ್ರತಿಯೊಂದು ಯೋಚನೆ ಮತ್ತು ಯೋಜನೆಗಳು ಸಮಾಜಕ್ಕೆ ಮಾದರಿಯಾಗಿದೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಮೌಲ್ಯಯುತ, ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಎಲ್ಲಾ ತರಹದ ಶಿಕ್ಷಣವನ್ನು ನೀಡುತ್ತಿರುವುದರಿಂದ ದೇಶದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರಸಿ ಬರುತ್ತಿದ್ದಾರೆ. ವಿದ್ಯಾರ್ಥಿಗಳು ಇಲ್ಲಿನ ಸವಲತ್ತುಗಳನ್ನು ಬಳಸಿಕೊಂಡು ಪಠ್ಯದ ಜೊತೆಗೆ ಶೈಕ್ಷಣಿಕ ಚಟುವಟಿಕೆಗಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು."
- ಪೂರನ್ ವರ್ಮ,
ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
ಎಸ್.ಡಿ.ಎಂ ಶಿಕ್ಷಣ ಸಂಸ್ಥೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


