ಮರಗಿಡಗಳು ಮಾತಾಡುತ್ತವೆ!

Upayuktha
0

ಸ್ಯಗಳು ನಮ್ಮೊಂದಿಗೆ ಮತ್ತು ಪ್ರಾಣಿಪಕ್ಷಿಗಳೊಂದಿಗೆ ಕೂಡ ಮಾತಾಡುತ್ತವೆ ಎಂದರೆ ಆಶ್ಚರ್ಯ ಪಡುತ್ತೀರಾ? ಆದರೆ ಅವುಗಳ ಸಂವಹನ ವಿಧಾನ ಮತ್ತು ತರಂಗಾಂತರ (frequency) ಬೇರೆ. ನಮಗೆ ಅದು ಗೊತ್ತಾಗುವುದಿಲ್ಲ; ನಮ್ಮ ಆರನೇ ಇಂದ್ರಿಯ ಸಕ್ರಿಯವಾದರೆ ಭಾವಗೋಚರವಾಗುವ ಸಂಗತಿ ಅದು. 


ನನ್ನ ಒಬ್ಬಾಕೆ ಸೊಸೆಯ (ಅಕ್ಕನ ಮಗಳು) ಮಾವ ಸಸ್ಯಗಳ ನಾಡಿ ಬಲ್ಲವರು. ಸಸ್ಯಗಳೊಂದಿಗೆ ಅವರು ಮಾತಾಡುತ್ತಿದ್ದರು. ಸುಳ್ಳಲ್ಲ! ನಿಜವೇ. ಅವರು ನೆಟ್ಟ ಸಸ್ಯಗಳು ಕೂಡ ಅವರೊಂದಿಗೆ ಪ್ರತಿಸ್ಪಂದಿಸುವುದನ್ನು ನಾನು ನೋಡಿದ್ದೇನೆ. ಇದೆಲ್ಲ ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಕತೆ.


ಅವರು ಸಸ್ಯಗಳ ನಾಡಿ ಅರಿತ ಅತ್ಯುತ್ತಮ ಕೃಷಿಕರು. ಅಡಿಕೆ, ತೆಂಗು, ಕೊಕ್ಕೋ, ಬಾಳೆ ಮತ್ತು ಇತರೇ ಹೂಗಿಡಗಳು, ತರಕಾರಿ ಗಿಡಗಳನ್ನು ಯಾವ ಕಾಲಕ್ಕೆ ಹೇಗೆ ನೆಡಬೇಕು, ಯಾವಾಗ ಯಾವ ಬೀಜ ಹಾಕಬೇಕು, ತನಗೆ ಬೇಕಾದ ದಿಕ್ಕಿಗೆ ಗೊನೆ ಹಾಕಬೇಕಾದರೆ ಗಿಡವನ್ನು ಹೇಗೆ ನೆಡಬೇಕು ಎಂಬ ಗುಟ್ಟನ್ನು ಅವರು ಅರಿತಿದ್ದರು. ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಒಂದು ಭಾಷೆ-ಸಂವಿಧಾನ ಎಂಬುದಿದೆ. ಪ್ರಕೃತಿಯ ನಾಡಿ ಅರಿಯಲು ಆ ಭಾಷೆ ಮತ್ತು ಸಂವಿಧಾನ ನಮಗೆ ಗೊತ್ತಿರಬೇಕು, ಅಷ್ಟೇ.


ನಾನು ಅವರಲ್ಲಿಗೆ ಹೋದಾಗ ಎಲ್ಲ ಗಿಡಮರಗಳ ಬಳಿಗೆ ಅವರು ನನ್ನನ್ನು ಕರೆದೊಯ್ದು ತನ್ನ ಹೊಸ ಕೃಷಿಯನ್ನು ತೋರಿಸುವುದು ವಾಡಿಕೆ. ಗಿಡದ ಟೊಂಗೆ ಅಥವಾ ಗೊಂಚಲೊಂದನ್ನು ಎತ್ತಿ ಹಿಡಿದು ‘ನೋಡು ಮೋಳೆ, ಆರು ಬಂದದು ಹೇಳಿ’ ಎಂದು ಮುದ್ದಿನಿಂದ ಮಾತಾಡಿಸಿ ನನಗೆ ಪರಿಚಯಿಸುವರು. ಒಂದು ಕಾಂಡದಲ್ಲಿ ಹೊಸ ನನೆಕೊನೆ ನಳನಳಿಸಿ ಬಂದಿದೆ; ಅದನ್ನು ಎತ್ತಿ ಹಿಡಿದು ನನಗೆ ತೋರಿಸಿ ‘ನಮ್ಮ ನೋಡಿ ಹೇಂಗೆ ನೆಗೆ ಮಾಡುತ್ತು ನೋಡು!’ ಅನ್ನುವರು. ಅವರ ಅಕ್ಕರೆ ಆ ಗಿಡಕ್ಕೆ ಅರ್ಥವಾಯಿತು ಎಂಬಂತೆ ಆ ಗಿಡ ನಗುವಂತೆ ಮತ್ತು ನಮಗೆ ಏನೋ ಮಾರುತ್ತರ ಕೊಡುವಂತೆ ತೋರಿತು ಕೂಡ.  


ಅದೊಂದು ಭಾವಸಂಯೋಗ; ತಾದಾತ್ಮ್ಯ, ತಲ್ಲೀನತೆ. ಅವರು ಎಲೆಮರೆಯಲ್ಲಿರುವ ಹುಳಬಿಡಿಸಿ ಗಿಡಗಳನ್ನು ಆರೈಕೆ ಮಾಡುವರು. ಕಾಲಕಾಲಕ್ಕೆ ಅಗತೆ ಮಾಡಿ ಗೊಬ್ಬರ ನೀರು ಕೊಡುವರು. ಆ ಕಡೆ ಓಡಾಡುವಾಗೆಲ್ಲ ಅವುಗಳ ಮೈದಡವಿ ಮಾತಾಡಿಸುವರು. ಅವರ ತೋಟದಲ್ಲಿ ಗಿಡಗಳು ಸಮೃದ್ಧವಾಗಿ ಬೆಳೆಯುತ್ತವೆ; ಫಸಲು ಹೆಚ್ಚು. ಸಣ್ಣ ಗಾಳಿಗೆ ಗೆಲ್ಲುಗಳೆಲ್ಲ ಅಂಗಳದತ್ತಲೇ ಬಾಗಿ ತೊನೆಯುವ ಚಂದ ನೋಡಬೇಕು. ಅವರು ಗಿಡಗಳಿಗೆ ಯಾವ ಹಿಂಸೆಯನ್ನೂ ಮಾಡುವುದಿಲ್ಲ. ಸಸ್ಯಗಳೊಂದಿಗೆ ಅವರು ಸಾಮರಸ್ಯದಿಂದ ಬದುಕುವುದನ್ನು ನೋಡಿದೆ.   


ಉರಗ ಪ್ರಾಣಿ ಪಕ್ಷಿ ಮುಂತಾದ ಜೀವಿಗಳಿಗೆ ಸಸ್ಯಗಳ ಸಂಸರ್ಗ ಬೇಕು. ಸಸ್ಯಗಳಿಗೂ ಇವುಗಳ ಸಹವಾಸ ಬೇಕು ಎನ್ನುತ್ತಾರೆ ಸೊಸೆಯ ಮಾವ. ನಿಜ ಇರಬೇಕು; ಸಹಸ್ರ ಕೋಟಿ ವರ್ಷಗಳ ಹಿಂದೆ ಸಮುದ್ರದ ಹಸುರುಪಾಚಿಯಿಂದಲ್ಲವೇ ಸೃಷ್ಟಿ ಆರಂಭವಾದದ್ದು. ಅನಂತರ ವಿವಿಧ ಸಸ್ಯವರ್ಗಗಳು ಪ್ರಾಣಿವರ್ಗಗಳು ಉದಿಸಿ ಬಂದವು. ಸಸ್ಯವರ್ಗಗಳು ಸ್ಥಾವರ (ಸ್ಥಿರ) ವಾದವು; ಪ್ರಾಣಿಜೀವಿಗಳು ಜಂಗಮ (ಚರ) ಆದವು. ಚರದಲ್ಲಿ ಉರಗ/ಪ್ರಾಣಿ/ಪಕ್ಷಿ ಎಂದು ಮೂರು ವಿಧವಾಗಿ ಮೂಡಿ ಬಂದವು. ಅನಂತರ ಪ್ರಾಣಿಗಳಲ್ಲಿ ಮನುಷ್ಯ ಬೇರೆ ಆದ. ಆದಿಮೂಲದಲ್ಲಿ ವಿಷ್ಣುಪರಮಾತ್ಮ ಕ್ಷೀರಸಾಗರದಲ್ಲಿ ತಾವರೆ ಎಲೆಯ ಮೇಲೆ ಮಲಗಿ ತನ್ನ ಲೀಲಾವಿನೋದಗಳನ್ನು ಆರಂಭಿಸಿದ ಎಂಬ ನಮ್ಮ ಪುರಾಣದ ಕತೆ ರೂಪಕಾತ್ಮಕವಾಗಿ ಇದನ್ನೇ ಹೇಳುವುದು. ಅದೇ ರೀತಿ ದಶಾವತಾರದ ಕಥೆ ಕೂಡ ಜೀವವಿಕಾಸವನ್ನು ಸಾಮತಿ ರೂಪದಲ್ಲಿ ವಿವರಿಸುವುದು. 


ಸ್ಥಿರಜೀವಿಗಳು ಮತ್ತು ಚರಜೀವಿಗಳು ಬೇರ್ಪಡುವಾಗ ‘ಚರ’ ಸೃಷ್ಟಿ ಉರಗದಿಂದ ಆರಂಭವಾಯಿತು. ಹಾಗಾಗಿ ಹಾವು ಸೃಷ್ಟಿಮೂಲ ಅಥವಾ ಲೈಂಗಿಕದ ಸಂಕೇತವಾಗಿದೆ. ನೆಣೆ ಹಾಕಿಕೊಂಡ ಹಾವು ಡಾಕ್ಟರ್ ಗಳ ಚಿಹ್ನೆಯಾಗಲು ಇದೇ ಕಾರಣ. 


ನನ್ನ ಸೊಸೆಯ ಮಾವ ಹೇಳುವಂತೆ ಸಸ್ಯಾದಿಗಳು ವಾವೆಯಲ್ಲಿ ನಮ್ಮ ಭಾವಂದಿರೋ ಅಳಿಯಂದಿರೋ ಮಕ್ಕಳೋ ಮೊದಲಾದ ಸಂಬಂಧಿಗಳೇ ಆಗಿರಬೇಕು. ಹಾಗಾಗಿ ಅವುಗಳಿಗೆ ನಮ್ಮೊಂದಿಗೆ ಮಾತಾಡಬೇಕೆಂಬ ಉತ್ಕಟೇಚ್ಛೆ ಬರುವುದು! ನಾವು ಹೃದಯದಿಂದ ಮಾತಾಡಿದಾಗ ಅವು ಮಾತಾಡುವವು!


ಭೂಮಿಯಲ್ಲಿ ಇರುವ ಒಟ್ಟು ಶಕ್ತಿಮೂಲ ನಿರ್ದಿಷ್ಟವಾದದ್ದು. ಅದು ಹೆಚ್ಚು ಕಡಿಮೆ ಆಗುವುದಿಲ್ಲ. ಪ್ರಕೃತಿ ಅದನ್ನು 'ಸ್ಥಿರ' ಮತ್ತು 'ಚರ' ಜೀವಿಗಳ ನಡುವೆ ಹಂಚಿ ಹಾಕುತ್ತದೆ. ಸಸ್ಯವರ್ಗ ಹೆಚ್ಚಾದಾಗ ಪ್ರಾಣಿ ವರ್ಗದ ಅನುಪಾತ ಕಡಿಮೆಯಾಗುತ್ತದೆ. ಪ್ರಾಣಿವರ್ಗ ಹೆಚ್ಚಾದಾಗ ಸಸ್ಯವರ್ಗದ ಅನುಪಾತ ಕಡಿಮೆಯಾಗುತ್ತದೆ. ಕಾಡಿನ ಪ್ರಮಾಣ ಹೆಚ್ಚು-ಕಡಿಮೆ ಆಗಲು ಇದೇ ಕಾರಣ.


ಸಸ್ಯಗಳು ನಮ್ಮ ಪ್ರಾಕಿನ ಬಂಧುಗಳು. ನಮ್ಮೊಳಗೆ ಕರುಳುಬಳ್ಳಿಯ ಸಂಬಂಧ ಇದೆ. ಮರ ಕಡಿಯುವ ಮುನ್ನ ಜನಪದರು ‘ನನ್ನ ತೀರಾ ಆಗತ್ಯಕ್ಕಾಗಿ ಕಡಿಯುತ್ತಿದ್ದೇನೆ ಬಂಧುವೇ, ನನ್ನನ್ನು ಕ್ಷಮಿಸು’ ಎಂದು ಕೈಮುಗಿದು ಪ್ರಾರ್ಥಿಸಿ ಅನಂತರ ಕಡಿಯುತ್ತಾರೆ. ಕಡಿದ ಕುತ್ತಿಯ ಮೇಲೆ ತಪ್ಪುಕಾಣಿಕೆ ಮತ್ತು ಸ್ಮರಣಾರ್ಥ ಒಂದು ಚಪ್ಪಡಿ ಕಲ್ಲನ್ನು ಇಡುತ್ತಾರೆ. ದೇವಸ್ಥಾನದ ಕೊಡಿಮರ ಕಡಿಯುವಾಗ ಆ ಮರಕ್ಕೆ ಪೂಜೆ ಮಾಡಿ ಕಡಿಯುತ್ತಾರೆ. ಅಶ್ವತ್ಥ, ಅತ್ತಿ, ಪಾಲಾಶ, ಬಿಲ್ವ, ನೆಲ್ಲಿ, ನಾಗಸಂಪಿಗೆ, ಅಶೋಕೆ, ತೆಂಗು ಮೊದಲಾದ ಮರಗಳನ್ನು ಕಡಿಯಬಾರದೆಂಬ ವಿಧಿನಿಷೇಧವಿದೆ. ಅವುಗಳನ್ನು ಕಡಿಯಲು ಯಾರೂ ಒಪ್ಪುವುದಿಲ್ಲ. ಅವು ದೈವೀಕವಾದ ಮರಗಳು ಎಂದು ಭಾವಿಸಲಾಗಿದೆ. 


ಫಲ ಬಿಡದ ಮರವನ್ನು ಅಪ್ಪಿ ಹಿಡಿದುಕೊಂಡರೆ ಆ ಮರದಲ್ಲಿ ಫಸಲು ಬರುತ್ತದೆ ಎಂಬ ಜನಪದ ನಂಬಿಕೆ ಇದೆ. ಮಕ್ಕಳಾಗದ ಹೆಣ್ಣುಮಗಳು ಫಲತುಂಬಿದ ಮರವನ್ನು ‘ವೃಕ್ಷಾಲಿಂಗನ’ ಮಾಡಿ ಸಂತಾನ ಪಡೆಯುವ ಆಚರಣೆ ಇದೆ. ಆಟಿ ಅಮಾಸೆ ದಿನ ಬೆಳಕು ಹರಿಯುವ ಮುನ್ನ ಬೆತ್ತಲೆಯಾಗಿ ಹಾಲೆಮರದ ಬುಡಕ್ಕೆ ತೆರಳಿ ಆ ಮರದ ಕೆತ್ತೆ ತಂದು ಕಷಾಯ ಮಾಡಿ ಕುಡಿಯುವ ಸಂಪ್ರದಾಯ ಇದೆ. 


ಶಿಲಾಮೂರ್ತಿ ಬಾಹುಬಲಿಯನ್ನು ಮಾಧವೀಲತೆ ತಬ್ಬಿಕೊಂಡಿರುವುದು ಕಾಠಿಣ್ಯಕ್ಕೆ (ಗಂಡಿಗೆ) ಮಾರ್ದವತೆಯನ್ನು (ಜೀವಂತಿಕೆ) ನೀಡುವ ಸಂಕೇತವಾಗಿದೆ. ‘ತರುಲತೆ’ ಎಂಬ ಪ್ರಯೋಗವು ‘ಶಿವಶಕ್ತಿ’ ಎಂಬಂತೆ ಗಂಡು ಹೆಣ್ಣಿನ ಅಭಿನ್ನತೆಯನ್ನು ಸೂಚಿಸುವ ಪ್ರಯೋಗವಾಗಿದೆ. 


ನನ್ನ ಸೊಸೆಯ ಮಾವ ಇದನ್ನೆಲ್ಲ ತಿಳಿದಿದ್ದರು ಎಂದು ಇದರ ಅರ್ಥವಲ್ಲ. ಆದರೆ ಇವೆಲ್ಲ ಅವರ ಭಾವಕ್ಕೆ ಗೋಚರವಾಗಿದ್ದ ಸಂಗತಿಗಳಾಗಿದ್ದವು. 


–ಡಾ. ವಸಂತಕುಮಾರ ಪೆರ್ಲ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top